ಹುಬ್ಬಳ್ಳಿ:
ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಒಂದು ರಾಷ್ಟ್ರೀಯ ಪಕ್ಷ ಎಂದ ಮೇಲೆ ಒಂದು ವ್ಯವಸ್ಥೆ ಇರುತ್ತದೆ. ಈ ಹಿಂದೆ ಬಿಜೆಪಿಯವರು ಹೈಕಮಾಂಡ್ ಎಂದರೆ ಟೀಕೆ ಮಾಡುತ್ತಿದ್ದರು. ಇದೀಗ ಅವರು ಪ್ರತಿಯೊಂದಕ್ಕೂ ಹೈಕಮಾಂಡ್ ಮೇಲೆ ಅವಲಂಬಿತರಾಗಿದ್ದಾರೆ ಎಂದು ಲೇವಡಿ ಮಾಡಿದರು.
ರಾಜಕಾರಣ ಸಲ್ಲ:ಪ್ರತಿಪಕ್ಷಗಳು ಎಲ್ಲ ವಿಷಯದಲ್ಲೂ ರಾಜಕೀಯ ಮಾಡುತ್ತಿವೆ. ಇನಾಂವೀರಾಪುರದಲ್ಲಿ ನಡೆದ ಮರ್ಯಾದಾ ಹತ್ಯೆ ವಿಚಾರದಲ್ಲೂ ರಾಜಕಾರಣ ಮಾಡುತ್ತಿರುವುದು ದುರ್ದೈವದ ಸಂಗತಿ ಎಂದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖೆ ಆರಂಭವಾಗಿದೆ. ಕಾನೂನು ಚೌಕಟ್ಟಿನಲ್ಲಿ ನೊಂದ ಕುಟುಂಬಕ್ಕೆ ಸಹಾಯ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರತಿಪಕ್ಷಗಳು ಸರ್ಕಾರದ ಪರವಾಗಿ ಇರಬೇಕು. ಅದನ್ನು ಬಿಟ್ಟು ಘಟನೆಯನ್ನು ತಮ್ಮ ರಾಜಕಾರಣಕ್ಕೆ ಬಳಸಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನಿನಡಿ ಸರ್ಕಾರ ತನ್ನ ಕೆಲಸ ಮಾಡುತ್ತದೆ. ಇಂತಹ ಘಟನೆಗಳು ಮಾನವ ಸಮಾಜ ತಲೆತಗ್ಗಿಸುವಂತಹವು. ಹೀಗಾಗಿ ಜನರ ಮನಸ್ಥಿತಿ ಬದಲಾವಣೆ ಆಗಬೇಕು. ಘಟನೆಗೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಕಂಡು ಬಂದ ಹಿನ್ನೆಲೆಯಲ್ಲಿ ಇಬ್ಬರು ಸಿಬ್ಬಂದಿಗಳನ್ನು ಅಮಾನತ್ತು ಮಾಡಲಾಗಿದೆ ಎಂದರು.ಮುಂದಿನ ಸಿಎಂ ಪರಮೇಶ್ವರ್!
ರಾಜ್ಯದಲ್ಲಿ ಸಿಎಂ ಕುರ್ಚಿಗಾಗಿ ದಿನಕ್ಕೊಂದು ಬೆಳವಣಿಗೆ ನಡೆಯುತ್ತಿರುವ ಬೆನ್ನಲ್ಲೇ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಗೃಹ ಸಚಿವ ಜಿ. ಪರಮೇಶ್ವರ್ ಸಿಎಂ ಎಂದು ಜಯಘೋಷಣೆಗಳು ಮೊಳಗಿದವು.ವಿಮಾನ ನಿಲ್ದಾಣಕ್ಕೆ ಪರಮೇಶ್ವರ್ ಆಗಮಿಸುತ್ತಿದ್ದಂತೆ ಅವರ ಅಭಿಮಾನಿಗಳು, ಮುಂದಿನ ಸಿಎಂ ಪರಮೇಶ್ವರಗೆ ಜೈವಾಗಲಿ ಎಂದು ಘೋಷಣೆ ಕೂಗಿದರು. ಪರಮೇಶ್ವರ್ ಅವರ ಮುಂದೆಯೇ ಘೋಷಣೆ ಕೂಗಿದರು.