ಕೃಷ್ಣ ಎನ್. ಲಮಾಣಿ
ಹೊಸಪೇಟೆ: ಹಂಪಿ ಉತ್ಸವದ ಗತವೈಭವ ಸಾರುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಉತ್ಸವದ ಜೀವಾಳವಾಗಿ ಒಡಮೂಡಿತು. ವಿಜಯನಗರ ಸಾಮ್ರಾಜ್ಯದ ಕಥನವನ್ನು 120 ಕಲಾವಿದರು ಕಣ್ಣಿಗೆ ಕಟ್ಟುವಂತೆ ಮನದಟ್ಟು ಮಾಡಿದರು.ಹಂಪಿಯ ಗಜಶಾಲೆ ಆವರಣದಲ್ಲಿ ಹಾಕಿರುವ 12 ಕಿರು ವೇದಿಕೆಗಳಲ್ಲಿ ಕಲಾವಿದರು, ವಿಜಯನಗರ ಸಾಮ್ರಾಜ್ಯದ ವೈಭವ ಕಟ್ಟಿಕೊಡುವ ಮಾದರಿಯಲ್ಲಿ ಅಭಿನಯಿಸಿದರು. ಶ್ರೀಕೃಷ್ಣದೇವರಾಯ, ವಿದ್ಯಾರಣ್ಯರು, ಹಕ್ಕ-ಬುಕ್ಕರು, ಅಳಿಯ ರಾಮರಾಯ ಸೇರಿದಂತೆ ವಿಜಯನಗರದ ಆಳರಸರ ಪಾತ್ರವನ್ನು ಮನೋಜ್ಞವಾಗಿ ಕಲಾವಿದರು ಅಭಿನಯಿಸಿದರು.
ವಿಜಯನಗರ ಸಾಮ್ರಾಜ್ಯದ ಹುಟ್ಟು, ಸುವರ್ಣಯುಗ, ಸಾಮ್ರಾಜ್ಯದ ವಿಸ್ತರಣೆ, ಸಾಮ್ರಾಜ್ಯದ ಪತನ, ಬಹುಮನಿ ಸುಲ್ತಾನರು ಸೇರಿದಂತೆ ಸೈನಿಕರು, ಕಲೆ, ಸಾಹಿತ್ಯ, ದೇವಾಲಯಕ್ಕೆ ವಿಜಯನಗರ ಸಾಮ್ರಾಜ್ಯದ ಅರಸರು ನೀಡಿದ ಕೊಡುಗೆಯನ್ನು ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಕಟ್ಟಿಕೊಟ್ಟಿತು.ವಿಜಯನಗರ ಸಾಮ್ರಾಜ್ಯದ ಬಲಾಢ್ಯ ಅರಸ ಶ್ರೀಕೃಷ್ಣ ದೇವರಾಯರ ಆಳ್ವಿಕೆ ಕಾಲಘಟ್ಟವನ್ನು ಕಟ್ಟಿಕೊಟ್ಟ ಕಲಾವಿದರು, ಒಡಿಶಾದ ಮೇಲೆ ಯುದ್ಧ ಸಾರಿ ಸಾಮ್ರಾಜ್ಯವನ್ನು ಕಟ್ಟಿದ ಬಗೆಯನ್ನು ಕಲಾವಿದರು ಮನದಟ್ಟು ಮಾಡಿಕೊಟ್ಟರು. ಹಂಪಿ ಉತ್ಸವದಲ್ಲಿ ಈ ಕಾರ್ಯಕ್ರಮ ಗಮನ ಸೆಳೆಯುವ ಕಾರ್ಯಕ್ರಮ ಆಗಿರುವ ಹಿನ್ನೆಲೆಯಲ್ಲಿ ಹಳ್ಳಿ ಜನರು ಆಗಮಿಸಿ ವೀಕ್ಷಿಸಿದರು.
ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯ ತಂತ್ರಜ್ಞರು, ಕಲಾವಿದರ ಅಭಿನಯಕ್ಕೆ ತಕ್ಕಂತೆ ಮುದ್ರಿತ ಧ್ವನಿಯನ್ನು ಬಿತ್ತರಿಸಿದರು. ಬೆಳಕಿನ ವೈಭವದಲ್ಲಿ ವಿಜಯನಗರ ಸಾಮ್ರಾಜ್ಯದ ಕಥನವನ್ನು ಕಟ್ಟಿಕೊಟ್ಟಿತು.ಇಡೀ ವಿಶ್ವದಲ್ಲಿ ಹೇಗೆ ಕಲೆ, ಸಾಹಿತ್ಯ, ಸಂಸ್ಕೃತಿ, ವ್ಯಾಪಾರ, ವಹಿವಾಟಿನಿಂದ ಖ್ಯಾತಿ ಪಡೆದಿತ್ತು? ಈ ನೆಲದ ಸಂಸ್ಕೃತಿಯನ್ನು ವಿಜಯನಗರ ಸಾಮ್ರಾಜ್ಯದ ಅರಸರು ಹೇಗೆ ಬೆಳೆಸಿದರು? ಎಂಬುದನ್ನು ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಕಟ್ಟಿಕೊಟಿತು.ಹಂಪಿಯ ಗಜಶಾಲೆ ಸ್ಮಾರಕ ಏರಿ ಭರತನಾಟ್ಯ ಕಲಾವಿದರು ಗಮನ ಸೆಳೆದರು. ಇನ್ನೊಂದೆಡೆಯಲ್ಲಿ ಸೈನಿಕರು ಕೋಟೆ ಏರಿ ಪಹರೆ ಕಾಯುವುದು, ಶ್ರೀ ವಿದ್ಯಾರಣ್ಯರು ಸಾಮ್ರಾಜ್ಯ ವಿಸ್ತರಣೆಗೆ ಹಕ್ಕರಾಯ, ಬುಕ್ಕರಾಯ ಅವರಿಗೆ ಮಾರ್ಗದರ್ಶನ ನೀಡುವುದನ್ನು ಕಣ್ಣಿಗೆ ಕಟ್ಟುವಂತೆ ಕಲಾವಿದರು ಅಭಿನಯಿಸಿದರು.ಹಂಪಿ ಉತ್ಸವದ ಪ್ರಮುಖ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕಾಗಿ ಕೇಂದ್ರ ಸರ್ಕಾರದೊಂದಿಗೆ ಪತ್ರ ವ್ಯವಹಾರ ಮಾಡಿ, ಇಡೀ ಕಾರ್ಯಕ್ರಮಕ್ಕೆ ತಗಲುವ ವೆಚ್ಚವನ್ನು ಭರಿಸಿ, ಆಯೋಜನೆ ಮಾಡಿರುವುದು ಸಾರ್ಥಕ ಪಡೆಯುವ ಮಾದರಿಯಲ್ಲಿ ಕಲಾವಿದರು ಅಭಿನಯಿಸಿದರು.
ಧ್ವನಿ ಮತ್ತು ಬೆಳಕು ಕಾರ್ಯಕ್ರಮದಲ್ಲಿ ಜೀವಂತ ಆನೆ ಬಳಕೆ ಮಾಡಲಾಯಿತು. ವಿಜಯನಗರ ಕಾಲದಲ್ಲಿ ನಡೆದ ಯುದ್ಧವನ್ನು ಕಟ್ಟಿಕೊಡುವ ಮಾದರಿಯಲ್ಲಿ ಕಲಾವಿದರು ಅಭಿನಯಿಸಿದರು. ಆನೆ ಕೂಡ ಗಜ ಗಾಂಭೀರ್ಯದಿಂದ ನಡೆಯಿತು. ರಾಣಿಯರು, ಭರತನಾಟ್ಯ ಕಲಾವಿದೆಯರು, ದಾಸಿಯರು ಸೇರಿದಂತೆ ಅರಮನೆ ಸ್ವರೂಪವನ್ನೇ ಧ್ವನಿ ಮತ್ತು ಬೆಳಕು ಕಾರ್ಯಕ್ರಮದಲ್ಲಿ ಮೈದಾಳಿತು.ಕಾರ್ಯಕ್ರಮ ವೀಕ್ಷಣೆಗೆ ದಾವಣಗೆರೆ, ಚಿತ್ರದುರ್ಗ, ಗದಗ, ಹಾವೇರಿ, ಧಾರವಾಡ, ಮಂಗಳೂರು, ಮಂಡ್ಯ, ಮೈಸೂರು ಸೇರಿದಂತೆ ವಿವಿಧೆಡೆಯಿಂದ ಜನರು ಆಗಮಿಸಿದ್ದರು. ಈ ಕಾರ್ಯಕ್ರಮವನ್ನು ಜನರು ವೀಕ್ಷಿಸಿ ತಲೆದೂಗಿದರು.ಹಂಪಿ ಉತ್ಸವದಲ್ಲಿ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಜನಮೆಚ್ಚುಗೆ ಪಡೆದಿರುವ ಕಾರ್ಯಕ್ರಮ ಆಗಿದೆ. ನಾವು ಈ ಕಾರ್ಯಕ್ರಮ ಆಯೋಜನೆಗಾಗಿ ಕೇಂದ್ರ ಸರ್ಕಾರದೊಂದಿಗೆ ಪತ್ರ ವ್ಯವಹಾರ ನಡೆಸಿದ್ದೆವು. ಈಗ ಕಲಾವಿದರು, ಮನೋಜ್ಞವಾಗಿ ಅಭಿನಯಿಸಿರುವುದು ಖುಷಿ ತಂದಿದೆ ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಹೇಳಿದರು.