- ನಾಗನೂರಲ್ಲಿ ಶ್ರೀ ಗಣೇಶ ದೇವಸ್ಥಾನ, ಶ್ರೀ ಗೌರಸಮುದ್ರ ಮಾರಮ್ಮ ದೇಗುಲದ ಮೂರ್ತಿ ಪ್ರತಿಷ್ಠಾಪನೆ, ದೇವಸ್ಥಾನ ಉದ್ಘಾಟನೆ
- - -- ಪಾಕಿಸ್ತಾನ ಜನರ ಬಗ್ಗೆ ಕರುಣೆ ತೋರುವುದು ಮಾನವೀಯತೆ: ಸಿರಿಗೆರೆ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀ
- ಉಗ್ರರ ನೆಲೆ ಮೇಲೆ ಭಾರತ ದಾಳಿ ಮಾಡಿದಾಗ ಪಾಕಿಸ್ತಾನ ಕೃತಜ್ಞತೆ ತೋರದೇ ವಿರುದ್ಧವಾಗಿ ನಡೆದಿದೆ- ಜನಸಾಮಾನ್ಯರು ತಮ್ಮ ಪಾಡಿಗೆ ತಾವಿದ್ದಾರೆ, ರಾಜಕೀಯ ಹಿತಾಸಕ್ತಿಗೆ ಯುದ್ಧ ಪರಿಸ್ಥಿತಿ ಸೃಷ್ಠಿ: ಆರೋಪ - - -
ಕನ್ನಡಪ್ರಭ ವಾರ್ತೆ ದಾವಣಗೆರೆಕಾಶ್ಮೀರದ ಪೆಹಲ್ಗಾಂ ನರಮೇಧ ಹಿನ್ನೆಲೆ ಪಾಕಿಸ್ತಾನದ ಮೇಲಷ್ಟೇ ಅಲ್ಲ, ಭಯೋತ್ಪಾದನೆ ವಿರುದ್ಧ ಭಾರತ ಕೈಗೊಂಡಿರುವ ಯುದ್ಧ ಇದಾಗಿದೆ. ಯುದ್ಧದಲ್ಲಿ ಪ್ರಾಣ ಕಳೆದುಕೊಂಡ ಭಾರತೀಯರು, ಪಾಕಿಸ್ತಾನದ ಜನರ ಬಗ್ಗೆ ಕರುಣೆ ತೋರುವುದು ಮಾನವೀಯತೆ. ಆದರೆ, ಉಗ್ರರ ಬಗ್ಗೆ ಅಷ್ಟೇ ಕಠಿಣ ಹೃದಯಿಗಳಾಗಬೇಕು ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನುಡಿದರು.
ತಾಲೂಕಿನ ನಾಗನೂರು ಗ್ರಾಮದ ಶ್ರೀ ಉಮಾ ಮಹೇಶ್ವರ ಸೇವಾ ಟ್ರಸ್ಟ್ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ಗಣೇಶ ದೇವಸ್ಥಾನ, ಶ್ರೀ ಗೌರಸಮುದ್ರ ಮಾರಮ್ಮ ದೇಗುಲದ ಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣ, ದೇವಸ್ಥಾನ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ಭಯೋತ್ಪಾದಕರನ್ನು ದೇವರು ಸಹ ಕ್ಷಮಿಸಲಾರ. ಭಾರತವು ಭಯೋತ್ಪಾದಕರ ನೆಲೆಯ ಮೇಲೆ ದಾಳಿ ಮಾಡಿದಾಗ ಪಾಕಿಸ್ತಾನ ಕೃತಜ್ಞತೆ ತೋರಬೇಕಿತ್ತು. ಆದರೆ, ಅದಕ್ಕೆ ವಿರುದ್ಧವಾಗಿ ಪಾಕ್ ನಡೆದುಕೊಳ್ಳುತ್ತಿದೆ. ಇದನ್ನು ಒಪ್ಪಲು ಹೇಗೆ ಸಾಧ್ಯ? ಸರ್ಕಾರವು ಜನಸಾಮಾನ್ಯರ ಹಿತಕಾಪಾಡಬೇಕು. ನೆರೆಯ ರಾಷ್ಟ್ರದಲ್ಲಿ ಏನಾಗುತ್ತದೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಎರಡೂ ದೇಶಗಳ ರಾಜಕಾರಣಿಗಳ ಬಗ್ಗೆ ಜನರಲ್ಲಿ ದ್ವೇಷವಿದೆ. ಜನಸಾಮಾನ್ಯರು ತಮ್ಮ ಪಾಡಿಗೆ ತಾವಿದ್ದಾರೆ. ಆದರೆ, ರಾಜಕೀಯ ಹಿತಾಸಕ್ತಿಗೆ ಇಂತಹ ಪರಿಸ್ಥಿತಿ ಸೃಷ್ಠಿಸಲಾಗಿದೆ ಎಂದು ಹೇಳಿದರು.
