;Resize=(412,232))
ಹೊಳೇನರಸೀಪುರ : ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಪತ್ನಿ ಚನ್ನಮ್ಮ ಅವರ ಅಂತ್ಯಕ್ರಿಯೆ ಸೋಮವಾರ ಸಂಜೆ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಕ್ಯಾತನಹಳ್ಳಿ ಗ್ರಾಮದ ಸಮೀಪವಿರುವ ಮಾವಿನಕೆರೆ ಶ್ರೀ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಶೋಕಸಾಗರದ ನಡುವೆ ನೆರವೇರಿತು.
ಕಿರಿಯ ಪುತ್ರ, ವೈದ್ಯರಾಗಿರುವ ರಮೇಶ್ ಅವರು ಹಿಂದೂ-ಒಕ್ಕಲಿಗ ಸಂಪ್ರದಾಯದಂತೆ ತಾಯಿಯ ಅಂತಿ ವಿಧಿ-ವಿಧಾನಗಳನ್ನು ನೆರವೇರಿಸಿದರು. ಈ ವೇಳೆ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್, ಪುತ್ರ ಎಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ, ಚುಂಚಶ್ರೀ ನಿರ್ಮಲಾನಂದ ಸ್ವಾಮೀಜಿ ಸೇರಿ ಗಣ್ಯರು ಹಾಜರಿದ್ದು, ಮೃತದೇಹದ ಅಂತಿಮ ದರ್ಶನ ಪಡೆದರು. ಮೃತರ ಗೌರವಾರ್ಥ ಹಾಸನ ತಾಲೂಕಿನ ಎಲ್ಲಾ ಶಾಲೆ-ಕಾಲೇಜುಗಳಿಗೆ ಸೋಮವಾರ ರಜೆ ಘೋಷಿಸಲಾಗಿತ್ತು.
ಬೆಂಗಳೂರಿನ ಜೆಪಿ ನಗರದ ಶ್ರೀ ತಿರುಮಲಗಿರಿ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಕಣ್ಣನ್ ಸ್ವಾಮೀಜಿ ನೇತೃತ್ವದಲ್ಲಿ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳು ನಡೆದವು. ಕಣ್ಣನ್ ಸ್ವಾಮೀಜಿ ಜೊತೆ 15ಕ್ಕೂ ಹೆಚ್ಚು ಅರ್ಚಕರು ಅಂತ್ಯಸಂಸ್ಕಾರದ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ವಾಸ್ತು ಪ್ರಕಾರ ಈಶಾನ್ಯ ದಿಕ್ಕನ್ನು ಖಾಲಿ ಇರಿಸಿಕೊಂಡು ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಇದಕ್ಕೂ ಮೊದಲು, ಬೆಂಗಳೂರಿನಿಂದ ಭಾನುವಾರ ಸಂಜೆ ಹೊರಟ ಮೆರವಣಿಗೆ ಸುಮಾರು 16 ಗಂಟೆಗಳ ಪ್ರಯಾಣದ ನಂತರ ಸೋಮವಾರ ಬೆಳಗಿನ ಜಾವ 4.30ರ ವೇಳೆಗೆ ಹೊಳೇನರಸೀಪುರಕ್ಕೆ ಆಗಮಿಸಿತು. ಬಳಿಕ, ಪಾರ್ಥಿವ ಶರೀರವನ್ನು ಹೊಳೆನರಸೀಪುರದಲ್ಲಿರುವ ಶಾಸಕ ಎಚ್.ಡಿ.ರೇವಣ್ಣ ಅವರ ಮನೆಗೆ ಕರೆ ತರಲಾಯಿತು. ಈ ವೇಳೆ, ಪಾರ್ಥಿವ ಶರೀರಕ್ಕೆ ಸೊಸೆ ಭವಾನಿಯವರು ದೀಪ ಬೆಳಗಿ, ನಮನ ಸಲ್ಲಿಸಿದರು.
