ವಿಘ್ನೇಶ್ ಎಂ. ಭೂತನಕಾಡು
ಅಲ್ಲಿ ಎಲ್ಲಿ ನೋಡಿದರೂ ಬಂಡೆ ಕಲ್ಲುಗಳ ರಾಶಿಯೇ ಕಾಣುತ್ತಿತ್ತು. ಘಟನೆ ನಡೆದ ಪ್ರದೇಶದ ತುತ್ತ ತುದಿಗೆ ನಾವು ನಾಲ್ಕು ಮಂದಿ ಸ್ಥಳೀಯರೊಂದಿಗೆ ತೆರಳಿ ಕಾರ್ಯಾಚರಣೆ ನಡೆಸಿದೆವು. ಸುಮಾರು 18 ಮೃತದೇಹಗಳನ್ನು ಹೊರ ತೆಗೆದಿದ್ದೆವು. ಕೆಲವೊಂದು ಮೃತದೇಹಗಳು ತುಂಡಾಗಿದ್ದವು. ಅಲ್ಲಿನ ವಾತಾವರಣ ಕಂಡು ಈಗಲೂ ನಮಗೆ ಮೈ ಜುಮ್ ಎನ್ನುತ್ತಿದೆ!
ಕೊಡಗು ಜಿಲ್ಲೆಯಿಂದ ವಯನಾಡಿನ ಮುಂಡಕೈ ಪ್ರಕೃತಿ ವಿಕೋಪ ಸ್ಥಳದಲ್ಲಿ ಪರಿಹಾರ ಕಾರ್ಯಾಚರಣೆಯಲ್ಲಿ ನಿರತರಾಗಿರುವ ಕೊಡಗಿನ ಯುವಕರ ತಂಡ ತಮ್ಮ ಕಣ್ಣಿಗೆ ಕಂಡದ್ದನ್ನು ವಿವರಿಸಿದ್ದು ಹೀಗೆ.10.30ಗೆ ಅಲ್ಲಿದ್ದೆವು: ಮಂಗಳವಾರ ಬೆಳಗ್ಗೆ 8 ಗಂಟೆಗೆ ಟೀವಿಯಲ್ಲಿ ಸುದ್ದಿ ನೋಡಿದ ಕೂಡಲೇ ಆಂಬ್ಯುಲೆನ್ಸ್ ಜತೆಗೆ ಹೊರಟ ನಾವು 8 ಮಂದಿ 10.30ಕ್ಕೆ ವಯನಾಡಿನ ಮುಂಡಕೈಗೆ ತಲುಪಿದೆವು. ಬೆಟ್ಟದಲ್ಲಿದ್ದ ಬಂಡೆಕಲ್ಲುಗಳು ಮುಂಡಕೈ ಗ್ರಾಮದ ಮನೆಗಳನ್ನೆಲ್ಲ ನೆಲಸಮ ಮಾಡಿತ್ತು. 400ಕ್ಕೂ ಹೆಚ್ಚು ಮನೆಗಳಿದ್ದ ಗ್ರಾಮ ಇದೀಗ ಕಸದಿಂದ ತುಂಬಿದ್ದ ಮೈದಾನದಂತಾಗಿತ್ತು. ನಮ್ಮ ಜೀವನದಲ್ಲಿ ಇಂತಹ ಭೀಕರ ದೃಶ್ಯ ನೋಡಿದ್ದು ಇದೇ ಮೊದಲು.
ನಮ್ಮ ಬಳಿ ಗ್ಲೌಸ್‌ಗಳಾಗಲಿ. ಮಾಸ್ಕ್‌ಗಳಾಗಲಿ ಯಾವುದೂ ಇರಲಿಲ್ಲ. ಶವಗಳನ್ನು ಬರಿಗೈನಲ್ಲೇ ತೆಗೆದಿದ್ದೇವೆ. ಅಲ್ಲಿನ ಗ್ರಾಮಸ್ಥರ ಜೊತೆ ಸೇರಿ 18 ಮೃತದೇಹಗಳನ್ನು ಅವಶೇಷಗಳಿಂದ ಹೊರ ತೆಗೆದಿದ್ದೇವೆ. ಕೆಲ ದೇಹಗಳು ತುಂಡಾದ ಸ್ಥಿತಿಯಲ್ಲಿದ್ದುದನ್ನು ನೋಡಿ ಮನಸ್ಸಿಗೆ ತೀವ್ರ ಸಂಕಟವಾಯಿತು. ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಮೃತದೇಹಗಳನ್ನೆಲ್ಲ ಅಲ್ಲಿದ್ದ ಮನೆಯೊಂದರಲ್ಲಿ ರಾಶಿ ಮಾಡಿದೆವು. ಅಲ್ಲಿನ ಸ್ಥಿತಿ ನೋಡಿ ಅಂದು ಊಟ ಕೂಡ ಮಾಡಲಿಲ್ಲ ಎಂದು ಆಸ್ಕರ್ ಭಾವುಕರಾಗಿ ಹೇಳಿದರು.
ಆಸ್ಪತ್ರೆಯಲ್ಲಿ ಮೃತದೇಹಗಳ ರಾಶಿ: ಮುಂಡಕೈನ ಆಸ್ಪತ್ರೆಯಲ್ಲಿ ರಾಶಿ ರಾಶಿ ಮೃತ ದೇಹಗಳನ್ನು ಐಸ್ ಬಾಕ್ಸ್‌ಗಳಲ್ಲಿ ಹಾಕಿಡಲಾಗಿದೆ. ಇದೀಗ ಪ್ರಕೃತಿ ವಿಕೋಪ ಸಂಭವಿಸಿದ ಸ್ಥಳದ ಮೇಲ್ಭಾಗದಲ್ಲಿ ಹಿಟಾಚಿಗಳು ಬಂದಿವೆ. ಸೇನೆ ಸೇರಿ ವಿವಿಧ ರಕ್ಷಣಾ ತಂಡದಿಂದ ಕಾರ್ಯಾಚರಣೆ ಬಿರುಸಿನಿಂದ ಸಾಗಿದೆ. ನಾವೀಗ ಅಲ್ಲಿಂದ ಹಿಂತಿರುಗಿದ್ದೇವೆ ಎಂದು ಹೇಳಿದರು.
ನೆಲ್ಯಹುದಿಕೇರಿಯ ಸಹಾಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ 4 ಮಂದಿ ಹೋಗಿ ನೆರೆ ಸಂತ್ರಸ್ತರಿಗೆ ರು.1 ಲಕ್ಷ ಮೌಲ್ಯದ ಬಟ್ಟೆಯನ್ನು ಮೇಪಾಡಿಯಲ್ಲಿ ಹಸ್ತಾಂತರ ಮಾಡಲಾಗಿದೆ.