- ಪಂಚಪೀಠ ಒಂದಾಗಬೇಕೆಂಬ ಪ್ರಯತ್ನ, ಕೇದಾರ ಶ್ರೀಗಳಿಂದ ಸಮಾಜಪರ ಧ್ವನಿ
- ಹಿಂದೆ, ಇಂದು, ಮುಂದೆಯೂ ಪಂಚಪೀಠಗಳು ಸಮಾಜದ ಪರ: ಪಂಚ ಪೀಠಾಧೀಶರು- 2026ಕ್ಕೆ ಕೇಂದ್ರದ ಜಾತಿ, ಜನಗಣತಿ; ಸಂಸದರ ನಿಯೋಗಕ್ಕೆ ಕೇದಾರ ಶ್ರೀಗಳ ಕರೆ
- - -(ಪೀಠಾಚಾರ್ಯರು, ಶಿವಾಚಾರ್ಯರ ಶೃಂಗ ಸಮ್ಮೇಳನ)
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ವೀರಶೈವ ಲಿಂಗಾಯತ ಸಮಾಜದ ಏಳಿಗೆಗಾಗಿ ನಾವು ಇಲ್ಲಿಗೆ ಬಂದಿದ್ದೇವೆ. ಸಮಾಜವನ್ನು ಬಿಟ್ಟು ಯಾವುದೇ ಮಠ, ಪೀಠವೂ ಇಲ್ಲವೆಂಬುದನ್ನು ನಾವು ಯಾವಾಗಲೋ ಅರಿತಿದ್ದೇವೆ. ಇದು ನಮ್ಮ ಕರ್ತವ್ಯವೂ ಆಗಿದೆ ಎಂದು ಕೇದಾರ ಪೀಠದ ಶ್ರೀ ಭೀಮಾಶಂಕರ ಶಿವಾಚಾರ್ಯ ಸ್ವಾಮೀಜಿ ನುಡಿದರು.ನಗರದ ಶ್ರೀ ಅಭಿನವ ರೇಣುಕಾ ಮಂದಿರದಲ್ಲಿ ಸೋಮವಾರ ಶ್ರೀ ಜಗದ್ಗುರು ಪಂಚ ಪೀಠಾಧೀಶರ ಸಾನ್ನಿಧ್ಯದ ವೀರಶೈವ ಪೀಠಾಚಾರ್ಯರು ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಕೇದಾರದಿಂದ ಇದೇ ಕಾರ್ಯಕ್ರಮಕ್ಕಾಗಿ ಬಂದಿದ್ದು, ಸಮಾಜವನ್ನು ಬಿಟ್ಟು ಮಠ-ಪೀಠಗಳಿಗೆ. ಮಠ-ಪೀಠ ಬಿಟ್ಟು ಸಮಾಜವಿಲ್ಲ ಎಂಬುದನ್ನು ಎಲ್ಲರು ಅರಿಯಬೇಕಿದೆ ಎಂದರು.
ಕೇಂದ್ರ ಸರ್ಕಾರವು 2026ರಲ್ಲಿ ಜಾತಿ ಮತ್ತು ಜನಗಣತಿ ಕೈಗೊಳ್ಳುತ್ತಿದೆ. ಇನ್ನೂ ಜಾತಿಗಣತಿಯಲ್ಲಿ ಏನು ಬರೆಸಬೇಕೆಂಬ ಬಗ್ಗೆ ನಿಶ್ಚಿತತೆ ಇಲ್ಲ. ಗಣತಿ ನಮೂನೆ ಕಾಲಂನಲ್ಲಿ ಅನೇಕ ಗೊಂದಲ ಇವೆ. ಸರ್ಕಾರ ಸೌಲಭ್ಯದ ಆಮಿಷಕ್ಕಾಗಿ ಏನೇನೋ ಬರೆಸಲಾಗುತ್ತಿದೆ. ಆದರೆ, ಧರ್ಮದ ಕಾಲಂನಲ್ಲಿ ಏನು, ಜಾತಿ ಕಾಲಂ, ಉಪ ಜಾತಿ ಕಾಲಂನಲ್ಲಿ ಏನು ಬರೆಸಬೇಕೆಂಬ ಬಗ್ಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸ್ಪಷ್ಟ ನಿರ್ದೇಶನ ನೀಡಬೇಕು ಎಂದು ತಿಳಿಸಿದರು.