ಅನುಮಾನಸ್ಪದ ಚಟುವಟಿಕೆ ನಡೆದರೆ ಮಾಹಿತಿ ನೀಡಿ

KannadaprabhaNewsNetwork |  
Published : Jun 25, 2025, 12:34 AM IST
ಸಭೆ ನಡೆಯುತ್ತಿರುವುದು     | Kannada Prabha

ಸಾರಾಂಶ

ವಿದ್ಯಾರ್ಥಿಗಳನ್ನು ತಮ್ಮ ಮಿಶನರಿ ಶಾಲೆಗೆ ಸೇರಿಸುವಂತೆ ಹಲವರು ಮಕ್ಕಳಿಗೆ, ಪಾಲಕರಿಗೆ ಹೇಳುತ್ತಿದ್ದಾರೆ, ಸಾಣಿಕಟ್ಟಾದಲ್ಲಿ ಸಹ ಮಕ್ಕಳಿಗೆ ಚಾಕಲೇಟ್ ನೀಡುತ್ತಾ ತಮ್ಮ ಸಂಸ್ಥೆಯ ಶಾಲೆಗೆ ಬರುವಂತೆ ಒತ್ತಾಯಿಸುತ್ತಾರೆ ಎಂಬ ಆರೋಪ ಜನರಿಂದ ಕೇಳಿ ಬಂತು

ಗೋಕರ್ಣ: ಇಲ್ಲಿನ ತಲಗೇರಿ ಆಗೇರ ಕಾಲನಿಯಲ್ಲಿನ ಮನೆಯೊಂದರಲ್ಲಿ ಭಾನುವಾರ ಪ್ರಾರ್ಥನೆ ಮೂಲಕ ಧರ್ಮ ಬೋಧನೆ ಮಾಡಿ ಮತಾಂತರಕ್ಕೆ ಯತ್ನಿಸುತ್ತಿದ್ದಾರೆ ಎನ್ನಲಾದ ಘಟನೆಗೆ ಸಂಬಂಧಿಸಿದಂತೆ ಎರಡು ಸಮುದಾಯದವರನ್ನು ಕರೆದು ಪಿಐ ಶ್ರೀಧರ ಎಸ್.ಆರ್‌ ಮಂಗಳವಾರ ಸಭೆ ನಡೆಸಿದರು.

ಕಳೆದ ಐದು ವರ್ಷಗಳಿಂದ ಹೊರಗಿನವರು ಬಂದು ವಿವಿಧ ಆಮಿಷ ಒಡ್ಡಿ, ಬಡ ಹಿಂದೂಗಳನ್ನು ಮತಾಂತರ ಮಾಡುತ್ತಿದ್ದಾರೆ ಎಂದು ಈ ಭಾಗದ ಸಾರ್ವಜನಿಕರು ಆರೋಪಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿಗಳು, ಯಾವುದೇ ಅನುಮಾನಸ್ಪದ ಚಟುವಟಿಕೆ ನಡೆಯುತ್ತಿದ್ದರೆ ನಮಗೆ ತಿಳಿಸಿ, ನಾವು ಸೂಕ್ತ ವಿಚಾರಣೆ ನಡೆಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಇಲ್ಲಿನ ವಿದ್ಯಾರ್ಥಿಗಳನ್ನು ತಮ್ಮ ಮಿಶನರಿ ಶಾಲೆಗೆ ಸೇರಿಸುವಂತೆ ಹಲವರು ಮಕ್ಕಳಿಗೆ, ಪಾಲಕರಿಗೆ ಹೇಳುತ್ತಿದ್ದಾರೆ, ಸಾಣಿಕಟ್ಟಾದಲ್ಲಿ ಸಹ ಮಕ್ಕಳಿಗೆ ಚಾಕಲೇಟ್ ನೀಡುತ್ತಾ ತಮ್ಮ ಸಂಸ್ಥೆಯ ಶಾಲೆಗೆ ಬರುವಂತೆ ಒತ್ತಾಯಿಸುತ್ತಾರೆ ಎಂಬ ಆರೋಪ ಜನರಿಂದ ಕೇಳಿ ಬಂತು. ಪ್ರತಿ ಭಾನುವಾರ ಹೊರಗಿನವರು ಬಂದು ಜನರನ್ನು ಸೇರಿಸುತ್ತಾರೆ ಎಂದು ಸಾರ್ವಜನಿಕರು ಹೇಳಿದರು.

ಪ್ರಾರ್ಥನೆ, ಬೋಧನೆ ಕುರಿತಂತೆ ಅಂದು ನಡೆದ ಮನೆಯವರು ಹಾಗೂ ಪಾಲ್ಗೊಂಡವರು ಮಾತನಾಡಿ, ನಾವು ಆರಾಧಿಸುವ ದೇವರನ್ನು ಪ್ರಾರ್ಥಿಸುತ್ತೇವೆ ಎನ್ನುತ್ತಾ ಮತಾಂತರಗೊಂಡಿದ್ದನ್ನು ಪರೋಕ್ಷವಾಗಿ ಒಪ್ಪಿಕೊಂಡು ನಾವು ಯಾರಿಗೂ ಕರೆದಿಲ್ಲ ಅವರೇ ಬಂದಿದ್ದಾರೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಶ್ರೀಧರ ನಿಮ್ಮ ಆರಾಧನೆ, ನಿಮ್ಮ ವೈಯಕ್ತಿಕ ಕಾರ್ಯಕ್ರಮಕ್ಕೆ ಯಾರೇ ಅಡ್ಡಿ ಬಂದರೂ ನಮಗೆ ತಿಳಿಸಿ, ಆದರೆ ಹೊರಗಿನವರನ್ನು ಕರೆತಂದು ಅಕ್ಕಪಕ್ಕದವರನ್ನು ಸೇರಿಸಿ ಒತ್ತಾಯದ ಮೂಲಕ ಧರ್ಮ ಬೋಧನೆ ಮತ್ತಿತರ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಕುರಿತು ದೂರು ಬಂದರೆ ಕಾನೂನು ಕ್ರಮ ಜರುಗಿಸ ಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪಿಎಸ್ಐ ಖಾದರ್ ಬಾಷಾ, ಶಶಿಧರ ಹಾಜರಿದ್ದರು.

