ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿನ ತಳವಾರ ಹಾಗೂ ಪರಿವಾರ ಸಮುದಾಯ ಕಳೆದ ಹತ್ತಾರು ವರ್ಷಗಳಿಂದ ಪರಿಶಿಷ್ಟ ಪಂಗಡದ ಮೀಸಲು ಸೌಲಭ್ಯಕ್ಕೆ ಆಗ್ರಹಿಸಿ ಹೋರಾಟ ಮಾಡುತ್ತಾ ಬಂದಿದೆ. ಪರಿಣಾಮವಾಗಿ ಸರ್ಕಾರ ಈ ಎರಡು ಸಮುದಾಯಗಳ ಕುಲಶಾಸ್ತ್ರಿ ಅಧ್ಯಯನ ನಡೆಸಿದ ಬಳಿಕವೇ ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರ್ಪಡೆ ಮಾಡಿದೆ. ಹಾಗಾಗಿ ತಳವಾರ ಸಮುದಾಯದವರು ನ್ಯಾಯೋಚಿತವಾಗಿ ಹಾಗೂ ಸಂವಿಧಾನ ಬದ್ಧವಾಗಿ ಮೀಸಲು ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ವಾಲ್ಮೀಕಿ ಸಮುದಾಯದ ಮುಖಂಡರು ಅನಗತ್ಯವಾಗಿ ತಳವಾರ ಸಮುದಾಯದ ಮೀಸಲು ವಿಷಯದಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಅಧಿಕಾರಿಗಳ ದಾರಿ ತಪ್ಪಿಸುತ್ತಿದ್ದಾರೆ. ಅಧಿಕಾರಿಗಳು ಸಂವಿಧಾನದ ಪ್ರಕಾರ ಯಾರು ಅರ್ಹರರು ಇದ್ದಾರೋ ಅವರಿಗೆ ಜಾತಿ ಪ್ರಮಾಣ ಪತ್ರ ನೀಡುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಅನವಶ್ಯಕವಾಗಿ ತಳವಾರ ಸಮುದಾಯದ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದ ಅವರು, ತಳವಾರ ಸಮುದಾಯ ರಾಜ್ಯದ ಬಹುತೇಕ ಎಲ್ಲ ಕಡೆಗಳಲ್ಲಿ ಇದ್ದು ಈ ಸಮುದಾಯ ಮೊದಲ ಪ್ರವರ್ಗ-1 ರಲ್ಲಿ ಇತ್ತು. ಹೋರಾಟದ ಬಳಿಕ ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರ್ಪಡೆಯಾಗಿದೆ. ಹಾಗಾಗಿ ಮೊದಲಿನ ಜಾತಿ ಪ್ರಮಾಣ ಪತ್ರದಲ್ಲಿ ಹಿಂದು ತಳವಾರ ಇದೆ ಎಂದು ವಿವರಿಸಿದರು.ವಾಲ್ಮೀಕಿ, ನಾಯಕ, ತಳವಾರ ಸಮುದಾಯದವರು ಸಹೋದರರಂತೆ ಜೀವನ ನಡೆಸುತ್ತಿದ್ದಾರೆ. ಅನಗತ್ಯ ಹೇಳಿಕೆಗಳನ್ನು ನೀಡುವ ಮೂಲಕ ಗೊಂದಲ ಸೃಷ್ಟಿಸಿ ಹುಳಿ ಹಿಂಡುವ ಕೆಲಸ ಮಾಡಬೇಡಿ ಎಂದು ಮನವಿ ಮಾಡಿದ ಅವರು, ನಿಜ ತಳವಾರ ಅವರನ್ನು ಹೊರತು ಪಡಿಸಿ ಇತರೆ ಸಮುದಾಯದವರಿಗೆ ತಳವಾರ ಎಂದು ಗುರುತಿಸಿ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ನೀಡುವುದನ್ನು ನಾವು ವಿರೋಧಿಸುತ್ತೇವೆ. ಅಂತಹ ಪ್ರಸಂಗಗಳು ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಭೀಮಸಿ ತಳವಾರ, ಪ್ರಭು ಗಸ್ತಿ, ಭೀಮಸಿ ಹುನ್ನೂರ, ಬಸವರಾಜ ಸೋಮಾಪೂರ, ಭೀಮು ದೇಶನೂರ, ಉಮೇಶ ಗಸ್ತಿ ಇತರರು ಇದ್ದರು.