ದೇಶಕ್ಕಾಗಿ ಮಡಿದವರ ಶೌರ್ಯ, ಸಾಧನೆ ಸದಾ ಸ್ಮರಿಸಬೇಕು

KannadaprabhaNewsNetwork | Published : Oct 24, 2024 12:34 AM

ಸಾರಾಂಶ

ಕಿತ್ತೂರು ರಾಣಿ ಚೆನ್ನಮ್ಮ ೧೮೨೪ರಲ್ಲಿ ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಹೋರಾಡಿದ, ಪ್ರಥಮ ಮಹಿಳೆಯಾಗಿದ್ದಲ್ಲದೇ, ದೇಶಕ್ಕಾಗಿ ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಹೋರಾಡಿದ ದಿಟ್ಟ ಮಹಿಳೆ ಎನಿಸಿದ್ದಾರೆ ಎಂದು ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ ಜಗಳೂರಲ್ಲಿ ಹೇಳಿದ್ದಾರೆ.

- ಜಗಳೂರಿನ ಆರ್‌ವಿಎಸ್ ಶಾಲೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯಲ್ಲಿ ತಹಸೀಲ್ದಾರ್‌ ಸೈಯದ್‌ ಕಲೀಂ ಉಲ್ಲಾ ಸಲಹೆ - - - ಕನ್ನಡಪ್ರಭ ವಾರ್ತೆ ಜಗಳೂರು

ಕಿತ್ತೂರು ರಾಣಿ ಚೆನ್ನಮ್ಮ ೧೮೨೪ರಲ್ಲಿ ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಹೋರಾಡಿದ, ಪ್ರಥಮ ಮಹಿಳೆಯಾಗಿದ್ದಲ್ಲದೇ, ದೇಶಕ್ಕಾಗಿ ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಹೋರಾಡಿದ ದಿಟ್ಟ ಮಹಿಳೆ ಎನಿಸಿದ್ದಾರೆ ಎಂದು ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ ಹೇಳಿದರು.

ಪಟ್ಟಣದ ಆರ್‌ವಿಎಸ್ ಶಾಲೆಯಲ್ಲಿ ಬುಧವಾರ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಚಾಲನೆ ನೀಡಿ ಅವರು ಮಾತನಾಡಿದರು. ಮೊದಲು ಜಯಂತಿ ಆಚರಣೆಗಳನ್ನು ತಾಲೂಕು ಕಚೇರಿಯಲ್ಲಿ ಮಾಡಲಾಗುತ್ತಿತ್ತು. ಸರ್ಕಾರದ ಆದೇಶದಂತೆ ಶಾಲಾ -ಕಾಲೇಜುಗಳಲ್ಲಿ ಮಾಡಲಾಗುತ್ತಿದೆ ಎಂದರು.

ಮಕ್ಕಳು ಸ್ವಾತಂತ್ರ್ಯ ಹೋರಾಟಗಾರರು, ದೇಶಕ್ಕಾಗಿ ಹಲವಾರು ಮಹಾನ್ ವ್ಯಕ್ತಿಗಳು ಪ್ರಾಣವನ್ನು ಪಣಕ್ಕಿಟ್ಟ ವ್ಯಕ್ತಿಗಳ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಹಾಗಾಗಿ ಶಾಲೆಯಲ್ಲಿ ಚೆನ್ನಮ್ಮ ಜಯಂತಿ, ಹೋರಾಟದ ವಿಜಯೋತ್ಸವ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.

ಜಿ.ಪಂ. ಮಾಜಿ ಸದಸ್ಯಕೆ ಪಿ.ಪಾಲಯ್ಯ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮರಂಥ ಮಹನೀಯರ ಆದರ್ಶಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಹಲವಾರು ಮಹಾನ್ ವ್ಯಕ್ತಿಗಳು ನಾಡಿನ ನೆಲ -ಜಲಕ್ಕಾಗಿ ಹೋರಾಟವನ್ನು ಮಾಡಿದ್ದಾರೆ. ಅಂಥವರನ್ನು ಕೇವಲ ಅವರ ಜನ್ಮದಿನದಂದು ಮಾತ್ರವೇ ನೆನಪಿಸಿಕೊಳ್ಳಬಾರದು. ಎಲ್ಲ ಸಮಾಜದ ಜನರನ್ನು ಕರೆಸಿ, ಜಯಂತಿಗಳ ಆಚರಿಸಿ, ಸ್ಮರಿಸುವ ಕೆಲಸವಾಗಬೇಕು ಎಂದರು.

ಆರ್‌ವಿಎಸ್ ಶಾಲೆ ಕಾರ್ಯದರ್ಶಿ ವೀರೇಶ್ ಮಾತನಾಡಿ, ಮಹಿಳೆಯರು ಅಬಲೆ ಅಲ್ಲ ಸಬಲೇ ಎಂದು ಹೇಳಬಹುದು. ಪುರುಷ ಪ್ರಧಾನ ಕಾಲದಲ್ಲೇ ಮಹಿಳೆಯರು ಹಲವಾರು ಹೋರಾಟಗಳನ್ನು ಮಾಡಿದ್ದಾರೆ. ಮಕ್ಕಳು ಸಹ ಇಂತಹ ಮಹನೀಯರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಕಿತ್ತೂರು ರಾಣಿ ಚೆನ್ನಮ್ಮ ಶಾಲೆ ಪ್ರಾಂಶುಪಾಲ ಕಲ್ಲೇಶ್ ಮಾತನಾಡಿ, ಸಂಸ್ಕೃತಿ ಇಲಾಖೆಯಿಂದ ೩೦ ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ. ಜಯಂತಿಗಳನ್ನು ಆ ಜಾತಿಗೆ ಮಾತ್ರವೇ ಸೀಮಿತ ಮಾಡಲಾಗುತ್ತಿದೆ. ಹಲವಾರು ವೀರ ಮಹಿಳೆಯರು ಹೋರಾಟಗಳನ್ನು ಮಾಡಿ ದೇಶಕ್ಕೆ ಸಂದೇಶ ನೀಡಿದ್ದಾರೆ ಎಂದು ಹೇಳಿದರು.

ಈ ಸಂದರ್ಭ ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಯು.ಜಿ. ಶಿವಕುಮಾರ್, ವೀರಶೈವ ಸಮಾಜದ ಅಧ್ಯಕ್ಷ ಅಜ್ಜಣ್ಣ ನಾಡಿಗಾರ್, ತಾ.ಪಂ. ಮಾಜಿ ಅಧ್ಯಕ್ಷ ಗಡಿಮಾಕುಂಟೆ ಸಿದ್ದೇಶ್, ಗೌಡರ ಮುರುಗೇಶ್, ಕೆಚ್ಚೇನಳ್ಳಿ ಮುರಿಗೆಪ್ಪ ಸೇರಿದಂತೆ ಸಮಾಜದ ಮುಖಂಡರು. ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.

- - - -23ಜೆಎಲ್ಆರ್2:

ಜಗಳೂರು ಪಟ್ಟಣದ ಆರ್‌ವಿಎಸ್ ಶಾಲೆಯಲ್ಲಿ ಬುಧುವಾರ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಭಾವಚಿತ್ರಕ್ಕೆ ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ ಸೇರಿದಂತೆ ಗಣ್ಯರು ಪುಷ್ಪಾರ್ಚನೆ ಸಲ್ಲಿಸಿದರು.

Share this article