ಸಂತ್ರಸ್ತರಿಗೆ ಕೊಟ್ಟ ಮಾತಿನಂತೆ ನಡೆದಿದ್ದೇವೆ

KannadaprabhaNewsNetwork |  
Published : Sep 19, 2025, 01:04 AM IST
ಬೀಳಗಿ | Kannada Prabha

ಸಾರಾಂಶ

ಪರಿಹಾರ, ಪುನರ್ವಸತಿ, ಪುನರ್ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿ ಬರುವ ಮೂರು ವರ್ಷಗಳ ಅವಧಿಯಲ್ಲಿ ಯೋಜನೆ ಮುಕ್ತಾಯ ಮಾಡುವ ಎಲ್ಲಾ ಸಿದ್ಧತೆ ನೆಡೆದಿದೆ

ಕನ್ನಡಪ್ರಭ ವಾರ್ತೆ ಬೀಳಗಿ

ರಾಜ್ಯ ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಕೃಷ್ಣಾ ಮೇಲ್ದಂಡೆ ಹಂತ-೩ ಯೋಜನೆಯನ್ನು ನಾವು ಅಧಿಕಾರಕ್ಕೆ ಬಂದರೆ ಪೂರ್ಣಗೊಳಿಸುವುದಾಗಿ ಹೇಳಿದ್ದೇವು ಅದರಂತೆ ಇಂದು ಯೋಜನೆಗೆ ಬೇಕಿರುವ ಪರಿಹಾರ, ಪುನರ್ವಸತಿ, ಪುನರ್ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿ ಬರುವ ಮೂರು ವರ್ಷಗಳ ಅವಧಿಯಲ್ಲಿ ಯೋಜನೆ ಮುಕ್ತಾಯ ಮಾಡುವ ಎಲ್ಲಾ ಸಿದ್ಧತೆ ನೆಡೆದಿದೆ ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷರು ಶಾಸಕರಾದ ಜೆ.ಟಿ.ಪಾಟೀಲ ತಿಳಿಸಿದರು.

ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಮುಳುಗಡೆ ಹೋರಾಟ ಸಮಿತಿ, ಸಂತ್ರಸ್ತ ರೈತರು ಹಮ್ಮಿಕೊಂಡಿದ್ದ ಸರ್ಕಾರಕ್ಕೆ ಅಭಿನಂದಿಸುವ ಸಮಾರಂಭದಲ್ಲಿ ಅವರು ಮಾತನಾಡಿದರು.

ಹಲವಾರು ವರ್ಷಗಳಿಂದ ಯೋಜನೆಯ ಕುರಿತಾಗಿ ಹೋರಾಟ ಆರಂಭವಾಗಿತ್ತು. ಇಂದಿಗೆ ಒಂದು ಹಂತಕ್ಕೆ ಸಂತ್ರಸ್ತರು ಸಂಭ್ರಮಿಸುವ ರೀತಿಗೆ ಬಂದಿದೆ. ಈಚೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಆರ್.ಬಿ.ತಿಮ್ಮಾಪೂರ, ಎಚ್.ಕೆ.ಪಾಟೀಲ್, ಶಿವಾನಂದ ಪಾಟೀಲ, ಎಂ.ಬಿ.ಪಾಟೀಲ್ ಸೇರಿದಂತೆ ಹಲವಾರು ಸಚಿವರು ಈ ಯೋಜನೆಯ ಕುರಿತಾಗಿ ಚರ್ಚೆ ಮಾಡಿ ಒಣ ಬೇಸಾಯ ಪ್ರತಿ ಎಕರೆಗೆ ಜಮೀನಿಗೆ ₹೩೦ ಲಕ್ಷ, ನೀರಾವರಿ ಪ್ರತಿ ಎಕರೆಗೆ ₹೪೦ ಲಕ್ಷ ಪರಿಹಾರ ನೀಡುವ ಘೋಷಣೆ ಮಾಡಲಾಗಿದೆ. ಬರುವ ಮೂರು ಆರ್ಥಿಕ ವರ್ಷಗಳಲ್ಲಿ ಯೋಜನೆ ಮುಕ್ತಾಯ ಮಾಡುವ ಘೋಷಣೆ ಎಲ್ಲರಿಗೂ ಸಂತಸ ತಂದಿದೆ. ಅದಕ್ಕಾಗಿ ಸಿಎಂ, ಡಿಸಿಎಂ, ಸಚಿವರು ಸೇರಿದಂತೆ ಎಲ್ಲರಿಗೂ ಜಿಲ್ಲೆಯ ಎಲ್ಲಾ ಸಂತ್ರಸ್ತರ ಪರವಾಗಿ ಅಭಿನಂದಿಸುವುದಾಗಿ ಹೇಳಿದರು.

