ಸಂಘಟಿತರಾಗಿ ದೂರದೃಷ್ಠಿಯೊಂದಿಗೆ ಸಾಗಬೇಕಿದೆ

KannadaprabhaNewsNetwork |  
Published : Feb 23, 2026, 01:15 AM IST
ಯುವಕರಲ್ಲಿ ದೇಶಭಕ್ತಿ ಮತ್ತು ಸೌಹಾರ್ಧತೆಯ ಮನೋಭಾವ ಬೆಳೆಸುವ ಅಗತ್ಯವಿದೆ : ಕರಿವೃ?ಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ | Kannada Prabha

ಸಾರಾಂಶ

ಹಿಂದೂ ಧರ್ಮದ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪ್ರತಿಯೊಬ್ಬರೂ ಮುಂದೆ ಗುರಿ ಹಾಗೂ ಹಿಂದೆ ಗುರುವನ್ನು ಇಟ್ಟುಕೊಂಡು ನೆಡೆದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ತಿಳಿಸಿದರು.

ಕನ್ನಡಪ್ರಭವಾರ್ತೆ ತಿಪಟೂರು

ಹಿಂದೂ ಧರ್ಮದ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪ್ರತಿಯೊಬ್ಬರೂ ಮುಂದೆ ಗುರಿ ಹಾಗೂ ಹಿಂದೆ ಗುರುವನ್ನು ಇಟ್ಟುಕೊಂಡು ನೆಡೆದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಕಸಬಾ ಹೋಬಳಿಯ ರಂಗಾಪುರ ಗ್ರಾಮದ ಗುರುಪರದೇಶಿಕೇಂದ್ರದ ಮಠದಲ್ಲಿ ಹಿಂದೂ ಸಮಾಜೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.ಹಿಂದೂ ಸಮಾಜವು ಹಿಂದಿನಿಂದಲೂ ಬೆಳೆದಿದ್ದು, ಯುವಕರಲ್ಲಿ ಶಕ್ತಿ ತುಂಬಿ, ದೇಶಭಕ್ತಿ ಮತ್ತು ಸೌಹಾರ್ದತೆಯ ಮನೋಭಾವ ಬೆಳೆಸುವ ಅಗತ್ಯವಿದೆ. ಗುರುಪರಂಪರೆಯ ಮೂಲಕ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಮುಂದುವರಿಸಿ, ರೈತರು, ಯುವಕರು, ಸೈನಿಕರಲ್ಲಿ ಚೈತನ್ಯ ತುಂಬುವ ಕಾರ್ಯಗಳು ನಿರಂತರವಾಗಿ ನಡೆಯಬೇಕು. ಎಲ್ಲರೂ ಸಂಘಟಿತರಾಗಿ ದೂರದೃಷ್ಟಿಯೊಂದಿಗೆ ಸಮಾಜ ನಿರ್ಮಾಣದ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.ಗುರುಕುಲ ಮಠದ ಶ್ರೀ ಇಮ್ಮಡಿ ಕರಿಬಸವದೇಶಿಕೇಂದ್ರ ಸ್ವಾಮೀಜಿ ಮಾತನಾಡಿ ಜಗತ್ತಿನಲ್ಲಿ ಧರ್ಮಕ್ಕೆ ಯಾವ ಧರ್ಮ ಸ್ಪಷ್ಟವಾದ ವ್ಯಾಖ್ಯಾನ ನೀಡದಿದ್ದರೂ ಭಾರತೀಯರು ಧರ್ಮಕ್ಕೆ ಉನ್ನತವಾದ ಅರ್ಥ ನೀಡಿರುವುದು ವಿಶೇಷ. ಭಾರತದಲ್ಲಿ ಪರೋಪಕಾರವೇ ಧರ್ಮ, ಅಹಿಂಸಾ ಪರಮೋ ಧರ್ಮಃ ಎಂಬ ತತ್ವಗಳು ಧರ್ಮದ ಅಂಶಗಳನ್ನು ಒಳಗೊಂಡಿವೆ. ಮಾನವೀಯತೆ, ಸಹಬಾಳ್ವೆ, ಕರುಣೆ ಮತ್ತು ಸತ್ಯದ ಮಾರ್ಗದಲ್ಲಿ ನಡೆಯುವುದು ಧರ್ಮದ ಮೂಲಸಾರವಾಗಿದೆ. ಭಾರತ ದೇಶವು ವಿವಿಧತೆಯಲ್ಲಿ ಏಕತೆಯನ್ನು ಒಪ್ಪಿಕೊಂಡ ರಾಷ್ಟ್ರವಾಗಿದ್ದು, ಅನೇಕ ಭಾಷೆ, ಸಂಸ್ಕೃತಿ, ಮತ, ಪರಂಪರೆಗಳ ನಡುವೆಯೂ ಸಹ ಸಹಬಾಳ್ವೆಯ ಪರಂಪರೆಯನ್ನು ಹೊಂದಿದೆ.