ಜಗತ್ತಿನ ಯಾವುದೇ ಧರ್ಮವೂ ಹಿಂಸೆಯನ್ನು ಪ್ರಚೋದನೆ ಮಾಡುವುದಿಲ್ಲ. ಜೀವನದ ಮೌಲ್ಯಗಳು ಎಲ್ಲಾ ಧರ್ಮಗಳಲ್ಲೂ ಇವೆ. ಆದರೂ, ಎಲ್ಲ ಕಡೆ ಧರ್ಮದ ಹೆಸರಿನಲ್ಲಿ ಹಿಂಸೆ ಮಾಡುತ್ತಿರುವುದು ವಿಪರ್ಯಾಸ. ಈಚಿನ ದಿನಮಾನಗಳಲ್ಲಿ ದ್ವೇಷ ಬೆಳೆಯುತ್ತಿದ್ದು, ಧರ್ಮಬುದ್ಧಿ ಮರೆಯಾಗುತ್ತಿದೆ. ಈ ಸ್ಥಿತಿಯಲ್ಲಿ ವಿವೇಕ ಜಾಗೃತವಾಗಬೇಕು. ಮಂದಿರ, ಮಸೀದಿ, ಚರ್ಚ್‌ಗಳಲ್ಲಿ ಇರುವುದು ದೇವರೆ. ತಮ್ಮ ಭಕ್ತಿ- ಭಾವಕ್ಕೆ ತಕ್ಕಂತೆ ಇರುವ ದೇವರ ನೆಲೆ ಪ್ರತಿಯೊಬ್ಬರೂ ಗೌರವಿಸಬೇಕು. ಕಾಶ್ಮೀರದಲ್ಲಿ 26 ಅಮಾಯಕ ಪ್ರವಾಸಿಗರು ಹತ್ಯೆಯಾಗಿದ್ದು, ಇದು ದುರಂತವಲ್ಲವೇ ಎಂದು ಅವರು ಪ್ರಶ್ನಿಸಿದರು.ದೇಗುಲದಂತೆ ಬದುಕು ಸಹ ಸ್ವಚ್ಛವಾಗಿರಬೇಕು. ಗುಣದಲ್ಲಿ ನೀತಿವಂತರಾಗಬೇಕು. ಉತ್ತಮ ವ್ಯಕ್ತಿತ್ವ ರೂಪಸಿಕೊಳ್ಳಬೇಕು. ರಾಣೆಬೆನ್ನೂರು ತಾಲೂಕಿನ ಗ್ರಾಮವೊಂದರ ದೇಗಲ ಉದ್ಘಾಟನೆಗೆ ನಮಗೆ ಆಹ್ವಾನಿಸಿದ್ದರು. ಆಗ ನಾವು ಮದ್ಯಪಾನದ ವಿರುದ್ಧ ಜಾಗೃತಿ ಮಾಡುತ್ತಿದ್ದವು. ಮದ್ಯಪಾನ ನಿಷೇಧ ಕಾನೂನು ಜಾರಿಗೆ ಒತ್ತಾಯಿಸಿದ್ದೆವು. ಆಹ್ವಾನ ನೀಡಿದ ಗ್ರಾಮಸ್ಥರಿಗೂ ಮದ್ಯದಂಗಡಿ ಮುಚ್ಚಿದರೆ ಮಾತ್ರ ಬರುವುದಾಗಿ ಷರತ್ತು ವಿಧಿಸಿ, ಮದ್ಯದಂಗಡಿ ಬಂದ್ ಮಾಡಿಸುವಂತೆ ಹೇಳುತ್ತಿದ್ದೆವು ಎಂದು ತಿಳಿಸಿದರು.