ಆಲಮಟ್ಟಿ ಜಲಾಶಯ ೫೨೪.೨೫೬ ಮೀ. ಎತ್ತರ ಒಂದೇ ಹಂತದಲ್ಲಿ ಮಾಡುವುದರಿಂದ ಸುಮಾರು ೭೩೫೬೧ ಎಕರೆ ಭೂಮಿ ಮುಳುಗಡೆಯಾಗಲಿದೆ. ೫೧೮೦೦ ಎಕರೆ ಭೂಮಿ ಕಾಲುವೆ ನಿರ್ಮಾಣಕ್ಕೆ ಬೇಕಾಗಿದೆ ಹಾಗೂ ೬೬೪೧ ಎಕರೆ ಭೂಮಿ ಪುನರ್ವಸತಿ ಕೇಂದ್ರಗಳ ಸ್ಥಾಪನೆ ಬೇಕಾಗುವುದು. ಹೀಗೆ ಸುಮಾರು ₹೭೫ ಸಾವಿರ ಕೋಟಿ ವೆಚ್ಚ ಆಗಲಿದೆ. ಅದು ಒಪ್ಪಿದ ನಿಗದಿತ ಅವಧಿಯಲ್ಲಿ ಮಾಡುವ ಗುರಿ ಇಟ್ಟುಕೊಂಡು ಮೊದಲ ವರ್ಷ ಎಷ್ಟು ಎಂದು ಹಂತ ಹಂತವಾಗಿ ಮೂರು ಹಂತಗಳಲ್ಲಿ ಮಾಡಿ ಪರಿಹಾರ ಹೆಚ್ಚಿಸುವ ಯೋಜನೆಯನ್ನು ಮಾಡಲಾಗುತ್ತದೆ. ತೋಟಗಾರಿಕೆ ಬೆಳೆಗಳಿಗೂ ಬೆಳೆಯ ಆಧಾರದಲ್ಲಿ ಅದಕ್ಕೂ ಸೂಕ್ತ ಪರಿಹಾರ ಸಿಗಲಿದೆ ಎಂದರು.

ಬಿಜೆಪಿ ತಪ್ಪಿನಿಂದ ಯೋಜನೆ ವಿಳಂಬ:

ಕಳೆದ ಬಿಜೆಪಿ ಸರ್ಕಾರ ಅವಧಿಯಲ್ಲಿ ಕಾಟಾಚಾರಕ್ಕೆ ಎಂಬಂತೆ ಪರಿಹಾರ ಘೋಷಣೆ ಮಾಡಿ ಯುಕೆಪಿ ಯೋಜನೆ ವಿಳಂಬ ಮಾಡಿದೆ ಎಂದು ಶಾಸಕ ಜೆ.ಟಿ.ಪಾಟೀಲ ಆರೋಪಿಸಿದರು. ಬಿಜೆಪಿ ಬೇಕಾಬಿಟ್ಟಿ ಕಾಮಾಗಾರಿ ಟೆಂಡರ್ ಕರೆದು ಅಂದಾಜು ೨ ಲಕ್ಷ ೭೭ ಸಾವಿರ ಕೋಟಿ ರು. ಸರ್ಕಾರಕ್ಕೆ ಹೊರೆ ಇಟ್ಟು ಹೋದರು. ಸದ್ಯ ಕಾಂಗ್ರೆಸ್ ಸರ್ಕಾರ ಬಿಜೆಪಿ ಮಾಡಿದ ಸಾಲದ ಹೊರೆ ನಿಗಿಸುತ್ತ ರಾಜ್ಯದ ಜನರಿಗೆ ನೀಡಿದ ಐದು ಗ್ಯಾರಂಟಿ ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ಆರ್ಥಿಕ ತಜ್ಞರು, ಮುಖ್ಯಮಂತ್ರಿಯು ಆಗಿದ್ದಾರೆ. ಯೋಜನೆ ಮುಕ್ತಾಯವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು. ೧೯೯೫ರಿಂದ ಮುಳುಗಡೆ ಹೋರಾಟಕ್ಕಾಗಿ ಮಾಡಿದ ಕೆಲಸ, ಮಹನೀಯರನ್ನು ಸ್ಮರಿಸಿದರು. ಬರುವ ದಿನಗಳಲ್ಲಿ ಭೂಮಿ ಪರಿಹಾರ ಸಿಕ್ಕರೆ ಯೋಜನೆ ಮುಕ್ತಾಯ ಅಲ್ಲ. ಸಂತ್ರಸ್ತರಿಗೆ ಯೋಗ್ಯ ಪುನರ್ವಸತಿ, ಮೂಲಭೂತ ಸೌಕರ್ಯ, ಸಂತ್ರಸ್ತರ ಮಕ್ಕಳ ಶಿಕ್ಷಣ ಜೊತೆಗೆ ಸಂತ್ರಸ್ತರ ಹಲವಾರು ವಿಷಯಗಳ ಕುರಿತಾಗಿ ಚರ್ಚೆ ಮಾಡಬೇಕಿದೆ ಎಂದರು.

ಸಮಾರಂಭದಲ್ಲಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಬಸವಪ್ರಭು ಸರನಾಡಗೌಡ, ಸೌದಾಗರ ಕೆಂಪಲಿಂಗಣ್ಣವರ, ಮಲ್ಲಯ್ಯ ಕಂಬಿ, ಪ್ರಕಾಶ್ ಅಂತರಗೊಂಡ, ಮಹಾದೇವ ಹಾದಿಮನಿ ಮಾತನಾಡಿದರು. ಯಮನಪ್ಪ ರೊಳ್ಳಿ, ಶಿವನಗೌಡ ಪಾಟೀಲ, ಬಸವರಾಜ ಹಳ್ಳದಮನಿ, ಸಿದ್ದು ಸಾರಾವರಿ, ರಮೇಶ್ ಬಗಲಿ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜದಲ್ಲಿನ ಅಂಕು-ಡೊಂಕು ತಿದ್ದಲು ಶಿಕ್ಷಣವಂತರಾಗಿ
ಕುವೆಂಪು ಕರ್ನಾಟಕದ ಅಮೂಲ್ಯ ಆಸ್ತಿ