ಶಿರಹಟ್ಟಿ: ಶಾಸಕ ಡಾ. ಚಂದ್ರು ಲಮಾಣಿ ಅವರ ಮೇಲೆ ಇತ್ತೀಚೆಗೆ ನಡೆದ ಲೋಕಾಯಕ್ತ ದಾಳಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಆರೋಪ ಮಾಡಿರುವ ಗುತ್ತಿಗೆದಾರ ಸಹ ಯಾರು ಎಂಬುದು ನಮಗೆ ತಿಳಿದಿಲ್ಲ ಎಂದು ಆದರಳ್ಳಿ ಗ್ರಾಮದ ಗವಿಮಠದ ಕುಮಾರ ಮಹಾರಾಜ ಶ್ರೀಗಳು ಸ್ಪಷ್ಟಪಡಿಸಿದರು.
ರೈತ ಹೋರಾಟದಲ್ಲಿ ಭಾಗವಹಿಸಿದಾಗ ಶಾಸಕರು ಬಹಳಷ್ಟು ಬೆದರಿಕೆ ಕರೆಗಳನ್ನು ಮಾಡಿದ್ದಾರೆ. ಆದರಳ್ಳಿ ಗ್ರಾಮದ ಹಿರಿಯರಿಗೆ ಫೋನ್ ಕರೆ ಮಾಡಿ, ಸ್ವಾಮಿಗಳನ್ನು ಮಠದಿಂದ ಹೊರಗೆ ಹಾಕಿದರೆ ನಿಮಗೆ ದುಡ್ಡು ಕೊಡುತ್ತೇನೆ ಎಂದಿದ್ದಾರೆ. ಅವಾಚ್ಯ ಶಬ್ದಗಳನ್ನು ಬಳಸಿದ್ದರಿಂದ ನಮಗೆ ಸಿಟ್ಟು ಬಂದು ಅವರ ಬಗ್ಗೆ ಮಾತನಾಡಿದ್ದು ನಿಜ. ಆದರೆ ಅದು ಈಗಿನದ್ದಲ್ಲ ಎಂದರು.
ಈ ಶಾಸಕರು ಸ್ವಾಮಿಗಳು, ಅಧಿಕಾರಿಗಳು, ರೈತರು ಯಾರನ್ನು ಬಿಡುತ್ತಿಲ್ಲ, ಅಷ್ಟೊಂದು ಕ್ರೂರಿ. ಅವರದ್ದೇ ಸಮಾಜದ ಸ್ವಾಮಿಗಳನ್ನು ಬಿಡುತ್ತಿಲ್ಲ ಎಂದ ಮೇಲೆ ಉಳಿದ ಸ್ವಾಮಿಗಳ ಗತಿಯೇನು? ಕ್ಷೇತ್ರದ ಬಹುತೇಕರಿಗೂ ಅವರು ನೋವು ಮಾಡಿದ್ದಾರೆ. ಮತ್ತೊಬ್ಬರಿಗೆ ನೋವುಂಟು ಮಾಡುವುದೇ ಅವರ ಕಾಯಕ. ಈಗಲೂ ಅವರ ಹಿಂಬಾಲಕರು ರಾತ್ರಿ ಒಂದು ಗಂಟೆ ವರೆಗೆ ನನಗೆ ಕರೆ ಮಾಡಿ ಹೆದರಿಸುತ್ತಾರೆ. ಯಾವುದೇ ಸಮುದಾಯದಿಂದ ನನಗೆ ತೊಂದರೆ ಬಂದಿಲ್ಲ. ಎಲ್ಲರೂ ನಮ್ಮವರೆ ಎಂದು ತಿಳಿದು ವಿರಕ್ತಮಠದ ಸ್ವಾಮಿಗಳಾಗಿ ಬಸವ ತತ್ವ ಅಳವಡಿಸಿಕೊಂಡು ದೇವರ ಸೇವೆ ಮಾಡುತ್ತ ಬಂದಿದ್ದೇನೆ ಎಂದರು.ನಮ್ಮೂರ ಗೌಡ್ರಿಗೆ ಕರೆ ಮಾಡಿ ₹೨೦ ಲಕ್ಷ ಕೊಡುತ್ತೇನೆ, ಆ ಸ್ವಾಮಿಗಳನ್ನು ಮಠದಿಂದ ಹೊರಕ್ಕೆ ಹಾಕಿ ಎಂದು ಡಾ. ಲಮಾಣಿ ಹೇಳಿದ್ದಾರೆ. ಜತೆಗೆ ತಮ್ಮ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಸರಿಯೇ? ನಮ್ಮ ಮತ್ತು ಅವರ ನಡುವೆ ಯಾವುದೆ ವೈಷಮ್ಯಗಳಿಲ್ಲ. ಸದಾಶಿವ ಆಯೋಗದ ಒಳ ಮೀಸಲಾತಿ ಹೋರಾಟದ ಸಂದರ್ಭದಲ್ಲಿ ಬಿಜೆಪಿಯನ್ನು ನಾನು ವಿರೋಧಿಸಿದ್ದೆ ಮತ್ತು ಕಳೆದ ೨೦ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಬಂಜಾರ ಸಮಾಜದ ತಾಲೂಕು ಅಧ್ಯಕ್ಷರನ್ನು ಬದಲಾವಣೆ ಮಾಡುವಂತೆ ಸೇವಾಲಾಲ ಜಯಂತಿ ಸಂದರ್ಭದಲ್ಲಿ ನಾವು ತಿಳಿಸಿದ್ದೆವು. ಇಲ್ಲಿಂದ ನಮಗೆ ಮತ್ತು ಶಾಸಕರ ನಡುವೆ ವೈರತ್ವ ಪ್ರಾರಂಭಯಿತು. ಅಲ್ಲಿಂದ ಚಂದ್ರು ಲಮಾಣಿ ಅವರು ನನ್ನ ವಿರುದ್ಧ ಷಡ್ಯಂತ್ರ ರೂಪಿಸಲು ಆರಂಭಿಸಿದ್ದರು. ನಾನು ಯಾವುದೆ ಪಕ್ಷದ ಮತ್ತು ವ್ಯಕ್ತಿಯ ವಿರುದ್ಧವಾಗಿಲ್ಲ. ಧರ್ಮದ ಪರವಾಗಿದ್ದು, ಅಧರ್ಮ ಮಾರ್ಗ ಹಿಡಿಯುವವರ ವಿರುದ್ಧ ನಾನು ಈಗಲೂ ಹೋರಾಡುತ್ತೇನೆ ಕುಮಾರ ಮಹಾರಾಜ ಶ್ರೀಗಳು ಹೇಳಿದರು.