ದೇವೇಗೌಡರು ಸೇರಿ ಕುಟುಂಬಸ್ಥರು ಒಕ್ಕಲಿಗ ಸಂಪ್ರದಾಯದಂತೆ ಚನ್ನಮ್ಮ ಅವರಿಗೆ ಪೂಜೆ ಸಲ್ಲಿಸಿದರು. ಈ ವೇಳೆ, ದೇವೇಗೌಡರಿಂದ ಪುನಃ ಮಾಂಗಲ್ಯ ಧಾರಣೆ ಮಾಡಿಸಲಾಯಿತು. ದೇವೇಗೌಡರು ಪತ್ನಿಯ ಬಾಯಿಗೆ ಅಕ್ಕಿಕಾಳು ಹಾಕಿ ಕಣ್ಣೀರಿಟ್ಟರು. ಹೊಳೆನರಸೀಪುರದ ಲಕ್ಷ್ಮಿ ನರಸಿಂಹ, ಮಾವಿನಕೆರೆ ರಂಗನಾಥ, ಹರದನಹಳ್ಳಿಯ ಈಶ್ವರ ದೇವಸ್ಥಾನಗಳ ಅಭಿಷೇಕದ ನೀರನ್ನು ಮೃತದೇಹಕ್ಕೆ ಪ್ರೋಕ್ಷಣೆ ಮಾಡಲಾಯಿತು.
ಬಳಿಕ, ಮನೆ ಮುಂಭಾಗದ ಆವರಣಕ್ಕೆ ಮೃತದೇಹವನ್ನು ಸಾಗಿಸಿ, ಬೆಳಗ್ಗೆ 10.30ರವರೆಗೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ನಂತರ, ಕೆಲ ಧಾರ್ಮಿಕ ವಿಧಿ-ವಿಧಾನಗಳ ಬಳಿಕ, ಮಧ್ಯಾಹ್ನ 12ಕ್ಕೆ ಪಾರ್ಥಿವ ಶರೀರದ ಮೆರವಣಿಗೆ ಆರಂಭವಾಯಿತು. ರೇವಣ್ಣ ಅವರ ಮನೆಯಿಂದ ಶ್ರೀ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಅಂತ್ಯಸಂಸ್ಕಾರಕ್ಕೆ ನಿಗದಿ ಮಾಡಿದ್ದ ಜಾಗದವರೆಗೂ ಮಲ್ಲಿಗೆ ಹೂ, ತುಳಸಿ ಮಾಲೆಯಿಂದ ಅಲಂಕರಿಸಲಾಗಿದ್ದ ಮುಕ್ತಿವಾಹನದಲ್ಲಿ ಚನ್ನಮ್ಮ ಅವರ ಪಾರ್ಥಿವ ಶರೀರದ ಮೆರವಣಿಗೆ ನಡೆಸಲಾಯಿತು.
ಮೃತದೇಹವನ್ನು ಹರದನಹಳ್ಳಿ ಗ್ರಾಮದ ಸಮೀಪವಿರುವ ಕ್ಯಾತನಹಳ್ಳಿ ಗ್ರಾಮದ ಬೆಟ್ಟದ ರಂಗನಾಥಸ್ವಾಮಿ ತಪ್ಪಲಿನ ಅಂತ್ಯಕ್ರಿಯೆ ನಡೆಯುವ ಸ್ಥಳಕ್ಕೆ ಕರೆತರಲಾಯಿತು. ಈ ವೇಳೆ, ಮೃತರ ಗೌರವಾರ್ಥ ಕುಶಾಲ ತೋಪುಗಳನ್ನು ಹಾರಿಸಿ, ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ಬಳಿಕ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮೃತದೇಹಕ್ಕೆ ಅಂತಿಮ ನಮನ ಸಲ್ಲಿಸಿ, ಮೃತದೇಹದ ಮೇಲೆ ಹೊದಿಸಲಾಗಿದ್ದ ತ್ರಿವರ್ಣ ಧ್ವಜವನ್ನು ದೇವೇಗೌಡರಿಗೆ ಹಸ್ತಾಂತರಿಸಿದರು. ಬಳಿಕ, ಚನ್ನಮ್ಮ ಅವರ ಕಿರಿಯ ಪುತ್ರ ರಮೇಶ್ ಅವರು ಹಿಂದೂ-ಒಕ್ಕಲಿಗ ಸಂಪ್ರದಾಯದಂತೆ ತಾಯಿಯ ಅಂತಿಮ ವಿಧಿ-ವಿಧಾನಗಳನ್ನು ನೆರವೇರಿಸಿದರು.
