ಹಾವೇರಿ ಕಟ್ಟಡಗಳಿಗೆ ಕಳೆ, ಬಾಕಿ ಎಲ್ಲಾ ಕಡೆ ಕೊಳೆ

KannadaprabhaNewsNetwork | Published : Feb 12, 2025 12:33 AM

ಸಾರಾಂಶ

ಕಳೆದ ಒಂದು ವಾರದಿಂದ ಜಿಲ್ಲೆಯ ಸರ್ಕಾರಿ ಅಧಿಕಾರಿಗಳು, ನೌಕರರು ಬ್ಯುಸಿಯಾಗಿದ್ದಾರೆ. ಆಸ್ಪತ್ರೆ, ಕಚೇರಿ ಕಟ್ಟಡಗಳು ಸುಣ್ಣಬಣ್ಣ ಕಾಣುತ್ತಿವೆ. ಆದರೆ, ಜಿಲ್ಲಾ ಕೇಂದ್ರ ಹಾವೇರಿ ನಗರದ ಪ್ರಮುಖ ರಸ್ತೆಗಳ ಪಕ್ಕದಲ್ಲೇ ಕಸದ ರಾಶಿಯೇ ಬಿದ್ದಿದ್ದರೂ ಇಲ್ಲಿಯ ನಗರಸಭೆ ಕಣ್ಣೆತ್ತಿ ನೋಡುತ್ತಿಲ್ಲ.

ನಾರಾಯಣ ಹೆಗಡೆ

ಕನ್ನಡಪ್ರಭ ವಾರ್ತೆ ಹಾವೇರಿ

ಕಳೆದ ಒಂದು ವಾರದಿಂದ ಜಿಲ್ಲೆಯ ಸರ್ಕಾರಿ ಅಧಿಕಾರಿಗಳು, ನೌಕರರು ಬ್ಯುಸಿಯಾಗಿದ್ದಾರೆ. ಆಸ್ಪತ್ರೆ, ಕಚೇರಿ ಕಟ್ಟಡಗಳು ಸುಣ್ಣಬಣ್ಣ ಕಾಣುತ್ತಿವೆ. ಆದರೆ, ಜಿಲ್ಲಾ ಕೇಂದ್ರ ಹಾವೇರಿ ನಗರದ ಪ್ರಮುಖ ರಸ್ತೆಗಳ ಪಕ್ಕದಲ್ಲೇ ಕಸದ ರಾಶಿಯೇ ಬಿದ್ದಿದ್ದರೂ ಇಲ್ಲಿಯ ನಗರಸಭೆ ಕಣ್ಣೆತ್ತಿ ನೋಡುತ್ತಿಲ್ಲ.

ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಫೆ.12ರಿಂದ ಮೂರು ದಿನಗಳ ಕಾಲ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಮೊದಲ ದಿನವೇ ವಿವಿಧ ಕಚೇರಿ, ಶಾಲೆ, ಅಂಗನವಾಡಿ ಸೇರಿದಂತೆ ಅನಿರೀಕ್ಷಿತ ಭೇಟಿ ಕೈಗೊಳ್ಳಲಿದ್ದಾರೆ. ಅದಕ್ಕಾಗಿ ಸರ್ಕಾರಿ ಇಲಾಖೆ ಅಧಿಕಾರಿಗಳು ತಮ್ಮ ಅಧೀನದ ಕಚೇರಿಗಳು, ಕಟ್ಟಡಗಳ ಸ್ವಚ್ಛತೆಗೆ ಗಮನ ನೀಡಿದ್ದಾರೆ. ಅಧಿಕಾರಿಗಳ ಸೂಚನೆ ಮೇರೆಗೆ ಜಿಲ್ಲಾಸ್ಪತ್ರೆ, ತಹಸೀಲ್ದಾರ್‌ ಕಚೇರಿ ಸೇರಿದಂತೆ ಪ್ರಮುಖ ಕಟ್ಟಡಗಳಲ್ಲಿ ಕಸ ಹೊಡೆಯುವುದು, ಶೌಚಾಲಯ ದುರಸ್ತಿ ಮಾಡಿಸುವುದು, ಸುಣ್ಣಬಣ್ಣ ಬಳಿಯುವ ಕೆಲಸ ಎಲ್ಲೆಡೆ ಕಂಡುಬರುತ್ತಿದೆ. ಉಪ ಲೋಕಾಯುಕ್ತರು ಎಲ್ಲಿಗೆ ಭೇಟಿ ನೀಡುತ್ತಾರೆ ಎಂಬುದು ಗೌಪ್ಯವಾಗಿರುವುದರಿಂದ ಎಲ್ಲ ಇಲಾಖೆ ನೌಕರರು ಕಚೇರಿ ಅವಧಿಯಲ್ಲಿ ಕೆಲಸ ಮಾಡುವುದನ್ನು ರೂಢಿಸಿಕೊಳ್ಳುತ್ತಿದ್ದಾರೆ. ಯಾರೂ ಗೈರಾಗದಂತೆ ಇಲಾಖೆ ಅಧಿಕಾರಿಗಳು ಮೌಖಿಕ ಸಂದೇಶ ಕೂಡ ಸಿಬ್ಬಂದಿಗೆ ನೀಡಿದ್ದಾರೆ. ಆದ್ದರಿಂದ ಕಳೆದ ಕೆಲವು ದಿನಗಳಿಂದ ಕಚೇರಿ ಕುರ್ಚಿಗಳಲ್ಲಿ ಸಿಬ್ಬಂದಿ ಕಾಣಸಿಗುತ್ತಿದ್ದು, ಜನಸಾಮಾನ್ಯರ ಕೆಲಸಗಳು ಸರಾಗವಾಗಿ ಆಗುತ್ತಿವೆ ಎಂಬ ಮಾತು ಜಿಲ್ಲಾದ್ಯಂತ ಕೇಳಿಬರುತ್ತಿದೆ.

