ಗೇಟ್ ದುರಸ್ತಿ ಮಾಡಿ ಮಾಲವಿ ಜಲಾಶಯ ತುಂಬಿಸುತ್ತೇವೆ: ಡಿಸಿ ದಿವಾಕರ

KannadaprabhaNewsNetwork |  
Published : Jul 20, 2024, 12:47 AM IST
ಸ | Kannada Prabha

ಸಾರಾಂಶ

ಬಲದಂಡೆ ಕಾಲುವೆಗೆ ನೀರೊದಗಿಸುವ ನಿಟ್ಟಿನಲ್ಲಿ ಎತ್ತಲಾದ ೯ನೇ ಗೇಟ್ ರಬ್ಬರ್ ಸವೆದು ಅಡಚಣೆಗೊಳಗಾದ ಹಿನ್ನೆಲೆಯಲ್ಲಿ ದುರಸ್ತಿಯಾಗಿದೆ

ಹಗರಿಬೊಮ್ಮನಹಳ್ಳಿ: ತಾಲೂಕಿನ ಮಾಲವಿ ಜಲಾಶಯಕ್ಕೆ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಭೇಟಿ ನೀಡಿ, ಕ್ರಸ್ಟ್ ಗೇಟ್ ದುರಸ್ತಿ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು.

ಬಲದಂಡೆ ಕಾಲುವೆಗೆ ನೀರೊದಗಿಸುವ ನಿಟ್ಟಿನಲ್ಲಿ ಎತ್ತಲಾದ ೯ನೇ ಗೇಟ್ ರಬ್ಬರ್ ಸವೆದು ಅಡಚಣೆಗೊಳಗಾದ ಹಿನ್ನೆಲೆಯಲ್ಲಿ ದುರಸ್ತಿಯಾಗಿದೆ ಎಂದು ಬೃಹತ್ ನೀರಾವರಿ ಇಲಾಖೆ ಅಧಿಕಾರಿಗಳು ಡಿಸಿಗೆ ಮಾಹಿತಿ ನೀಡಿದರು.

ಇದೇ ವೇಳೆ ರಾಜ್ಯ ರೈತಸಂಘದ ರಾಜ್ಯ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ ಮಾತನಾಡಿ, ಜಲಾಶಯದ ಗೇಟ್ ಸಜ್ಜುಗೊಳಿಸುವಂತೆ ಈ ಹಿಂದಿನ ಶಾಸಕ ಎಸ್.ಭೀಮನಾಯ್ಕ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ಇದೀಗ ಗೇಟ್ ದುರಸ್ತಿಗೆ ₹೪.೨ ಕೋಟಿ ಅನುದಾನ ಬಿಡುಗಡೆಯಾದರೂ ಗೇಟ್ ದುರಸ್ತಿಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಗೇಟ್ ದುರಸ್ತಿ ಕಾರ್ಯ ಪೂರ್ಣಗೊಳಿಸಿ ಕೂಡಲೇ ಜಲಾಶಯಕ್ಕೆ ನೀರು ತುಂಬಿಸಬೇಕು. ಇಲ್ಲವಾದಲ್ಲಿ ಪಕ್ಷಾತೀತವಾಗಿ ಶಾಸಕರ ಮನೆ ಮುಂಭಾಗ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ತುಂಗಭದ್ರಾ ಒಳಹರಿವು ೧ಲಕ್ಷ ಕ್ಯೂಸೆಕ್‌ಗೂ ಅಧಿಕವಾಗಿದೆ. ಈಗಾಗಲೇ ರಾಜವಾಳದಿಂದ ಮಾಲವಿ ಜಲಾಶಯಕ್ಕೆ ನೀರು ತುಂಬಿಸುವ ಪ್ರಯತ್ನ ಮಾಡಬೇಕು. ಯಾವುದೇ ಕ್ಷಣದಲ್ಲಿ ತುಂಗಾಭದ್ರಾ ಒಳಹರಿವು ತಗ್ಗುವ ಸಾಧ್ಯತೆ ಇದೆ. ಕೂಡಲೇ ಮಾಲವಿ ಜಲಾಶಯ ತುಂಬಿಸಿದರೆ ಅಚ್ಚುಕಟ್ಟು ಪ್ರದೇಶದ ರೈತರು ನಿಮ್ಮನ್ನು ಸ್ಮರಿಸುತ್ತಾರೆ ಎಂದು ಡಿಸಿಗೆ ತಿಳಿಸಿದರು.