ಇಂದಿನ ಜಾಗತಿಕ ಪರಿಸ್ಥಿತಿಯಲ್ಲಿ ಜಾತಿ, ಮತ ಆಧಾರಿತ ಭೇದಭಾವ ಹಾಗೂ ಸಂಘರ್ಷಗಳು ಕೆಲವು ರಾಷ್ಟ್ರಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಇಂತಹ ಸಂದರ್ಭಗಳಲ್ಲಿ ದೇಶದ ಜನತೆ ಏಕತೆ, ಸೌಹಾರ್ದತೆ ಮತ್ತು ಶಾಂತಿಯ ಮಾರ್ಗವನ್ನು ಅನುಸರಿಸಬೇಕು. ದೇಶ ಮತ್ತು ಧರ್ಮ ಎರಡೂ ಸಮಾಜದ ಮೌಲ್ಯಗಳ ಪ್ರತೀಕಗಳಾಗಿದ್ದು, ಪರಸ್ಪರ ಗೌರವ ಮತ್ತು ಸಂವಿಧಾನದ ಮೌಲ್ಯಗಳನ್ನು ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು. ಸತ್ಯಗಣಪತಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಶ್ರೀಕಂಠ ಮಾತನಾಡಿ ಸಾರ್ವಜನಿಕರನ್ನು ಸಂಘಟಿಸಲು ಬಾಲ ಗಂಗಾಧರ್ ತಿಲಕ್ ಮನೆಯಲ್ಲಿ ಪೂಜಿಸುತ್ತಿದ್ದ ಗಣೇಶೋತ್ಸವ ಕಾರ್ಯಕ್ರಮವನ್ನು ಸಾರ್ವಜನಿಕ ಕಾರ್ಯಕ್ರಮವಾಗಿ ರೂಪಿಸಿ ಸಮಾಜವನ್ನು ಸಂಘಟಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆದಾಯಕರಾಗಿದ್ದರು. ಇತಿಹಾಸವನ್ನು ನೆನಪಿಸಿಕೊಂಡರೆ ಸನಾತನ ಧರ್ಮವನ್ನು ಉಳಿಸಿಕೊಳ್ಳಲು ಹಲವಾರು ಮಹಾನ್ ನಾಯಕರ ಕೊಡುಗೆಗಳು ಅಪಾರವಾಗಿದೆ. ಇಂದಿನ ಯುವಕರು ತಮ್ಮ ದುಡಿಮೆಯ ಜೊತೆಗೆ ಪ್ರತಿನಿತ್ಯ ಹತ್ತು ನಿಮಿಷಗಳ ಕಾಲ ಸಮಯ ನೀಡಿದರೆ ಸಮಾಜ ಸಂಘಟಿತವಾಗುತ್ತದೆ ಎಂದರು.ಗ್ರಾಮವಿಕಾಸ ಸಂಯೋಜಕ ರಾಮ್‌ಮೋಹನ್ ಮಾತನಾಡಿ ನಮ್ಮ ದೇಶವನ್ನು ಭರತಖಂಡ, ಹಿಂದೂಸ್ತಾನ, ಭಾರತ ಎಂದು ಹೇಳಲಾಗುತ್ತಿತ್ತು ಆದರೆ ವ್ಯಾಪಾರಕ್ಕೆ ಬಂದ ಆಂಗ್ಲರು ನಮ್ಮ ಭಾಷೆಯನ್ನು ಕಲಿಯಲಾಗದೆ ಭಾರತವನ್ನು ಇಂಡಿಯಾ ಎಂದು ಕರೆದಿದ್ದು ದುರದೃಷ್ಟಕರ ಆದ್ದರಿಂದ ತಾವುಗಳು ಇಂಡಿಯಾ ಬದಲಿಗೆ ಭಾರತ ದೇಶವೆಂದು ಕರೆಯಬೇಕು ಎಂದರು.

ಕಾರ್ಯಕ್ರಮದ ಅಂಗವಾಗಿ ಭಾರತ ಮಾತೆಯ ಭಾವಚಿತ್ರ ಹಾಗೂ ಕೆರಗೋಡಿಯ ದ್ಯಾವಮ್ಮದೇವಿ ವಿಗ್ರಹಗಳನ್ನಿಟ್ಟು ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ಕಲಾತಂಡಗಳೊಂದಿಗೆ ಭವ್ಯ ಮೆರವಣಿಗೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ನಿವೃತ್ತ ಎಸಿಪಿ ಲೋಕೇಶ್ವರ, ವೈದ್ಯ ಶ್ರೀಧರ್, ಗಂಗಣ್ಣ, ಶಂಕರಮೂರ್ತಿ, ಸಂತೋಷ್‌ಕೆರೆಗೋಡಿ, ಸದಾಶಿವು. ಕೆರಗೋಡಿ ದೇವರಾಜು, ವಿಶ್ವದೀಪು, ಬಳ್ಳೆಕಟ್ಟೆ ಸುರೇಶ್, ರವೀಂದ್ರತಗ್ಗಿನಮನೆ, ಶಶಿವಧನ ದಿವಾಕರ್, ವಿಕಾಸ್ ನೊಣವಿನಕೆರೆ, ರೇಣುಕರಾಧ್ಯ, ಸಾಸಲಹಳ್ಳಿ ಕೀತೀಶ್, ಸತೀಶ್ ಚಿಕ್ಕಮಾರ್ಪನಹಳ್ಳಿ, ಆನಂದ್, ಉಮಾಶಂಕರ್, ಗಂಗರಾಜು, ದಿಲೀಪ್‌ಸೂಗೂರು, ಶ್ರೇಷ್ಠನಾಥಸ್ವಾಮಿ, ವಿನಯ್ ಮಡೆನೂರು, ಮನೋಹರ್ ರಂಗಾಪುರ, ಶಶಿಧರ, ಆಕ್ಷಯ, ದಿವಾಕರ್, ಬಸವರಾಜು, ಸದಾಶಿವಯ್ಯ ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಿಪಟೂರಿನಲ್ಲಿ ೯.೦೬೫ ಕೆ.ಜಿ ಗಾಂಜಾ ಜಪ್ತಿ
ಚಕ್ರಭಾವಿ ವಿಎಸ್ಎಸ್ಎನ್ ಸೊಸೈಟಿ ಕೈ ವಶ