ವಾಡಿಕೆ ಮಳೆ ಪ್ರಮಾಣ ಅಧಿಕ
ಕನ್ನಡಪ್ರಭ ವಾರ್ತೆ, ತರೀಕೆರೆಪ್ರಸ್ತುತ ಅಜ್ಜಂಪುರ ಮತ್ತು ತರೀಕೆರೆ ತಾಲೂಕುಗಳಲ್ಲಿನ ಹವಾಮಾನ ಬಿತ್ತನೆ ಕಾರ್ಯಕ್ಕೆ ಪೂರಕವಾಗಿದೆ ಎಂದು ತರೀಕೆರೆ ತಾಲೂಕು ಕೃಷಿ ಸಹಾಯಕ ನಿರ್ದೇಶಕರು ಲೋಕೇಶ್ ಅವರು ಮಾಹಿತಿ ನೀಡಿದ್ದಾರೆ.
ತರೀಕೆರೆ ತಾಲೂಕಿನಲ್ಲಿ ಜನವರಿಯಿಂದ ಮೇ ತಿಂಗಳ 23ರವರೆಗೆ ವಾಡಿಕೆ ಮಳೆ 103.1 ಎಂ.ಎಂ.ಇದ್ದುಸೀ ವರ್ಷ 129.1 ಎಂ.ಎಂ.ಮಳೆಯಾಗಿ ಶೇ.25 ರಷ್ಟು ಹೆಚ್ಚು ಮಳೆಯಾಗಿದೆ. ಅಜ್ಜಂಪುರ ತಾಲೂಕಿಗೆ ಸಂಬಂಧಿಸಿದಂತೆ ವಾಡಿಕೆ ಮಳೆ 97 ಎಂಎಂ ಇದ್ದು ಈಬಾರಿ128.3 ಎಂ.ಎಂ.ಮಳೆಯಾಗಿದೆ ಶೇ.32 ರಷ್ಟು ಮಳೆ ಅಧಿಕವಾಗಿದೆ ಎಂದು ತಿಳಿಸಿದ್ದಾರೆ.ರೈತರು ಮುಸುಕಿನ ಜೋಳ, ಶೇಂಗಾ, ಈರುಳ್ಳಿ ಬೆಳೆಗಳ ಬಿತ್ತನೆ ಮಾಡಲು ಅವರು ಮನವಿ ಮಾಡಿದ್ದು, ರೈತ ಸಂರರ್ಕ ಕೇಂದ್ರಗಳಲ್ಲಿ ಜೋಳ, ಶೇಂಗಾ, ಅಲಸಂದೆ ಬತ್ತನೆ ಬೀಜ ದಾಸ್ತಾನಿದೆ ಎಂದ ಅವರು ಈ ಭಾಗದ ಹಲವು ರೈತರು ಬಿತ್ತನೆ ಮಾಡಲು ಭೂಮಿ ಹಸನು ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಮಾಹಿತಿ ನೀಡಿದರು.
ತರೀಕೆರೆ ತಾಲೂಕಿನಲ್ಲಿ 9 ಸಾವಿರ ಹೆಕ್ಟೇರ್ ಮತ್ತು ಅಜ್ಜಂಪುರ ತಾಲೂಕಿನಲ್ಲಿ 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ, ಶೇಂಗಾ, ಈರುಳ್ಳಿ ಬಿತ್ತನೆಗೆ ಭೂಮಿ ಹಸನು ಮಾಡಲಾಗುತ್ತಿದೆ. ಮೇ.24 ರಿಂದ ಜೂನ್ 12 ರವರೆಗೆ ರೋಹಿಣಿ ಮಳೆ ಬರುವ ನಿರೀಕ್ಷೆ ಇದೆ. ರೋಹಿಣಿ ಮಳೆ ಸಂದರ್ಭದಲ್ಲಿ ರೈತರು ಬಿತ್ತನೆ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಾರೆ ಎಂದು ವಿವರಿಸಿದರು.ಬಿತ್ತನೆಗೆ ಮೂಲಗೊಬ್ಬರವಾಗಿ ಉಪಯೋಗಿಸಲು ಎಲ್ಲಾ ರೀತಿಯ ಕಾಂಪ್ಲೆಕ್ಸ್ ರಸಗೊಬ್ಬರದ ಶೇ.25 ರಷ್ಟು ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನು ಮಾಡಿದ್ದು, ಗೊಬ್ಬರದ ಅಂಗಡಿ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ದಾಸ್ತಾನು ಇಡಲಾಗಿದೆ ಎಂದು ತಿಳಿಸಿದರು.
ದ್ವಿದಳ ಧಾನ್ಯ ಬೆಳೆಗಳಾದ ತೊಗರಿ ಅಲಸಂದೆ ಮತ್ತು ಎಣ್ಣೆ ಕಾಳು ಬೆಳೆವ ಪ್ರದೇಶಗಳನ್ನು ಹೆಚ್ಚಿಸಲು ರೈತರಲ್ಲಿ ಮನವಿ ಮಾಡಿದ್ದಾರೆ. ಶೇಂಗಾ ಮತ್ತು ತೊಗರಿ ಅಲಸಂದೆ ಬಿತ್ತನೆ ಬೀಜಗಳು ಬೇಕಾದಲ್ಲಿ ಹತ್ತಿರದ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಇರಿಸಿದ್ದು, ಇದರ ಸದುಪಯೋಗ ಪಡೆಯಬೇಕೆಂದು ಅವರು ರೈತರಲ್ಲಿ ಮನವಿ ಮಾಡಿದ್ದಾರೆ. ತರೀಕೆರೆ ಮತ್ತು ಅಜ್ಜಂಪುರ ತಾಲೂಕುಗಳಲ್ಲಿ ಭೂಮಿ ಮಣ್ಣು ಪರೀಕ್ಷೆಯ ಆಧಾರದ ಮೇರೆಗೆ ಲಘು ಪೋಷಕಾಂಶಗಳ ಕೊರತೆ ಕಂಡು ಬಂದಿರುವುದರಿಂದ ಬಿತ್ತನೆಗೆ ಮುಂಚೆ ಭೂಮಿಗೆ ಎಕರೆಗೆ 5 ರಿಂದ 10 ಕೇಜಿ ಲಘು ಪೋಷಕಾಂಶವನ್ನು ಸಹಾಯಧನದಡಿ ಪಡೆದು ಭೂಮಿಗೆ ಉಪಯೋಗಿಸಬೇಕೆಂದು ರೈತರಿಗೆ ಸೂಚಿಸಿದ್ದಾರೆ.-
23ಕೆಟಿಆರ್.ಕೆ.6ಃ ಬಿತ್ತನೆಗಾಗಿ ಭೂಮಿ ಹಸನು ಮಾಡಿಕೊಳ್ಳಲಾಗುತ್ತಿದೆ.