ಕೋಲಾರಕ್ಕೆ ಕೃಷ್ಣಾ ನೀರು ತರುತ್ತೇವೆ: ನಿಖಿಲ್‌ ಕುಮಾರಸ್ವಾಮಿ

KannadaprabhaNewsNetwork |  
Published : Oct 03, 2026, 01:15 AM IST
೨ಕೆಎಲ್‌ಆರ್-2ಬಂಗಾರಪೇಟೆ, ಕೋಲಾರ, ಮಾಲೂರು, ಶ್ರೀನಿವಾಸ ಪುರ ಸೇರಿದಂತೆ ವಿವಿಧ ಭಾಗಗಳಿಂದ ನೂರಾರು ರೈತರು ಬಂಗಾರಪೇಟೆ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ರೈತರ ಸಂವಾದದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡುತ್ತಿರುವುದು. | Kannada Prabha

ಸಾರಾಂಶ

ನಿಖಿಲ್ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಗುಡುಗುತ್ತಿದ್ದಾನೆ ಅಂತ ನನಗೆ ಹಳ್ಳ ತೋಡಲು ಪ್ರತಿಕ್ಷಣ ಕಾಯುತ್ತಿದ್ದಾರೆ. ನನ್ನ ಲೋಪ ಏನಾದರೂ ಇದ್ದಿದ್ದರೆ, ನನ್ನ ಬಾಯಿ ಮುಚ್ಚಿಸಿಬಿಡುತ್ತಿದ್ದರು.

ಬಂಗಾರಪೇಟೆ ಎಪಿಎಂಸಿ ಆವರಣದಲ್ಲಿ ರೈತರೊಂದಿಗೆ ಸಂವಾದ ಕಾರ್ಯಕ್ರಮ । ಜೆಡಿಎಸ್‌ ರೈತ ಸ್ವಾಭಿಮಾನ ಯಾತ್ರೆ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ರೈತ ಸ್ವಾಭಿಮಾನ ಯಾತ್ರೆಯ ಅಂಗವಾಗಿ ಬಂಗಾರಪೇಟೆ ಎಪಿಎಂಸಿ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಕೋಲಾರ ಜಿಲ್ಲೆಯ ಬಂಗಾರಪೇಟೆ, ಕೋಲಾರ, ಮಾಲೂರು, ಶ್ರೀನಿವಾಸ ಪುರ ಸೇರಿದಂತೆ ವಿವಿಧ ಭಾಗಗಳಿಂದ ನೂರಾರು ರೈತರು ಸಂವಾದದಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

ಕಾರ್ಯಕ್ರಮದಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಅವರು, ನಿಖಿಲ್ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಗುಡುಗುತ್ತಿದ್ದಾನೆ ಅಂತ ನನಗೆ ಹಳ್ಳ ತೋಡಲು ಪ್ರತಿಕ್ಷಣ ಕಾಯುತ್ತಿದ್ದಾರೆ. ನನ್ನ ಲೋಪ ಏನಾದರೂ ಇದ್ದಿದ್ದರೆ, ನನ್ನ ಬಾಯಿ ಮುಚ್ಚಿಸಿಬಿಡುತ್ತಿದ್ದರು. ಹಾಗಾಗಿ ಧೈರ್ಯವಾಗಿ ರೈತರ ಪರವಾಗಿ ನಿಂತು ಹೋರಾಟ ಮಾಡಲು ಬಂದಿದ್ದೇನೆ ಎಂದು ಗುಡುಗಿದರು.

ನನಗೆ ನಿಮ್ಮ ಪರವಾಗಿ ವಿಧಾನಸೌಧಕ್ಕೆ ಹೋಗಿ ಮಾತನಾಡಲು ಇನ್ನೂ ಅವಕಾಶ ಸಿಕ್ಕಿಲ್ಲ, ಆದರೆ ಈ ಪ್ರಜಾಪ್ರಭುತ್ವದಲ್ಲಿ ಬೀದಿಯಲ್ಲಿ ನಿಂತು ಹೋರಾಟ ಮಾಡಲು ಅವಕಾಶವಿದೆ. ನಾನು ಸತತವಾಗಿ ಚುನಾವಣೆ ಸೋತಿರಬಹುದು, ಆದರೆ ಎದೆಗುಂದಿಲ್ಲ ಎಂದು ಹೇಳಿದರು.

