ಕನ್ನಡಪ್ರಭ ವಾರ್ತೆ ಕೋಲಾರ
ಪ್ರತಿಭಟನೆ ಉದ್ದೇಶಿಸಿ ಮಾಜಿ ಸಚಿವ ಕೆ.ಆರ್. ರಮೇಶ್ ಕುಮಾರ್ ಮಾತನಾಡಿ, ಇದು ಕೇವಲ ಕಾಂಗ್ರೆಸ್ ಪಕ್ಷದ ಪ್ರತಿಭಟನೆಯಲ್ಲ. ದೇಶದ ಪ್ರಜಾಪ್ರಭುತ್ವ ಹಾಗೂ ಮತದಾನದ ಹಕ್ಕಿನ ರಕ್ಷಣೆಗಾಗಿ ನಡೆಯುತ್ತಿರುವ ಸಾರ್ವಜನಿಕ ಹೋರಾಟವಾಗಿದೆ. ಸಂವಿಧಾನ, ಶಾಸನಸಭೆಗಳು, ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಮತದಾನದ ಹಕ್ಕು ಪರಸ್ಪರ ಅವಿನಾಭಾವ ಸಂಬಂಧ ಹೊಂದಿವೆ. ಜನರು ನೀಡುವ ಮತದ ಆಧಾರದ ಮೇಲೆಯೇ ಶಾಸನಸಭೆಗಳಿಗೆ ಪ್ರತಿನಿಧಿಗಳು ಆಯ್ಕೆಯಾಗುವುದರಿಂದ ಮತದಾನದ ಹಕ್ಕು ದುರ್ಬಲವಾದರೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆಯೇ ಪರಿಣಾಮ ಬೀರುತ್ತದೆ ಎಂದು ಹೇಳಿದರು.
ಮತದಾನದ ಹಕ್ಕು ಪ್ರತಿಯೊಬ್ಬ ನಾಗರಿಕನ ಮೂಲಭೂತ ಪ್ರಜಾಪ್ರಭುತ್ವದ ಹಕ್ಕಾಗಿದ್ದು, ಅದನ್ನು ರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಜನರ ವಿಶ್ವಾಸ ಉಳಿಯಬೇಕಾದರೆ ಚುನಾವಣಾ ಆಯೋಗದ ಕಾರ್ಯವೈಖರಿ ಪಾರದರ್ಶಕವಾಗಿರಬೇಕು. ಚುನಾವಣಾ ವ್ಯವಸ್ಥೆಗೆ ಸಂಬಂಧಿಸಿದ ಯಾವುದೇ ಅನುಮಾನಗಳಿಗೆ ಸ್ಪಷ್ಟತೆ ನೀಡುವ ಅಗತ್ಯವಿದೆ ಎಂದು ಹೇಳಿದರು.ಮತದಾರರ ಪಟ್ಟಿಯಿಂದ ಅರ್ಹರ ಹೆಸರುಗಳನ್ನು ಕೈಬಿಡಲಾಗಿದೆ ಎಂಬ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಬೇಕು. ಎಸ್‌ಐಆರ್ ಸೇರಿದಂತೆ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಸಾರ್ವಜನಿಕರ ಆತಂಕಗಳಿಗೆ ಸೂಕ್ತ ಉತ್ತರ ದೊರೆಯಬೇಕು. ಚುನಾವಣಾ ಆಯೋಗವು ಪ್ರಜಾಪ್ರಭುತ್ವದ ಆಶಯಗಳಿಗೆ ಅನುಗುಣವಾಗಿ ಪಾರದರ್ಶಕವಾಗಿ ಕಾರ್ಯನಿರ್ವಹಿಸುವ ಮೂಲಕ ಚುನಾವಣಾ ವ್ಯವಸ್ಥೆಯ ಮೇಲಿನ ಜನರ ನಂಬಿಕೆಯನ್ನು ಉಳಿಸಬೇಕು ಎಂದು ಒತ್ತಾಯಿಸಿದರು.
ಶಾಸಕ ಕೊತ್ತೂರು ಜಿ.ಮಂಜುನಾಥ್ ಮಾತನಾಡಿ, ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಸಾರ್ವಜನಿಕವಾಗಿ ಕೇಳಿಬರುತ್ತಿರುವ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತೆಗೆದು ಹಾಕುವಿಕೆ ಹಾಗೂ ಪರಿಷ್ಕರಣೆಯಲ್ಲಿ ಯಾವುದೇ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕು ಎಂದರು.
ಎಂಎಲ್ಸಿ ಎಂ.ಎಲ್. ಅನಿಲ್ ಕುಮಾರ್ ಮಾತನಾಡಿ, ಚುನಾವಣಾ ಆಯೋಗದ ಕೆಲವು ನಿರ್ಧಾರಗಳ ಕುರಿತು ಆಕ್ಷೇಪಗಳು ವ್ಯಕ್ತವಾಗಿವೆ. ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಬಂದಿರುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮ್ಯಾಕಲ ನಾರಾಯಣಸ್ವಾಮಿ, ಮುಳಬಾಗಿಲು ಕಾಂಗ್ರೆಸ್ ಅಭ್ಯರ್ಥಿ ಆದಿನಾರಾಯಣ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ ಶಿವಕುಮಾರ್, ತಾಲೂಕು ಅಧ್ಯಕ್ಷ ವೇಮಗಲ್ ಮುನಿಯಪ್ಪ ಆಹಾರ ನಿಗಮದ ಉಪಾಧ್ಯಕ್ಷ ಊರಬಾಗಿಲು ಶ್ರೀನಿವಾಸ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸೈಯದ್ ಅಫ್ಸರ್, ಮೈಲಾಂಡಹಳ್ಳಿ ಮುರಳಿ, ಮುಖಂಡರಾದ ಸೀಸಂದ್ರ ಗೋಪಾಲಗೌಡ, ಉರಟ ಅಗ್ರಹಾರ ಚೌಡರೆಡ್ಡಿ ಜಯದೇವ್, ಕೆ.ಕೆ ಮಂಜುನಾಥ್, ಎಸ್ಟಿ ಘಟಕದ ಅಂಬರೀಷ್, ಒಬಿಸಿ ಮಂಜುನಾಥ್ ಇದ್ದರು.