ಬಡವರಿಗೆ ಸೂರು ಕಲ್ಪಿಸಿ ಡಿಕೆಶಿ ಕನಸು ನನಸು ಮಾಡ್ತೇವೆ

KannadaprabhaNewsNetwork |  
Published : Aug 23, 2026, 01:15 AM IST
22ಕೆಆರ್ ಎಂಎನ್ 3.ಜೆಪಿಜಿರಾಮನಗರ ನಗರಸಭೆ ವ್ಯಾಪ್ತಿಯ ಶಿಡ್ಲಕಲ್ಲುನಲ್ಲಿ 888 ಮನೆಗಳ ನಿರ್ಮಾಣ ಕಾರ್ಯದ ಭೂಮಿ ಪೂಜೆ ಸಮಾರಂಭವನ್ನು ಸಚಿವ ಬಾಲಕೃಷ್ಣ ಉದ್ಘಾಟಿಸಿದರು. | Kannada Prabha

ಸಾರಾಂಶ

ರಾಮನಗರ: ಜಿಲ್ಲೆಯಲ್ಲಿ ಸೂರಿಲ್ಲದ ಕಡು ಬಡವರಿಗೆ ಮನೆ ನಿರ್ಮಿಸಿ ಕೊಡುವ ಮೂಲಕ ಮುಖ್ಯಮಂತ್ರಿ ಡಿ.ಕೆ‌.ಶಿವಕುಮಾರ್ ಅವರ ಕನಸನ್ನು ನನಸು ಮಾಡುತ್ತೇವೆ ಎಂದು ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ಹೇಳಿದರು

ರಾಮನಗರ: ಜಿಲ್ಲೆಯಲ್ಲಿ ಸೂರಿಲ್ಲದ ಕಡು ಬಡವರಿಗೆ ಮನೆ ನಿರ್ಮಿಸಿ ಕೊಡುವ ಮೂಲಕ ಮುಖ್ಯಮಂತ್ರಿ ಡಿ.ಕೆ‌.ಶಿವಕುಮಾರ್ ಅವರ ಕನಸನ್ನು ನನಸು ಮಾಡುತ್ತೇವೆ ಎಂದು ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ಹೇಳಿದರು.

ನಗರಸಭೆ ವ್ಯಾಪ್ತಿಯ ಶಿಡ್ಲಕಲ್ಲು ನಲ್ಲಿ ಶನಿವಾರ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಶಿಡ್ಲುಕಲ್ಲು ವ್ಯಾಪ್ತಿಯ ಜಿ+4 ವಿನ್ಯಾಸದಲ್ಲಿ 24 ಬ್ಲಾಕ್ ಗಳಲ್ಲಿ 888 ಮನೆಗಳ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಫಲಾನುಭವಿಗಳಿಗೆ ಸರ್ಕಾರದ ಜೊತೆಗೆ ಬ್ಯಾಂಕ್ ನಲ್ಲಿ ಒಂದು ಲಕ್ಷದರವೆಗೆ ಸಾಲ ಸೌಲಭ್ಯ ಕಲ್ಪಿಸಿ ಗುಣಮಟ್ಟದ ಮನೆ ನಿರ್ಮಿಸಲು ಸಹಕಾರ ಕೊಡಬೇಕಿದೆ. ಮುಖ್ಯಮಂತ್ರಿಗಳ ಆದೇಶದಂತೆ ಅಧಿಕಾರಿಗಳು ಪ್ರಾಮಾಣಿಕತೆ ತೋರುವ ಅಗತ್ಯವಿದೆ. ಮನೆಗಳ ನಿರ್ಮಾಣ ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಬೇಕು ಎಂದು ಸೂಚನೆ ನೀಡಿದರು.