ಜಿಲ್ಲಾಧಿಕಾರಿ ರೈತ ಸಂಘದವರಿಗೆ ಪ್ರತಿಕ್ರಿಯಿಸಿ, ಗೇಟ್ ದುರಸ್ತಿ ಕುರಿತಂತೆ ನೀರಾವರಿ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿ ಪೂರಕ ಕ್ರಮ ಕೈಗೊಳ್ಳಲಾಗುವುದು. ಕೂಡಲೇ ರಾಜವಾಳ ಬಳಿಯ ಇಂಟೇಕ್‌ಚಾನೆಲ್‌ನಿಂದ ಮಾಲವಿ ಜಲಾಶಯಕ್ಕೆ ನೀರು ತರಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಇದಕ್ಕೂ ಮುನ್ನ ಜಿಲ್ಲಾಧಿಕಾರಿ ತಾಲೂಕಿನ ಪಿಂಜಾರ್ ಹೆಗ್ಡಾಳ್ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದರು. ಶಾಲೆಯ ಕಪ್ಪು ಹಲಗೆ ಮೇಲೆ ಬರೆಯುತ್ತಾ ಜೀವಶಾಸ್ತ್ರ ಪಾಠ ಮಾಡಿದರು. ಪಠ್ಯಕ್ಕೆ ಸಂಬಂಧಿಸಿದಂತೆ ಮಕ್ಕಳಿಗೆ ಪ್ರಶ್ನೆಗಳನ್ನು ಕೇಳಿ ವಿದ್ಯಾಭ್ಯಾಸದ ಬಗ್ಗೆ ಪರೀಕ್ಷಿಸಿದರು.

ಕಂದಾಯ ಅಧಿಕಾರಿಗಳು ಮಾಡುತ್ತಿದ್ದ ಸರ್ಕಾರಿ ಆಸ್ತಿಗಳ ಸರ್ವೇ ಕಾರ್ಯದ ಸ್ಥಳಕ್ಕೆ ಜಿಲ್ಲಾಧಿಕಾರಿ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲೆಯಲ್ಲಿ ೬೨,೭೩೭ ಸರ್ಕಾರಿ ಆಸ್ತಿಗಳಿದ್ದು, ಈ ಪೈಕಿ ಈಗಾಗಲೇ ೫೬,೮೦೬ ಸರ್ಕಾರಿ/ ಅನಾದೀನ ಆಸ್ತಿಗಳನ್ನು ಹೊಸದಾಗಿ ಸಿದ್ಧಪಡಿಸಿರುವ ಲ್ಯಾಂಡ್ ಬೀಟ್ ಅಪ್ಲಿಕೇಶನ್‌ನಲ್ಲಿ ಕಂದಾಯ ಅಧಿಕಾರಿಗಳು ಸರ್ವೇ ಮಾಡಿ ಫೋಟೋ ಸಹಿತ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಸರ್ವೇ ಮಾಡಲು ಬಾಕಿ ಉಳಿದಂತಹ ಆಸ್ತಿಗಳನ್ನು ಕೂಡಲೇ ಮುಕ್ತಾಯಗೊಳಿಸುವಂತೆ ಇದೆ ವೇಳೆ ಜಿಲ್ಲಾಧಿಕಾರಿ, ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಚಂದ್ರಶೇಖರ ಶಂಭಣ್ಣ ಗಾಳಿ, ರೈತಸಂಘದ ವಿಭಾಗೀಯ ಅಧ್ಯಕ್ಷ ಗೋಣಿಸಬಪ್ಪ, ಜಿಲ್ಲಾಧ್ಯಕ್ಷ ಆನಂದೇವನಹಳ್ಳಿ ಸಿದ್ದನಗೌಡ, ತಾಲೂಕು ಕಾರ್ಯದರ್ಶಿ ತಂಬ್ರಹಳ್ಳಿ ರವಿಕುಮಾರ್, ಬಸವನಗೌಡ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