ರೈತರ ಜೀವನ ಕತ್ತಲೆಯಾಗಿದೆ:

ರೈತರ ಸಂಕಷ್ಟದ ಬಗ್ಗೆ ಮಾತನಾಡಿದ ಅವರು, ಬೋರ್‌ವೆಲ್ ಕೊರೆಸಲು ೨ ಲಕ್ಷ ರು. ಖರ್ಚು ಮಾಡಿ ೧೬೦೦ ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ಬೆಳೆಗೆ ಕನಿಷ್ಠ ೮ ಗಂಟೆಯಾದರೂ ೩ ಫೇಸ್ ಕರೆಂಟ್ ಕೊಡಬೇಕು. ಲೋಡ್ ಶೆಡ್ಡಿಂಗ್‌ನಿಂದ ರೈತ ಕಂಗಾಲಾಗಿದ್ದಾನೆ. ಅದೆಲ್ಲೋ ಗೃಹಜ್ಯೋತಿ, ಗೃಹಲಕ್ಷ್ಮೀ ಅಂತೀರಾ, ಎಲ್ಲಿದೆ ಜ್ಯೋತಿ? ರೈತರ ಜೀವನವೇ ಕತ್ತಲೆಯಾಗಿದೆ. ಬರೀ ಭಾಷಣದಿಂದ ಅಭಿವೃದ್ಧಿ ಆಗುವುದಿಲ್ಲ ಎಂದು ಕಿಡಿಕಾರಿದರು.

ಕೋಲಾರಕ್ಕೆ ಕೃಷ್ಣಾ ನೀರು ತರಲು ಅವಕಾಶ ಇದೆ:

ಕೋಲಾರ ಜಿಲ್ಲೆ ನೀರಿಲ್ಲದೆ ಬರಡಾಗುತ್ತಿದೆ ಎಂಬ ರೈತರ ಅಳಲಿಗೆ ಪ್ರತಿಕ್ರಿಯಿಸಿದ ನಿಖಿಲ್ ಅವರು, ಕೋಲಾರ ಜಿಲ್ಲೆಗೆ ಕೃಷ್ಣಾ ನದಿಯಿಂದ ನೀರು ತರುವುದಕ್ಕೆ ಅವಕಾಶ ಇದೆ. ಈಗಾಗಲೇ ಕುಮಾರಣ್ಣನವರು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಈ ಬಗ್ಗೆ ಮನವಿ ನೀಡಿ ಗಮನ ಸೆಳೆದಿದ್ದಾರೆ. ನೂರಕ್ಕೆ ನೂರು ಇದಕ್ಕೆ ಪರಿಹಾರ ಸಿಕ್ಕೇ ಸಿಗುತ್ತದೆ ಎಂದು ಭರವಸೆ ನೀಡಿದರು.

ಕೆ.ಸಿ. ವ್ಯಾಲಿ ನೀರು ಬೆಳೆಗೂ ಯೋಗ್ಯವಲ್ಲ:

