ತುಂಡಾದ ಮೃತದೇಹಗಳ ಎತ್ತಿ ಮನೆಗೆ ತಂದು ಜೋಡಿಸಿದೆವು: ಕೇರಳದ ವಯನಾಡು ಭೀಕರ ದುರಂತದ ಕತೆ

KannadaprabhaNewsNetwork | Updated : Aug 02 2024, 10:38 AM IST

ಸಾರಾಂಶ

  ಕೊಡಗು ಜಿಲ್ಲೆಯ ಸಿದ್ದಾಪುರದ ಎಸ್‌ಕೆಎಸ್‌ಎಸ್ಎಫ್‌ನಿಂದ 8 ಮಂದಿ ಆಂಬುಲೆನ್ಸ್ ನಲ್ಲಿ ವಯನಾಡಿನ ಮುಂಡಕೈ ಪ್ರಕೃತಿ ವಿಕೋಪ ಸ್ಥಳಕ್ಕೆ ಹೋಗಿದ್ದು, ಅಲ್ಲಿನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು, ಅಲ್ಲಿನ ಭೀಕರತೆಯ ಬಗ್ಗೆ ‘ಕನ್ನಡಪ್ರಭ’ ಜೊತೆ ಅನುಭವ ಹಂಚಿಕೊಂಡಿದ್ದಾರೆ.

ವಿಘ್ನೇಶ್ ಎಂ. ಭೂತನಕಾಡು

 ಮಡಿಕೇರಿ :  ಅಲ್ಲಿ ಎಲ್ಲಿ ನೋಡಿದರೂ ಬಂಡೆ ಕಲ್ಲುಗಳ ರಾಶಿಯೇ ಕಾಣುತ್ತಿತ್ತು. ನಾವು ಘಟನೆ ನಡೆದ ತುತ್ತ ತುದಿಗೆ ನಾಲ್ಕು ಮಂದಿ ಸೇರಿ ಸ್ಥಳೀಯರೊಂದಿಗೆ ತೆರಳಿ ಕಾರ್ಯಾಚರಣೆ ನಡೆಸಿದೆವು. ಸುಮಾರು 18 ಮೃತದೇಹಗಳನ್ನು ಹೊರ ತೆಗೆದಿದ್ದೆವು. ಕೆಲವೊಂದು ಮೃತದೇಹಗಳು ತುಂಡಾಗಿದ್ದವು. ಅಲ್ಲಿನ ವಾತಾವರಣ ಕಂಡು ಈಗಲೂ ನಮಗೆ ಮೈ ಜುಮ್ ಎನ್ನುತ್ತಿದೆ...

ಇವು, ಕೊಡಗು ಜಿಲ್ಲೆಯಿಂದ ವಯನಾಡಿನ ಮುಂಡಕೈ ಪ್ರಕೃತಿ ವಿಕೋಪ ಸ್ಥಳಕ್ಕೆ ಪರಿಹಾರ ಕಾರ್ಯಾಚರಣೆಗೆ ತೆರಳಿದ ಯುವಕರ ಭಾವುಕ ನುಡಿ.

ಸುದ್ದಿ ತಿಳಿದಾಕ್ಷಣ ಧಾವಿಸಿದರು\...:

ಕೊಡಗು ಗಡಿಯಲ್ಲಿರುವ ಕೇರಳ ರಾಜ್ಯದ ವಯನಾಡು ಜಿಲ್ಲೆಯಲ್ಲಿ ಮಂಗಳವಾರ ಮುಂಜಾನೆ ಮಳೆಯಿಂದ ಸಂಭವಿಸಿದ ಭೀಕರ ಪ್ರಕೃತಿ ವಿಕೋಪದಲ್ಲಿ ಇನ್ನೂರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ವಿಷಯ ತಿಳಿದಾಕ್ಷಣ ಕೊಡಗು ಜಿಲ್ಲೆಯ ಸಿದ್ದಾಪುರದ ಎಸ್‌ಕೆಎಸ್‌ಎಸ್ಎಫ್‌ನಿಂದ 8 ಮಂದಿ ಆಂಬುಲೆನ್ಸ್ ನಲ್ಲಿ ಹೋಗಿದ್ದು, ಅಲ್ಲಿನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು, ಅಲ್ಲಿನ ಭೀಕರತೆಯ ಬಗ್ಗೆ ‘ಕನ್ನಡಪ್ರಭ’ ಜೊತೆ ಅನುಭವ ಹಂಚಿಕೊಂಡಿದ್ದಾರೆ.

