ಹವಾಮಾನ ವೈಪರೀತ್ಯ: ಗೇರು, ಮಾವು ಕೃಷಿಗೆ ರೋಗ ಬಾಧೆ

KannadaprabhaNewsNetwork |  
Published : Jan 27, 2025, 12:49 AM IST
 ಗೇರು ಕೃಷಿ ಯಲ್ಲಿ ಟಿ ಸೊಳ್ಳೆ ಕಾಟದಿಂದ  ರಸ ಹೀರಿದ ಬಳಿಕ  ಹೂ ಗೊಂಚಲುಗಳು ಕಪ್ಪಾಗಿ ಒಣಗಲು ಪ್ರಾರಂಭಿಸಿ ಹೂವು ಉದುರುವುದತ್ತದೆ  | Kannada Prabha

ಸಾರಾಂಶ

ಅಕಾಲಿಕ ಮಳೆ ಹಾಗೂ ಮೋಡ ಕವಿದ ವಾತಾವರಣದಿಂದ ಈ ಬಾರಿ ಮಾವು ಹಾಗೂ ಗೇರು ಬೆಳೆಗಳಲ್ಲಿ ಫಸಲು ಕುಂಠಿತಗೊಳ್ಳುವ ಆತಂಕದಲ್ಲಿ ಕರಾವಳಿಯ ಬೆಳೆಗಾರರಿದ್ದಾರೆ. ಅದರಲ್ಲೂ ಹೆಚ್ಚಾಗಿ ಮೋಡ ಕವಿದ ಆದ್ರತೆಯ ವಾತಾವರಣದಲ್ಲಿ ರೋಗಗಳು ಬಾಧಿಸಲು ಆರಂಭಿಸಿದೆ.

ರಾಂ ಅಜೆಕಾರುಕನ್ನಡಪ್ರಭ ವಾರ್ತೆ ಕಾರ್ಕಳ

ಅಕಾಲಿಕ ಮಳೆ ಹಾಗೂ ಮೋಡ ಕವಿದ ವಾತಾವರಣದಿಂದ ಈ ಬಾರಿ ಮಾವು ಹಾಗೂ ಗೇರು ಬೆಳೆಗಳಲ್ಲಿ ಫಸಲು ಕುಂಠಿತಗೊಳ್ಳುವ ಆತಂಕದಲ್ಲಿ ಕರಾವಳಿಯ ಬೆಳೆಗಾರರಿದ್ದಾರೆ. ಅದರಲ್ಲೂ ಹೆಚ್ಚಾಗಿ ಮೋಡ ಕವಿದ ಆದ್ರತೆಯ ವಾತಾವರಣದಲ್ಲಿ ರೋಗಗಳು ಬಾಧಿಸಲು ಆರಂಭಿಸಿದೆ.

ಮಾವಿನಲ್ಲಿ ಜಿಗಿಹುಳುಗಳ ಸಮಸ್ಯೆ ಮತ್ತು ಗೇರಿನಲ್ಲಿ ಟಿ ಸೊಳ್ಳೆಗಳ ಸಮಸ್ಯೆ, ಶಿಲೀಂಧ್ರಗಳ ಬಾಧೆ ಶುರುವಾಗಿದೆ. ಇದರಿಂದ ಏಕಕಾಲದಲ್ಲಿ ಗೇರಿನಲ್ಲಿ ಚಿಗುರು ಮತ್ತು ಹೂ ಗೊಂಚಲು ಬಿಡುವುದರಿಂದ ಒಣಗಲು ಅರಂಭಿಸಿದೆ. ಈ ಟಿ ಸೊಳ್ಳೆಗಳು ಚೂಪಾದ ಕೊಂಬಿನಿಂದ ಹೂ ಗೊಂಚಲ ಚುಚ್ಚಿ ರಸ ಹೀರುತ್ತವೆ.

ನಿರ್ವಹಣೆ ಹೇಗೆ: ಗೇರು ಕೃಷಿಯಲ್ಲಿ ಟಿ ಸೊಳ್ಳೆ ರಸ ಹೀರಿದ ಬಳಿಕ ಹೂ ಗೊಂಚಲುಗಳು ಕಪ್ಪಾಗಿ ಒಣಗಲು ಪ್ರಾರಂಭಿಸಿ ಉದುರುವುದತ್ತದೆ. ಇದರಿಂದಾಗಿ ಸುಮಾರು ಶೇ.70ರಷ್ಟು ಫಸಲು ನಷ್ಟವಾಗುತ್ತದೆ. ಅದಕ್ಕಾಗಿ ಬೋರ್ಡೋ ಮತ್ತು ಕಾಪರ ಆಕ್ಸಿಕ್ಲೋರೈಡ್ ದ್ರಾವಣ ಸಿಂಪಡಿಸಬೇಕು. ಅದರಲ್ಲೂ ಈ ದ್ರಾವಣವು ರೋಗ ಶುರುವಾಗುವ ಸಂದರ್ಭದಲ್ಲೇ ಸಿಂಪಡಿಸಬೇಕು.