ಕೆ.ಸಿ. ವ್ಯಾಲಿ ಯೋಜನೆಯ ನೀರು ಕನಿಷ್ಠ ಮೂರನೇ ಹಂತದ ಶುದ್ಧೀಕರಣವಾಗಬೇಕು, ಅದು ಆಗಿಲ್ಲ. ಇದರಿಂದ ಬೆಳೆದ ಬೆಳೆ ತಿನ್ನಲು ಯೋಗ್ಯವಿಲ್ಲ, ಯಾರೂ ಖರೀದಿಸುವುದೂ ಇಲ್ಲ. ಇದು ಕೇವಲ ಬೆಂಗಳೂರಿನ ಕೊಳಚೆ ನೀರು, ಇದರಿಂದ ನಮ್ಮ ಅಂತರ್ಜಲ ಮಲಿನವಾಗುತ್ತಿದೆ. ಕೋಲಾರದ ಕೆರೆಗಳಿಗೆ ಕೃಷ್ಣೆಯ ಶುದ್ಧ ನೀರು ಹರಿಸಿದರೆ ಮಾತ್ರ ಜಿಲ್ಲೆ ಉಳಿಯುತ್ತದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಕ್ಕೆ ರೈತರ ನೋವು ಕೇಳುವ ಸಮಯವಿಲ್ಲ:

ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತವರು ಈ ವರ್ಷ ಬಿತ್ತನೆ ಮಾಡಬೇಡಿ ಎಂದು ಹೇಳುವುದು ಎಷ್ಟು ಸಮಂಜಸ? ವಿಶೇಷ ಅಧಿವೇಶನ ಕರೆದು ಎಕರೆಗೆ ೨೫೦೦ ರು. ಬರ ಪರಿಹಾರ ಎಂದು ಘೋಷಣೆ ಮಾಡಿದ್ದಾರೆ, ಅದು ಇನ್ನೂ ರೈತರ ಕೈ ಸೇರಿಲ್ಲ. ಕನಿಷ್ಠ ಎಕರೆಗೆ ೨೫ ಸಾವಿರ ರು. ಪರಿಹಾರ ಕೊಡಬೇಕು ಎಂಬುದು ರೈತರ ಒತ್ತಾಯವಾಗಿದೆ. ಕೃಷಿಗೆ ೮ ಗಂಟೆ ಕರೆಂಟ್ ಇಲ್ಲ, ಬೆಳೆಗೆ ಬೆಂಬಲ ಬೆಲೆ ಇಲ್ಲ ಎಂದರು.

ಈ ಸರ್ಕಾರಕ್ಕೆ ರೈತರ ನೋವು ಕೇಳುವ ಸಮಯವಿಲ್ಲ. ಆದರೆ ಜನತಾದಳ ಸದಾಕಾಲವೂ ರೈತರ ಅಭ್ಯುದಯಕ್ಕೆ ಬದ್ಧವಾಗಿದೆ. ಜೆಡಿಎಸ್ ಪಕ್ಷ ಮತ್ತು ನಾನು ನಿಮ್ಮ ಜೊತೆಗಿದ್ದೇನೆ. ನಿಮ್ಮ ಪ್ರತಿಯೊಂದು ಬೇಡಿಕೆಯನ್ನು ವಿಧಾನಸೌಧದ ಮೆಟ್ಟಿಲೇರಿ ಪ್ರಶ್ನಿಸುತ್ತೇನೆ. ರೈತನ ಸ್ವಾಭಿಮಾನವೇ ನಮ್ಮ ಸ್ವಾಭಿಮಾನ ಎಂದು ಭರವಸೆ ನೀಡಿದರು.

ಕೋರ್ ಕಮಿಟಿ ಅಧ್ಯಕ್ಷ ಜೆ.ಕೆ. ಕೃಷ್ಣಾರೆಡ್ಡಿ, ಸಂಸದ ಎಂ.ಮಲ್ಲೇಶ್ ಬಾಬು, ಶಾಸಕರಾದ ವೆಂಕಟಶಿವಾರೆಡ್ಡಿ, ಸಮೃದ್ಧಿ ಮಂಜುನಾಥ್, ಮಾಜಿ ವಿಧಾನ ಪರಿಷತ್ ಸದಸ್ಯ ಚೌಡರೆಡ್ಡಿ, ಮುಖಂಡರಾದ ರಾಮೇಗೌಡ, ಹೂಡಿ ವಿಜಯಕುಮಾರ್, ಸಿ.ಎಂ.ಆರ್ ಶ್ರೀನಾಥ್, ವಕ್ಕಲೇರಿ ರಾಮು, ನಾಗರಾಜು, ನಟರಾಜ್, ಗಾಯತ್ರಿ ಮುತ್ತಪ್ಪ ಇದ್ದರು.

