ಎತ್ತಿನಹೊಳೆಯಿಂದ ಕೆಆರ್‌ಎಸ್‌ಗೆ ಪ್ರತಿದಿನ ನೀರು!

Published : Oct 02, 2026, 01:07 PM IST
Yettinahole KRS

ಸಾರಾಂಶ

ಎತ್ತಿನಹೊಳೆ ನೀರನ್ನು ಕಳೆದ ಒಂದು ವಾರದಿಂದ ಕನ್ನಂಬಾಡಿ (ಕೆಆರ್‌ಎಸ್‌) ಅಣೆಕಟ್ಟಿಗೆ ಹರಿಸಲಾಗುತ್ತಿದೆ!ಆಶ್ಚರ್ಯ ಎನಿಸಿದರೂ ಇದು ಸತ್ಯ. ಹೇಮಾವತಿ ನದಿಯು ಕಾವೇರಿ ನದಿಯ ಉಪನದಿ ಆಗಿದೆ. ಕಾವೇರಿ ನದಿ ನೀರಿನ ಬಗ್ಗೆ ಅಂತರ್‌ರಾಜ್ಯ ನದಿ ನೀರಿನ ವ್ಯಾಜ್ಯ ಇದೆ.

ವಿದ್ಯಾ ಕಾಂತರಾಜ್

ಸಕಲೇಶಪುರ : ಎತ್ತಿನಹೊಳೆ ನೀರನ್ನು ಕಳೆದ ಒಂದು ವಾರದಿಂದ ಕನ್ನಂಬಾಡಿ (ಕೆಆರ್‌ಎಸ್‌) ಅಣೆಕಟ್ಟಿಗೆ ಹರಿಸಲಾಗುತ್ತಿದೆ!

ಆಶ್ಚರ್ಯ ಎನಿಸಿದರೂ ಇದು ಸತ್ಯ. ಹೇಮಾವತಿ ನದಿಯು ಕಾವೇರಿ ನದಿಯ ಉಪನದಿ ಆಗಿದೆ. ಕಾವೇರಿ ನದಿ ನೀರಿನ ಬಗ್ಗೆ ಅಂತರ್‌ರಾಜ್ಯ ನದಿ ನೀರಿನ ವ್ಯಾಜ್ಯ ಇದೆ. ಹಾಗಾಗಿ ಹೇಮಾವತಿ ನದಿ ನೀರಿಗೆ ಸ್ವಾಭಾವಿಕವಾಗಿ ಹರಿಯುವ ನೀರಿನ ಮೂಲಗಳನ್ನು ಹೊರತುಪಡಿಸಿ ಕೃತಕವಾಗಿ ಯಾವುದೇ ನದಿಯ ನೀರನ್ನು ಹರಿಸುವಂತಿಲ್ಲ. ಆದರೆ, ಪ್ರಸಕ್ತ ವರ್ಷ ಮಳೆ ಕಡಿಮೆ ಇದೆ. ಇತ್ತ ಕಾವೇರಿ ನೀರಾವರಿ ನಿಯಂತ್ರಣ ಪ್ರಾಧಿಕಾರವು ಕೆಆರ್‌ಎಸ್‌ ಅಣೆಕಟ್ಟೆಯಲ್ಲಿ ಇದ್ದ ನೀರನ್ನು ತಮಿಳುನಾಡಿಗೆ ಹರಿಸಲು ನಿರ್ದೇಶನ ನೀಡಿದೆ. ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಕಾಯ್ದುಕೊಳ್ಳುವ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ನಾಗರ ಗ್ರಾಮದ ವಿತರಣ ಘಟಕದಿಂದ ಎತ್ತಿನಹೊಳೆ ನೀರನ್ನು ಹೇಮಾವತಿ ನದಿಗೆ ಹರಿಸಲಾಗುತ್ತಿದೆ. ಅಲ್ಲಿಂದ ಗೊರೂರು ಅಣೆಕಟ್ಟೆ ಮೂಲಕ ಕೆಆರ್‌ಎಸ್‌ಗೆ ಕದ್ದುಮುಚ್ಚಿ ಎತ್ತಿನಹೊಳೆ ನೀರನ್ನು ಹರಿಸಲಾಗುತ್ತಿದೆ.