ಮಂಗಳವಾರ ಬೆಳಗ್ಗೆ 8 ಗಂಟೆಗೆ ಸುದ್ದಿ ನೋಡಿ ಆಂಬುಲೆನ್ಸ್ ನೊಂದಿಗೆ 8.30ಕ್ಕೆ ಹೊರಟು 10.30 ಕ್ಕೆ ನಾವು 8 ಮಂದಿ ವಯನಾಡಿನ ಮುಂಡಕೈಗೆ ತಲುಪಿದೆವು. ಘಟನೆಯ ಸ್ಥಳ ನೋಡಿದಾಗಿ ಬೆಟ್ಟದಲ್ಲಿದ್ದ ಬಂಡೆಕಲ್ಲುಗಳು ಅಲ್ಲಿನ ಮುಂಡಕೈ ಗ್ರಾಮದ ಮನೆಗಳನ್ನೇ ನೆಲಸಮ ಮಾಡಿದ್ದ ದೃಶ್ಯ ಕಂಡುಬಂತು. ನಮ್ಮ ಜೀವನದಲ್ಲಿ ಇಂತಹ ದೃಶ್ಯ ಇದೇ ಮೊದಲ ಬಾರಿ ನೋಡಿದ್ದೇವೆ.

ಅಲ್ಲಿ ಬರೀ ಬಂಡೆಕಲ್ಲುಗಳೇ ಇತ್ತು. ಭಾರಿ ಪ್ರಮಾಣದಲ್ಲಿ ನೀರು ಕೂಡ ಹರಿಯುತ್ತಿತ್ತು. ಅಲ್ಲಿನ ಸ್ಥಳೀಯರೊಂದಿಗೆ ಸೇರಿ ಬಂಡೆ ಕಲ್ಲುಗಳ ಮೇಲೆ ಹೆಜ್ಜೆಯಿಟ್ಟು, ಸುಮಾರು ನಾಲ್ಕು ಕಿ.ಮೀ ಕ್ರಮಿಸಿ ಪ್ರಕೃತಿ ವಿಕೋಪ ಸಂಭವಿಸಿದ ಚೂರಲ್ ಮಲೆ ತಲುಪಿದೆವು ಎಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಅಸ್ಕರ್ ವಿವರಿಸಿದರು.

ಕಾರ್ಯಾಚರಣೆಗಾಗಿ ನಮ್ಮ ಬಳಿ ಯಾವುದೇ ವಸ್ತುಗಳು ಇರಲಿಲ್ಲ. ನೀರು ಹರಿಯುತ್ತಿದ್ದ ಜಾಗವೊಂದರಲ್ಲಿ ಅಡಕೆ ಮರದ ಸೇತುವೆ ನಿರ್ಮಿಸಿ ಅದನ್ನು ದಾಟಿ ತೆರಳಿದೆವು. ಅಲ್ಲಿನ ಮುಂಡಕೈ ಗ್ರಾಮ ಇತ್ತಾ ಎಂಬ ಪ್ರಶ್ನೆ ಅಲ್ಲಿನ ಚಿತ್ರಣ ನೋಡಿ ನಮಗೆ ಅನಿಸುತ್ತಿತ್ತು. ಸ್ಥಳೀಯರೊಂದಿಗೆ ನಾನು, ಸರ್ಫುದ್ದೀನ್ , ಅಮೀರ್, ಹಂಸ ಸೇರಿ ತುತ್ತ ತುದಿಗೆ ತಲುಪಿದೆವು. ಅಲ್ಲಿ ಹೆಂಚಿನ ಮನೆಗಳು ಸಂಪೂರ್ಣ ನಾಶವಾಗಿದ್ದವು.

ಎಲ್ಲಿ ನೋಡಿದರು ಮನೆಯ ವಸ್ತುಗಳು, ಭಾರಿ ಗಾತ್ರದ ಬಂಡೆಗಳು, ಮರಗಳು ಸಾಕಷ್ಟು ಪ್ರಮಾಣದಲ್ಲಿ ಚೆಲ್ಲಾಪಿಲ್ಲಿಯಾಗಿದ್ದವು.

