- ಮುತ್ತಿನಕೊಪ್ಪದಲ್ಲಿ ₹80 ಲಕ್ಷ ವೆಚ್ಚದ ಅರಣ್ಯ ಇಲಾಖೆ ಸಿಬ್ಬಂದಿ ವಸತಿ ಗೃಹಕ್ಕೆ ಶಂಕುಸ್ಥಾಪನೆ
ಶೃಂಗೇರಿ ಕ್ಷೇತ್ರದ ವ್ಯಾಪ್ತಿಯಲ್ಲಿ ಹೆಚ್ಚಾಗಿರುವ ಮಾನವ ಮತ್ತು ಪ್ರಾಣಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರೈಲ್ವೆ ಬ್ಯಾರಿಕೇಡ್, ಟೆಂಟಕಲ್ ಬೇಲಿ, ಸೋಲಾರ್ ಐಬಿಎಕ್ಸ್ ಬೇಲಿ ನಿರ್ಮಾಣಕ್ಕೆ ಅನುದಾನ ಮಂಜೂರಾತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.ಗುರುವಾರ ಸಂಜೆ ತಾಲೂಕಿನ ಮುತ್ತಿನಕೊಪ್ಪ ಗ್ರಾಮದಲ್ಲಿ ಕ್ಯಾಪಾ ಯೋಜನೆಯಡಿ ₹80 ಲಕ್ಷ ವೆಚ್ಚದಲ್ಲಿ ಅರಣ್ಯ ಇಲಾಖೆ ಯಿಂದ ಸಿಬ್ಬಂದಿಗೆ ನಿರ್ಮಿಸಲು ಉದ್ದೇಶಿಸಿರುವ 4 ವಸತಿ ಗೃಹಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿರುವ ಗ್ರಾಮಗಳ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ವಾಸವಾಗಿರಲು ಹಾಗೂ ಸಮಸ್ಯೆಗೆ ಶೀಘ್ರ ಸ್ಪಂದಿಸಿ ಕರ್ತವ್ಯ ನಿರ್ವಹಣೆ ಮಾಡಲು ವಸತಿಗೃಹ ನಿರ್ಮಾಣದಿಂದ ಅನುಕೂಲವಾಗಲಿದೆ. ಅರಣ್ಯ ಹಾಗೂ ಕಂದಾಯ ಭೂಮಿ ಗುರುತು ಮಾಡಿ ಶಾಶ್ವತ ಪರಿಹಾರ ಸಿಗಬೇಕೆಂಬ ಉದ್ದೇಶದಿಂದ 2018ರಲ್ಲಿ ರದ್ದಾಗಿದ್ದ ಟಾಸ್ಕ್ ಫೋರ್ಸ್ ಸಮಿತಿ ಪುನಾರಚನೆ ಮಾಡಲಾಗಿದ್ದು ಅರಣ್ಯ ವ್ಯವಸ್ಥಾಪನಾ ಅಧಿಕಾರಿಯನ್ನು ನೇಮಿಸಲಾಗಿದೆ. ಈಗಾಗಲೇ ಅರಣ್ಯ ಇಲಾಖೆಯಿಂದ 10 ಗ್ರಾಮಗಳ ಜಂಟಿ ಸಮೀಕ್ಷೆಯನ್ನು ವ್ಯವಸ್ಥಿತವಾಗಿ ಮಾಡಲಾಗಿದೆ. ಸೆಕ್ಷೆನ್ 17, ಅಧಿಸೂಚನೆ ಆಗಿರುವ ಮೀಸಲು ಅರಣ್ಯ, ಮಂಜೂರು ಜಾಗ, ಗೋಮಾಳ, ಒತ್ತುವರಿ ಜಾಗ ಎಲ್ಲವನ್ನೂ ಸರ್ವೆ ಕಾರ್ಯ ಮಾಡಿ ಕಂದಾಯ ಹಾಗೂ ಅರಣ್ಯ ಇಲಾಖೆಗೆ ಸೇರಿದ ಜಾಗ ಗುರುತು ಮಾಡಲಾಗುವುದು.ಅಧಿಸೂಚನೆ ಇಲ್ಲದ ಜಾಗ ಒತ್ತುವರಿಯಾಗಿದ್ದರೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಪರಿಹಾರ ಕಂಡುಕೊಳ್ಳಲಾಗುವುದು. ಅರಣ್ಯ ಇಲಾಖೆಯಿಂದ ಹಲವು ಕಾನೂನು ಜಾರಿಗೆ ತಂದು ರೈತರಿಗೆ ಕಟ್ಟಿಹಾಕುವ ಕಾರ್ಯ ಮಾಡಲಾಗುತ್ತಿದೆ. ಅರಣ್ಯ ಇಲಾಖೆಯವರು ಮಾನವೀಯತೆಯಿಂದ ವರ್ತಿಸಬೇಕು. ಭವಿಷ್ಯದ ಪೀಳಿಗೆಗೆ ಪರಿಸರ ಅವಶ್ಯಕವಾಗಿದೆ. ಆದರೆ ಪರಿಸರ ಉಳಿಯ ಬೇಕಾದರೆ ರೈತರ ಸಹಕಾರ ಮುಖ್ಯ. ಅರಣ್ಯ ಇಲಾಖೆ ಮತ್ತು ರೈತರು ಸೇರಿ ಪರಿಸರ ಉಳಿಸಬೇಕಾಗಿದೆ. ಪ್ರಸ್ತುತ ಅರಣ್ಯಕ್ಕೆ ಸಂಬಂಧಪಟ್ಟ ಕಾನೂನುಗಳು ಬಿಗಿಯಾಗುತ್ತಿರುವುದರಿಂದ ಹೊಸದಾಗಿ ಯಾರೂ ಒತ್ತುವರಿ ಮಾಡ ಬಾರದು. ಪ್ರಕೃತಿ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.
ಸಭೆಯಲ್ಲಿ ಶಿವಮೊಗ್ಗ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಡಿಎಫ್ಒ ಶಿವಶಂಕರ್, ಮುತ್ತಿನಕೊಪ್ಪ ಗ್ರಾಪಂ ಉಪಾಧ್ಯಕ್ಷ ನರೇಂದ್ರ, ಕಡಹಿನಬೈಲು ಗ್ರಾಪಂ ಉಪಾಧ್ಯಕ್ಷ ಸುನಿಲ್ ಕುಮಾರ್, ಗ್ರಾಪಂ ಸದಸ್ಯರಾದ ದೇವಂತ್, ಫಯಾಜ್, ತಾಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಗೇರುಬೈಲು ನಟರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಎಸ್.ಸುಬ್ರಹ್ಮಣ್ಯ, ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಈ.ಸಿ.ಜೋಯಿ, ಮುಖಂಡ ಅಬೂಬಕರ್, ಬಿ.ವಿ.ಉಪೇಂದ್ರ, ಅನಿಲ್, ಪ್ರಶಾಂತ್ ಶೆಟ್ಟಿ, ವಲಯ ಅರಣ್ಯಾಧಿಕಾರಿ ಪ್ರವೀಣ್ ಕುಮಾರ್ ಮತ್ತಿತರರಿದ್ದರು.