ರೈತರು ಮುಂದಿಟ್ಟ ಪ್ರಮುಖ ಬೇಡಿಕೆಗಳು:ಕಳಪೆ ಬೀಜ: ದುಬಾರಿ ಬೆಲೆಗೆ ಖರೀದಿಸಿದ ಬಿತ್ತನೆ ಬೀಜದಲ್ಲಿ ಶೇ. ೩೦ರಷ್ಟು ಮೊಳಕೆಯೂ ಬರುತ್ತಿಲ್ಲ, ಎಕರೆಗಟ್ಟಲೆ ಬೆಳೆ ಹಾಳಾಗಿ ಲಕ್ಷಾಂತರ ನಷ್ಟವಾಗಿದೆ ಎಂದು ರೈತ ಮುನಿಯಪ್ಪ ಅವರು ಹೇಳಿದರು.ಸಂಸ್ಕರಣಾ ಘಟಕ: ವರ್ಷಕ್ಕೆ ಸುಮಾರು ೧೦ ಲಕ್ಷ ಟನ್ ಮಾವು ಬೆಳೆಯುವ ಕೋಲಾರ ಜಿಲ್ಲೆಯಲ್ಲಿ ಒಂದೇ ಒಂದು ಮಾವು ಸಂಸ್ಕರಣಾ ಕಾರ್ಖಾನೆ ಇಲ್ಲ, ಕೋಲ್ಡ್ ಸ್ಟೋರೇಜ್ ಇಲ್ಲ. ಸಪಾಲ್ ಮಾರುಕಟ್ಟೆ ನಿರ್ಮಿಸಬೇಕು. ಏಷ್ಯಾದಲ್ಲೇ ದೊಡ್ಡದಾದ ಕೋಲಾರ ಟೊಮೇಟೊ ಮಾರುಕಟ್ಟೆಯನ್ನು ೧೦೦ ಎಕರೆಯಲ್ಲಿ ಹೈಟೆಕ್ ಮಾರುಕಟ್ಟೆಯಾಗಿ ಅಭಿವೃದ್ಧಿಪಡಿಸಬೇಕು ಎಂದು ರೈತ ನವೀನ್ ಮನವಿ ಮಾಡಿದರು.ರೇಷ್ಮೆ ಬೆಳೆ: ರಾಜ್ಯದಲ್ಲೇ ರೇಷ್ಮೆ ಬೆಳೆಯಲ್ಲಿ ನಂ. ೧ ಆಗಿರುವ ಕೋಲಾರಕ್ಕೆ ಸೌಲಭ್ಯಗಳಿಲ್ಲ. ಮಧ್ಯವರ್ತಿಗಳಿಲ್ಲದೆ ನೇರ ಪ್ರೋತ್ಸಾಹಧನ ನೀಡಬೇಕು ಮತ್ತು ಗುಣಮಟ್ಟ ಪರೀಕ್ಷೆಗೆ ಜಿಲ್ಲಾ ಮಟ್ಟದಲ್ಲಿ ಪ್ರಯೋಗಾಲಯ ಸ್ಥಾಪಿಸಬೇಕು ಎಂದು ರೈತ ಮೂರ್ತಿ ಒತ್ತಾಯಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಂಧೀಜಿ ಬಗ್ಗೆ ಯುವಜನ ತಿಳಿದುಕೊಳ್ಳಬೇಕಿದೆ: ಕೆ. ಷಡಕ್ಷರಿ
ಸುಸ್ಥಿರ ಅಭಿವೃದ್ಧಿಗೆ ಗಾಂಧಿ ತತ್ವಾದರ್ಶಗಳು ಪೂರಕ