ಎಸ್.ಜಿ.ತೆಗ್ಗಿನಮನಿ ನರಗುಂದ
2023-24 ನೇ ಸಾಲಿನಲ್ಲಿ ಜಿಲ್ಲೆಯಲ್ಲೇ ಅತೀ ಕನಿಷ್ಠ ಮಳೆಯಾದ ತಾಲೂಕು ನರಗುಂದ ಆಗಿತ್ತು. ಹೀಗಾಗಿ ಪಟ್ಟಣ ಹಾಗೂ ಗ್ರಾಮೀಣ ಭಾಗದ ಸುಮಾರು 33 ಕುಡಿವ ನೀರಿನ ಕೆರೆ ಮತ್ತು 2150 ಕೃಷಿ ಹೊಂಡಗಳು ಮಳೆಯಿಲ್ಲದೇ ಭತ್ತಿ ಹೋಗಿದ್ದರಿಂದ ಜನ ಜಾನುವಾರುಗಳು ಕುಡಿಯುವ ನೀರಿಗಾಗಿ ಪರದಾಡುವಂತಾಗಿತ್ತು.
ಈ ಹಿಂದೆ ತಾಲೂಕಿನ ಜನರು ಮಲಪ್ರಭಾ ಜಲಾಶಯದಿಂದ ಕಾಲವೆಗಳಿಗೆ ನೀರು ಪೂರೈಕೆ ಮಾಡಿ ಕೆರೆಗಳನ್ನು ತುಂಬಿಸುವಂತೆ ಮನವಿ ಮಾಡಿದ್ದರು. ಅದೇ ಸಮಯದಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾದ ಹಿನ್ನೆಲೆ ಸರ್ಕಾರ ಕಾಲುವೆಗಳಿಗೆ ನೀರು ಬಿಟ್ಟಿರಲಿಲ್ಲ. ಮೇ 14ರಿಂದ 24ರ ವರೆಗೆ ಜಲಾಶಯದಿಂದ 10 ದಿನ ಮಲಪ್ರಭಾ ಬಲದಂಡೆ ಕಾಲುವೆಗೆ 1 ಟಿಎಂಸಿ ನೀರು ಹರಿಸಿದ್ದರಿಂದ ತಾಲೂಕಿನ ಕೆರೆಗಳು ಭರ್ತಿಯಾಗಿ ಕಂಗೊಳಿಸುತ್ತಿವೆ.ತಪ್ಪಿದ ಹಾಹಾಕಾರ:
ಕೆರೆಗಳು ಭರ್ತಿ: ಕಣಿಕೀಕೊಪ್ಪ, ಗುರ್ಲಕಟ್ಟಿ, ಸಿದ್ದಾಪೂರ, ಚಿಕ್ಕನರಗುಂದ, ಬೆನಕನಕೊಪ್ಪ, ಸಂಕದಾಳ, ಹಿರೇಕೊಪ್ಪ, ಅರಷಿಣಗೋಡಿ, ವಾಸನ, ಕೊಣ್ಣೂರ, ಶಿರೋಳ, ಹದಲಿ, ಭೈರನಹಟ್ಟಿ, ಮುದ್ಗುಣಿಕಿ, ಖಾನಾಪೂರ, ರಡ್ಡೇರನಾಗನೂರ, ಗಂಗಾಪೂರ, ಕಲಕೇರಿ, ಹುಣಿಸಿಕಟ್ಟಿ, ಜಗಾಪೂರ, ಸುರಕೋಡ, ಕುರ್ಲಗೇರಿ ಗ್ರಾಮಗಳ ಕೆರೆಗಳು ಜಲಾಶಯ ನೀರಿನಿಂದ ಸಂರ್ಪೂಣವಾಗಿ ಭರ್ತಿಯಾಗಿವೆ.
ಬರಗಾಲದಿಂದ ತಾಲೂಕಿನಲ್ಲಿ ಕುಡಿವ ನೀರಿನ ಸಮಸ್ಯೆಯಾಗಿತ್ತು, ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಿದ್ದರಿಂದ ಎಲ್ಲ ಕುಡಿಯುವ ನೀರಿನ ಕೆರೆ ಮತ್ತು ಕೃಷಿ ಹೊಂಡಗಳು ತುಂಬಿವೆ ಎಂದು ತಹಸೀಲ್ದಾರ ಶ್ರೀಶೈಲ ತಳವಾರ ಹೇಳಿದರು.