ಕಸದ ರಾಶಿಗೆ ಮುಕ್ತಿಯಿಲ್ಲ: ಉಪಲೋಕಾಯುಕ್ತರು ಬರುತ್ತಿರುವುದರಿಂದ ಜಿಲ್ಲಾ ಕೇಂದ್ರ ನಗರಸಭೆ ಅಧಿಕಾರಿಗಳು ಕೂಡ ಸ್ವಲ್ಪ ಚುರುಕಾಗಿದ್ದಾರೆ. ಉಪಲೋಕಾಯುಕ್ತರು ವಾಸ್ತವ್ಯ ಮಾಡಲಿರುವ ಪ್ರವಾಸಿ ಮಂದಿರದ ಆವರಣ ಸ್ವಚ್ಛತೆ, ಶೌಚಗುಂಡಿ ಖಾಲಿ ಮಾಡುವುದು, ಪ್ರಮುಖ ರಸ್ತೆಗಳ ಕಸ ಗುಡಿಸುವುದು ಮುಂತಾದ ಕೆಲಸ ಮಾಡಿಸುತ್ತಿದ್ದಾರೆ. ಆರಿ ಹೋಗಿದ್ದ ಬೀದಿ ದೀಪಗಳನ್ನು ಅಳವಡಿಸುತ್ತಿದ್ದಾರೆ. ಆದರೆ, ಹೊಸಮನಿ ಸಿದ್ದಪ್ಪ ವೃತ್ತದಿಂದ ಕೆರಿಮತ್ತಿಹಳ್ಳಿಗೆ ಹೋಗುವ ರಸ್ತೆಯ ಪಕ್ಕದಲ್ಲಿ ಕಸದ ರಾಶಿಯೇ ಬಿದ್ದಿದ್ದರೂ ತೆಗೆಯುವ ಗೋಜಿಗೆ ಹೋಗಿಲ್ಲ. ಈ ಮಾರ್ಗದಲ್ಲಿ ಬಹುಶಃ ಉಪಲೋಕಾಯುಕ್ತರು ಸಂಚರಿಸುವ ಸಾಧ್ಯತೆಯಿಲ್ಲ ಎಂಬ ಕಾರಣಕ್ಕೆ ನಗರಸಭೆ ಅಧಿಕಾರಿಗಳು ಇತ್ತ ಗಮನ ನೀಡಿಲ್ಲ. ಕೆರಿಮತ್ತಿಹಳ್ಳಿ ರಸ್ತೆಯೆಂದರೆ ಕಸದ ರಾಶಿ ಹಾಕುವ ತಾಣವಾಗಿ ಮಾರ್ಪಟ್ಟಿದೆ. ದಿನ ಬೆಳಗಾಗುವುದರೊಳಗೆ ಕಸದ ಚೀಲಗಳು ಬಂದು ಬೀಳುತ್ತಿವೆ. ಆದರೆ, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಾಗಲಿ, ಬಿದ್ದ ಕಸದ ರಾಶಿ ತೆಗೆಯುವುದಕ್ಕಾಗಲಿ ನಗರಸಭೆ ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ. ಇದರಿಂದ ಈ ರಸ್ತೆಯಲ್ಲಿ ಸಂಚರಿಸುವ ಜನರು ಮೂಗು ಮುಚ್ಚಿಕೊಂಡು ಹೋಗುವಂತಾಗಿದೆ. ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ ಎಂದು ಅಕ್ಕಪಕ್ಕದ ನಿವಾಸಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.