ನಾವು ಕಾರ್ಯಾಚರಣೆ ನಡೆಸಿದ ವೇಳೆ ಒಂದೊಂದೇ ಮೃತದೇಹಗಳು ಸಿಗತೊಡಗಿತು. ನಮ್ಮ ಬಳಿ ಗ್ಲೌಸ್, ಮಾಸ್ಕ್ ಇರಲಿಲ್ಲ. ಶವಗಳನ್ನು ಬರಿಗೈನಲ್ಲೇ ತೆಗೆದಿದ್ದೇವೆ. ಅಲ್ಲಿನ ಗ್ರಾಮಸ್ಥರ ಜೊತೆ ಸೇರಿ 18 ಮೃತದೇಹಗಳನ್ನು ಹೊರ ತೆಗೆದಿದ್ದೇವೆ. ಒಂದೊಂದು ದೇಹಗಳು ತುಂಡಾದ ಸ್ಥಿತಿಯಲ್ಲಿದ್ದದನ್ನು ನೋಡಿ ಮನಸ್ಸಿಗೆ ತೀವ್ರ ಸಂಕಟವಾಯಿತು. ಸಿಕ್ಕಿದ ಮೃತದೇಹಗಳನ್ನು ಅಲ್ಲಿದ್ದ ಮನೆಯೊಂದರಲ್ಲಿ ರಾಶಿ ಮಾಡಿದೆವು. ಅಂದು ನಾವು ಊಟ ಕೂಡ ಮಾಡಲಿಲ್ಲ ಎಂದು ಅಸ್ಕರ್ ಭಾವುಕರಾದರು.

ಗ್ರಾಮ ಈಗ ಮೈದಾನವಾಗಿದೆ...:

ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಚೂರಲ್ ಮಲೆ, ಮೇಪಾಡಿ, ಮುಂಡಕೈ ಗ್ರಾಮಗಳಲ್ಲಿ ಸುಮಾರು 400ಕ್ಕೂ ಅಧಿಕ ಮನೆಗಳಿದ್ದವು, ಸಾವಿರಾರು ಮಂದಿ  ನೆಲೆಸಿದ್ದರು ಎಂದು ಕಾರ್ಯಾಚರಣೆ ವೇಳೆ ನಮಗೆ ಸ್ಥಳೀಯರು ಮಾಹಿತಿ ನೀಡಿದರು. ಒಂದು ಪುಟ್ಟ ಗ್ರಾಮವಾಗಿದ್ದ ಸ್ಥಳ ಈಗ ಮೈದಾನದಂತೆ ಆಗಿರುವುದು ನಮಗೆ ಗೋಚರಿಸಿತು ಎಂದು ಅಲ್ಲಿನ ಚಿತ್ರಣವನ್ನು ವಿವರಿಸಿದರು.

ಕೊಡಗು ಜಿಲ್ಲೆಯ ಸಿದ್ದಾಪುರದಿಂದ ವಯನಾಡುವಿನ ಮುಂಡಕ್ಕೈಗೆ ವಿವಾಹವಾಗಿ ಹೋಗಿರುವ ದಿವ್ಯಾ \ಹಾಗೂ ಅವರ ಪತಿ ಸಿದ್ದರಾಜು, ಮಗ ಯದುಕೃಷ್ಣ ಎಂಬವರು ಕೂಡ ಈ ಪ್ರಕೃತಿ ವಿಕೋಪದಲ್ಲಿ ನಾಪತ್ತೆಯಾಗಿರುವ ಬಗ್ಗೆ ನಮಗೆ ಅಲ್ಲಿನ ಸ್ಥಳೀಯರಿಂದ ಮಾಹಿತಿ ದೊರೆಯಿತು. ಅಲ್ಲಿ 9 ವರ್ಷದ ಮಗುವೊಂದರ ಮೃತದೇಹ ಪತ್ತೆಯಾಗಿದ್ದು, ಆದರೆ ಮಗುವಿನ ಚಹರೆ ಗೋಚರಿಸುತ್ತಿಲ್ಲ. ಇದರಿಂದ ಇದು ಯಾರ ಮೃತದೇಹ ಎಂದು ಗುರುತು ಮಾಡಲು ಸಾಧ್ಯವಾಗಿಲ್ಲ. ಸುಮಾರು 6 ಕುಟುಂಬಗಳವರೂ ಇದು ನಮ್ಮ ಮಗು ಎಂದು ಹೇಳುತ್ತಿದ್ದರು, ಈ ಹಿನ್ನೆಲೆಯಲ್ಲಿ ಡಿಎನ್‌ಎ ಪರೀಕ್ಷೆಗೆ ಮಾದರಿ ಕಳುಹಿಸಲಾಗಿದೆ ಎಂದು ತಿಳಿಯಿತು ಎಂದರು.

