ಹವಾಮಾನ ಏರುಪೇರು: ಅಡಿಕೆ ಮುಗುಡು ಉದುರುವಿಕೆ ಜೋರು

KannadaprabhaNewsNetwork |  
Published : Jun 25, 2025, 12:34 AM IST
24ಎಸ್.ಆರ್.ಎಸ್6 ಪೊಟೋ1 (ನೆಲ ಸೇರಿದ ಎಳೆಯ ಅಡಿಕೆ ಕಾಯಿಗಳು.)24ಎಸ್.ಆರ್.ಎಸ್6 ಪೊಟೋ2 (ಅಡಿಕೆ ಮರ) | Kannada Prabha

ಸಾರಾಂಶ

ಅಬ್ಬರದ ಮಳೆಗೆ ಅಡಿಕೆ ಬೆಳೆಗೆ ರೋಗ ಬಾಧೆ ಸಾಮಾನ್ಯವಾಗಿದ್ದರೂ, ಈ ಹಿಂದೆ ನಿಯಂತ್ರಣಕ್ಕೆ ಬರುತ್ತಿತ್ತು

ಪ್ರವೀಣ ಹೆಗಡೆ ಕರ್ಜಗಿ ಶಿರಸಿ

ಬಿಸಿಲು-ಮಳೆಯಿಂದ ಹವಾಮಾನದಲ್ಲಿ ಏರುಪೇರು ಉಂಟಾಗಿ ಅಡಿಕೆ ಬೆಳೆಯ ಮೇಲೆ ನೇರ ಪರಿಣಾಮ ಬಿದ್ದು ಎಳೆಯ ಅಡಿಕೆ ಕಾಯಿಗಳು(ಮಿಳ್ಳೆ) ಹೆಚ್ಚಿನ ಪ್ರಮಾಣದಲ್ಲಿ ನೆಲ ಸೇರುತ್ತಿದ್ದು, ಮೊದಲೇ ಹಲವಾರು ರೋಗ ಬಾಧೆಯಿಂದ ಕಂಗೆಟ್ಟಿರುವ ಬೆಳೆಗಾರರು ಇನ್ನಷ್ಟು ಸಂಕಷ್ಟ ಎದುರಿಸುವಂತಾಗಿದೆ.

ಶಿರಸಿ, ಸಿದ್ದಾಪುರ ಹಾಗೂ ಯಲ್ಲಾಪುರ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾದ ಸುಮಾರು ೬೦೦ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಎಳೆ ಅಡಿಕೆ ಉದುರುತ್ತಿದ್ದು, ಹುಲೇಕಲ್, ಸಂಪಖಂಡ, ಭೈರುಂಬೆ, ಸಿದ್ದಾಪುರ ತಾಲೂಕಿನ ನಿಲ್ಕುಂದ, ನಾಣಿಕಟ್ಟಾ, ಕಂಚಿಕೈ, ಯಲ್ಲಾಪುರ ತಾಲೂಕಿನ ಅನೇಕ ಕಡೆಗಳಲ್ಲಿ ಅಡಿಕೆ ಉದುರಲಾರಂಭಿಸಿದೆ. ಅಬ್ಬರದ ಮಳೆಗೆ ಅಡಿಕೆ ಬೆಳೆಗೆ ರೋಗ ಬಾಧೆ ಸಾಮಾನ್ಯವಾಗಿದ್ದರೂ, ಈ ಹಿಂದೆ ನಿಯಂತ್ರಣಕ್ಕೆ ಬರುತ್ತಿತ್ತು. ಇತ್ತೀಚಿನ ಕೆಲವು ವರ್ಷಗಳಿಂದ ಕಂಡು ಬರುತ್ತಿರುವ ವಿವಿಧ ರೀತಿಯ ರೋಗಗಳು ಅಡಿಕೆಯನ್ನೇ ಅವಲಂಬಿಸಿರುವ ಸಾವಿರಾರು ಕೃಷಿಕರನ್ನು ನಷ್ಟಕ್ಕೆ ದೂಡಿ ಆತಂಕ ಉಂಟು ಮಾಡಿದೆ.

