ಹಾವೇರಿ: ಹೂಳು ತುಂಬಿ ಗಬ್ಬು ನಾರುತ್ತಿರುವ ಚರಂಡಿಗೆ ಸ್ವತಃ ಇಳಿದು ಸ್ವಚ್ಛತಾ ಕಾರ್ಯ ಕೈಗೊಳ್ಳುವ ಮೂಲಕ ಶಿಗ್ಗಾಂವಿ ತಾಲೂಕು ಬಂಕಾಪುರ ಪುರಸಭೆ ಮುಖ್ಯಾಧಿಕಾರಿ ಮಾದರಿಯಾಗಿದ್ದಾರೆ.
ಬಂಕಾಪುರ ಪುರಸಭೆ ಮುಖ್ಯಾಧಿಕಾರಿಯಾಗಿರುವ ಶಿವಾನಂದ ಅಜ್ಜಣ್ಣನವರ ಕಳೆದ ಕೆಲವು ದಿನಗಳಿಂದ ಪುರಸಭೆ ವ್ಯಾಪ್ತಿಯ ವಾರ್ಡ್‌ಗಳ ಚರಂಡಿಗೆ ಪೌರಕಾರ್ಮಿಕರೊಂದಿಗೆ ತಾವೇ ಇಳಿದು ಸ್ವಚ್ಛಗೊಳಿಸುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಪುರಸಭೆ ವ್ಯಾಪ್ತಿಯ ಚರಂಡಿ ಸ್ವಚ್ಛಗೊಳಿಸದೇ ಹೂಳು ತುಂಬಿದ್ದನ್ನು ಗಮನಿಸಿ ಏನಾದರೂ ಮಾಡಿ ಮಳೆಗಾಲದೊಳಗೆ ಸ್ವಚ್ಛಗೊಳಿಸುವ ಗುರಿ ಹಾಕಿಕೊಂಡ ಮುಖ್ಯಾಧಿಕಾರಿ ಶಿವಾನಂದ ಅವರು, ಪೌರಕಾರ್ಮಿಕರಿಗೆ ಪ್ರೋತ್ಸಾಹ ನೀಡುವುದರ ಜತೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತಾವೇ ಚರಂಡಿಗೆ ಇಳಿಯುತ್ತಿದ್ದಾರೆ. ತಾನೊಬ್ಬ ಅಧಿಕಾರಿ ಎಂಬ ಹಮ್ಮುಬಿಮ್ಮು ಇಲ್ಲದೇ ನಿತ್ಯ ಬೆಳಗ್ಗೆ 5-30ಕ್ಕೆ ಪೌರಕಾರ್ಮಿಕರನ್ನು ಸೇರಿಸಿಕೊಂಡು ಚರಂಡಿ ಸ್ವಚ್ಛತೆಗೆ ಇಳಿಯುತ್ತಿದ್ದಾರೆ. ಮಧ್ಯಾಹ್ನ 12ರಿಂದ 1 ಗಂಟೆವರೆಗೂ ಇದ್ದು, ಬಳಿಕ ಕಚೇರಿ ಕೆಲಸಕ್ಕೆ ಹೋಗುತ್ತಿದ್ದಾರೆ. ಇವರ ಈ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.ಬಂಕಾಪುರ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳಿದ್ದು, ಸುಮಾರು 28 ಸಾವಿರ ಜನಸಂಖ್ಯೆಯಿದೆ. ಆದರೆ, ವಾಹನ ಚಾಲಕರು ಸೇರಿದಂತೆ ಕೇವಲ 43 ಪೌರಕಾರ್ಮಿಕರಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಚರಂಡಿ ಸ್ವಚ್ಛಗೊಳಿಸದೇ ಹಲವು ಕಡೆಗಳಲ್ಲಿ ಮಳೆಗಾಲದಲ್ಲಿ ನೀರು ತುಂಬಿ ರಸ್ತೆ ಮೇಲೆ ಹರಿಯುತ್ತಿತ್ತು. ಮಳೆಗಾಲದೊಳಗೆ ಚರಂಡಿ ಸ್ವಚ್ಛಗೊಳಿಸುವಂತೆ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಇರುವ ಪೌರಕಾರ್ಮಿಕರಿಂದಲೇ ಕೆಲಸ ತೆಗೆದುಕೊಳ್ಳುವ ನಿಟ್ಟಿನಲ್ಲಿ ಶಿವಾನಂದ ಅವರು ತಾವೇ ಮುಂದೆ ನಿಂತು ಚರಂಡಿ ಸ್ವಚ್ಛತೆಗೆ ಕೈಜೋಡಿಸಿದ್ದಾರೆ. ಇದೀಗ ಸ್ಥಳೀಯ ಶಾಸಕ ಯಾಸೀರ್ ಪಠಾಣ್ ಕೂಡ ಇವರ ಕಾರ್ಯ ನೋಡಿ ಸ್ಥಳಕ್ಕೆ ಆಗಮಿಸಿ ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೇ ತಾವೂ ಸಲಿಕೆ ಹಿಡಿದು ಚರಂಡಿ ಸ್ವಚ್ಛಗೊಳಿಸಿ ಪೌರಕಾರ್ಮಿಕರಿಗೆ ಉತ್ತೇಜಿಸಿದ್ದಾರೆ.
