ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಕನ್ನಡ ನಾಡಿನ ಶ್ರೀಮಂತ ಭಾಷೆ. ಕನ್ನಡದ ಅಸ್ಮಿತೆ ಪರಿಚಯಿಸುವ ಅನೇಕ ಸಾಹಿತ್ಯ ಪ್ರಕಾರಗಳು ಕನ್ನಡದಲ್ಲಿ ಮೂಡಿ ಬಂದಿದ್ದು, ಕನ್ನಡ ಉಳಿಸಿ ಬೆಳೆಸುವ ಕೆಲಸವನ್ನು ನಾವೆಲ್ಲ ಒಗ್ಗಟ್ಟಾಗಿ ಮಾಡಬೇಕಿದೆ ಎಂದು ಕರ್ನಾಟಕ ಜಾನಪದ ವಿವಿ ಕುಲಪತಿ ಪ್ರೊ.ಟಿ.ಎಂ.ಭಾಸ್ಕರ ಹೇಳಿದರು.ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಶನಿವಾರ ಹಮ್ಮಿಕೊಂಡಿದ್ದ ಗುಳೇದಗುಡ್ಡ ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಕನ್ನಡಕ್ಕೆ ತನ್ನದೇ ಆದ ವಿಶೇಷ ಸ್ಥಾನಮಾನವಿದೆ. ಸರ್ಕಾರ ಕನ್ನಡ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಾಕಷ್ಟು ಶ್ರಮವಹಿಸುತ್ತಿದ್ದು, ಅದಕ್ಕೆ ನಾವೂ ಕೂಡ ಕೈಜೋಡಿಸಿ ಕನ್ನಡ ಭಾಷೆಯನ್ನು ಮತ್ತಷ್ಟು ಶ್ರೀಮಂತಗೊಳಿಸಬೇಕಿದೆ. ಅದಕ್ಕೆ ಸಂಘಟನೆಯ ಬಲ ಅವಶ್ಯವಾಗಿದ್ದು, ಕನ್ನಡ ಸಾಹಿತ್ಯ ಶ್ರೀಮಂತಿಕೆಗೆ ನಾಡು ಹೆಸರಾಗಿದೆ. ನಾಡು, ನುಡಿ, ನೆಲ, ಜಲ ನಮ್ಮ ಆಸ್ತಿ. ಅದನ್ನು ಕಟ್ಟುನಿಟ್ಟಾಗಿ ಉಳಿಸುವ ಕೆಲಸವನ್ನು ನಾವೆಲ್ಲ ಒಂದಾಗಿ ಮಾಡೋಣ ಎಂದರು.
ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಓದುವ ಹವ್ಯಾಸ ಎಲ್ಲರಲ್ಲಿ ಬೆಳೆಯಲಿ. ಮನುಷ್ಯನ ನೆಮ್ಮದಿ, ಸುಖ ಓದುವಿನಲ್ಲಿ ಸಿಗುತ್ತದೆ. ಅನೇಕ ಕವಿಗಳು, ಸಾಹಿತಿಗಳು ಹತ್ತಾರು ಪ್ರಕಾರದ ಶ್ರೀಮಂತ ಗದ್ಯ, ಪದ್ಯ ಸಾಹಿತ್ಯ ರಚಿಸಿ ನಾಡನ್ನು ಶ್ರೀಮಂತಗೊಳಿಸಿದ್ದಾರೆ. ದಿನಂಪ್ರತಿ ಓದು ಬರಹ ಮಾಡುವುದರಿಂದ ಮನುಷ್ಯನ ಮನಸ್ಸು ವಿಶಾಲ ಹಾಗೂ ಸಮೃದ್ಧವಾಗಿ ಬೆಳೆಯುತ್ತದೆ ಎಂದು ಹೇಳಿದರು.ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಇತಿಹಾಸ, ಪರಂಪರೆ, ಕಲೆ, ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸಿದಾಗ ಮಾತ್ರ ಕನ್ನಡ ಭಾಷೆ ಉಳಿಸಿ ಬೆಳೆಸಲು ಸಾಧ್ಯ. ಮೌಢ್ಯತೆ ಮರೆತು, ಆಂಗ್ಲ ಮಾಧ್ಯಮದ ವ್ಯಾಮೋಹ ತೊರೆದು ಶ್ರೀಮಂತ ಕನ್ನಡ ಭಾಷೆಯನ್ನು ಬೆಳೆಸುವ ಕೆಲಸ ಮಾಡಬೇಂದರು.
ಸಮ್ಮೇಳನಾಧ್ಯಕ್ಷ ಪ್ರೊ.ಸಿದ್ದಲಿಂಗಪ್ಪ ಬರಗುಂಡಿ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿ, ನಾಡಿನ ಕನ್ನಡ ಭಾಷಾ ಶ್ರೀಮಂತಿಕೆಯಲ್ಲಿ ಗುಳೇದಗುಡ್ಡದ ಪಾತ್ರ ಕೂಡಾ ಹಿರಿದಾಗಿದೆ. ಕನ್ನಡದ ಮನಸ್ಸುಗಳನ್ನು ಒಂದುಗೂಡಿಸಿ ಕನ್ನಡವನ್ನು ಮತ್ತಷ್ಟು ವಿಶಾಲಗೊಳಿಸುವ ಕೆಲಸ ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.ಶ್ರೀ ಜಗದ್ಗುರು ಗುರುಸಿದ್ದ ಪಟ್ಟದಾರ್ಯ ಶ್ರೀಗಳು ಸಾನ್ನಿಧ್ಯವಹಿಸಿ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ, ಡಯಟ್ ಇಲಕಲ್ ಉಪನಿರ್ದೇಶಕ ( ಅಭಿವೃದ್ಧಿ) ಬಿ.ಕೆ. ನಂದನೂರ, ಬಾದಾಮಿ ಕಸಾಪ ಅಧ್ಯಕ್ಷ ಬಿ.ಎಂ. ಹೊರಕೇರ, ಕರವೇ ಅಧ್ಯಕ್ಷ ರವಿ ಅಂಗಡಿ, ಕಸಾಪ ಜಿಲ್ಲಾ ಕೋಶಾಧ್ಯಕ್ಷ ಡಾ. ಸಿ.ಎಂ. ಜೋಶಿ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಚಂದ್ರಶೇಖರ ಕಾಳನ್ನವರ, ಪಿಇಟಿ ಚೇರಮನ್ ಕಮಲಕಿಶೋರ ಭಂಡಾರಿ, ಗೌರವ ಕಾರ್ಯದರ್ಶಿ ರವೀಂದ್ರ ಪಟ್ಟಣಶೆಟ್ಟಿ, ಕಸಾಪ ತಾಲೂಕು ಅಧ್ಯಕ್ಷ ಎಚ್.ಎಸ್. ಘಂಟಿ, ಡಾ.ಎಂ.ಪಿ. ಹುಗ್ಗಿ, ಭಾಗೀರತಿ ಆಲೂರ, ಸಂಗಣ್ಣ ಚಿಕ್ಕಾಡಿ, ಗುಂಡಪ್ಪ ಕೋಟಿ, ಯಲ್ಲಪ್ಪ ಮನ್ನಿಕಟ್ಟಿ ಇತರರು ಇದ್ದರು.