ಸೆಪ್ಟಂಬರ್‌ ತಿಂಗಳ ಮಧ್ಯಭಾಗದಿಂದ ಎತ್ತಿನಹೊಳೆ ನೀರನ್ನು ಹೇಮಾವತಿಗೆ ಹರಿಬಿಡಲಾಗುತ್ತಿದೆ

ಸೆಪ್ಟಂಬರ್‌ ತಿಂಗಳ ಮಧ್ಯಭಾಗದಿಂದ ಎತ್ತಿನಹೊಳೆ ನೀರನ್ನು ಹೇಮಾವತಿಗೆ ಹರಿಬಿಡಲಾಗುತ್ತಿದೆ. ಮೇ ೧೫ರಿಂದ ಅಕ್ಟೋಬರ್‌ ಅಂತ್ಯದವರೆಗಿನ ಆರು ತಿಂಗಳು ಎತ್ತಿನಹೊಳೆಯ 8 ಚೆಕ್‌ಡ್ಯಾಮ್‌ಗಳಿಂದ ನೀರನ್ನು ಮೇಲೆತ್ತಿ ಬೇಲೂರು-ಅರಸೀಕೆರೆ ಮೂಲಕ ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆ ಸೇರಿದಂತೆ ಬರಪೀಡಿತ ಏಳು ಜಿಲ್ಲೆಗಳಿಗೆ ಹರಿಸುವ ಯೋಜನೆ ಇದೆ. ಅರಸೀಕೆರೆ ಹಾಗೂ ತುಮಕೂರು ಜಿಲ್ಲೆಯಲ್ಲಿ ಯೋಜನೆಯಂತೆ ಕಾಮಗಾರಿ ಪೂರ್ಣಗೊಂಡಿಲ್ಲ. ಯೋಜನೆ ಪ್ರದೇಶದ ೩೨ನೇ ಕಿ.ಮೀ.ನಲ್ಲಿರುವ ಬೆಟ್ಟದಲೂರು ಸಮೀಪ ಕಾಗೇಹಳ್ಳಕ್ಕೆ ಹರಿಸಿ ಮಾರಿಕಣಿವೆ ಮೂಲಕ ಎತ್ತಿನಹೊಳೆ ನೀರು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ವಾಣಿವಿಲಾಸ ಸಾಗರ ಸೇರುತ್ತಿದೆ.

ಈ ಮಾರ್ಗದ ಬಹುತೇಕ ಕೆರೆಕಟ್ಟೆಗಳು ಈಗಾಗಲೇ ತುಂಬಿವೆ. ಹಾಗಾಗಿ ಎತ್ತಿನಹೊಳೆ ನೀರನ್ನು ಹೇಮಾವತಿ ನದಿಗೆ ಹರಿಸಿ ಕೆಆರ್‌ಎಸ್‌ ತುಂಬಿಸಿ ಬೇಸಿಗೆಗೆ ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಭದ್ರತೆ ಮಾಡಿಕೊಳ್ಳಲಾಗುತ್ತಿದೆ.

೨೦೨೪ರಲ್ಲಿ ಎತ್ತಿನಹೊಳೆ ಯೋಜನೆ ಉದ್ಘಾಟನೆಗೊಂಡಿತ್ತು. ಆ ವರ್ಷ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಮೆಲೆತ್ತಲಾಗಲಿಲ್ಲ. ೨೦೨೫ರಲ್ಲಿ ೪.೫ ಟಿಎಂಸಿ ನೀರನ್ನು ಮೇಲೆತ್ತಲಾಗಿದೆ. ಪ್ರಸಕ್ತ ವರ್ಷ ಸೆಪ್ಟಂಬರ್‌ ಅಂತ್ಯದವರೆಗೆ ೧.೫೭ ಟಿ.ಎಂ.ಸಿ ನೀರನ್ನು ಮಾತ್ರ ಮೇಲೆತ್ತಲಾಗಿದೆ. ಇದರಲ್ಲಿ ಸುಮಾರು ೫೭ ಕ್ಯುಸೆಕ್‌ ನೀರನ್ನು ಹೇಮಾವತಿ ನದಿಗೆ ಬೀಡಲಾಗಿದೆ ಎಂಬುದು ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎತ್ತಿನಹೊಳೆಯಿಂದ ಮೇಲೆತ್ತಿದ ಸಂಪೂರ್ಣನೀರನ್ನು ಕಾಗೆಹಳ್ಳಕ್ಕೆ ಬಿಟ್ಟರೆ ರೈತರ ಜಮೀನು ಜಲಾವೃತವಾಗಲಿದೆ. ಆ ಕಾರಣದಿಂದ ಅಲ್ಪಪ್ರಮಾಣದ ನೀರನ್ನು ಹೇಮಾವತಿ ನದಿಗೆ ಹರಿಸಲಾಗುತ್ತಿದೆ.

-ಗೋಪಾಲ್, ಎಇಇ ವಿಶ್ವೇಶ್ವರಯ್ಯ ಜಲನಿಗಮ ನಿಯಮಿತ ಸಕಲೇಶಪುರ

PREV
Stay updated with all news from Hassan district (ಹಾಸನ ಸುದ್ದಿಗಳು) — including local governance, civic developments, agriculture and economy, heritage & tourism highlights (Belur, Halebidu, Shravanabelagola), community events, environment, and district-level news only on Kannada Prabha.
Read more Articles on

Recommended Stories

ಶಿವಶರಣೆಯರ ಸಿದ್ಧಾಂತ ಯುವಪೀಳಿಗೆ ಬದುಕಿಗೆ ಮೆಟ್ಟಿಲು: ಸವಿತಾ ಮೂಡ್ನಾಕೂಡು
ಬೆಳಗೋಡು ಜಮೀನು ವಿವಾದ ಹಿನ್ನೆಲೆ ಸರ್ವೆ ಅಧಿಕಾರಿಗಳು ವಾಪಸ್