ಈ ವೇಳೆ ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಮಂಜುನಾಥ ಜನ್ನು, ಗ್ರಾಪಂ ಸದಸ್ಯ ಶೇಖರ ನಾಯ್ಕ, ಗಣಪತಿ ನಾಯ್ಕ, ಸೂರ್ಯ ನಾಯಕ, ವಿಶಾಲ ನಾಯಕ, ಗಣೇಶ ನಾಯಕ, ಸಂಜೀವ ನಾಯ್ಕ, ವಿನಯ ನಾಯ್ಕ, ಸಂಜಯ ನಾಯ್ಕ, ರಾಧಾಕೃಷ್ಣ ನಾಯ್ಕ, ಸುರೇಂದರ ಮೂಡಂಗಿ, ವೆಂಕಟೇಶ ಮೂಡಂಗಿ, ಗಣೇಶ ಪಂಡಿತ್, ಮಾರುತಿ ನಾಯ್ಕ, ದೀಪಕ ನಾಯ್ಕ, ಸಂತೋಷ ನಾಯ್ಕ, ರಾಜೇಶ ನಾಯಕ, ವಿನಯ ನಾಯ್ಕ ಸೇರಿದಂತೆ ಇತರರು ಹಾಜರಿದ್ದರು.

ನಾವು ಯಾವುದೇ ಸಂದೇಹ ಬಂದರೂ ಪೊಲೀಸರಿಗೆ ವಿಷಯ ತಿಳಿಸಿ ಅವರಿಂದಲೇ ಕ್ರಮ ಜರುಗಿಸಲು ಒತ್ತಾಯಿಸುತ್ತೇವೆ. ಇದರಂತೆ ಪಿಐ ಶ್ರೀಧರ ಸಾರ್ವಜನಿಕರಿಂದ ನೈಜ ಸ್ಥಿತಿಗತಿ ತಿಳಿಯುವ ಮೂಲಕ ಸೂಕ್ತ ಸಲಹೆ ಸೂಚನೆ ನೀಡಿದ್ದು, ಇನ್ನು ಮುಂದೆ ಇಂತಹ ಘಟನೆ ನಡೆಯದಂತೆ ನಿಗಾ ವಹಿಸಬೇಕು ಎಂದು ಮನವಿ ಮಾಡಿದ್ದೇವೆ. ಆದರೂ ಮತ್ತೆ ಏನಾದರೂ ನಡೆದರೆ ನಾವು ಇಲಾಖೆ ಮಾಹಿತಿ ನೀಡುತ್ತೇವೆ ಎಂದು ಮಾಜಿ ಗ್ರಾಪಂ ಅಧ್ಯಕ್ಷ, ಹಾಲಿ ಸದಸ್ಯ ಮಂಜುನಾಥ ಜನ್ನು ತಿಳಿಸಿದ್ದಾರೆ.

ಎಲ್ಲರು ಸೌಹಾರ್ದಯುತವಾಗಿ ಬಾಳ್ವೆ ನಡೆಸುವ ನಮ್ಮ ಗ್ರಾಮದಲ್ಲಿ ಹೊರಗಿನಿಂದ ಬಂದವರು ತೊಂದರೆ ನೀಡುತ್ತಿದ್ದು, ಇಂತವರ ಬಗ್ಗೆ ಸೂಕ್ತ ಕ್ರಮಕ್ಕೆ ಪೊಲೀಸ್ ಇಲಾಖೆಗೆ ತಿಳಿಸಲಾಗಿತ್ತು. ಅದರಂತೆ ಪಿಐ ಶ್ರೀಧರ ಸಭೆ ನಡೆಸಿ ಸಮಾಜದಲ್ಲಿ ಗೊಂದಲು ಉಂಟು ಮಾಡುವ ಚಟುವಟಿಕೆ ನಡೆಸದಂತೆ ಖಡಕ್ ಎಚ್ಚರಿಕೆ ನೀಡಿದ್ದು, ಈ ಮೂಲಕ ಸಾರ್ವಜನಿಕರ ರಕ್ಷಣೆಗೆ ಇಲಾಖೆ ಜೊತೆಗಿದೆ ಎಂಬ ಸಂದೇಶ ನೀಡಿದ್ದು, ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡು ಬಂದರೆ ಪೊಲೀಸರಿಗೆ ಮಾಹಿತಿ ನೀಡಿ ಸಹಕರಿಸುತ್ತೇವೆ ಎಂದು ತಲಗೇರಿ ನಿವಾಸಿ ಸೂರ್ಯ ನಾಯಕ ಹೇಳಿದ್ದಾರೆ.

PREV

Recommended Stories

ಸರ್ಕಾರಿ ಯೋಜನೆ ತಲುಪಲು ‘ಅರಿವು’ ಕಾರ್ಯಕ್ರಮ ಸಹಕಾರಿ: ಯಶ್ಪಾಲ್‌ ಸುವರ್ಣ
ತಾಯಿ ಹೆಸರಿನಲ್ಲಿ ಒಂದು ಸಸಿ ಹಾಗೂ ಬೀಜದುಂಡೆ ಕಾರ್ಯಕ್ರಮಕ್ಕೆ ಚಾಲನೆ