ಎಲ್ಲೇ ಆದರೂ ದೇಗುಲದ ಜೊತೆಗೆ ನೀವು ಪುನರ್ ನಿರ್ಮಾಣವಾಗಬೇಕು. ಹೊರಗಿನ ದೇಗುಲ ಮುಖ್ಯವಲ್ಲ. ನಿಮ್ಮೊಳಗೆ ಯಾವ ರೀತಿ ಬದಲಾವಣೆ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತೀರಿ ಎಂಬುದೇ ಮುಖ್ಯ. ದೇವರು ನಿಮ್ಮ ದೇಹದ ಒಳಗೂ ಇದ್ದಾನೆ. ದೇಗುಲದ ರೀತಿ ಶರೀರವು ಸಹ ಶುದ್ಧವಾಗಿ ಇರಬೇಕೆಂಬುದು ಬಸವಣ್ಣನವ ಆಶಯವೂ ಆಗಿತ್ತು. 12ನೇ ಶತಮಾನದಲ್ಲಿ ಪ್ರಾಣಿಬಲಿ ವಿರೋಧಿಸಿದ ಮೊದಲಿಗರು ಮರುಳಸಿದ್ಧರು. ಆದ್ದರಿಂದ ಪೂರ್ವಾಶ್ರಮ ತೊರೆದು ಹೊರಬಂದರು. ಹಬ್ಬವನ್ನು ಮಾಡಿ. ಆದರೆ, ಪ್ರಾಣಿ ಬಲಿ ಬೇಡ. ಅವುಗಳಿಗೂ ಜೀವ ಇದೆಯೆಂಬ ಪ್ರಜ್ಞೆ ಮರೆಯಬೇಡಿ. ಇಂತಹ ಪದ್ಧತಿ ಕೈಬಿಡಿ. ತಿಳಿವಳಿಕೆ ಮೂಡಿದರೆ ಮಾತ್ರ ಅದನ್ನು ಬಿಡಲು ಸಾಧ್ಯ ಎಂದು ಹೇಳಿದರು.ಹೆಬ್ಬಾಳ್ ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಮಾತನಾಡಿ, ಕಳಸಾರೋಹಣ, ದೇಗುಲ ಉದ್ಘಾಟನೆ ಸಂತಸಹ ಸಂಗತಿ. ಪ್ರತಿ ವರ್ಷ ಹಲವಾರು ದೇಗುಲ ನಿರ್ಮಾಣವಾಗುತ್ತದೆ. ಆದರೆ, ಪವಿತ್ರವಾದ ಭಕ್ತಿ-ಭಾವನೆ ಬೆಳೆಯುತ್ತಿಲ್ಲ. ಜನರು ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಭಕ್ತಿ, ಮಾನವೀಯ ಮೌಲ್ಯಗಳನ್ನು ಹೃದಯದಲ್ಲಿ ಬಿತ್ತಬೇಕು. ಮಕ್ಕಳಿಗೆ ಮನೆಯಿಂದಲೇ ಸಂಸ್ಕಾರ ನೀಡಬೇಕು. ಇಲ್ಲದಿದ್ರೆ, ನೆರೆಯ ರಾಷ್ಟ್ರದಂತೆ ಕ್ರೂರತ್ವ ಬೆಳೆಯುತ್ತದೆ. ಮಾನವೀಯತ ಮೈಗೂಡಿಸಿಕೊಂಡಾಗ ಮಾತ್ರ ದೇಗುಲ ಕಟ್ಟಿದ್ದು ಸಾರ್ಥಕವಾಗುತ್ತದೆ. ದುಶ್ಚಟಗಳನ್ನು ಮಠಾಧೀಶರ ಪಾದಕ್ಕೆ ಅರ್ಪಿಸಿ, ಸಂಸ್ಕಾರ, ಅಚಾರ ಬೆಳೆಸಿಕೊಂಡಾಗ ಮಾತ್ರ ದೇವರು ಹೃದಯದಲ್ಲಿ ಪ್ರತಿಷ್ಟಾಪನೆಯಾಗುತ್ತದೆ. ಆಗ ನಮಗೂ ಸಂತಸ ಎಂದರು.
ಗ್ರಾಮದ ಹಿರಿಯ ಮುಖಂಡ ಎಂ.ಜಿ. ಮಹೇಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಎಸ್.ಎ.ರವೀಂದ್ರನಾಥ, ಎನ್.ಜಿ. ಸೋಮಶೇಖರಪ್ಪ, ಎ.ಹನುಮಂತಪ್ಪ, ಎಚ್.ಬಸವರಾಜಪ್ಪ, ಎನ್.ಎಂ. ಮಹೇಶ್ವರಯ್ಯ, ಟ್ರಸ್ಟ್ ಅಧ್ಯಕ್ಷ ಎನ್.ಡಿ. ಮಲ್ಲಿಕಾರ್ಜುನ, ಗ್ರಾಪಂ ಸದಸ್ಯರಾದ ಎಂ.ಮಲ್ಲಿಕಾರ್ಜುನ, ಎನ್.ಬಿ. ರೇವಣಸಿದ್ದಪ್ಪ, ಲೀಲಾ ನಾಗರಾಜಪ್ಪ, ಶಾಂತಮ್ಮ ಮಂಜುನಾಥ, ಲಲಿತಮ್ಮ ದೇವೇಂದ್ರಪ್ಪ, ದೀಪಾ, ಎಚ್.ಬಸವರಾಜ, ಗ್ರಾಮಸ್ಥರು ಇದ್ದರು.- - -
-11ಕೆಡಿವಿಜಿ9, 10:ದೇವಸ್ಥಾನ ಉದ್ಘಾಟನಾ ಸಮಾರಂಭದಲ್ಲಿ ಸಿರಿಗೆರೆ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಹೆಬ್ಬಾಳ್ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಮತ್ತಿತರರು ಪಾಲ್ಗೊಂಡಿದ್ದರು.