ಹಾವೇರಿ: ರಾಷ್ಟ್ರೀಯ ಸೇವಾ ಯೋಜನೆ ಎಂಬುವುದು ಕೇಂದ್ರ ಸರ್ಕಾರವು ಯುವಕರಲ್ಲಿ ಸೇವಾ ಮನೋಭಾವ ಹಾಗೂ ಕ್ರೀಯಾಶೀಲ ವ್ಯಕ್ತಿತ್ವ ನಿರ್ಮಾಣದ ಗುರಿಯೊಂದಿಗೆ ಸ್ಥಾಪಿತವಾಗಿದ್ದು, ಗ್ರಾಮದಲ್ಲಿ ಸ್ವಚ್ಛತೆಯ ಅರಿವು ಹಾಗೂ ಸ್ವಚ್ಛತಾ ಕಾರ್ಯಗಳ ಮೂಲಕ ಶಿಬಿರಾರ್ಥಿನಿಯರು ಸಮಾಜ ಸೇವೆ ಸಲ್ಲಿಸಲು ಸೂಕ್ತ ವೇದಿಕೆಯಾಗಿದೆ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.
ತಾಲೂಕಿನ ದೇವಿಹೊಸೂರಿನ ಶ್ರೀಶಿರಸಂಗಿ ಲಿಂಗರಾಜ ಸ್ಮಾರಕ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಆಯೋಜಿಸಿರುವ ನಗರದ ಶ್ರೀಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ ದೇವಿಹೊಸೂರು ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಮುದಿಗೌಡ್ರ ಮಾತನಾಡಿ, ನಾವು ಪರಿಸರದೊಂದಿಗೆ ನಮ್ಮ ಜೀವನ ಕಟ್ಟಕೊಳ್ಳಬೇಕು, ಅದರೊಂದಿಗೆ ಪರಿಸರ ಸಂರಕ್ಷಣೆ ಮತ್ತು ಜಾಗೃತಿ ಅವಶ್ಯಕ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಶಿವಲಿಂಗೇಶ್ವರ ವಿದ್ಯಾಪೀಠದ ಉಪಾಧ್ಯಕ್ಷ ವಿ.ವಿ. ಅಂಗಡಿ ಮಾತನಾಡಿ, ಯುವತಿಯರು ಸೇವಾ ಮನೋಭಾವದೊಂದಿಗೆ ತಾವು ವಾಸಿಸುವ ಪರಿಸರವನ್ನು ದೈವ ಸ್ವರೂಪವೆಂದು ಭಾವಿಸಿ ಅದರ ಸಂರಕ್ಷಣೆ ಆದ್ಯ ಕರ್ತವ್ಯವಾಗಿದೆ ಎಂದರು.ಕಾರ್ಯಕ್ರಮದಲ್ಲಿ ಶ್ರೀ ಶಿವಲಿಂಗೇಶ್ವರ ವಿದ್ಯಾಪೀಠದ ಕಾರ್ಯಾಧ್ಯಕ್ಷ ಎಸ್.ಎಸ್.ಮುಷ್ಠಿ, ಗ್ರಾಪಂ ಸದಸ್ಯ ನಿಂಗನಗೌಡ್ರ ಗೌಡಗೇರಿ, ಗ್ರಾಪಂ ಪಿಡಿಓ ಶಿವಬಸಪ್ಪ ಸಾತೇನಹಳ್ಳಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಂಜುನಾಥ ಕರಬಣ್ಣನವರ, ವೀರಪ್ಪ ಗುತ್ತಲ ಹಾಗೂ ಶ್ರೀ ಶಿವಲಿಂಗೇಶ್ವರ ವಿದ್ಯಾಪೀಠದ ಕಾರ್ಯದರ್ಶಿ ಜಗದೀಶ ತುಪ್ಪದ ಇದ್ದರು.ಮಹಾವಿದ್ಯಾಲಯವು 25 ಶಿಬಿರಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಹಿಂದಿನ ನಿಕಟ ಪೂರ್ವ ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಗ್ರಾಮದ ಗಣ್ಯರು, ಶಿಬಿರಾರ್ಥಿನಿಯರು ಉಪಸ್ಥಿತರಿದ್ದರು.ಶಿಬಿರಾಧಿಕಾರಿ ತೇಜಪ್ಪ ಮಡಿವಾಳರ ಎನ್‌ಎಸ್‌ಎಸ್‌ನ ಧ್ಯೇಯೋದ್ದೇಶ ಹಾಗೂ ಶಿಬಿರದ 7 ದಿನದ ಕಾರ್ಯಕ್ರಮಗಳ ಕುರಿತು ಪ್ರಾಸ್ತಾವಿಕ ಮಾತನಾಡಿದರು.
ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸವಿತಾ ಎಸ್. ಹಿರೇಮಠ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಕವನಾ ಪ್ರಾರ್ಥಿಸಿದಳು. ನಾಗರಾಜ ಎಂ.ಎಚ್. ವಂದಿಸಿದರು. ಶಾಂತಾ ಹಾನಗಲ್ಲ ನಿರೂಪಿಸಿದರು.