ಸಾರ್ವಜನಿಕ ಶೌಚಾಲಯವಿಲ್ಲ: ಜಿಲ್ಲಾ ಕೇಂದ್ರ ಹಾವೇರಿಗೆ ಕೆಲಸ ಕಾರ್ಯಗಳಿಗಾಗಿ ನಿತ್ಯ ಸಾವಿರಾರು ಜನರು ಬಂದು ಹೋಗುತ್ತಾರೆ. ಆದರೆ, ಪ್ರಮುಖ ಸ್ಥಳಗಳಲ್ಲಿ ಎಲ್ಲಿಯೂ ಸಾರ್ವಜನಿಕ ಶೌಚಾಲಯ ಇಲ್ಲದಿರುವುದರಿಂದ ಸಮಸ್ಯೆಯಾಗುತ್ತಿದೆ. ಅದರಲ್ಲೂ ಮಹಿಳೆಯರು ತೊಂದರೆ ಅನುಭವಿಸುತ್ತಿದ್ದಾರೆ. ಇನ್ನು ಕೆಲವು ಕಡೆ ಇರುವ ಶೌಚಾಲಯಗಳು ನಿರ್ವಹಣೆಯಿಲ್ಲದೇ ಗಬ್ಬು ನಾರುತ್ತಿವೆ. ತೆರೆದ ಚರಂಡಿ ವಾಸನೆ, ಹಾಳಾಗಿರುವ ರಸ್ತೆಗಳ ಮಧ್ಯೆಯೇ ಜನರು ಜೀವನ ಸಾಗಿಸುತ್ತಿದ್ದಾರೆ. ಅಧಿಕಾರಿಗಳ ಜಿಡ್ಡುಗಟ್ಟಿದ ಮನಸ್ಥಿತಿಯಿಂದಾಗಿ ಸಾರ್ವಜನಿಕರು ತಮ್ಮ ಹಕ್ಕು ಕೇಳುವುದನ್ನೇ ಮರೆಯುತ್ತಿದ್ದಾರೆ.

ಜಿಲ್ಲಾಸ್ಪತ್ರೆಗೆ ಬೇಕಿದೆ ಚಿಕಿತ್ಸೆ: ಇಲ್ಲಿಯ ಜಿಲ್ಲಾಸ್ಪತ್ರೆಯ ಸ್ಥಿತಿಯನ್ನು ಉಪಲೋಕಾಯುಕ್ತರು ನೋಡಬೇಕು. ಅವರು ಬರುತ್ತಾರೆ ಎಂಬ ನಿರೀಕ್ಷೆಯಲ್ಲೇ ಸುಣ್ಣಬಣ್ಣ ಬಡಿದು ಸ್ವಚ್ಛತೆಯತ್ತ ಜಿಲ್ಲಾಸ್ಪತ್ರೆ ಅಧಿಕಾರಿಗಳು ಗಮನ ಹರಿಸಿದ್ದಾರೆ. ಆದರೆ, ಇಲ್ಲಿಯ ಜನರಲ್‌ ವಾರ್ಡ್‌ಗಳ ಬಹುತೇಕ ಶೌಚಾಲಯಗಳು ಮುಚ್ಚಿಯೇ ಇರುತ್ತವೆ. ರೋಗಿಗಳು, ಅವರೊಂದಿಗೆ ಬರುವವರ ಗೋಳು ಕೇಳುವವರೇ ಇಲ್ಲ.

ಇನ್ನು ಇಲ್ಲಿಯ ತಹಸೀಲ್ದಾರ್‌ ಕಚೇರಿಯೂ ಇಂಥ ಅವ್ಯವಸ್ಥೆಯಿಂದ ಹೊರತಾಗಿಲ್ಲ. ಉಪವಿಭಾಗಾಧಿಕಾರಿ ಕಚೇರಿ, ಉಪನೋಂದಣಾಧಿಕಾರಿ ಕಚೇರಿ, ತಹಸೀಲ್ದಾರ್‌ ಕಚೇರಿ ಹೀಗೆ ಪ್ರಮುಖ ಕಚೇರಿಗಳು ಒಂದೇ ಕಟ್ಟಡದಲ್ಲಿದ್ದರೂ ಒಂದೇ ಒಂದು ಶೌಚಾಲಯವಿಲ್ಲ. ಈ ಬಗ್ಗೆ ಅನೇಕ ಸಂಘಟನೆಗಳು ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಮೂಲಸೌಕರ್ಯಗಳ ಕೊರತೆ ಒಂದೆಡೆಯಾದರೆ, ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ಮನಸ್ಥಿತಿಯೂ ಜಿಡ್ಡುಗಟ್ಟಿದೆ. ಉಪ ಲೋಕಾಯುಕ್ತರು ಬರುತ್ತಿರುವ ಕಾರಣಕ್ಕಾದರೂ ವಾತಾವರಣ ಸ್ವಲ್ಪ ಮಟ್ಟಿಗೆ ಸುಧಾರಿಸುತ್ತಿರುವುದಕ್ಕೆ ಸಾರ್ವಜನಿಕರು ಖುಷಿಯಾಗಿದ್ದಾರೆ.