ಮನೆಗಳ ನಿರ್ಮಾಣ ಸಂಬಂಧ ನಾನು, ಶಾಸಕ ರೊಡಗೂಡಿ ಫಲಾನುಭವಿಗಳು, ಅಧಿಕಾರಿಗಳ ಸಭೆ ನಡೆಸುತ್ತೇವೆ. ಗುತ್ತಿಗೆದಾರರಿಂದ ನಾವು ಏನನ್ನೂ ಅಪೇಕ್ಷೆ ಪಡುವುದಿಲ್ಲ. ಮನೆ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಬೇಕು. ಯಾರಾದರು ಕಳ್ಳಾಟವಾಡಿದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವ ಜೊತೆಗೆ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಬಡವರಿಗಾಗಿ ನಿರ್ಮಿಸುತ್ತಿರುವ ಮನೆಗಳು ಗುಣಮಟ್ಟದಿಂದ ಕೂಡಿರಬೇಕು. ಇಲ್ಲಿ ಲಾಭದ ಮನಸ್ಸು ಯಾರಿಗೂ ಇರಬಾರದು, ಸ್ಲಂ ಬೋರ್ಡಿನಿಂದ ಮನೆಗಳು ನಿಗದಿತ ಸಮಯದಲ್ಲಿ ಪೂರ್ಣಗೊಂಡ ಉದಾಹರಣೆ ಇಲ್ಲ.

ಹಾಗಾಗಿ ಅಧಿಕಾರಿಗಳನ್ನು ನಂಬಿಕೊಳ್ಳದೆ ಚುನಾಯಿತ ಪ್ರತಿನಿಧಿಗಳು ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡಾಗ ಮಾತ್ರ ಬಡವರಿಗೆ ಗುಣಮಟ್ಟದ ಮನೆಗಳನ್ನು ನಿರ್ಮಿಸಿಕೊಡಲು ಸಾಧ್ಯ ಎಂದು ಬಾಲಕೃಷ್ಣ ಹೇಳಿದರು.

ನಮ್ಮಗಳ ಮೇಲೆ ವಿಶ್ವಾಸವಿಡಿ:

ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಮಾತನಾಡಿ, ನನಗೆ ಶಾಸಕರಾಗುವ ಅವಕಾಶ ನೀಡಿದ ಮೇಲೆ ರಾಮನಗರ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ. ರಸ್ತೆ, ಚರಂಡಿ, ಆಸ್ಪತ್ರೆ, ಹೈಟೆಕ್ ಶಾಲೆಗಳನ್ನು ನಿರ್ಮಾಣಕ್ಕೆ ಒತ್ತು ನೀಡಿದ್ದೇನೆ. ಶುದ್ಧ ಕುಡಿಯುವ ನೀರು ಪೂರೖಕೆ ಮಾಡುವ ಮೂಲಕ ದಶಕಕಗಳ ನೀರಿನ ಸಮಸ್ಯೆ ಬಗೆಹರಿಸಲಾಗಿದೆ. ಇದೀಗ ರಾಮನಗರದ ಇತಿಹಾಸದಲ್ಲಿ ಮೊದಲ ಬಾರಿಗೆ 888 ಮನೆಗಳನ್ನು ಬಡವರಿಗಾಗಿ ನಿರ್ಮಾಣ ಮಾಡಿಕೊಡಲಾಗುತ್ತಿದೆ. ನೀವೆಲ್ಲರು ನಮ್ಮ‌ ಮೇಲೆ ವಿಶ್ವಾಸವಿಡಬೇಕು ಎಂದು ತಿಳಿಸಿದರು.