ಈ ವೇಳೆ, ಕೇಂದ್ರ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್, ಪುತ್ರ ಎಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ, ಚುಂಚಶ್ರೀ ನಿರ್ಮಲಾನಂದ ಸ್ವಾಮೀಜಿ ಸೇರಿ ಗಣ್ಯರು ಹಾಜರಿದ್ದು, ಮೃತದೇಹದ ಅಂತಿಮ ದರ್ಶನ ಪಡೆದರು. ಅಂತ್ಯಕ್ರಿಯೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಸ್ಮಾರಕ ನಿರ್ಮಾಣಕ್ಕೆ ನಿರ್ಧಾರ। ಡಾ। ಮಂಜುನಾಥ್
ಅಂತ್ಯಸಂಸ್ಕಾರ ನಡೆದ ಕ್ಯಾತನಹಳ್ಳಿ ಗ್ರಾಮದ ಬೆಟ್ಟದ ರಂಗನಾಥಸ್ವಾಮಿ ತಪ್ಪಲಲ್ಲಿ ದೇವೇಗೌಡರ ಕುಟುಂಬದ ಒಡೆತನದ 32 ಎಕರೆ ವಿಶಾಲವಾದ ಕೃಷಿ ಜಮೀನಿದೆ. ಮಾವಿನಕೆರೆ ರಂಗನಾಥಸ್ವಾಮಿ ಬಗ್ಗೆ ಚೆನ್ನಮ್ಮನವರಿಗೆ ಅಪಾರವಾದ ಭಕ್ತಿ ಇತ್ತು. ಇಡೀ ಕುಟುಂಬದ ಒಳಿತಿಗಾಗಿ ಹಾಗೂ ರೈತರ ಏಳಿಗೆಗಾಗಿ ನಿರಂತರವಾಗಿ ಅವರು ಪ್ರಾರ್ಥಿಸುತ್ತಿದ್ದ ದೇವರು ರಂಗನಾಥ, ಹೀಗಾಗಿ, ದೈವ ಸನ್ನಿಧಿಯ, ನೈಸರ್ಗಿಕ ವಾತಾವರಣದ ಈ ತಪ್ಪಲಿನಲ್ಲಿ ಅವರಿಗೆ ಸ್ಮಾರಕ ನಿರ್ಮಾಣ ಮಾಡುತ್ತೇವೆ ಎಂದು ಅವರ ಅಳಿಯ, ಸಂಸದ ಡಾ। ಸಿ.ಎನ್. ಮಂಜುನಾಥ್ ತಿಳಿಸಿದ್ದಾರೆ.
25ಸಾವಿರಕ್ಕೂ ಅಧಿಕ ಜನರಿಗೆ ಊಟದ ವ್ಯವಸ್ಥೆ
ಅಗಲಿದ ಚನ್ನಮ್ಮ ಅವರ ಮೃತದೇಹದ ಅಂತಿಮ ದರ್ಶನ ಪಡೆಯಲು ಅಪಾರ ಸಂಖ್ಯೆಯ ಜನ ಆಗಮಿಸಿದ್ದರು. ಅಂತ್ಯಕ್ರಿಯೆ ವೇಳೆ ಭಾಗವಹಿಸುವ ಜನರಿಗಾಗಿ ಸುಮಾರು 25ಸಾವಿರಕ್ಕೂ ಅಧಿಕ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ಶಾಸ್ತ್ರೋಕ್ತ ಅಂತ್ಯಕ್ರಿಯೆ
- ಬೆಂಗಳೂರಿನಿಂದ ಮಾವಿನಕರೆವರೆಗೆ 16 ತಾಸು ಪ್ರಯಾಣಿಸಿ ಪಾರ್ಥಿವ ಶರೀರ ಆಗಮನ
- ಶರೀರಕ್ಕೆ ಒಕ್ಕಲಿಗ ಸಂಪ್ರದಾಯದಂತೆ ಪೂಜೆ. ದೇವೇಗೌಡರಿಂದ ಪುನಃ ಮಾಂಗಲ್ಯಧಾರಣೆ
- ಮೃತದೇಹದ ಮೇಲೆ ಹೊದಿಸಿದ್ದ ತ್ರಿವರ್ಣಧ್ವಜವನ್ನು ಗೌಡರಿಗೆ ಹಸ್ತಾಂತರಿಸಿದ ಸಿಎಂ ಡಿಕೆಶಿ
- ಮಾವಿನಕೆರೆ ಶ್ರೀ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಚನ್ನಮ್ಮನವರ ಅಂತ್ಯಸಂಸ್ಕಾರ
- ಒಕ್ಕಲಿಗ ಸಂಪ್ರದಾಯದಂತೆ ಕಿರಿಯ ಪುತ್ರರಾದ ರಮೇಶ್‌ರಿಂದ ಅಂತಿಮ ವಿಧಿವಿಧಾನ
- ಕಣ್ಣನ್ ಸ್ವಾಮೀಜಿ ಜೊತೆ 15ಕ್ಕೂ ಹೆಚ್ಚು ಅರ್ಚಕರ ಮಾರ್ಗದರ್ಶನದಲ್ಲಿ ವಿಧಿಗಳು