ನಮ್ಮ ರಾಜ್ಯದ ಬೆಂಗಳೂರಿನ ಐದು ಮಂದಿ ಪ್ರವಾಸಕ್ಕೆ ಆಗಮಿಸಿದ್ದವರು ಇದರಲ್ಲಿ ಇಬ್ಬರು ಪತ್ತೆಯಾಗಿದ್ದು, ಮೂವರು ನಾಪತ್ತೆಯಾಗಿದ್ದಾರೆ ಎಂಬ ವಿಷಯ ತಿಳಿಯಿತು ಎಂದರು.

ಆಸ್ಪತ್ರೆಯಲ್ಲಿ ಮೃತದೇಹಗಳ ರಾಶಿ:

ಮುಂಡಕೈನ ಆಸ್ಪತ್ರೆಯಲ್ಲಿ ರಾಶಿ ರಾಶಿ ಮೃತ ದೇಹಗಳನ್ನು ಐಸ್ ಬಾಕ್ಸ್‌ಗಳಲ್ಲಿ ಹಾಕಿಡಲಾಗಿದೆ. ಕಾರ್ಯಾಚರಣೆಯಲ್ಲಿದ್ದ ಸಂದರ್ಭ ಶಾಲಾ ಕಾಂಪೌಂಡ ಸಮೀಪದಲ್ಲಿ ನಮಗೆ ಎರಡು ಜಿಂಕೆ ಕೂಡ ಸತ್ತು ಬಿದ್ದಿದ್ದ ದೃಶ್ಯ ಕಾಣಿಸಿತು. ಪ್ರಕೃತಿ ವಿಕೋಪ ಸ್ಥಳದಲ್ಲಿ ಕೋಳಿ, ಎಮ್ಮೆ, ಹಸುಗಳು ಹೀಗೆ ಸಾಕು ಪ್ರಾಣಿಗಳು ಓಡಾಡುತ್ತಿದ್ದವು ಎಂದು ಅವರು ವಿವರಿಸಿದ್ದಾರೆ.

ಇದೀಗ ಪ್ರಕೃತಿ ವಿಕೋಪ ಸಂಭವಿಸಿದ ಸ್ಥಳದ ಮೇಲ್ಭಾಗದಲ್ಲಿ ಹಿಟಾಚಿಗಳು ಬಂದಿವೆ. ಸೇನೆ ಸೇರಿದಂತೆ ವಿವಿಧ ರಕ್ಷಣಾ ತಂಡದಿಂದ ಕಾರ್ಯಾಚರಣೆ ಬಿರುಸಿನಿಂದ ಸಾಗಿದೆ. ನಾವು ಈಗ ಅಲ್ಲಿಂದ ಹಿಂತಿರುಗಿದ್ದೇವೆ ಎಂದು ಹೇಳುತ್ತಾರೆ.

ನೆಲ್ಯಹುದಿಕೇರಿಯ ಸಹಾಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ 4 ಮಂದಿ ಹೋಗಿ, ವಯನಾಡು ನೆರೆ ಸಂತ್ರಸ್ತರಿಗೆ ರು.1 ಲಕ್ಷ ಮೌಲ್ಯದ ಬಟ್ಟೆಯ ವಯನಾಡುವಿನ ಮೇಪಾಡಿಯಲ್ಲಿ ಹಸ್ತಾಂತರ ಮಾಡಿದ್ದಾರೆ.

''''''''ನಾವು ಗುರುವಾರ ಬೆಳಗ್ಗೆ ವಯನಾಡುವಿನ ಮೇಪಾಡಿ ತಲುಪಿದ್ದೇವೆ. ಇಲ್ಲಿ ಗುರುವಾರ ಒಂದೇ ದಿನ 25 ಮೃತದೇಹಗಳು ಬಂದಿವೆ. ಮೃತದೇಹಗಳ ಗುರುತು ಸಿಗದ ಕಾರಣ ಕುಟುಂಬಸ್ಥರ ರೋದನ ಮುಗಿಲು ಮುಟ್ಟಿದೆ. ನಮ್ಮ ಕಡೆಯಿಂದ ಸಂತ್ರಸ್ತರಿಗೆ ಅಗತ್ಯ ಸೇವೆ ಮಾಡಲಾಗುತ್ತಿದೆ'  ಕೊಡಗಿನ ಹ್ಯೂಮ್ಯಾನಿಟೇರಿಯನ್ ರಿಲೀಫ್ ಸೊಸೈಟಿಯ ಸದಸ್ಯ ಅಬ್ದುಲ್ಲಾ ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ 

Share this article