ಅಡಿಕೆಗೆ ಕೊಳೆರೋಗ, ಎಲೆಹಳದಿ ರೋಗ, ಎಲೆಚುಕ್ಕಿ ರೋಗ, ಸಿಂಗಾರ ಒಣಗುವುದು ಮತ್ತಿತರ ಕಾಯಿಲೆಗಳು ಬಾಧಿಸುತ್ತಿರುವುದರಿಂದ ಕೃಷಿಕರು ಮೊದಲೇ ಹೈರಾಣಾಗಿದ್ದಾರೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣಾಂಶದಿಂದ ಅಡಿಕೆ ಮುಗುಡು ಉದುರಿದರೆ, ಈಗ ಕೀಟ ಹಾಗೂ ರೋಗಬಾಧೆಯಿಂದ ಎಳೆಯ ಅಡಿಕೆ ನೆಲ ಸೇರುತ್ತಿವೆ. ಮಳೆ-ಬಿಸಿಲಿನ ವಾತಾವರಣ ಅಡಿಕೆ ಕೃಷಿಯ ಮೇಲೆ ಪರಿಣಾಮ ಬೀರುತ್ತಿದೆ. ಎಳೆ ಅಡಿಕೆ ಉದುರಲು ಈ ಕಾರಣವೂ ಇರಬಹುದು ಎನ್ನಲಾಗುತ್ತಿದೆ.

ತೋಟಕ್ಕೆ ಪೋಟ್ಯಾಶಿಯಂ ಮತ್ತು ಪೋಷಕಾಂಶಗಳ ಕೊರತೆಯಿಂದ ಈ ರೀತಿ ಅಡಕೆ ಉದುರುತ್ತದೆ. ಬೇಸಿಗೆಯ ದಿನಗಳಲ್ಲಿ ಅಡಕೆ ಮರಗಳಿಗೆ ಸುಣ್ಣ, ಪೋಷಕಾಂಶ ನೀಡಿದರೆ ಈ ರೀತಿ ಸಮಸ್ಯೆಯಿಂದ ಬಚಾವಾಗಬಹುದು ಎಂಬುದನ್ನು ಹಲವು ರೈತರೂ ಹೇಳಿದ್ದಾರೆ.ಇನ್ನೊಂದೆಡೆ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಎಳೆ ಅಡಕೆಗೆ ಅನೇಕ ಕಡೆ ಪೆಂಟಾಮಿಡ್ ಬಗ್ ಕಾಟ ಕಾಣಿಸಿಕೊಳ್ಳುತ್ತವೆ. ಸೊಳ್ಳೆ ಮಾದರಿಯ ಸಣ್ಣ ಕೀಟಗಳು ಎಳೆ ಅಡಕೆಯ ಮೇಲೆ ಕುಳಿತು ರಸ ಹೀರುತ್ತವೆ.ಇದರಿಂದ ಅಡಿಕೆ ಬೆಳವಣಿಗೆ ನಿಂತು ತೊಟ್ಟಿನ ಭಾಗದಲ್ಲಿ ಕಳಚಿಕೊಳ್ಳುತ್ತಿವೆ. ಈ ಸಮಸ್ಯೆಗೆ ಬೇಸಿಗೆಯ ಅವಧಿಯಲ್ಲಿಯೇ ಅಡಿಕೆ ಮರಗಳಿಗೆ ಸೂಕ್ತ ಪೋಷಕಾಂಶ ನೀಡುವ ಮೂಲಕ ಬಗೆಹರಿಸಬಹುದಾಗಿದೆ ಎನ್ನುತ್ತಾರೆ ತೋಟಗಾರಿಕಾ ಇಲಾಖೆ ಅಧಿಕಾರಿಗಳು.