ಮಳೆಗಾಲದೊಳಗೆ ಸ್ವಚ್ಛಗೊಳಿಸುವ ಗುರಿ: ಬಂಕಾಪುರ ಪಟ್ಟಣದ ಒಂದೊಂದೇ ವಾರ್ಡ್‌ನ್ನು ಸ್ವಚ್ಛಗೊಳಿಸಿ ಮಳೆಗಾಲದೊಳಗಾಗಿ ಇಡೀ ಪಟ್ಟಣದ ಚರಂಡಿ ಸ್ವಚ್ಛತೆ ಪೂರ್ಣಗೊಳಿಸುವ ಗುರಿ ಶಿವಾನಂದ ಹಾಕಿಕೊಂಡಿದ್ದಾರೆ.ಮನೆ ಮುಂದೆ ಪಾಟಿ ಕಲ್ಲು, ಸಿಮೆಂಟ್ ಕಾಂಕ್ರೀಟ್ ಹಾಕಿಕೊಂಡವರಿಗೆ ಅದನ್ನು ತೆಗೆಸುವಂತೆ ಸೂಚನೆ ನೀಡಿದ್ದಾರೆ. ಅಲ್ಲದೇ ಚರಂಡಿಗೆ ಹಸಿ ಕಸ, ಪ್ಲಾಸ್ಟಿಕ್ ಕಸ ಹಾಕದಂತೆ ಎಚ್ಚರಿಕೆ ನೀಡುತ್ತಿದ್ದಾರೆ. ಕಳೆದ ಒಂದು ವಾರದಲ್ಲಿ ಎರಡು ವಾರ್ಡ್ ಸ್ವಚ್ಛಗೊಳಿಸಲಾಗಿದ್ದು, ಸಂಘ ಸಂಸ್ಥೆಗಳು, ಎನ್‌ಎಸ್‌ಎಸ್ ವಿದ್ಯಾರ್ಥಿಗಳ ನೆರವು ಪಡೆದು ಬಂಕಾಪುರ ಪಟ್ಟಣವನ್ನು ಮಾದರಿ ಹಾಗೂ ಸ್ವಚ್ಛ ಮಾಡುವ ಗುರಿ ಹಾಕಿಕೊಂಡಿದ್ದಾರೆ. ಪುರಸಭೆ ಸದಸ್ಯರು ಕೂಡ ತಮ್ಮ ಬೆಂಬಲಕ್ಕೆ ನಿಂತಿದ್ದು, ಸಾರ್ವಜನಿಕರಲ್ಲೂ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಶಿವಾನಂದ ಅಜ್ಜಣ್ಣನವರ ಹೇಳಿದರು.
ಬಂಕಾಪುರ ಪುರಸಭೆಯನ್ನು ಮಾದರಿ ಮಾಡಬೇಕೆಂಬ ಗುರಿಯಿದೆ. ಪೌರಕಾರ್ಮಿಕರ ಕಷ್ಟ, ಅವರು ಎದುರಿಸುತ್ತಿರುವ ಸಮಸ್ಯೆಯ ಅರಿವು ಇದ್ದರೆ ಮಾತ್ರ ಇದು ಸಾಧ್ಯವಾಗುತ್ತದೆ. ಅದಕ್ಕಾಗಿ ಸ್ವತಃ ನಾನೇ ಚರಂಡಿ ಸ್ವಚ್ಛತಾ ಕಾರ್ಯಕ್ಕೆ ಇಳಿದಿದ್ದೇನೆ. ಚರಂಡಿಗೆ ಕಸ, ಮುಸುರೆ ಎಸೆಯದೇ ಸಾರ್ವಜನಿಕರು ನಮ್ಮ ಕಾರ್ಯಕ್ಕೆ ಕೈಜೋಡಿಸಬೇಕಿದೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡುತ್ತಿದ್ದೇವೆ ಎಂದು ಬಂಕಾಪುರ ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಅಜ್ಜಣ್ಣನವರ ಹೇಳಿದ್ದಾರೆ.