ಧರ್ಮಾ ಜಲಾಶಯಕ್ಕೆ ಶಾಸಕರಾದ ಹೆಬ್ಬಾರ, ಮಾನೆ ಬಾಗಿನ

KannadaprabhaNewsNetwork | Published : Aug 2, 2024 1:02 AM

ಸಾರಾಂಶ

ಧರ್ಮಾ ಜಲಾಶಯ ಮುಂಡಗೋಡ ತಾಲೂಕಿನಲ್ಲಿದ್ದರೂ ಹಾನಗಲ್ಲ ತಾಲೂಕಿನ ರೈತರ ಜೀವನಾಡಿಯಾಗಿದೆ.

ಮುಂಡಗೋಡ: ದೇಶಕ್ಕೆ ಅನ್ನ ನೀಡುವ ರೈತರ ಮೊಗದಲ್ಲಿ ಮಂದಹಾಸವಿದ್ದರೆ ಮಾತ್ರ ದೇಶ ಸಮೃದ್ಧಿಯಿಂದ ಇರಲು ಸಾಧ್ಯ. ಅದರಂತೆ ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ರೈತರ ಬದುಕು ಹಸನಾಗಲಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ವಿಶ್ವಾಸ ವ್ಯಕ್ತಪಡಿಸಿದರು.

ಗುರುವಾರ ತಾಲೂಕಿನ ಮಳಗಿ ಧರ್ಮಾ ಜಲಾಶಯಕ್ಕೆ ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ ಅವರೊಂದಿಗೆ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಿ ಬಳಿಕ ಮಾತನಾಡಿ, ಧರ್ಮಾ ಜಲಾಶಯ ಮುಂಡಗೋಡ ತಾಲೂಕಿನಲ್ಲಿದ್ದರೂ ಹಾನಗಲ್ಲ ತಾಲೂಕಿನ ರೈತರ ಜೀವನಾಡಿಯಾಗಿದೆ. ಜಲಾಶಯ ಭರ್ತಿಯಾದರೆ ಮುಂಡಗೋಡಕ್ಕಿಂತ ಹೆಚ್ಚು ಹಾನಗಲ್ಲ ತಾಲೂಕಿನ ರೈತರ ಬದುಕು ಹಸನಾಗುತ್ತದೆ. ಮುಂಡಗೋಡ ತಾಲೂಕಿನವರಾದ ನಾವು ಹೆಣ್ಣಿನ ಕಡೆಯವರಿದ್ದಂತೆ. ಭರ್ತಿಯಾದ ಜಲಾಶಯಕ್ಕೆ ಬಾಗಿನ ಅರ್ಪಿಸಿ ಗಂಡನ ಮನೆಗೆ ಕಳುಹಿಸುತ್ತೇವೆ. ಇದನ್ನು ಜೋಪಾನವಾಗಿ ನೋಡಿಕೊಂಡು ಹೋಗುವ ಜವಾಬ್ದಾರಿ ಹಾನಗಲ್ಲ ಶಾಸಕರದ್ದಾಗಿದೆ ಎಂದರು.

ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ನೀವು ಬಾಗಿನ ಅರ್ಪಿಸಿ ಕಳಿಸುತ್ತಿರುವುದು ಕೇವಲ ನಿಮ್ಮ ಮನೆಯ ಹೆಣ್ಣನ್ನಲ್ಲ, ಬದಲಾಗಿ ಹಾನಗಲ್ಲ ತಾಲೂಕಿನ ರೈತರಿಗೆ ಜೀವ ನೀಡುವಂಥ ಮಹಾಲಕ್ಷ್ಮಿಯನ್ನು. ಅದನ್ನು ಮಹಾಲಕ್ಷ್ಮಿಯಂತೆ ನೋಡಿಕೊಳ್ಳುತ್ತೇವೆ ಎಂದರು. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿದೆ. ಅಲ್ಲದೇ ಈ ಬಾರಿ ಉತ್ತಮ ಮಳೆಯಾಗುತ್ತಿದ್ದು, ಸಂಕಷ್ಟದಲ್ಲಿ ಸಿಲುಕಿದ್ದ ರೈತ ಸಮುದಾಯಕ್ಕೆ ಶಕ್ತಿ ಮತ್ತು ಧೈರ್ಯ ತುಂಬಿದಂತಾಗಿದೆ. ಈ ಬಾರಿ ಉತ್ತಮ ಬೆಳೆಯೊಂದಿಗೆ ಉತ್ತಮ ಬೆಲೆ ಕೂಡ ಸಿಗಲಿ ಎಂದು ಆಶಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಮಳಗಿ ಗ್ರಾಪಂ ಅಧ್ಯಕ್ಷೆ ಕಸ್ತೂರಿ ತಳವಾರ, ಹಾನಗಲ್ಲ ಭಾಗದ ಯುವ ಧುರೀಣ ಮಂಜುನಾಥ ನೀಲಗುಂದ, ವಿಜಯಕುಮಾರ ದೊಡ್ಡಮನಿ ಮುಂತಾದವರು ಉಪಸ್ಥಿತರಿದ್ದರು. ಮುಂಡಗೋಡ ಹಾಗೂ ಹಾನಗಲ್ಲ ತಾಲೂಕಿನ ಸಾವಿರಾರು ಸಂಖ್ಯೆಯ ರೈತರು ಬಾಗಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Share this article