ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು: ಎಸ್ಸೆಸ್ಸೆಂ

KannadaprabhaNewsNetwork |  
Published : Aug 16, 2025, 12:00 AM IST
(ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ತ್ಯಾಗ, ಶೌರ್ಯ, ದೃಢ ಸಂಕಲ್ಪ ಪರವಾಗಿ ಆಂಗ್ಲರ ದಾಸ್ಯದಿಂದ ಭಾರತ ಮುಕ್ತವಾಗಿ 79 ವರ್ಷವಾಗಿವೆ. ಇಂಥ ಸಂದರ್ಭದಲ್ಲಿ ದೇಶದ ಏಕತೆ, ವಿಜ್ಞಾನ, ತಂತ್ರಜ್ಞಾನದ ಜೊತೆಗೆ ಅಸಮಾನತೆ, ಪರಿಸರ ಸಂರಕ್ಷಣೆ ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದ್ದಾರೆ.

- ಜಿಲ್ಲಾ ಕ್ರೀಡಾಂಗಣದಲ್ಲಿ 79ನೇ ಸ್ವಾತಂತ್ರ್ಯೋತ್ಸವ ಸಂಭ್ರಮ । ರಾಷ್ಟ್ರ ಧ್ವಜಾರೋಹಣ, ಪಥ ಸಂಚಲನ, ಪುರಸ್ಕಾರ-ಸನ್ಮಾನ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ತ್ಯಾಗ, ಶೌರ್ಯ, ದೃಢ ಸಂಕಲ್ಪ ಪರವಾಗಿ ಆಂಗ್ಲರ ದಾಸ್ಯದಿಂದ ಭಾರತ ಮುಕ್ತವಾಗಿ 79 ವರ್ಷವಾಗಿವೆ. ಇಂಥ ಸಂದರ್ಭದಲ್ಲಿ ದೇಶದ ಏಕತೆ, ವಿಜ್ಞಾನ, ತಂತ್ರಜ್ಞಾನದ ಜೊತೆಗೆ ಅಸಮಾನತೆ, ಪರಿಸರ ಸಂರಕ್ಷಣೆ ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ 79ನೇ ವರ್ಷದ ಸ್ವಾತಂತ್ರ್ಯ ದಿನ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಪಥ ಸಂಚಲನದಲ್ಲಿ ಪಾಲ್ಗೊಂಡ ನಂತರ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿ ಅವರು ಮಾತನಾಡಿದರು.

ಮಹಾತ್ಮ ಗಾಂಧೀಜಿ, ನೇತಾಜಿ ಸುಭಾಶ್ಟಂದ್ರ ಬೋಸ್, ಭಗತ್ ಸಿಂಗ್, ಸರೋಜಿನಿ ನಾಯ್ಡು, ಲಾಲಾ ಲಜಪತ್ ರಾಯ್, ಟಿಪ್ಪು ಸುಲ್ತಾನ್, ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ಅನೇಕ ಹೋರಾಟಗಾರರ ಅಮರ ತ್ಯಾಗವನ್ನು ನಾವು ಮರೆಯಬಾರದು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ದಾವಣಗೆರೆ ಹಳ್ಳೂರು ನಾಗಪ್ಪ, ಅಕ್ಕಸಾಲೆ ವಿರೂಪಾಕ್ಷಪ್ಪ, ಬಿದಿರಕುಂದಿ ನಿಂಗಪ್ಪ, ಹಮಾಲಿ ತಿಮ್ಮಣ್ಣ, ಹದಡಿ ನಿಂಗಪ್ಪ, ಮಾಗಾನಹಳ್ಳಿ ಹನುಮಂತಪ್ಪ ಅಂದು ಬ್ರಿಟೀಷರ ಗುಂಡಿಗೆ ಪ್ರಾಣಾರ್ಪಣೆ ಮಾಡಿ ಹುತಾತ್ಮರಾಗಿದ್ದನ್ನು ನಾವಿಂದು ನೆನಪಿಸಿಕೊಳ್ಳಬೇಕಾಗುತ್ತದೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಲಾದೆ. ₹2346 ಕೋಟಿಗಳಷ್ಟು ಹಣವನ್ನು ಜನರಿಗಾಗಿ ಖರ್ಚು ಮಾಡಲಾಗಿದೆ. ಜಿಲ್ಲೆಯ ತೋಟಗಾರಿಕೆ ಅಭಿವೃದ್ಧಿಗೆ ₹49.98 ಕೋಟಿ ಅನುದಾನ ನೀಡಲಾಗಿದೆ. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಎಲ್ಲ ವರ್ಗದ ರೈತರಿಗೆ ಶೇ.90ರಷ್ಟು ಸಹಾಯಧನ ಒದಗಿಸುವ ಜೊತೆಗೆ 7 ವರ್ಷ ಹಿಂದೆ ಹನಿ ನೀರಾವರಿಗೆ ಸಹಾಯಧನ ಪಡೆದಿದ್ದಲ್ಲಿ ಅದೇ ಸರ್ವೆ ನಂಬರ್‌ಗೆ ಸಹಾಯಧನ ನೀಡಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯದ ಜೇನುತುಪ್ಪಕ್ಕೆ “ಝೇಂಕಾರ” ಹೆಸರಿನ ಬ್ರ್ಯಾಂಡ್ ನೀಡಲಾಗಿದೆ ಎಂದು ಅವರು ವಿವರಿಸಿದರು.

ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯ:

ದಾವಣಗೆರೆ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ 400 ಹಾಸಿಗೆ ಕಟ್ಟಡ ನಿರ್ಮಿಸಲು ₹260 ಕೋಟಿಗಳನ್ನು ಸರ್ಕಾರದಿಂದ ಮಂಜೂರು ಮಾಡಿಸಿ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಎಸ್ಸೆಸ್ಸೆಲ್ಸಿ- ಪಿಯುಸಿ ಫಲಿತಾಂಶ ಸುಧಾರಣೆಗೆ ಕಲಿಕಾ ಕ್ರಮ ಕೈಗೊಳ್ಳಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ಬಡವರಿಗೆ ಅನುಕೂಲ ಕಲ್ಪಿಸಲು ಸಂಕಲ್ಪ ಕೇಂದ್ರ ತೆರೆಯಲಾಗಿದೆ. ಮುಂದಿನ ದಿನಗಳಲ್ಲಿ ದಾವಣಗೆರೆಗೆ ಸಾಫ್ಟ್‌ವೇರ್‌ ಕಂಪನಿಗಳನ್ನು ಆಹ್ವಾನಿಸಿ, ಉದ್ಯೋಗ ನೀಡಲು ವಿಷನ್ ಗ್ರೂಪ್ ರಚಿಸಿ ಈ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ದಾವಣಗೆರೆ ಪಾಲಿಕೆಯಿಂದ ಪಿ.ಬಿ. ರಸ್ತೆಯಿಂದ ಬಸಾಪುರ ರಸ್ತೆವರೆಗಿನ ರಾಜಕಾಲುವೆ ಎತ್ತರಿಸುವುದು, ರಿಂಗ್ ರಸ್ತೆ ಕಾಮಗಾರಿಯನ್ನು ₹129 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಟೆಂಡರ್ ಹಂತದಲ್ಲಿದೆ. ಜಲಸಿರಿ ಯೋಜನೆಯಡಿ 24*7 ನೀರು ಪೂರೈಕೆಗೆ ಈಗಾಗಲೇ 32 ವಲಯ ಮಾಡಲಾಗುತ್ತಿದೆ. ತಿಂಗಳಾಂತ್ಯಕ್ಕೆ ಉಳಿದ 18 ವಲಯಗಳಲ್ಲಿ ನಿರಂತರ ಕುಡಿಯುವ ನೀರು ಪೂರೈಸಲಾಗುತ್ತದೆ ಎಂದು ತಿಳಿಸಿದರು.

ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಪೂರ್ವ ವಲಯ ಪೊಲೀಸ್ ಮಹಾ ನಿರೀಕ್ಷಕ ಡಾ.ರವಿಕಾಂತೇಗೌಡ, ಜಿಪಂ ಸಿಇಒ ಗಿತ್ತೆ ಮಾಧವ್ ವಿಠ್ಠಲ್ ರಾವ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ, ಎಸ್.ಮಲ್ಲಿಕಾರ್ಜುನ, ಡಿ.ಬಸವರಾಜ, ಎ.ನಾಗರಾಜ, ಅಯೂಬ್ ಪೈಲ್ವಾನ್, ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಟಾನ ಸಮಿತಿ ಅಧ್ಯಕ್ಷ ಶಾಮನೂರು ಟಿ.ಬಸವರಾಜ, ಪಾಲಿಕೆ ಆಯುಕ್ತೆ ರೇಣುಕಾ, ವಿವಿಧ ಇಲಾಖೆ ಅಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು.

- - -

(ಬಾಕ್ಸ್‌) * ಪಥ ಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮ ಸ್ವಾತಂತ್ರ್ಯ ದಿನಾಚರಣೆ ಪಥ ಸಂಚಲನದಲ್ಲಿ ಪ್ರಶಾಂತ ಕವಾಯತು ಪಥ ಸಂಚಾಲಕರಾಗಿ ಕಾರ್ಯನಿರ್ವಹಿಸಿದರು. 30 ವಿವಿಧ ಘಟಕ ಭಾಗವಹಿಸಿದ್ದವು. ಸಶಸ್ತ್ರ ಮೀಸಲು ಪಡೆ, ನಗರ ಉಪ ವಿಭಾಗ ಪೊಲೀಸ್ ತಂಡ, ಸಿವಿಲ್ ಪೊಲೀಸ್, ಗೃಹ ರಕ್ಷಕದಳ, ಅರಣ್ಯ ಇಲಾಖೆ ತಂಡ, ಅಗ್ನಿ ಶಾಮಕ ದಳ, ಗೃಹರಕ್ಷಕ ಮಹಿಳಾ ದಳ, ಕಂದಾಯ ಇಲಾಖೆ, ಪಾಲಿಕೆ, ಕಂದಾಯ, ಡಿಆರ್‌ಎಂ, ಜಿಎಫ್‍ಜಿ ಕಾಲೇಜ್, ಎವಿಕೆ, ಸಿದ್ಧಗಂಗಾ ಶಾಲೆ ಸೇರಿದಂತೆ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳ ತಂಡ, ಪೊಲೀಸ್ ಬ್ಯಾಂಡ್ ತಂಡದಿಂದ ಆಕರ್ಷಕ ಪಥ ಸಂಚಲನ ನಡೆಸಲಾಯಿತು.

