ಬಸವಣ್ಣನವರ ಘನತೆಗೆ ಧಕ್ಕೆ ತಂದರೆ ಸಹಿಸಲ್ಲ: ಮಠಾಧೀಶರ ಎಚ್ಚರಿಕೆ

KannadaprabhaNewsNetwork |  
Published : Nov 26, 2026, 02:15 AM IST
ರವಿ ಹಂಜ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಠಾಧೀಶರ ಕೊಪ್ಪಳದಲ್ಲಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಲೇಖಕ ರವಿ ಹಂಜ್ ಅವರ ‘ಬಸವ ಮಂಟಪ’ ಕೃತಿಗೆ ಸಂಬಂಧಿಸಿದ ವಿವಾದದ ಕುರಿತು ಸೂಕ್ತ ಪರಿಶೀಲನೆ ನಡೆಸಿ, ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಬುಧವಾರ ಕೊಪ್ಪಳ ಜಿಲ್ಲಾಧಿಕಾರಿಗೆ ವಿವಿಧ ಮಠಾಧೀಶರು ಮನವಿ ಸಲ್ಲಿಸಿದರು.

ಕೊಪ್ಪಳ: ವಿಶ್ವಗುರು ಬಸವಣ್ಣನವರ ವ್ಯಕ್ತಿತ್ವ, ತತ್ವಾದರ್ಶಗಳು ಹಾಗೂ ಶರಣ ಪರಂಪರೆಯ ಘನತೆಗೆ ಧಕ್ಕೆ ತರುವಂತಹ ವಿಚಾರಗಳನ್ನು ಸಹಿಸಲು ಸಾಧ್ಯವಿಲ್ಲ. ವಚನ ಸಾಹಿತ್ಯದ ಗೌರವ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಮಠಾಧೀಶರು ಹಾಗೂ ಬಸವಪರ ಸಂಘಟನೆಗಳ ಮುಖಂಡರು ಅಭಿಪ್ರಾಯಪಟ್ಟರು.

ಲೇಖಕ ರವಿ ಹಂಜ್ ಅವರ ‘ಬಸವ ಮಂಟಪ’ ಕೃತಿಗೆ ಸಂಬಂಧಿಸಿದ ವಿವಾದದ ಕುರಿತು ಸೂಕ್ತ ಪರಿಶೀಲನೆ ನಡೆಸಿ, ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬುಧವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

12ನೇ ಶತಮಾನದಲ್ಲಿಯೇ ಸಮಾನತೆ, ಕಾಯಕ, ದಾಸೋಹ, ಮಾನವೀಯತೆ ಹಾಗೂ ಸಾಮಾಜಿಕ ನ್ಯಾಯದ ಸಂದೇಶವನ್ನು ಜಗತ್ತಿಗೆ ಸಾರಿದ ಬಸವಣ್ಣನವರು ಇಡೀ ಮಾನವಕುಲಕ್ಕೆ ದಾರಿದೀಪವಾಗಿದ್ದಾರೆ. ಅವರ ವಚನಗಳು ಯಾವುದೇ ಒಂದು ಧರ್ಮ ಅಥವಾ ಸಮುದಾಯಕ್ಕೆ ಸೀಮಿತವಾಗದೆ ವಿಶ್ವಮಾನವ ಸಂದೇಶ ಸಾರುತ್ತವೆ. ಇಂತಹ ಮಹಾನ್ ಚೇತನದ ವ್ಯಕ್ತಿತ್ವ ಹಾಗೂ ಶರಣ ಪರಂಪರೆಯ ಕುರಿತು ಬರೆಯುವಾಗ ಲೇಖಕರು ಜವಾಬ್ದಾರಿ ಮತ್ತು ಸಂಯಮದಿಂದ ನಡೆದುಕೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಸಂಶೋಧನೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಬಸವಣ್ಣನವರ ಘನತೆ, ಗೌರವ ಹಾಗೂ ಕೋಟ್ಯಂತರ ಜನರ ಭಾವನೆಗಳಿಗೆ ಧಕ್ಕೆ ತರುವ ವಿಚಾರಗಳನ್ನು ಸಮರ್ಥಿಸಲು ಸಾಧ್ಯವಿಲ್ಲ. ವಚನ ಸಾಹಿತ್ಯ, ಐತಿಹಾಸಿಕ ದಾಖಲೆಗಳು ಮತ್ತು ಸಂಶೋಧನಾ ಆಧಾರಗಳಿಗೆ ಆದ್ಯತೆ ನೀಡಬೇಕು. ವಿವಾದದ ಕುರಿತು ಸರ್ಕಾರವು ಸಂವಿಧಾನ ಹಾಗೂ ಕಾನೂನಿನ ಚೌಕಟ್ಟಿನಲ್ಲಿ ಪರಿಶೀಲನೆ ನಡೆಸಿ ನ್ಯಾಯಯುತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಅದೇ ರೀತಿ ಯಾವುದೇ ವ್ಯಕ್ತಿಯ ವಿರುದ್ಧ ವೈಯಕ್ತಿಕ ದ್ವೇಷ, ಬೆದರಿಕೆ ಅಥವಾ ಹಿಂಸಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸುವುದು ಸರಿಯಲ್ಲ. ಭಿನ್ನಾಭಿಪ್ರಾಯಗಳಿಗೆ ವಿಚಾರ, ದಾಖಲೆ ಹಾಗೂ ಸಂವಾದದ ಮೂಲಕ ಉತ್ತರ ನೀಡಬೇಕು. ಬಸವಣ್ಣನವರ ವಚನ ಸಾಹಿತ್ಯ ಮತ್ತು ಶರಣ ಸಂಸ್ಕೃತಿಯ ಘನತೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ಮನವಿದಾರರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕುಕನೂರು ಅನ್ನದಾನೇಶ್ವರ ಶಾಖಾ ಮಠದ ಡಾ. ಮಹಾದೇವ ಮಹಾಸ್ವಾಮಿಗಳು, ಗಿಣಿಗೇರಿ ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಅಭಿನವ ಶ್ರೀಕಂಠ ಸ್ವಾಮಿಗಳು, ನಾಗಲಿಂಗ ಮಹಾಸ್ವಾಮಿಗಳು, ನರಸಿಂಹ ಮಹಾಸ್ವಾಮಿಗಳು, ಮೈನಳ್ಳಿಯ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಕಂಪಸಾಗರ ಶ್ರೀಶೈಲ ಮಲ್ಲಿಕಾರ್ಜುನ ಶಾಖಾ ಮಠದ ನಾಗಭೂಷಣ ಶಿವಾಚಾರ್ಯರು, ಬಸವಪರ ಸಂಘಟನಾಕಾರ ಶಿವಕುಮಾರ ಏಣಿಗಿ, ಮಂಜುಳಾ ಸೋಮನಾಳ, ಗಂಗಾಧರ ವಸ್ತ್ರದ, ಸೋಮಯ್ಯ ಕೆ. ಹಿರೇಮಠ, ಶಿವಮೂರ್ತಯ್ಯ ಕುಟಗನಹಳ್ಳಿ, ಶಿವಕುಮಾರ ಗುಳಗಣ್ಣವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೆದ್ದಾರಿ ದುರಸ್ತಿಗೊಳಿಸಿ, ಬಾಕಿ ಕಾಮಗಾರಿ ಪೂರ್ಣಗೊಳಿಸಿ: ಸಂಸದ ಕಾಗೇರಿ
ಕೈಗಾ ಅಣು ವಿದ್ಯುತ್ ಘಟಕ 1 ಮತ್ತೆ ಕಾರ್ಯಾರಂಭ