ಕನ್ನಡಪ್ರಭ ವಾರ್ತೆ ಗದಗ
ಇನ್ನರ್‌ವೀಲ್ ಕ್ಲಬ್‌ದಿಂದ ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯದ ವಿಶೇಷ ಮಕ್ಕಳ ಸರ್ಕಾರಿ ಶಾಲೆ ನಂ.4ರಲ್ಲಿ ಜರುಗಿದ ವಿಶೇಷ ಮಕ್ಕಳ ಪಾಲಕರ ಹಾಗೂ ಪೋಷಕರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಮಕ್ಕಳ ತಂದೆ-ತಾಯಿಯರನ್ನು ನಾವು ಅಭಿನಂದಿಸಲೇ ಬೇಕು. ತ್ಯಾಗಮಯಿಗಳಾದ ಇವರು ಸಹನೆಯಿಂದ ಮಕ್ಕಳನ್ನು ಜೋಪಾನ ಮಾಡುತ್ತಾರೆ. ಮುಖ್ಯವಾಗಿ ಆ ಮಕ್ಕಳಿಗೆ ಅವಶ್ಯವಿರುವ ಜೀವನ ಕೌಶಲಗಳನ್ನು ಕಲಿಸಿ ಸ್ವಾವಲಂಬಿಗಳಾಗಿ ಮಾಡುವಲ್ಲಿ ಪಾಲಕರು ಮುಂದಾಗಬೇಕು ಎಂದರು.
ಕ್ಲಬ್‌ನ ಕಾರ್ಯದರ್ಶಿ ಪೂಜಾ ಭೂಮಾ ಮಾತನಾಡಿ, ಬಾಲ್ಯವು ಪ್ರತಿಯೊಬ್ಬರ ಜೀವನದ ಪ್ರಮುಖ ಹಂತ. ತಮ್ಮ ಮಕ್ಕಳು ವಿಶೇಷವಾಗಿದ್ದಾರೆ ಎಂದು ತಿಳಿದಾಗ ತಾಯಂದಿರು ಧೃತಿಗೆಡದೇ ಅವರನ್ನು ಸ್ವಾವಲಂಬಿಗಳಾಗಿ ಮಾಡಲು ಮುನ್ನಡೆಯಬೇಕು. ಸ್ವ-ಇಚ್ಚೆಯಿಂದ ತಮ್ಮ ಎಲ್ಲ ವೈಯಕ್ತಿಕ ಕಾರ್ಯಗಳನ್ನು ಹೇಗೆ ಮಾಡಿಕೊಳ್ಳಬೇಕು ಎಂಬುದನ್ನು ಮಗುವಿಗೆ ಹಂತ-ಹಂತವಾಗಿ ತಿಳಿಸಿ ಹೇಳಿ ಆ ಮಕ್ಕಳು ಇಂತಹ ಕೆಲಸ ಕಾರ್ಯಗಳಲ್ಲಿ ತೊಡಗುವ ಪ್ರಕ್ರಿಯೆಯಲ್ಲಿ ಭಾಗಿಯಾಗುವಂತೆ ಪಾಲಕರು ಪ್ರೇರಣೆ ನೀಡಬೇಕು ಎಂದರು.ಕ್ಲಬ್‌ನ ಸಿಪಿಸಿಸಿ ಜಯಶ್ರೀ ಉಗಲಾಟ ಮಾತನಾಡಿ, ಪುಟ್ಟರಾಜ ಗವಾಯಿಗಳು ಅಂಧರಾಗಿದ್ದರೂ ಮಹಾನ್ ವಿದ್ವಾಂಸರಾಗಿದ್ದರು. ಅದಕ್ಕಾಗಿ ಸಾಧನೆ ಮಾಡುವವರಿಗೆ ವಿಕಲತೆ ಎಂಬುದು ಅಡ್ಡಿಬಾರದು. ಇಂತಹ ಮಕ್ಕಳಿಗೆ ವಿಶೇಷ ತರಬೇತಿಗಳನ್ನು ಪಾಲಕರು ಕೊಡಿಸುವ ಮೂಲಕ ಅವರನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದು ಸುಂದರ ಬದುಕನ್ನು ನಿರ್ಮಿಸಿಕೊಳ್ಳಲು ಉತ್ತೇಜನ ನೀಡಬೇಕು ಎಂದು ತಿಳಿಸಿದರು.
ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಪಿ. ಪ್ರಭಯ್ಯನಮಠ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಶಶಿಧರ ಚಳಗೇರಿ, ಕಟಗಿ, ನವ್ಯಾ ಚಳಗೇರಿ, ಸುನೀತಾ ತಿಮ್ಮನಗೌಡ್ರ ಹಾಗೂ ಪಾಲಕ-ಪೋಷಕರು, ಮಕ್ಕಳು ಇದ್ದರು. ಶಾರದಾ ಸಜ್ಜನರ ಸ್ವಾಗತಿಸಿದರು. ಕವಿತಾ ದಂಡಿನ ಪರಿಚಯಿಸಿದರು. ಇ.ಡಿ. ಹುಗ್ಗೇನವರ ನಿರೂಪಿಸಿದರು. ಪವಿತ್ರಾ ಬಿರಾದಾರ ವಂದಿಸಿದರು.