ವರುಣನ ಅರ್ಭಟ: ಮನೆಗಳಿಗೆ ನುಗ್ಗಿದ ನೀರು

KannadaprabhaNewsNetwork | Published : Jun 8, 2024 12:31 AM

ಸಾರಾಂಶ

ಚರಂಡಿಗಳಲ್ಲಿ ಇರುವ ಕೊಳಚೆ ನೀರು ಮಿಶ್ರಿತಗೊಂಡು ನೇರವಾಗಿ ಮನೆಗಳಿಗೆ ನುಗ್ಗಿರುವುದರಿಂದ ಸೇಠ್‌ ಕಾಂಪೌಂಡ್ ಬಡಾವಣೆ ದ್ವೀಪದಂತಾಗಿತ್ತು. ಇದರಿಂದ ಆತಂಕಗೊಂಡ ನಾಗರೀಕರು, ಮನೆಯಲ್ಲಿದ್ದ ವೃದ್ಧರು, ಮಕ್ಕಳು ಮಹಿಳೆಯರು ದಿಕ್ಕು ತೋಚದಂತಾಗಿದ್ದರು.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಗುರುವಾರ ರಾತ್ರಿ ಪಟ್ಟಣದಲ್ಲಿ ಸುರಿದ ಭಾರಿ ಮಳೆಗೆ ತಗ್ಗು ಪ್ರದೇಶಗಳಾದ ಸೇಠ್‌ ಕಾಂಪೌಂಡ್ ಬಡಾವಣೆಯ ಮನೆಗಳಿಗೆ ಮಳೆ ನೀರು ನುಗ್ಗಿ ಈಡೀ ರಾತ್ರಿ ನಾಗರಿಕರು ಜಾಗರಣೆ ಮಾಡಬೇಕಾಯಿತು.

ಮನೆಯೊಳಗೆ ನುಗ್ಗಿದ ಮಳೆ ನೀರನ್ನು ಹೊರ ಚೆಲ್ಲುವುದೇ ದೊಡ್ಡ ಕೆಲಸವಾಯಿತು. ಮತ್ತೊಂದು ಕಡೆ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ಚರಂಡಿಗಳನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡಿ ಮತ್ತೆ ಸಮಸ್ಯೆ ಬಾರದಂತೆ ತಡೆಯಬೇಕೆಂದು ಆಗ್ರಹಿಸಿ ತಡರಾತ್ರಿ ನಾಗರೀಕರು ಪುರಸಭೆ ವಿರುದ್ಧ ಮಳೆಯಲ್ಲೆ ಪ್ರತಿಭಟನೆ ಮಾಡಿದರು.ಮನೆಯೊಳಗೆ ನುಗ್ಗಿದ ನೀರು

ಗುರುವಾರ ರಾತ್ರಿ ಒಮ್ಮೆಲೆ ಪಟ್ಟಣದಲ್ಲಿ ದಾಖಲೆ ಮಳೆಯಾಗಿದೆ. ಇದರಿಂದ ಚರಂಡಿಗಳಲ್ಲಿ ಇರುವ ಕೊಳಚೆ ನೀರು ಮಿಶ್ರಿತಗೊಂಡು ನೇರವಾಗಿ ಮನೆಗಳಿಗೆ ನುಗ್ಗಿರುವುದರಿಂದ ಸೇಠ್‌ ಕಾಂಪೌಂಡ್ ಬಡಾವಣೆ ದ್ವೀಪ ಪ್ರದೇಶದಲ್ಲಿ ನಿರ್ಮಾಣವಾಗಿತ್ತು. ಇದರಿಂದ ಆತಂಕಗೊಂಡ ನಾಗರೀಕರು ಮನೆಯಲ್ಲಿದ್ದ ವೃದ್ಧರು,ಪುಟ್ಟಮಕ್ಕಳು ಮಹಿಳೆಯರು ದಿಕ್ಕು ತೋಚದಂತೆ ಪರ್ಯಾಯ ಆಶ್ರಯಕ್ಕಾಗಿ ಪರಿತಪಿಸಿದರು .ಇನ್ನೊಂದು ಕಡೆ ಮನೆಯೊಳಗಿದ್ದ ಆಹಾರ ಪದಾರ್ಥಗಳು ಬಟ್ಟೆ,ಟಿವಿ ಇತರೇ ವಸ್ತುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಇಷ್ಟೊಂದು ಮಳೆಯಾಗಿ ಅವಾಂತರ ಸೃಷ್ಟಿ ಮಾಡಿದ್ದರೂ ಯಾವೊಬ್ಬ ಪುರಸಭೆ ಸದಸ್ಯರಾಗಲಿ, ಜನಪತ್ರಿನಿಧಿಗಳಾಗಲಿ ಇಲ್ಲ ಅಧಿಕಾರಿಗಳಾಗಲಿ ಸ್ಥಳಕ್ಕೆ ಬಂದು ಸಮಸ್ಯೆ ಆಲಿಸಿಲ್ಲವೆಂದು ಬಡಾವಣೆಯ ಜನರು ಮಳೆಯಲ್ಲೆ ದಿಢೀರನೆ ಪ್ರತಿಭಟನೆಗಿಳಿದರು. ಪೊಲೀಸರು ಬಂದು ಪ್ರತಿಭಟನಾಕಾರರನ್ನು ತಡೆದಾಗ ಇಬ್ಬರ ನಡುವೆ ಮಾತಿನ ವಾಗ್ವಾದ ನಡೆಯಿತು. ಆಗ ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿಯ ಹಿರಿಯ ಮುಖಂಡ ಕೆ. ಚಂದ್ರಾರೆಡ್ಡಿ ಮತ್ತು ಅವರ ಸಹಚರರು ಸ್ಥಳಕ್ಕೆ ಬಂದು ನಾಗರೀಕರನ್ನು ಸಮಾಧಾನಪಡಿಸಿ ಅವರಿಗೆಲ್ಲಾ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಮಾನವೀಯತೆ ಮೆರೆದರು.

ಬಿಜೆಪಿಯ ಚಂದ್ರಾರೆಡ್ಡಿ ನೆರವು

ಮಳೆ ನೀರು ಮನೆಯೊಳಗೆ ಹರಿದು ಅವಾಂತರಕ್ಕೆ ತುತ್ತಾದ ಮನೆ ಮಾಲೀಕರಿಗೆ ಅಕ್ಕಚಮ್ಮ ಕಲ್ಯಾಣ ಮಂಟಪದಲ್ಲಿ ಆಶ್ರಯ ಕಲ್ಪಿಸಿದರು, ಅಲ್ಲೆ ಅವರಿಗೆ ಊಟದ ವ್ಯವಸ್ಥೆ ಕಲ್ಪಿಸಿದರು. ಮಳೆ ನೀರು ಮನೆಯೊಳಗೆ ಹರಿಯದಂತೆ ಜೆಸಿಬಿ ತರಿಸಿ ಚರಂಡಿಗಳನ್ನು ಸ್ವಚ್ಛಗೊಳಿಸಿದರು. ನಂತರ ಮಾತನಾಡಿದ ಚಂದ್ರಾರೆಡ್ಡಿ ೨೦ವರ್ಷಗಳಿಂದ ಈ ಅವ್ಯವಸ್ಥೆ ಜೀವಂತವಾಗಿದೆ. ಚರಂಡಿಗಳ ಮೇಲೆ ಕೆಲವರು ಮನೆ ನಿರ್ಮಾಣ ಮಾಡಿಕೊಂಡಿರುವುದರಿಂದ ಚರಂಡಿಗಳು ಕಿರಿದಾಗಿ ಈ ಸಮಸ್ಯೆ ತಲೆದೋರಿದೆ. ಸ್ಥಳಕ್ಕೆ ಶಾಸಕರು, ಸಂಸದರು ಪುರಸಭೆ ಅಧಿಕಾರಿಗಳನ್ನು ಕರೆತಂದು ಮತ್ತೆ ಪ್ರಕರಣ ಮರುಕಳಿಸದಂತೆ ತಡೆಯಲು ಏನು ಮಾಡಿದರೆ ಸಮಸ್ಯೆ ನೀಗಲಿದೆ ಎಂಬುದಕ್ಕೆ ವೈಜ್ಙಾನಿಕವಾಗಿ ಚಿಂತನೆ ನಡೆಸಿ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

Share this article