ಪಥ ಸಂಚಲನದಲ್ಲಿ ಭಾಗವಹಿಸಿದ ಎಸ್.ಎಸ್. ಎನ್‍ಪಿಎಸ್ ಶಾಲೆ ಉತ್ತಮ ಸಮವಸ್ತ್ರ ವಿಜೇತ ಶಾಲೆಯಾಗಿ ಗುರುತಿಸಲಾಯಿತು. ಪಥ ಸಂಚಲನದಲ್ಲಿ ಪಾಲಿಕೆ, ಕಂದಾಯ ಇಲಾಖೆ, ಪಿ.ಎಸ್.ಇ.ಎಂ.ಆರ್. ತೋಳಹುಣಸೆ ಪೈಪ್ ಬ್ಯಾಂಡ್ ಜೂನಿಯರ್ ತಂಡ ವಿಶೇಷ ತಂಡಗಳಾಗಿ ಭಾಗವಹಿಸಿದ್ದವು. ವಿದ್ಯಾರ್ಥಿಗಳಿಂದ ಆಕರ್ಷಕ ದೇಶಭಕ್ತಿ ಗೀತೆಗಳ ನೃತ್ಯ ರೂಪಕ- ವಿಶ್ವಚೇತನ ಶಾಲೆಯಿಂದ ಹಿಂದೂಸ್ತಾನ್ ನೃತ್ಯ, ಲಲಿತಾ ಇಂಟರ್ ನ್ಯಾಷನಲ್ ಶಾಲೆಯಿಂದ ಗಾಂಧಿ ಗೋಖಲೆ ಶಾಂತಿ ಇಂಡಿಯಾ, ಗೋಲ್ಡನ್ ಪಬ್ಲಿಕ್ ಶಾಲೆಯಿಂದ ಸಂಕೋಲೆಯಿಂದ ಸ್ವಾತಂತ್ರ್ಯದೆಡೆಗೆ ರೂಪಕ ಪ್ರದರ್ಶನ ಸಾವಿರಾರು ವಿದ್ಯಾರ್ಥಿಗಳಿಂದ ಪ್ರದರ್ಶನ ಮಾಡಲ್ಪಟ್ಟಿತು. ಪಿಎಸ್‍ಎಸ್‍ಎಂಆರ್ ಶಾಲೆಯ ಮಕ್ಕಳು ವಿಶೇಷ ಬ್ಯಾಂಡ್ ವಾದ್ಯ ಪ್ರಸ್ತುತಪಡಿಸಿದರು.

ಬಹುಮಾನ ಪಡೆದ ಶಾಲೆಗಳ ವಿವರ:

ಗೋಲ್ಡನ್ ಪಬ್ಲಿಕ್ ಶಾಲೆ ಪ್ರಥಮ ಬಹುಮಾನ, ವಿಶ್ವಚೇತನ ಶಾಲೆ ದ್ವಿತೀಯ ಬಹುಮಾನ, ಲಲಿತಾ ಇಂಟರ್ ನ್ಯಾಷನಲ್ ಶಾಲೆ ತೃತೀಯ ಬಹುಮಾನ ಪಡೆಯಲಾಯಿತು. ಪಿಎಸ್‍ಎಸ್‍ಎಂಆರ್ ಶಾಲೆಯ ಮಕ್ಕಳು ವಿಶೇಷ ಬ್ಯಾಂಡ್ ವಾದ್ಯವನ್ನು ನುಡಿಸಿದ ಪುಟಾಣಿಗಳಿಗೆ ವಿಶೇಷ ಬಹುಮಾನ ನೀಡಲಾಯಿತು. ಡ್ರೋನ್ ಮೂಲಕ ರೈತರು ತಮ್ಮ ವಿವಿಧ ಬೆಳೆಗೆ ನ್ಯಾನೋ ಗೊಬ್ಬರ, ಔಷಧಿ ಸಿಂಪಡಿಸಲು ಸರಳ ಮತ್ತು ಕಡಿಮೆ ವೆಚ್ಚದಲ್ಲಿ ಬಳಕೆ ಮಾಡುವ ಬಗ್ಗೆ ಎಂಜಿನಿಯರ್ ಹೇಮಂತ್ ಡ್ರೋನ್ ಪ್ರದರ್ಶಿಸಿದರು.

- - -

-(ಫೋಟೋಗಳಿವೆ:)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು
ಗ್ರಾಮೀಣ ಭಾಗದಲ್ಲೂ ವಸತಿ ಕಟ್ಟಡಗಳಿಗೆ ಒಸಿ-ಸಿಸಿ ಬೇಕಿಲ್ಲ