ಉಗ್ರರ ದಾಳಿಯಿಂದ ಕೂದಳೆಯ ಅಂತರದಲ್ಲಿ ಪಾರಾದ ಹರಪನಹಳ್ಳಿ ಕುಟುಂಬದ ಮಾತುಬಿ.ರಾಮಪ್ರಸಾದ್ ಗಾಂಧಿ
ಕನ್ನಡಪ್ರಭ ವಾರ್ತೆ ಹರಪನಹಳ್ಳಿನಮ್ಮ ಪೂರ್ವಜರು ಮಾಡಿದ ಪುಣ್ಯದ ಫಲದಿಂದ ನಾವು ಮರುಜೀವ ಪಡೆದೆವು. ನೋಡಲು ಕಾಶ್ಮೀರ ಸ್ವರ್ಗ, ಆದರೆ ಜೀವ ಭಯವಿದೆ. ಯಾವಾಗ ಏನು ಆಗುತ್ತದೆ ಎಂಬುದು ಗೊತ್ತಿಲ್ಲ. ಇನ್ಮೇಲೆ ಈ ಕಡೆ ತಲೆ ಕೂಡ ಹಾಕುವುದಿಲ್ಲ.
ಇದು ಕಾಶ್ಮೀರದ ಪಹಲ್ಗಾಮ್ ಜಿಲ್ಲೆಯ ಬೈಸರನ್ ಹುಲ್ಲುಗಾವಲುನಲ್ಲಿ ಉಗ್ರರ ದಾಳಿಯಿಂದ ಕೂದಳೆಯ ಅಂತರದಲ್ಲಿ ಬಚಾವಾಗಿ ಸುರಕ್ಷಿತ ಸ್ಥಳಕ್ಕೆ ಬಂದಂತಹ ಹರಪನಹಳ್ಳಿ ಕುಟುಂಬದ ನೋವಿನ ಮಾತು.ಮೂಲತಃ ಹರಪನಹಳ್ಳಿ ತಾಲೂಕಿನ ಚಿರಸ್ಥಹಳ್ಳಿ ಗ್ರಾಮದವರಾದ ಇವರು ಪಟ್ಟಣದ ತೆಗ್ಗಿನಮಠ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಡೀನ್ ಆಗಿರುವ ಟಿ.ಎಂ. ರಾಜಶೇಖರ, ಪತ್ನಿ ಟಿ.ಎಂ. ಉಮಾದೇವಿ ಅವರ ಮಗಳು ಡಾ. ಗೌರಿಕಾ ಹಾಗೂ ಅಳಿಯ ದೊಡ್ಡಬಸಯ್ಯ ಇದೇ 18ರಂದು ಕಾಶ್ಮೀರಕ್ಕೆ ತೆರಳಿದ್ದರು.
22ರಂದು ಪಹಲ್ಗಾಮ್ ಜಿಲ್ಲೆಯ ಹುಲ್ಲುಗಾವಲಿಗೆ ಟಿ.ಎಂ. ರಾಜಶೇಖರ ಹೊರತು ಪಡಿಸಿ ಪತ್ನಿ, ಮಗಳು, ಅಳಿಯ ಕುದುರೆ ಮೇಲೆ 14 ಸಾವಿರ ಅಡಿ ಎತ್ತರ, 8 ಕಿಲೋ ಮೀಟರ್ ದೂರ ತೆರಳಿದ್ದಾರೆ. ಟಿ.ಎಂ. ರಾಜಶೇಖರ ಕುದುರೆ ಮೇಲೆ ಹೋಗಲು ನಿರಾಕರಿಸಿ ಕೆಳಗೆ ಉಳಿದಿದ್ದಾರೆ.ಪತ್ನಿ ಬಿ.ಎಂ. ಉಮಾದೇವಿ, ಮಗಳು ಡಾ. ಗೌರಿಕಾ ಹಾಗೂ ಅಳಿಯ ದೊಡ್ಡಬಸಯ್ಯನವರು ಹೋಟೆಲ್‌ನಲ್ಲಿ ಮಧ್ಯಾಹ್ನ 2.18ಕ್ಕೆ ಮ್ಯಾಗಿ ಆರ್ಡರ್ ಮಾಡಿ ಹೊರಗಡೆ ಬೆಂಚ್ ಮೇಲೆ ಕುಳಿತಾಗ 2.20ಕ್ಕೆ ಇವರಿಂದ 10 ರಿಂದ 12 ಅಡಿ ದೂರದಲ್ಲಿ ಫೈರಿಂಗ್ ಆಗಿದೆ.
ಮಿಲ್ಟ್ರಿ ಡ್ರೆಸ್ ಹಾಕಿದ್ದರಿಂದ ಅವರನ್ನು ಉಗ್ರರು ಬದಲಾಗಿ ಸೈನಿಕರು ಎಂದು ತಿಳಿದಿದ್ದೇವು ಎಂದು ಉಮಾದೇವಿ ಹೇಳುತ್ತಾರೆ.ಆಗ ಇವರ ಅಳಿಯ ದೊಡ್ಡಬಸಯ್ಯ ನವರು ಸೂಕ್ಷ್ಮ ಅರಿತು ನೆಲಕ್ಕೆ ಮಲಗಿ ಎಂದು ಮಲಗಿಸಿದ್ದಾನೆ, ಹಾಗೆ ತೆವಳುತ್ತಾ ಗೇಟ್ ಹತ್ತಿರವಿದ್ದ ಕಾರಣ ಬಂದು ಗೇಟ್ ಹೊರಗಡೆಯಿಂದ ಉರುಳುತ್ತಾ, ಕುಂಟುತ್ತಾ ಹೇಗೊ 8 ಕಿಲೋ ಮೀಟರ್ ಕೆಳಗಡೆ ಬಂದು ಜೀವ ಉಳಿಸಿಕೊಂಡಿದ್ದಾರೆ.
ಮೊದಲಿಗೆ ಫೈರಿಂಗ್ ಆದಾಗ ಮಕ್ಕಳು ಆಡುವ ಪಟಾಕಿ ಎಂದು ಒಂದಿಬ್ಬರು ಹೇಳಿದರಂತೆ, ನಂತರ 5 ಜನ ಫೈರಿಂಗ್ ಮಾಡಲು ಪ್ರಾರಂಭಿಸಿದರು ಎಂದು ಉಮಾದೇವಿ ಹೇಳುತ್ತಾರೆ.ಒಟ್ಟಿನಲ್ಲಿ ಖುಷಿಯಿಂದ ಪ್ರವಾಸಕ್ಕೆ ತೆರಳಿ ಭಯದಿಂದ ಹರಸಾಹಸ ಮಾಡಿ ಜೀವ ಉಳಿಸಿಕೊಂಡು ಬಂದಿದ್ದಾರೆ.