ಇಂದಿನಿಂದ ಮೂರು ದಿನ ಉಪ ಲೋಕಾಯುಕ್ತರ ಪ್ರವಾಸ: ಉಪಲೋಕಾಯುಕ್ತ ನ್ಯಾಯಮೂರ್ತಿಗಳಾದ ಬಿ.ವೀರಪ್ಪ ಅವರು ಫೆ.12ರಿಂದ 14ರವರೆಗೆ ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.ಉಪಲೋಕಾಯುಕ್ತ ನ್ಯಾಯಮೂರ್ತಿಗಳು ಫೆ.12ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ವಿವಿಧ ಪ್ರದೇಶಗಳಿಗೆ ಅನಿರೀಕ್ಷಿತ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 1.45ರಿಂದ 2.45ರ ವರೆಗೆ ಹಾವೇರಿ ನಗರದ ನ್ಯಾಯಾಲಯದ ಆವರಣದಲ್ಲಿರುವ ಹಾವೇರಿ ಬಾರ್ ಅಸೋಸಿಯೇಷನ್‌ನಲ್ಲಿ ವಕೀಲರೊಂದಿಗೆ ಸಂವಹನ ನಡೆಸಲಿದ್ದಾರೆ. ಮಧ್ಯಾಹ್ನ 2.45ರಿಂದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ರಾತ್ರಿ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಮಾಡಲಿದ್ದಾರೆ.ಫೆ.13ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1.30ರ ವರೆಗೆ ಹಾಗೂ ಮಧ್ಯಾಹ್ನ 2.30 ರಿಂದ ಸಂಜೆ 5 ಗಂಟೆಗೆವರೆಗೆ ಹಾವೇರಿ ನಗರದ ಜಿಲ್ಲಾ ಗುರುಭವನದಲ್ಲಿ ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕಾರ ಮತ್ತು ವಿಚಾರಣೆ ನಡೆಸಲಿದ್ದಾರೆ. ಸಂಜೆ 5.30ರಿಂದ 6.30ರ ವರೆಗೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ಆಯೋಜಿಸಲಾದ ಕರ್ನಾಟಕ ಲೋಕಾಯುಕ್ತ ಕಾಯ್ದೆಗೆ ಸಂಬಂಧಿಸಿದ ಕಾನೂನು ಸಾಕ್ಷರತಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಫೆ.14ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1.30ರ ವರೆಗೆ ಹಾಗೂ ಮಧ್ಯಾಹ್ನ 2.30ರಿಂದ ಸಂಜೆ 5 ಗಂಟೆವರೆಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲೆಗೆ ಸಂಬಂಧಪಟ್ಟ ಲೋಕಾಯುಕ್ತ ಸಂಸ್ಥೆಗಳಲ್ಲಿ ದಾಖಲಾಗಿರುವ(ಗೌರವಾನ್ವಿತ ಉಪ ಲೋಕಾಯುಕ್ತರ ಕಾರ್ಯವ್ಯಾಪ್ತಿಗೆ ಒಳಪಡುವ ಪ್ರಕರಣಗಳಲ್ಲಿ) ತನಿಖೆ ಮತ್ತು ವಿಚಾರಣೆಗೆ ಬಾಕಿಯಿರುವ ಪ್ರಕರಣಗಳಲ್ಲಿ (ಈಗಾಗಲೇ ಕಚೇರಿಯಿಂದ ನೋಟಿಸ್ ಕಳುಹಿಸಿರುವ) ದೂರುದಾರರು ಹಾಗೂ ಎದುರುಗಾರರ ಸಮ್ಮುಖದಲ್ಲಿ ವಿಚಾರಣೆ ನಡೆಸಲಿದ್ದಾರೆ. ಫೆ.13ರಂದು ಸಾರ್ವಜನಿಕರು ನೀಡಿದ ದೂರುಗಳ ಬಾಕಿ ಕುಂದುಕೊರತೆಗಳ ಪರಿಹಾರಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದ್ದಾರೆ. ಸಂಜೆ 5.45 ರಿಂದ ರಾತ್ರಿ 7.30ರವರೆಗೆ ಹಾವೇರಿ ನಗರದ ಜಿಲ್ಲಾ ನ್ಯಾಯಾಲಯದಲ್ಲಿ ಹಾವೇರಿ ಜಿಲ್ಲೆಯ ನ್ಯಾಯಾಂಗ ಇಲಾಖೆ ಮತ್ತು ಲೋಕಾಯುಕ್ತ ಪೊಲೀಸರ ನ್ಯಾಯಾಂಗ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಸಭೆ ನಡೆಸಲಿದ್ದಾರೆ. ರಾತ್ರಿ 11.10ಕ್ಕೆ ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.

Share this article