ಶಿಲೀಂಧ್ರಗಳ ಬಾಧೆ ತಡೆಗಟ್ಟಲು ಬೋರ್ಡೋ ದ್ರಾವಣವನ್ನು ಸಿಂಪಡಿಸಿ ಹತೋಟಿಗೆ ತರಬೇಕು. ಮಾವು ಬೆಳೆಯಲ್ಲೂ ಹೂ ಚಿಗುರು ತಿನ್ನುವ ಕೀಟಗಳ ನಿಯಂತ್ರಣಕ್ಕೆ ಡೈಮಿಥೋಯೇಟ್ ಅಥವಾ ಕ್ಲೋರೋಫೈರಿಫಾಸ್ 2 ಮಿ.ಲೀ. ಪ್ರತಿ ಲೀಟರ್ ನೀರಿಗೆ ಸೇರಿಸಿ, ಐಐಎಚ್‌ಆರ್‌ ಮ್ಯಾಂಗೋ ಸ್ಪೆಷಲ್‌ 5 ಗ್ರಾಂ. ಪ್ರತಿ ಲೀಟರ್‌ ನೀರಿಗೆ ಸೇರಿಸಿ ಸಿಂಪಡಿಸುವುದರಿಂದ ರೋಗಗಳ ನಿಯಂತ್ರಣ ಸಾಧ್ಯ.

ಒಟ್ಟು ಬೆಳೆ: ಕರ್ನಾಟಕ ರಾಜ್ಯದಲ್ಲಿ ಒಟ್ಟು ಮಾವು, ಗೇರು, ಹಲಸಿನ ಪೈಕಿ ಉಡುಪಿ ಜಿಲ್ಲೆಯ ಪಾಲು ಬಹುತೇಕ ಕಡಿಮೆ. ಉಡುಪಿ ಜಿಲ್ಲೆಯಲ್ಲಿ ವಾರ್ಷಿಕವಾಗಿ ಸುಮಾರು 440.49 ಹೆಕ್ಟೇರ್ ಪ್ರದೇಶಗಳಲ್ಲಿ ಮಾವು ಬೆಳೆಯುತ್ತಿದ್ದು, 4900 ಮೆಟ್ರಿಕ್ ಟನ್ ಉತ್ಪಾದನೆಯಾಗುತ್ತದೆ. 17386 ಹೆಕ್ಟೇರ್ ಪ್ರದೇಶಗಳಲ್ಲಿ ಗೇರು ಬೆಳೆಯಿದ್ದು, 34772 ಮೆಟ್ರಿಕ್ ಟನ್ ಗೇರು ಬೀಜ ಉತ್ಪಾದನೆಯಾಗುತ್ತದೆ.

ಅದರಲ್ಲೂ ಕಾರ್ಕಳ ಹಾಗೂ ಹೆಬ್ರಿ ತಾಲೂಕಿನಲ್ಲೂ ಮಾವು 52 ಹೆಕ್ಟೇರ್, ಗೇರು 777 ಹೆಕ್ಟೇರ್ ಬೆಳೆಯುತ್ತಾರೆ. ಹೆಬ್ರಿ ಭಾಗದಲ್ಲಿ ಹೆಚ್ಚಾಗಿ ಮಾವು ಬೆಳೆ ಬೆಳೆಯಲಾಗುತ್ತದೆ.

.................ಮಾವು ಹಾಗೂ ಗೇರು ಹೂವು ಬಿಡುವ ಸಮಯದಲ್ಲಿ ಮೋಡಗಳಿದ್ದರೆ ರೋಗಗಳು ಹೆಚ್ಚು. ಮಾವಿನಲ್ಲಿ ಜಿಗಿಹುಳುಗಳ ಸಮಸ್ಯೆ ಮತ್ತು ಗೇರಿನಲ್ಲಿ ಟಿ ಸೊಳ್ಳೆಗಳ ಸಮಸ್ಯೆ, ಅಕಾಲಿಕ ಮಳೆ ಸಂದರ್ಭದಲ್ಲಿ ಶಿಲೀಂಧ್ರಗಳ ಬಾಧೆ ಇರುತ್ತದೆ. ಅದಕ್ಕಾಗಿ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು.। ಚೈತನ್ಯ, ವಿಜ್ಞಾನಿ, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