ಎಳೆಯ ಅಡಿಕೆ ಕಾಯಿಯ ರಸವನ್ನು ತಿಗಣಿಯಂತಹ ಕೀಟ ಹೀರುವುದರಿಂದ ನೆಲಕ್ಕೆ ಉದುರುತ್ತವೆ.ಇದನ್ನು ನಿಯಂತ್ರಿಸಲು ಮೇ ತಿಂಗಳಿನಲ್ಲಿ ಬಯೋಫೈಟ್ ಜತೆ ಎಳೆಯ ಅಡಿಕೆ ಉದುರುವುದನ್ನು ತಡೆಗಟ್ಟಲು ನೀಮ್ ಆಯಿಲ್, ರೋಗಾರ್, ಇಮಿಡಾ ಕ್ಲೋಪಡ್, ಮೊನೊಕ್ರೋಟೋಫೊಲ್ ಇದರದಲ್ಲಿ ಯಾವುದಾದರೂ ಒಂದನ್ನು ಸೇರಿಸಿ ಸಿಂಪಡಣೆ ಮಾಡುತ್ತಿದ್ದರು. ಮೇ ಕೊನೆಯಲ್ಲಿ ವಾಯುಭಾರ ಕುಸಿತದಿಂದ ಮಳೆಯಾದ ಕಾರಣದಿಂದ ಬಯೋಫೈಟ್ ಸಿಂಡಣೆಗೆ ಅವಕಾಶ ಲಭಿಸಿಲ್ಲ. ಮಳೆ-ಬಿಸಿಲಿನ ವಾತಾವರಣದಲ್ಲಿ ರಸ ಹೀರುವ ತಿಗಣಿಯ ಪ್ರಮಾಣ ಹೆಚ್ಚಿರುತ್ತದೆ. ಮೇ ತಿಂಗಳಿನಲ್ಲಿ ಔಷಧಿ ಸಿಂಪಡಣೆಯಿಂದ ಹತೋಟಿ ಸಾಧ್ಯ ಎಂದು ಅಧಿಕಾರಿಗಳು ತಿಳಿಸಿದರು.

ಅಡಿಕೆ ಮರದ ಬುಡದಲ್ಲಿ ಎರಡ್ಮೂರು ಕೆಜಿಯಷ್ಟು ಎಳೆಯ ಅಡಿಕೆ ಉದಿರುವುದನ್ನು ನೋಡಿ, ಬಹಳ ಬೇಸರವಾಗುತ್ತಿದೆ. ಮಳೆ ಹೀಗೆ ಮುಂದುವರೆದರೆ ಅಡಿಕೆ ಮಿಳ್ಳೆಗಳೆಲ್ಲವೂ ಉದುರಿ ಮರ ಬರಿದಾಗುವ ಆತಂಕ ಕಾಡುತ್ತಿದೆ ಎಂದು ಕರಸುಳ್ಳಿ ಅಡಿಕೆ ಬೆಳೆಗಾರ ಸುಭಾಸ ಭಟ್ಟ ತಿಳಿಸಿದ್ದಾರೆ.

ಆತಂಕದಲ್ಲಿ ಅಡಿಕೆ ಬೆಳೆಗಾರರು

ಕೆಲವು ಭಾಗಗಳಲ್ಲಿ ಎಲೆಚುಕ್ಕೆ ರೋಗವು ಎಲೆಗಳಿಗೆ ಮಾತ್ರವಲ್ಲದೇ ಅಡಿಕೆ ಮೇಲೂ ಪರಿಣಾಮ ಬೀರಿದ್ದು, ರೋಗಕ್ಕೆ ತುತ್ತಾದ ಅಡಿಕೆ ಗಾತ್ರ ಕಡಿಮೆಯಾಗಿ, ತೂಕವೂ ಇಳಿಕೆಯಾಗಿ ಇಳುವರಿಯ ತೀರಾ ಕಡಿಮೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷವೂ ಬೆಳೆಯ ಪ್ರಮಾಣವೂ ಇಳಿಮುಖವಾಗಿದ್ದು, ಎಲೆಚುಕ್ಕೆ ರೋಗವು ವರ್ಷದಿಂದ ವರ್ಷಕ್ಕೆ ವಿಸ್ತರಣೆಯಾಗಿ, ಅಡಿಕೆ ತೋಟಗಳೆಲ್ಲವೂ ಬರಿದಾಗುವ ಆತಂಕ ಒಂದೆಡೆಯಾದರೆ ಈ ವರ್ಷ ಮೇ ತಿಂಗಳಿನಲ್ಲಿ ಬಯೋಫೈಟ್ ಸಿಂಗಡಣೆಯೂ ಆಗಿಲ್ಲ. ಮಳೆ-ಬಿಸಲಿನ ವಾತಾವರಣದಿಂದ ಎಳೆ ಅಡಿಕೆ ಉದುರುವುದರ ಜತೆ ಕೊಳೆ ರೋಗವೂ ವ್ಯಾಪಿಸಿ ಕಷ್ಟಕ್ಕೆ ಸಿಲುಕುವ ಆತಂಕ ಬೆಳೆಗಾರರಿಗೆ ಎದುರಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''