ಕನ್ನಡಪ್ರಭ ವಾರ್ತೆ ಶಹಾಪುರ
ನಮಗಾಗಿ ಮತ್ತು ನಮ್ಮ ಮುಂದಿನ ಪೀಳಿಗೆಗಾಗಿ ಕಾಡು ಉಳಿಸಲು ನಾವೇ ಮುಂದಾಗಬೇಕು ಎಂದು ಹಿರಿಯ ಶ್ರೇಣಿಯ ನ್ಯಾಯಾಧೀಶರಾದ ಸಿದ್ದರಾಮ ಟಿ.ಪಿ. ತಿಳಿಸಿದರು.ನಗರದ ನ್ಯಾಯಾಲಯದ ಆವರಣದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಉತ್ತಮ ಪರಿಸರದಿಂದ ನಾವು ಮಳೆ ಹಾಗೂ ಶುದ್ಧ ಗಾಳಿಯನ್ನು ಪಡೆಯುತ್ತವೆ. ಸಸಿಯನ್ನು ನೆಟ್ಟರೆ ಸಾಲದು ಅದನ್ನು ಪೋಷಣೆ ಮಾಡುವುದು ಅಗತ್ಯವಾಗಿದೆ. ಪರಿಸರ ಮತ್ತು ಕೃಷಿಯ ನಡುವೆ ಕರಳುಬಳ್ಳಿಯ ಸಂಬಂಧವಿದೆ ಎಂದರು.ಶಾಲಾ ಹಂತದಲ್ಲಿ ಮಕ್ಕಳಿಗೆ ಪರಿಸರದ ಜಾಗೃತಿ ಮತ್ತು ಅರಿವು ಮೂಡಿಸಬೇಕು. ಸಾರ್ವಜನಿಕ ಕಚೇರಿಗಳಲ್ಲಿಯೂ ಸಾಕಷ್ಟು ಜಾಗವಿರುತ್ತದೆ. ಅದನ್ನು ಸದ್ಭಳಕೆ ಮಾಡಿಕೊಂಡು ಸಸಿಯನ್ನು ನೆಡಬೇಕು ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶೋಭಾ ಮಾತನಾಡಿ, ಅರಣ್ಯ ನಾಶದಿಂದ ಮಣ್ಣಿನ ಫಲವತ್ತತೆ ನಶಿಸುವುದಲ್ಲದೆ, ನೀರಿನ ಅಭಾವದಿಂದ ಮರುಭೂಮಿ ಸೃಷ್ಟಿಯಾಗಿದೆ. ಭವಿಷ್ಯದಲ್ಲಿ ಉಸಿರಾಡುವ ಗಾಳಿಯನ್ನು ಹಣ ತೆತ್ತು ಖರೀದಿಸುವ ಸ್ಥಿತಿ ಬರುವುದರಲ್ಲಿ ಸಂಶಯವಿಲ್ಲ. ಮುಂದಾಗುವ ಅನಾಹುತಗಳನ್ನು ತಪ್ಪಿಸಲು ಈಗಿನಿಂದಲೇ ಮರಗಳನ್ನು ಬೆಳೆಸಬೇಕು ಎಂದು ಅವರು ತಿಳಿಸಿದರು.ಉಪವಲಯ ಅರಣ್ಯಾಧಿಕಾರಿ ಕಾಶಪ್ಪ ಮಾತನಾಡಿ, 19,810 ಸಸಿಗಳು ನಮ್ಮ ಬಳಿ ಅರಳಿ, ಬೇವು, ಹೊಂಗೆ, ಹಿಪ್ಪೆ ನೆರಳೆ ಸಸಿಗಳು ಇವೆ. ಪ್ರಸಕ್ತ ಬಾರಿ ತಾಲೂಕಿನ ವಿಭೂತಿಹಳ್ಳಿಯಿಂದ ರಸ್ತಾಪುರ ಕಮಾನ, ಶಿರವಾಳ, ಅಣಬಿ, ಮಡ್ನಾಳದಿಂದ ಶಿರವಾಳ ಹೀಗೆ ರಸ್ತೆಯ ಬದಿ ಎಂಟು ಕಡೆ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಸಕಾಲಕ್ಕೆ ಮಳೆಯಾಗಿದೆ. ಸಸಿ ನೆಡುವ ಕಾರ್ಯ ಸಾಗಿದೆ. ಸರ‍್ವಜನಿಕರು ಸಹ ನೆಟ್ಟ ಸಸಿಗಳ ಬಗ್ಗೆ ಕಾಳಜಿವಹಿಸಿ ಪರಿಸರ ಬೆಳೆಸಲು ಸಹಕರಿಸಬೇಕು ಎಂದರು.
ಶಿರಸ್ತೇದಾರ ಪ್ರಕಾಶ ಪಾಟೀಲ್, ಅನಿಲ ಕುಮಾರ, ಸಯ್ಯಡ್ ರಿಜ್ವಾನ ಅರಿಕೇರಿ ಹಾಗೂ ನ್ಯಾಯಾಲಯದ ಸಿಬ್ಬಂದಿ ಇದ್ದರು.ಮಾನವನು ತನ್ನ ಸ್ವಾರ್ಥಕ್ಕಾಗಿ ಭೂಮಿಯ ಮೇಲಿರುವ ಮರ-ಗಿಡಗಳನ್ನು ಕಡಿದು ಪರಿಸರವನ್ನು ನಾಶ ಮಾಡುತ್ತಿರುವುದರಿಂದ ಅಂತರ್ಜಲ ಕುಸಿಯುತ್ತಿದೆ. ಕುಡಿಯುವ ನೀರಿಗಾಗಿ ಸಾವಿರ ಅಡಿ ಆಳದವರೆಗೆ ಬೋರವೆಲ್ ಕೊರೆಯಿಸಿದರೂ ನೀರು ದೊರಕುತ್ತಿಲ್ಲ. ಇದರಿಂದ ಪರಿಸರವು ನಾಶವಾಗಿ ಕಾಡಿನಲ್ಲಿರುವ ಪ್ರಾಣಿಗಳು ನಾಡಿಗೆ, ಮನೆಗಳಿಗೆ ಬರುತ್ತಿವೆ.
- ಬಸವರಾಜ, ಹೆಚ್ಚುವರಿ ನ್ಯಾಯಾಧೀಶರು, ಶಹಾಪುರ.