ಹಾಸನ : ಹಾಸನಾಂಬ ದೇವಿ ದರ್ಶನ ಪಡೆದ ಬುಕರ್ ಪ್ರಶಸ್ತಿ ವಿಜೇತೆ ಭಾನು ಮುಷ್ತಾಕ್ ಅವರು ಅರ್ಚಕರು ನೀಡಿದ ಮಂಗಳಾರತಿ ಪಡೆದು ದೇವರ ಸನ್ನಿಧಿಯಿಂದ ಕೊಟ್ಟ ಬಳೆಯನ್ನು ತೊಟ್ಟು ಹಣೆಗೆ ಕುಂಕುಮ ಇಟ್ಟುಕೊಂಡರು.
ಹಾಸನಾಂಬೆ ಎಂದರೇ ನಮ್ಮೂರ ಹಬ್ಬ, ಭಾವೈಕ್ಯತೆಯ ಸಂಕೇತವಾಗಿದೆ ಎಂದು ತಮ್ಮ ಬಾಲ್ಯದ ನೆನಪು ಹಂಚಿಕೊಂಡ ಮುಷ್ತಾಕ್ ಅವರು, ಇದು ನನ್ನ ಮೊದಲ ದರ್ಶನವಲ್ಲ. ನಮ್ಮ ಮನೆ ದೇವಾಲಯದ ಬೀದಿಯ ಮುಂದಿದೆ. ಚಿಕ್ಕಂದಿನಿಂದಲೂ ತಾಯಿಯ ಕೈ ಹಿಡಿದು ಹಾಸನಾಂಬ ದೇವಿಯ ದರ್ಶನಕ್ಕೆ ಬರುತ್ತಿದ್ದೆನು. ಅಂದು ಯಾರಿಗೂ ಗೊತ್ತಾಗುತ್ತಿರಲಿಲ್ಲ. ಆದರೆ, ಈಗ ಗೊತ್ತಾಗುತ್ತಿದೆ. ಇದು ಭಾವೈಕ್ಯತೆಯ ಸಂಕೇತ. ಹಾಸನಾಂಬ ಜಾತ್ರೆ ನಮ್ಮೂರ ಹಬ್ಬ. ಮುಸ್ಲಿಂ-ಹಿಂದೂ ಎಲ್ಲರೂ ಸಮಾನ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಇದು ಸ್ನೇಹ, ಪ್ರೀತಿ, ಸಹಬಾಳ್ವೆ, ಸಾಮಾಜಿಕ ಸಾಮರಸ್ಯ ಬೆಸೆಯುವ ನೆಮ್ಮದಿಯ ತಾಣ ಎಂದು ಹೇಳಿದರು.
ಮುಸ್ಲಿಮರು ಮರಳಿ ದೇವಾಲಯಕ್ಕೆ:
ಬಹಳ ಹಿಂದಿನಿಂದಲೇ ಮುಸ್ಲಿಂ ಸಮುದಾಯದವರು ಹಾಸನಾಂಬ ದೇವಿಯ ಪೂಜಾ ಉತ್ಸವದಲ್ಲಿ ಭಾಗವಹಿಸುತ್ತಿದ್ದರು. ಹಸನ್ ಬಿ, ಹುಸೇನ್ ಬಿ ಎಂಬ ನಂಬಿಕೆಗಳ ಕಾಲವಿತ್ತು. ಮುಸ್ಲಿಂ ಹೆಣ್ಣುಮಕ್ಕಳಿಗೂ ದೇವಿಯ ಕಥೆಗಳನ್ನು ಹೇಳಿಕೊಡುತ್ತಿದ್ದರು. ಮಧ್ಯದಲ್ಲಿ ಸ್ವಲ್ಪ ವಿರಾಮ ಬಂದರೂ ಇತ್ತೀಚೆಗೆ ಮತ್ತೆ ನಮ್ಮ ಸಮುದಾಯದವರು ದೇವಾಲಯಕ್ಕೆ ಆಗಮಿಸುತ್ತಿದ್ದಾರೆ ಎಂದರು.