ಮಹಾಸಭಾದಿಂದ ಸಮಿತಿ ಮಾಡಿ, ಜಾತಿಗಣತಿ ನಮೂನೆ ಗೊಂದಲಗಳ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತರಬೇಕು. ರಾಜ್ಯದ ಸಂಸದರು ಪಕ್ಷಾತೀತವಾಗಿ ಈ ವಿಚಾರದ ಬಗ್ಗೆ ಕೇಂದ್ರದ ಗಮನ ಸೆಳೆಯಬೇಕು. ದೇಶದ ಸಂವಿಧಾನದ ಪ್ರಕಾರ 308 ಜಾತಿ ಇದ್ದು, ಹಲವಾರು ಜಾತಿಗಳಿವೆ. ಎಲ್ಲರೂ ಹಿಂದೂ ಅಂತಲೇ ಬರೆಸುತ್ತಾರೆ. ಅದರಂತೆ ವೀರಶೈವ ಲಿಂಗಾಯತರಿಗೂ ಮೀಸಲಾತಿ ನೀಡಬೇಕು. ಈ ಬಗ್ಗೆ ಕೇಂದ್ರ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಮಹಾಸಭಾ ಸವಿಸ್ತಾರವಾಗಿ ಚರ್ಚಿಸಿ, ಒಂದು ನಿರ್ಣಯ ಕೈಗೊಂಡು, ಸಮುದಾಯಕ್ಕೆ ತಿಳಿಸಲಿ ಎಂದು ಸೂಚಿಸಿದರು.
ಸಿಖ್, ಜೈನ, ಬೌದ್ಧ ಧರ್ಮೀಯರಿಗೆ ಪ್ರತ್ಯೇಕ ಧರ್ಮವೆಂದು ಪರಿಗಣಿಸಲಾಗಿದೆ. ಅದೇ ರೀತಿ ವೀರಶೈವ ಲಿಂಗಾಯತಕ್ಕೂ ಪ್ರತ್ಯೇಕ ಧರ್ಮ ಮಾಡಬೇಕು. ಸ್ವತಃ ಇಂತಹ ವಿಚಾರದಲ್ಲಿ ಸಮಾಜದ ಪರವಾಗಿ ಗರ್ಭಗುಡಿಯನ್ನು ಬಿಟ್ಟು, ಹೊರಬಂದು ಕೇದಾರ ಪೀಠ ನಿಲ್ಲಲಿದೆ. ಹಳ್ಳಿಯಿಂದ ದಿಲ್ಲಿವರೆಗೂ ಸಮಾಜದ ಪರವಾಗಿ ನಾವೇ ಬಂದು ನಿಲ್ಲುತ್ತೇವೆ. ಮಹಾಸಭಾ ನಿರ್ದೇಶನದಂತೆ ಎಲ್ಲರೂ ಧರ್ಮ, ಜಾತಿ, ಉಪ ಜಾತಿ ಕಾಲಂನಲ್ಲಿ ಬರೆಸಬೇಕು. ಆಗ ಮಾತ್ರ ನಮ್ಮ ಸಮಾಜಕ್ಕೆ ಮೀಸಲಾತಿ ದೊರೆಯಲಿದೆ ಎಂದು ಅವರು ಹೇಳಿದರು.ವೀರಶೈವ ಲಿಂಗಾಯತ ಸಮಾಜಕ್ಕೆ ಏನಾದರೂ ಎಡರು ತೊಡರು ಬಂದರೆ ಕೇದಾರ ಪೀಠ ಗಟ್ಟಿಯಾಗಿ ನಿಲ್ಲಲಿದೆ. ನಾವು ಇಲ್ಲಿಗೆ ಪೀಠಗಳ, ತತ್ವಗಳ ವಿಚಾರಕ್ಕೆ ಬಂದಿಲ್ಲ. ಸಮಾಜದ ವಿಚಾರಕ್ಕಾಗಿ ಬಂದಿದ್ದೇವೆ. ಕಾರಣ ಎಲ್ಲರೂ ಒಗ್ಗೂಡಬೇಕು. ನಾವು ಇಲ್ಲಿಗೆ ಪೀಠಗಳ, ತತ್ವಗಳ ವಿಚಾರಕ್ಕೆ ಬಂದಿಲ್ಲ. ಸಮಾಜದ ವಿಚಾರಕ್ಕಾಗಿ ಬಂದಿದ್ದೇವೆ. ಆದಕಾರಣ ಎಲ್ಲರೂ ಒಗ್ಗೂಡಬೇಕು ಎಂದು ಕರೆ ನೀಡಿದರು.
ಉಜ್ಜಯಿನಿ ಶ್ರೀ ಸಿದ್ಧಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪಂಚಪೀಠಗಳು ಸಮಾಜದ ವಿಚಾರದಲ್ಲಿ ಒಂದೇ ನಿಲುವು, ಒಂದೇ ನಿರ್ಧಾರಕ್ಕೆ ಬದ್ಧವಾಗಿವೆ. ಒಗ್ಗಟ್ಟಿನಲ್ಲಿ ಬಲವಿದೆಯೆಂಬುದನ್ನು ಪೀಠಾಚಾರ್ಯರು ಅರಿಯಬೇಕು. ಮನಸ್ಸಿನಲ್ಲಿ ಸಾಕಷ್ಟು ಗೊಂದಲಗಳು ಸಮ್ಮೇಳನಕ್ಕೂ ಮುನ್ನ ಇದ್ದವು. ಆದರೆ, ಕೇದಾರ ಜಗದ್ಗುರುಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಮೂಲಕ ಇಡೀ ಸಮಾಜಕ್ಕೆ ಒಂದು ಸ್ಪಷ್ಟ ಸಂದೇಶ ನೀಡಿದ್ದಾರೆ. ಉತ್ತರಾಖಂಡದ ನಾಂದೇಡದಲ್ಲಿ ಕೇದಾರ ಜಗದ್ಗುರುಗಳ ಪೀಠಾರೋಹಣ ಸಮಾರಂಭಕ್ಕೆ ಗುರುಗಳ ಅಪೇಕ್ಷೆ ಇದ್ದರೆ ನಾವು ಉಳಿದ ನಾಲ್ಕು ಪೀಠಾಧೀಶರೂ ಹೋಗುತ್ತೇವೆ ಎಂದು ಸ್ಪಷ್ಟಪಡಿಸಿದರು.ರಾಜಕೀಯ ನಾಯಕರು ಸಮಾಜಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕು. ಯಾವುದೇ ಪಕ್ಷದಲ್ಲಿದ್ದರೂ ಸಮಾಜಕ್ಕೆ ಬಲ ತರಬೇಕೆ ಹೊರತು, ರಾಜಕೀಯ ಕಾರಣಕ್ಕಾಗಿ ಸಮಾಜವನ್ನು ಬಲಿ ಕೊಡಬೇಡಿ. ಮಹಾರಾಷ್ಟ್ರದಲ್ಲೇ 1.5 ಕೋಟಿ ವೀರಶೈವ ಲಿಂಗಾಯತರಿದ್ದರೆ, ಕರ್ನಾಟಕದಲ್ಲಿ ಅದರ ದುಪ್ಪಟ್ಟು ಇದ್ದಾರೆ. ಕೇಂದ್ರ ಸರ್ಕಾರವು ಜಾತಿ ಮತ್ತು ಜನಗಣತಿಯನ್ನು 2026ರಲ್ಲಿ ಕೈಗೊಳ್ಳುವುದಾಗಿ ಹೇಳಿದೆ. ಧರ್ಮ, ಜಾತಿ ಕಾಲಂ ಜೊತೆ ವೃತ್ತಿ ಕಾಲಂ ಸಹ ಸೇರ್ಪಡೆ ಮಾಡಬೇಕು. ಈ ಬಗ್ಗೆ ಸಂಸದರು ಕೇಂದ್ರದ ಬಳಿ ನಿಯೋಗ ಕೊಂಡೊಯ್ಯಿರಿ. ಹೇಳಿದರೆ ನಾವೂ ಪಂಚ ಪೀಠಾಧೀಶರೂ ಕೇಂದ್ರ ಸರ್ಕಾರದ ಬಳಿ ಬರುತ್ತೇವೆ ಎಂದು ಅವರು ತಿಳಿಸಿದರು.
- - -(-ಫೋಟೋ ಇದೆ.)