ಜಮಖಂಡಿ : ರಾಜ್ಯ ಸರ್ಕಾರ ತರಾತುರಿಯಲ್ಲಿ ರೈತರ ಜಮೀನು ಮಠ, ಮಾನ್ಯಗಳ ಆಸ್ತಿಗಳನ್ನು 1974ರ ಗೆಜೆಟ್ ಹಾಗೂ ವಕ್ಫ್ ಕಾಯ್ದೆ ಹೆಸರು ಹೇಳಿಕೊಂಡು ಕಬಳಿಸಲು ಹೊರಟಿರುವುದನ್ನು ಕೈಬಿಡಬೇಕು. ರಕ್ತ ಕೊಡುತ್ತೇವೆ ಹೊರತು ಭೂಮಿ ಕಬಳಿಸಲು ಬಿಡುವುದಿಲ್ಲ ಎಂದು ಸರ್ಕಾರದ ವಿರುದ್ಧ ಶಾಸಕ ಜಗದೀಶ ಗುಡಗುಂಟಿ ಗುಡುಗಿದರು.
ತಮ್ಮ ಗೃಹ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ, ಹಿಂದೂಗಳ ಆಸ್ತಿಯ ಮೇಲೆ ಕಣ್ಣು ಹಾಕಿದರೇ ರೈತರ ಬಂಡಾಯವೇ ಆದಿತು ಎಂದು ಎಚ್ಚರಿಕೆ ನೀಡಿದರು.ರಾಜ್ಯದ ಕಾಂಗ್ರೆಸ್ ಸರ್ಕಾರ ಮುಂಸಲ್ಮಾನರ ತುಷ್ಟೀಕರಣಕ್ಕಾಗಿ ಹಿಂದೂಗಳ ಭೂಮಿ, ಆಸ್ತಿಯನ್ನು ಕಬಳಿಸಲು ಹೊರಟಿದೆ. ಮುಸಲ್ಮಾನರ ಸಂಖ್ಯೆ ಹೆಚ್ಚಾಗುತ್ತಿದ್ದು, ಅವರಿಗೆ ಹಿಂದೂಗಳ ಭೂಮಿಗಳನ್ನು ಪರಭಾರೆ ಮಾಡಲು ಹುನ್ನಾರ ನಡೆಸಿದೆ. ಜವಾಹರಲಾಲ್ ನೆಹರು ಅವರ ಆಡಳಿತದಲ್ಲಿ ಜಾರಿಗೆ ಬಂದಿರುವ ಈ ವಕ್ಫ್ ಮಂಡಳಿಗೆ ಹಲವು ಅಧಿಕಾರಗಳನ್ನು ನೀಡಲಾಗಿದ್ದು, 50 ವರ್ಷಗಳ ಕಾಲ ಸುಮ್ಮನಿದ್ದ ಕಾಂಗ್ರೆಸ್ ಏಕಾಏಕಿಯಾಗಿ ರೈತರ ಜಮೀನುಗಳಿಗೆ ವಕ್ಫ್ ಹೆಸರನ್ನು ದಾಖಲಿಸುತ್ತಿದೆ. ಬಡ ರೈತರು, ಜಮೀನುದಾರರು ಕಂಗಾಲಾಗಿದ್ದು, ತಮ್ಮ ಜಮಿನುಗಳ ಪಹಣಿ, ಆಸ್ತಿಗಳ ದಾಖಲೆಗಳನ್ನು ಪರಿಶೀಲಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.ಪ್ರಧಾನ ಮಂತ್ರಿಗಳು ವಕ್ಫ್ ಕಾಯ್ದೆಗೆ ತಿದ್ದುಪಡಿ ವಿಚಾರ ಮಂಡಿಸುತ್ತಿದ್ದಂತೆ ಕಾಂಗ್ರೆಸ್ ಎಚ್ಚೆತ್ತು ಕೊಂಡಿದ್ದು, ಹಿಂದೂಗಳ ಭೂ ಕಬಳಿಕೆಯ ಕಳ್ಳಾಟ ನಡೆಸುತ್ತಿದೆ. ಸರ್ಕಾರ ಇಂಥಹ ಜನ ವಿರೋಧಿ ನೀತಿಗಳನ್ನು ಕೈಬಿಡಬೇಕು. ಇಲ್ಲವಾದರೇ ಉಗ್ರಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ಅಭಿವೃದ್ಧಿ ಕಾರ್ಯಗಳು ನಿಂತು ಹೋಗಿವೆ. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ ಪೈಕಿ ಶೇ.20 ರಷ್ಟು ಅನುದಾನ ಬಿಡುಗಡೆಯಾಗಿಲ್ಲ. ಕಾಂಗ್ರೆಸ್ ಶಾಸಕರೇ ಸರ್ಕಾರದ ನೀತಿಯಿಂದ ರೋಸಿಹೋಗಿದ್ದಾರೆ. ಕಾಂಗ್ರೆಸ್ ಶಾಸಕ ರಾಜು ಕಾಗೆಯವರು ಸರ್ಕಾರದ ವಿರುದ್ಧ ಮಾತನಾಡಿ ವಿಷ ಕುಡಿಯಲು ಹಣವಿಲ್ಲವೆಂದು ಆಕ್ರೋಶ ಹೊರಹಾಕಿದ್ದಾರೆ. ಜಮಖಂಡಿ ನಗರದ ರಸ್ತೆಗಳ ಅಭಿವೃದ್ಧಿ ಹಾಗೂ ಇನ್ನಿತರ ಯೋಜನೆಗಳ ಅನುಷ್ಠಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಸರ್ಕಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಹೆಣಗಾಡುತ್ತಿದೆ. ಇನ್ನು ಅಭಿವೃದ್ಧಿಯ ಮಾತೆಲ್ಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ಕೇಂದ್ರ ಸರ್ಕಾರ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲಿದೆಂದು ಕಾಂಗ್ರೆಸ್ ಸರ್ಕಾರಗಳು ದೇಶವ್ಯಾಪಿ ರೈತರ ಜಮಿನು ಕಬಳಿಸಲು ಮುಂದಾಗಿವೆ. ನೆಹರು ಅವರು ವಕ್ಫ್ ಮಂಡಲಿಗೆ ನೀಡಿರುವ ಅಧಿಕಾರಗಳ ದುರುಪಯೋಗ ಪಡಿಸಿಕೊಂಡು ಇದ್ದ ಬಿದ್ದ ಎಲ್ಲ ಆಸ್ತಿಯ ¼ನ್ನು ವಕ್ಫ್ ತೆಕ್ಕೆಗೆ ಪಡೆಯುವ ಷಡ್ಯಂತ್ರ ರೂಪಿಸಲಾಗಿದೆ ಎಂದು ದೂರಿದರು.
ರಾಜ್ಯ ಬಿಜೆಪಿ ವತಿಯಿಂದ ಸರ್ಕಾರದ ಕ್ರಮ ಖಂಡಿಸಿ ರಾಜ್ಯಾದ್ಯಂತ ಹೋರಾಟ ನಡೆಸಲು ನಿರ್ಧರಿಸಲಾಗಿದೆ. ಕಾಂಗ್ರೆಸ್ ಜ್ಯಾತಿ ರಾಜಕಾರಣ ಮಾಡುತ್ತಿದ್ದು, ಮುಸಲ್ಮಾನರ ಮತಗಳನ್ನು ಗಟ್ಟಿಗೊಳಿಸಲು ಹಿಂದೂಗಳ ಆಸ್ತಿ ಕಬಳಿಕೆಗೆ ಅಸ್ತ್ರ ಹೂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿದಂತೆ ವಕ್ಫ್ ಸಚಿವ ಜಮೀರ್ ಅಹಮದ್ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿಗಳು ಹಾಗೂ ತಹಸೀಲ್ದಾರ್ ಮೇಲೆ ಒತ್ತಡ ಹೇರಿ ವಕ್ಫ್ ಹೆಸರು ಸೇರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರದ ಆಡಳಿತ ಸಂದರ್ಭದಲ್ಲಿ ಅನ್ವರ್ ಮಾನಿಪಾಡಿ ಎಂಬುವರಿಂದ ವಕ್ಫ್ ಸಮಗ್ರ ಮಾಹಿತಿ ಸಂಗ್ರಹಿಸಿ, ವರದಿ ಸಲ್ಲಿಸಲು ಸೂಚಿಸಿತ್ತು. ವರದಿಯ ಪ್ರಕಾರ ವಕ್ಫ್ ಅಕ್ರಮವಾಗಿ ೫೬ ಸಾವಿರ ಎಕರೆ ಪ್ರದೇಶದಲ್ಲಿ ಅಕ್ರಮವಾಗಿ ತನ್ನ ಆಸ್ತಿ ಎಂದು ಘೋಷಿಸಿಕೊಂಡಿದೆ. ವಕ್ಫ್‌ಲ್ಲಿ ೨.೩೦ ಕೋಟಿ ಅವ್ಯವಹಾರ ನಡೆಸಿದ ಆರೋಪವು ಇದೆ. ಆದರೆ, ತನಿಖೆ ನಡೆಯಲಿಲ್ಲ. ಈ ಎಲ್ಲವುದರ ಬಗ್ಗೆ ಕೇಂದ್ರ ಸರ್ಕಾರ ಇಡಿ ತನಿಖೆ ನಡೆಸಬೇಕಿದೆ. ಮಾರಕವಾಗಿರುವ ವಕ್ಫ್ ಕಾನೂನನ್ನು ರದ್ದುಗೊಳಿಸಬೇಕು. ಅದಕ್ಕೆ ಸರ್ವ ಪಕ್ಷಗಳ ಬೆಂಬಲವು ಸಿಗಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ಜಿ.ಎಸ್.ನ್ಯಾನಗೌಡ, ಮುಖಂಡರಾದ ಸಿಟಿ ಉಪಾಧ್ಯಾಯ, ಈಶ್ವರ ಆದೆಪ್ಪನವರ, ನಗರ ಅಧ್ಯಕ್ಷ ಅಜಯ ಕಡಪಟ್ಟಿ, ಗ್ರಾಮೀಣ ಅಧ್ಯಕ್ಷ ಅರವಿಂದಗೌಡ ಪಾಟೀಲ, ಸುರೇಶಗೌಡ ಪಾಟೀಲ, ಗಣೇಶ ಶಿರಗಣ್ಣವರ, ಶಂಕರ ಕಾಳೆ. ಶ್ರೀಧರ ಕಂಬಿ, ಜಿಲ್ಲಾ ಒಬಿಸಿ ಅಧ್ಯಕ್ಷ ಸಂಗಮೇಶ ದಳವಾಯಿ, ಮಲ್ಲು ದಾನಗೌಡ, ಪ್ರದೀಪ ನಂದೆಪ್ಪನವರ ಮುಂತಾದವರಿದ್ದರು.
ಜಮಖಂಡಿ ತಾಲೂಕಿನ ಗೋಠೆ, ಗದ್ಯಾಳ, ಸಾವಳಗಿ, ತುಂಗಳ ಗ್ರಾಮಗಳ ಕೆಲ ಜಮೀನುಗಳು ವಕ್ಫ್ಗೆ ಸೇರಿವೆ ಎಂದು ಹೇಳಲಾಗುತ್ತಿದೆ. ತಾಲೂಕಿನ ಯಾವುದೇ ರೈತರಿಗೆ ಈ ರೀತಿಯ ತೊಂದರೆಯಾದರೇ ತಮ್ಮನ್ನು ಸಂಪರ್ಕಿಸಿ. ಅದಕ್ಕಾಗಿ ಹೋರಾಟ ನಡೆಸಲಾಗುವುದು ಹಾಗೂ ರೈತರ ಜಮೀನುಗಳು ವಕ್ಫ್ ಪಾಲಾಗದಂತೆ ಕಾನೂನು ಹೋರಾಟಕ್ಕೆ ಸಿದ್ಧತೆ ಮಾಡಲಾಗುವುದು.
-ಜಗದೀಶ ಗುಡಗುಂಟಿ, ಶಾಸಕರು.
ನ.5 ದಂದು ರಾಜ್ಯದ ಮುಸ್ಲಿಂ ತುಷ್ಟೀಕರಣ ನೀತಿ, ವಕ್ಫ್ ಕಾಯ್ದೆಯ ರದ್ದತಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ರಾಜ್ಯಾದ್ಯಂತ ಹೋರಾಟ ನಡೆಯಲಿದ್ದು, ಸರ್ಕಾರದ ಕ್ರಮ ಖಂಡಿಸಲಾಗುವುದು.
-ಶ್ರೀಕಾಂತ ಕುಲಕರ್ಣಿ, ಮಾಜಿ ಶಾಸಕರು.