ಹಿರಿಯ ನಾಗರಿಕರು ನಮ್ಮ ಸಮಾಜದ ಅನುಭವದ ಕಣಜಗಳು ಮತ್ತು ಮಾರ್ಗದರ್ಶಕರು, ಅವರ ಪರಿಶ್ರಮ, ತ್ಯಾಗ ಮತ್ತು ಜ್ಞಾನದ ಮೇಲೆ ಇಂದಿನ ಸಮಾಜ ನಿರ್ಮಾಣವಾಗಿದ್ದು, ಹಿರಿಯರನ್ನು ಗೌರವಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದಾಕ್ಷಾಯಿಣಿ ಜಿ.ಕೆ ಅವರು ತಿಳಿಸಿದ್ದಾರೆ. ಮಕ್ಕಳಿಂದ ಹಿರಿಯ ನಾಗರಿಕರಿಗೆ ಜೀವನ ನಿರ್ವಹಣೆ ಪಡೆಯುವ ಹಕ್ಕು ಅಂದರೆ ಸ್ವಂತ ಆದಾಯ ಅಥವಾ ಆಸ್ತಿಯಿಂದ ಜೀವನ ನಡೆಸಲು ಸಾಧ್ಯವಾಗದ ಹಿರಿಯ ನಾಗರಿಕರು ತಮ್ಮ ಮಕ್ಕಳಿಂದ ನಿರ್ವಹಣೆ ಕೇಳಬಹುದು ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಹಿರಿಯ ನಾಗರಿಕರು ನಮ್ಮ ಸಮಾಜದ ಅನುಭವದ ಕಣಜಗಳು ಮತ್ತು ಮಾರ್ಗದರ್ಶಕರು, ಅವರ ಪರಿಶ್ರಮ, ತ್ಯಾಗ ಮತ್ತು ಜ್ಞಾನದ ಮೇಲೆ ಇಂದಿನ ಸಮಾಜ ನಿರ್ಮಾಣವಾಗಿದ್ದು, ಹಿರಿಯರನ್ನು ಗೌರವಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದಾಕ್ಷಾಯಿಣಿ ಜಿ.ಕೆ ಅವರು ತಿಳಿಸಿದ್ದಾರೆ.

ನಗರದ ಡಾ. ಬಿ. ಆರ್ ಅಂಬೇಡ್ಕರ್ ಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಸನ ಹಾಗೂ ಜಿಲ್ಲೆಯ ನಾಗರಿಕರ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಹಿರಿಯ ನಾಗರಿಕರಿಗೆ ಇರುವಂತಹ ಹಕ್ಕುಗಳನ್ನು ಹಾಗೂ ಅವರಿಗೆ ಯಾವ ರೀತಿ ಪಾಲನೆ, ಪೋ?ಣೆ, ಗೌರವ ನೀಡಬೇಕು ಎಂಬುವುದನ್ನು ಯುವ ಜನಾಂಗಕ್ಕೆ ಎಚ್ಚರಿಕೆ ನೀಡಲು ಈ ವಿಶ್ವ ಹಿರಿಯ ನಾಗರಿಕ ದಿನವನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು. ಮನುಷ್ಯ ಹುಟ್ಟುತ್ತಲೇ ಬಾಲ್ಯದಿಂದ ಒಂದೊಂದು ಹಂತದ ವಯಸ್ಸನ್ನು ದಾಟುತ್ತ ಜವಾಬ್ದಾರಿಗಳನ್ನು ಹೆಚ್ಚಿಸಿಕೊಂಡು ತನ್ನ ತಂದೆ ತಾಯಿಯನ್ನೇ ಕಡೆಗಣಿಸುತ್ತಾ ತನ್ನದೇ ಆದ ಪ್ರತ್ಯೇಕ ಕುಟುಂಬವನ್ನು ರಚನೆ ಮಾಡಿಕೊಳ್ಳುತ್ತಾನೆ ಎಂದರು.ಹಿರಿಯ ನಾಗರಿಕರಿಗೆ ಒಂಟಿತನ ಕಾಡದಂತೆ ಪ್ರೀತಿ, ಕಾಳಜಿಯಿಂದ ನೋಡಿಕೊಳ್ಳಬೇಕು, ವಯಸ್ಸು ಹೆಚ್ಚಾದಂತೆ ಆಶ್ರಯದ ಅವಶ್ಯಕತೆ ಹೆಚ್ಚಾಗಿರುತ್ತದೆ, ಸರ್ಕಾರವು ತಂದೆ ತಾಯಿಯರ ಹಾಗೂ ಹಿರಿಯ ನಾಗರಿಕರ ಪಾಲನೆ ಪೋ?