ರಾಮನಗರಕ್ಕೆ 500-600 ಕೋಟಿ ರುಪಾಯಿ ಅನುದಾನ ತಂದು, ರಸ್ತೆ, ಚರಂಡಿ ಸೇರಿದಂತೆ ಮೂಲಸೌಕರ್ಯ ಕಲ್ಪಿಸಲಾಗುವುದು. ಪ್ರತಿಯೊಬ್ಬ ಬಡವನಿಗೂ ಸೂರು ಕಲ್ಪಿಸುವುದು ನಮ್ಮೆಲ್ಲರ ಉದ್ದೇಶ. ಇದಕ್ಕಾಗಿ 250 ಎಕರೆ ಸರ್ಕಾರಿ ಜಮೀನು ಗುರುತಿಸುವ ಕೆಲಸ ನಡೆಯುತ್ತಿದೆ. ಈಗಾಗಲೇ ಸೂರಿಗಾಗಿ 13,800 ಅರ್ಜಿಗಳು ಬಂದಿದ್ದು, ಒಂದೂವರೆ ತಿಂಗಳಲ್ಲಿ ಅರ್ಹ ಬಡವರಿಗೆ ನಿವೇಶನ ಕಲ್ಪಿಸಲು ಕ್ರಮ ವಹಿಸುತ್ತೇವೆ ಎಂದು ಹೇಳಿದರು.

ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಮಾತನಾಡಿ, ಈ ಭಾಗದ ಬಡ ಜನರಿಗೆ 18 ತಿಂಗಳಲ್ಲಿ ಮನೆ ಕಟ್ಟಿಕೊಡಲು ಸಚಿವರು ಸಂಕಲ್ಪ ಮಾಡಿರುವುದನ್ನು ಸಾರ್ಥಕಗೊಳಿಸಲು ಶ್ರಮಿಸುತ್ತೇವೆ. ಅಧಿಕಾರಿಗಳು ಕಟಿಬದ್ದರಾಗಿದ್ದರೆ ಮಾತ್ರ ಸಕಾಲದಲ್ಲಿ ಫಲಾನುಭವಿಗಳಿಗೆ ಮನೆ ನಿರ್ಮಿಸಿಕೊಡಲು ಸಾಧ್ಯ ಎಂದು ತಿಳಿಸಿದರು.

ಮಾಜಿ ಶಾಸಕ ಕೆ.ರಾಜು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್‌ಕುಮಾರ್, ತಾಲೂಕು ಗ್ಯಾರಂಟಿ‌ ಯೋಜನೆಗಳ ಅಧ್ಯಕ್ಷ ವಿ‌.ಎಚ್.ರಾಜು, ನಗರಸಭೆ ಉಪಾಧ್ಯಕ್ಷೆ ಗಿರಿಜಮ್ಮ, ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿಎನ್ ಆರ್ ವೆಂಕಟೇಶ್, ಮುಖಂಡರಾದ ಅಮ್ಜದ್ ಸಾಹುಕಾರ್, ನಗರಸಭೆ ಆಯುಕ್ತ ಡಾ.ಜಯಣ್ಣ, ತಹಸೀಲ್ದಾರ್ ತೇಜಸ್ವಿನಿ, ಕೊಳಗೇರಿ ಅಭಿವೃದ್ಧಿ ಮಂಡಳಿ ಎಇ ಶಶಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

22ಕೆಆರ್ ಎಂಎನ್ 3.ಜೆಪಿಜಿ

ರಾಮನಗರ ನಗರಸಭೆ ವ್ಯಾಪ್ತಿಯ ಶಿಡ್ಲಕಲ್ಲುನಲ್ಲಿ 888 ಮನೆಗಳ ನಿರ್ಮಾಣ ಕಾರ್ಯದ ಭೂಮಿ ಪೂಜೆ ಸಮಾರಂಭವನ್ನು ಸಚಿವ ಬಾಲಕೃಷ್ಣ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬುಗುಡನಹಳ್ಳಿ ಕೆರೆಗೆ ಹೇಮಾವತಿ ನೀರು: ಡಿಸಿಎಂ ಪರಮೇಶ್ವರ್ ಭೇಟಿ
ಎಸ್ ಐ ಆರ್ ಪ್ರಕ್ರಿಯೆಯಲ್ಲಿ ಎಲ್ಲರೂ ಪಾಲ್ಗೊಳ್ಳಿ: ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಸಲಹೆ