ಮತಕ್ಕಾಗಿ ಸರ್ಕಾರ ಒತ್ತೆ ಇಡುವ ಜನಪ್ರತಿನಿಧಿಗಳ ಅಗತ್ಯ ನಮಗಿಲ್ಲ-ಮಾಜಿ ಸಚಿವ ಮಾಧುಸ್ವಾಮಿ

KannadaprabhaNewsNetwork | Published : May 5, 2024 2:00 AM

ಸಾರಾಂಶ

ದುಡಿಯುವ ಶಕ್ತಿ ನೀಡಿ ದೇಶದ ಅಭಿವೃದ್ದಿಯ ಚಿತ್ತವಿರುವ ನಾಯಕತ್ವ ಬೇಕಾಗಿದೆಯೇ ಹೊರತು, ಮತಕ್ಕಾಗಿ ಸರಕಾರವನ್ನೇ ಒತ್ತೆ ಇಡುವ ಜನಪ್ರತಿನಿಧಿಗಳ ಅಗತ್ಯ ನಮಗಿಲ್ಲ ಎಂದು ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಕಿಡಿ ಕಾರಿದರು.

ಹಾನಗಲ್ಲ: ದುಡಿಯುವ ಶಕ್ತಿ ನೀಡಿ ದೇಶದ ಅಭಿವೃದ್ದಿಯ ಚಿತ್ತವಿರುವ ನಾಯಕತ್ವ ಬೇಕಾಗಿದೆಯೇ ಹೊರತು, ಮತಕ್ಕಾಗಿ ಸರಕಾರವನ್ನೇ ಒತ್ತೆ ಇಡುವ ಜನಪ್ರತಿನಿಧಿಗಳ ಅಗತ್ಯ ನಮಗಿಲ್ಲ ಎಂದು ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಕಿಡಿ ಕಾರಿದರು.ಶನಿವಾರ ಹಾನಗಲ್ಲ ತಾಲೂಕಿನ ಗೊಂದಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರವಾಗಿ ಮತ ಯಾಚಿಸಿ, ವಿವಿಧ ಪಕ್ಷಗಳ ಕಾರ್ಯಕರ್ತರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡು ಮಾತನಾಡಿದ ಅವರು, ಬಡವರು, ಕೃಷಿಕರು ಸೇರಿದಂತೆ ದುಡಿಯುವ ವರ್ಗಕ್ಕೆ ರಕ್ಷಣೆ ಕೊಡಲಾರದ ಸ್ಥಿತಿಯಲ್ಲಿ ಕರ್ನಾಟಕದ ಕಾಂಗ್ರೆಸ್ ಸರಕಾರ ಇದೆ. ಕೃಷಿಕರಿಗೆ ನೀರಾವರಿ ಬೇಕಾಗಿದೆ. ಬಡವರಿಗೆ ಉದ್ಯೋಗ ಬೇಕಾಗಿದೆ. ಚುನಾವಣೆ ಆಧಾರಿತ ಘೋಷಣೆ, ಪ್ರಲೋಭನೆ, ಆಮಿಷ ತೋರಿಸಿದ ಹುನ್ನಾರದಿಂದಾಗಿ ಅಭಿವೃದ್ಧಿಯನ್ನೇ ಶೂನ್ಯ ಮಾಡುವ ಪರಿ ಒಳ್ಳೆಯದಲ್ಲ. ಭಾಗ್ಯಗಳ ಆಮಿಷೆಯಲ್ಲಿ ಜನರನ್ನು ಮೋಸಗೊಳಿಸಿ ರಾಜ್ಯವನ್ನು ಸಾಲಕ್ಕೆ ಒತ್ತೆ ಇಡುವ ಹುನ್ನಾರ ಈ ರಾಜ್ಯ ಸರಕಾರದ್ದಾಗಿದೆ ಎಂದರು. ಬಸವರಾಜ ಬೊಮ್ಮಾಯಿ ಅವರನ್ನು ಗೆಲ್ಲಿಸಿ, ಭಾರತಕ್ಕೆ ನರೇಂದ್ರ ಮೋದಿಯರನ್ನು ಪ್ರಧಾನಿ ಮಾಡೋಣ. ಪಕ್ಷದ ಕಾರ್ಯಕರ್ತರು ಎರಡು ಮೂರು ದಿನ ವಿರಮಿಸದೇ ಪಕ್ಷಕ್ಕಾಗಿ ಕೆಲಸ ಮಾಡಿ ಎಂದು ಮನವಿ ಮಾಡಿದರು.ಮಾಜಿ ಜಿಪಂ ಸದಸ್ಯ ಬಸವರಾಜ ಹಾದಿಮನಿ ಮಾತನಾಡಿ, ಬಸವರಾಜ ಬೊಮ್ಮಾಯಿ ಅವರು ನೀರಾವರಿ ಮಂತ್ರಿಯಾಗಿ, ಮುಖ್ಯ ಮಂತ್ರಿಯಾಗಿ ಹಾನಗಲ್ಲ ತಾಲೂಕಿನ ನೀರಾವರಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಅವರು ಆಯ್ಕೆಯಾದರೆ ಬೇಡ್ತಿ ವರದಾ ನದಿ ಜೋಡಣೆ ಖಚಿತ. ಇಲ್ಲಿನ ರೈತರು ೧೨ ತಿಂಗಳೂ ನೀರಾವರಿಯಿಂದ ಲಾಭದತ್ತ ಕೃಷಿ ಸಾಧ್ಯ. ಬಿಟ್ಟಿ ಭಾಗ್ಯಗಳಿಂದ ರಾಜ್ಯದಲ್ಲಿ ಏನಾಗಿದೆ ಎಂದು ಎಲ್ಲರೂ ಅರಿತು ಬಿಜೆಪಿ ಗೆಲ್ಲಿಸೋಣ ಎಂದರು.ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ರಾಜಶೇಖರ ಕಟ್ಟೇಗೌಡರ, ನಿಂಗಪ್ಪ ಗೊಬ್ಬೇರ, ಶಿವಲಿಂಗಪ್ಪ ತಲ್ಲೂರ, ಮುಖಂಡರಾದ ಬಿ.ಎಸ್. ಅಕ್ಕಿವಳ್ಳಿ, ಮಂಜುನಾಥ ದಳವಾಯಿ, ರಾಘವೇಂದ್ರ ತಹಶೀಲ್ದಾರ, ರಾಮನಗೌಡ ಪಾಟೀಲ, ಅಶೋಕ ಯಮನೂರ, ವೀರಣ್ಣ ನಿಂಬಣ್ಣನವರ ಮೊದಲಾದವರು ಇದ್ದರು.

Share this article