ಣೆ ಶ್ರೇಯೋಭಿವೃದ್ಧಿಗೆ ೨೦೦೭ರಲ್ಲಿ ಅಧಿನಿಯಮವನ್ನು ಜಾರಿಗೆ ತರುವುದರ ಮೂಲಕ ಹಿರಿಯ ನಾಗರಿಕರಿಗೆ ಗೌರವ ನೀಡುವಂತೆ ತಿಳಿಸಿದೆ. ಸ್ವತಃ ತಾವೇ ದುಡಿದು ನಿರ್ಮಿಸಿದ ಮನೆಯನ್ನು ಬಿಟ್ಟು ಸಾಕ? ಹಿರಿಯ ನಾಗರಿಕರು ವೃದ್ಧಾಶ್ರಮದಲ್ಲಿ ಆಶ್ರಯ ಪಡೆದಿದ್ದು, ತುಂಬಾ ದುಃಖಕರವಾದ ಸಂಗತಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಮಕ್ಕಳಿಂದ ಹಿರಿಯ ನಾಗರಿಕರಿಗೆ ಜೀವನ ನಿರ್ವಹಣೆ ಪಡೆಯುವ ಹಕ್ಕು ಅಂದರೆ ಸ್ವಂತ ಆದಾಯ ಅಥವಾ ಆಸ್ತಿಯಿಂದ ಜೀವನ ನಡೆಸಲು ಸಾಧ್ಯವಾಗದ ಹಿರಿಯ ನಾಗರಿಕರು ತಮ್ಮ ಮಕ್ಕಳಿಂದ ನಿರ್ವಹಣೆ ಕೇಳಬಹುದು ಎಂದು ತಿಳಿಸಿದರು.ಹಿರಿಯ ನಾಗರಿಕರು ತಮ್ಮ ಆಸ್ತಿಯನ್ನು ಯಾರಿಗಾದರೂ ವರ್ಗಾಯಿಸಿದ ನಂತರ, ಆ ವ್ಯಕ್ತಿ ಅವರನ್ನು ನೋಡಿಕೊಳ್ಳದಿದ್ದರೆ, ಕೆಲವು ಸಂದರ್ಭಗಳಲ್ಲಿ ಆ ಆಸ್ತಿ ವರ್ಗಾವಣೆಯನ್ನು ರದ್ದುಪಡಿಸುವ ಅವಕಾಶ ಕಾನೂನಿನಲ್ಲಿ ಇರುವುದರಿಂದ ಪ್ರತಿಯೊಬ್ಬರೂ ಹಿರಿಯ ನಾಗರೀಕರಿಗೆ ಕಾನೂನಿನ ಹಕ್ಕುಗಳನ್ನು ನೆನಪಿಸಬೇಕು ಎಂದು ತಿಳಿಸಿದರು. ಹಿರಿಯ ನಾಗರಿಕರ ಹಕ್ಕುಗಳನ್ನು ರಕ್ಷಿಸುವುದು ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಕುಟುಂಬದ ಸದಸ್ಯರು ಹಿರಿಯರನ್ನು ಗೌರವದಿಂದ ನೋಡಿಕೊಳ್ಳಬೇಕು, ಅವರಿಗೆ ಸುರಕ್ಷಿತ ಹಾಗೂ ಗೌರವಯುತ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ತಿಳಿಸಿದರು. ತಹಸೀಲ್ದಾರ್‌ ಗೀತಾ ಅವರು ಮಾತನಾಡಿ ಹಿರಿಯ ನಾಗರಿಕರಿಗೆ ಕಾನೂನುಗಳಲ್ಲಿ ನೀಡಿರುವ ಹಕ್ಕುಗಳು ಮತ್ತು ಸೌಲಭ್ಯಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸುವುದರ ಜೊತೆಗೆ, ಕುಟುಂಬ ಮತ್ತು ಸಮಾಜವು ಅವರಿಗೆ ಪ್ರೀತಿ, ಗೌರವ ಮತ್ತು ಸುರಕ್ಷತೆ ನೀಡಬೇಕು ಎಂದು ತಿಳಿಸಿದರು. ಹುಟ್ಟಿನಿಂದ ಮರಣದವರೆಗೆ ಎಲ್ಲಾ ಸರ್ಟಿಫಿಕೇಟ್‌ಗಳು ಕಂದಾಯ ಇಲಾಖೆಯಲ್ಲಿ ಸಿಗುವುದರ ಜೊತೆಗೆ ಹಿರಿಯ ನಾಗರಿಕರಿಗೆ ಪಿಂಚಣಿ, ವಯಸ್ಸಿನ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ವಾಸಸ್ಥಳ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ ಹಾಗೂ ಇತರ ಅಗತ್ಯ ದಾಖಲೆಗಳನ್ನು ಪಡೆಯಲು ಅವರಿಗೆ ಸಹಾಯವಾಗಿದೆ ಎಂದು ತಿಳಿಸಿದರು. ೬೦ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಸರ್ಕಾರದಿಂದ ಎಲ್ಲಾ ರೀತಿಯ ಸೌಲಭ್ಯಗಳು ದೊರಕುತ್ತವೆ ಹಾಗೂ ಸೌಲಭ್ಯಗಳನ್ನು ಪಡೆದುಕೊಳ್ಳುವುದು ತುಂಬಾ ಮುಖ್ಯವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಅಧಿಕಾರಿಗಳಾದ ಗಂಗಮ್ಮ ಬಿ.ಸಿ, ನಿವೃತ್ತ ನೌಕರ ಸಂಘದ ಅನಂತರಾಮ್, ಅರಸೀಕೆರೆ ತಾಲೂಕಿನ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಯೋಗೀಶ್ ಎಂ.ಎಂ ಮತ್ತಿರರು ಉಪಸ್ಥಿತರಿದ್ದರು.