ಆ.11ರಂದು ಗದ್ದೆಯಲ್ಲಿ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ನಾಟಿ: ನಿಖಿಲ್ ಕುಮಾರಸ್ವಾಮಿ

KannadaprabhaNewsNetwork | Updated : Aug 02 2024, 12:46 PM IST

ಸಾರಾಂಶ

ಪಾಂಡವಪುರ  ತಾಲೂಕಿನ ಅರಳಕುಪ್ಪೆ ಗ್ರಾಮದ ಹೊರವಲಯದ ರೈತರ ಗದ್ದೆಯಲ್ಲಿ ಆ.11ರಂದು ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ನಾಟಿ ಮಾಡಲಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ತಿಳಿಸಿದರು.

  ಪಾಂಡವಪುರ : ತಾಲೂಕಿನ ಅರಳಕುಪ್ಪೆ ಗ್ರಾಮದ ಹೊರವಲಯದ ರೈತರ ಗದ್ದೆಯಲ್ಲಿ ಆ.11ರಂದು ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ನಾಟಿ ಮಾಡಲಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ತಿಳಿಸಿದರು.

ಎಚ್.ಡಿ.ಕುಮಾರಸ್ವಾಮಿ ಅವರು ಗದ್ದೆ ನಾಟಿ ಮಾಡಲು ಸಿದ್ಧಗೊಂಡಿರುವ ಗ್ರಾಮದ ಲಕ್ಷ್ಮಣ ಅವರ ಜಮೀನಿ ಬಳಿ ಆಗಮಿಸಿ ವೀಕ್ಷಣೆ ಬಳಿಕ ಮಾತನಾಡಿ, ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದರು. ಆ ವೇಳೆ ಅರಳಕುಪ್ಪೆ ಗ್ರಾಮದ ಹೊರವಲಯದಲ್ಲಿ ಗದ್ದೆನಾಟಿ ಮಾಡಿದ್ದರು ಎಂದರು.

ಈಗ ಕೇಂದ್ರ ಸಚಿವರಾಗಿದ್ದಾರೆ. ಹಾಗಾಗಿ ಜಿಲ್ಲಾ ನಾಯಕರಾದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ಆ.11ರಂದು ಕುಮಾರಣ್ಣ ಗದ್ದೆಯಲ್ಲಿ ನಾಟಿ ಮಾಡಲಿದ್ದಾರೆ. ಗದ್ದೆನಾಟಿಗೂ ಮೊದಲೇ ಕಾವೇರಿ ಮಾತೆಗೆ ಪೂಜೆಸಲ್ಲಿಸಿ ಬಳಿಕ ನಾಟಿ ಮಾಡಲಿದ್ದಾರೆ ಎಂದರು.

ಜಿಲ್ಲೆಯ ಜನತೆ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಂಸದರಾಗಿ ಆಯ್ಕೆ ಮಾಡುವ ಮೂಲಕ ಕೇಂದ್ರದಲ್ಲಿ ಸಚಿವರಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಕಳೆದ ವರ್ಷ ಭೀಕರ ಬರಗಾಲ ಎದುರಾಗಿತ್ತು. ಇದೀಗ ಕಾವೇರಿಕೊಳ್ಳದಲ್ಲಿ ಉತ್ತಮ ಮಳೆಯಾಗಿರುವುದರಿಂದ ಜಿಲ್ಲೆಯ ಜನತೆ ಸಂವೃದ್ಧಿಯಾಗಿ ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ಆ ಹಿನ್ನೆಲೆಯಲ್ಲಿ ರೈತರಿಗೆ ಉತ್ಸಾಹ ತುಂಬಲು ಭತ್ತದ ನಾಟಿ ಹಾಕುತ್ತಿದ್ದಾರೆ ಎಂದರು.

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಕಳೆದ 2018ರಲ್ಲಿ ಎಚ್.ಡಿ.ಕುಮಾರಸ್ವಾಮಿ 2ನೇ ಬಾರಿ ಸಿಎಂ ಆಗಿದ್ದಾಗ ಅರಳಕುಪ್ಪೆ ಗ್ರಾಪಂ ವ್ಯಾಪ್ತಿಯ ರೈತರ ಜಮೀನಿನಲ್ಲಿ ಭತ್ತದ ನಾಟಿಹಾಕುವ ಕಾರ್‍ಯಕ್ಕೆ ಚಾಲನೆ ನೀಡಿ ರಾಜ್ಯಕ್ಕೆ ಮಾದರಿಯಾಗಿದ್ದರು ಎಂದರು.

ಗದ್ದೆ ನಾಟಿ ಮಾಡಿದ ನೆನಪಿಗಾಗಿ ಅಂದು 100 ಕೋಟಿ ಅಧಿಕ ಅನುದಾನ ಬಿಡುಗಡೆ ಮಾಡಿ ತಾಲೂಕಿನ ಜನತೆ ಮೈಸೂರು ನಗರಕ್ಕೆ ತೆರಳಲು ಅನುಕೂಲವಾಗುವಂತೆ ಅರಳಕುಪ್ಪೆ - ಕಾರೇಕುರ ಗ್ರಾಮಕ್ಕೆ ಸಂಪರ್ಕಿಸುವ ಸೇತುವೆಯನ್ನು ಕಾವೇರಿ ನದಿಗೆ ನಿರ್ಮಿಸುವಕ್ಕೆ ಭೂಮಿಪೂಜೆ ನೆರವೇರಿಸಿ ಹೋಗಿದ್ದರು ಎಂದರು.

ಈಗ ಆ ಸೇತುವೆ ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ. ಜಿಲ್ಲೆಯ ಜನತೆ ಸಂಸತ್ ಚುನಾವಣೆಯಲ್ಲಿ ಹೆಚ್ಚಿನ ಬಹುಮತ ನೀಡಿ ಗೆಲ್ಲಿಸಿ ಸಚಿವರನ್ನಾಗಿ ಮಾಡಿದ್ದಾರೆ. ಕನ್ನಂಬಾಡಿ ಅಣೆಕಟ್ಟೆ ಭರ್ತಿಯಾಗಿ ಎರಡ ಮೂರು ವರ್ಷವಾಗಿತ್ತು. ಎಚ್.ಡಿ.ಕುಮಾರಸ್ವಾಮಿ ಗೆದ್ದ ಬಳಿಕ ಉತ್ತಮ ಮಳೆಯಾಗಿ ಕಾವೇರಿ ಭರ್ತಿಯಾಗಿ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದಾಳೆ. ಇದೀಗ ಮತ್ತೆ ಅದೇ ರೈತರ ಜಮೀನಿನಲ್ಲಿ ನಾಟಿ ಮಾಡುವುದಕ್ಕೆ ಸಿದ್ದತೆ ನಡೆಸಿಕೊಳ್ಳಲಾಗಿದೆ ಎಂದರು.

ಸಂದರ್ಭದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್‌ಬಾಬು, ಶಾಸಕ ಎಚ್.ಟಿ.ಮಂಜು, ಜಿಪಂ ಮಾಜಿ ಸದಸ್ಯ ಸಿ.ಅಶೋಕ್, ಜೆಡಿಎಸ್ ಯುವ ನಾಯಕ ಸಿ.ಪಿ.ಶಿವರಾಜು, ಮುಖಂಡರಾದ ಗ್ರಾಪಂ ಮಾಜಿ ಅಧ್ಯಕ್ಷರಾದ ಮಹದೇವು, ವಿಶ್ವನಾಥ್, ಚಲುವರಾಜ್, ಕೃಷ್ಣಮೂರ್ತಿ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

Share this article