ಪಾಲಿಕೆ ವ್ಯಾಪ್ತಿಯಲ್ಲಿ ಅವ್ಯಾಹತ ಗೋವಧೆ: ಆರೋಪ । ಹೋರಾಟದ ಎಚ್ಚರಿಕೆ
ದಾವಣಗೆರೆ ಇಮಾಂ ನಗರದ 2ನೇ ಕ್ರಾಸ್‌ನ ನಾಗರಕಟ್ಟೆ ಮುಂಭಾಗದಲ್ಲೇ ಅಕ್ರಮವಾಗಿ ಗೋವುಗಳ ಕಸಾಯಿಖಾನೆ, ಮಾಂಸದಂಗಡಿ ಇದ್ದು, ಇನ್ನೊಂದು ವಾರದೊಳಗೆ ತೆರವುಗೊಳಿಸದಿದ್ದರೆ ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿ ಪಾಲಿಕೆ ವಿಪಕ್ಷ ನಾಯಕ ಆರ್.ಎಲ್.ಶಿವಪ್ರಕಾಶ ಪಾಲಿಕೆ ಆಯುಕ್ತರಿಗೆ ಎಚ್ಚರಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಮಾಂ ನಗರ 2ನೇ ಕ್ರಾಸ್ ನ ನಾಗರಕಟ್ಟೆ ಮುಂಭಾಗದ ಅಕ್ರಮ ಗೋ ಕಸಾಯಿಖಾನೆ, ಗೋಮಾಂಸದಂಗಡಿ ತೆರವುಗೊಳಿಸುವಂತೆ ಸಾಕಷ್ಟು ಸಲ ಸ್ಥಳೀಯ ನಿವಾಸಿಗಳು, ಹಿಂದುಗಳ ಮನವಿ ಕೊಟ್ಟಿದ್ದರೂ ಪಾಲಿಕೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದರು.ನಾಗರಕಟ್ಟೆ ಮುಂದೆಯೇ ಗೋವುಗಳ ವಧೆ ಮಾಡುತ್ತಿರುವುದು ಹಿಂದುಗಳ ಭಾವನೆಗೆ ಧಕ್ಕೆಯನ್ನುಂಟು ಮಾಡುತ್ತಿದ್ದಾರೆ. ಸ್ಥಳೀಯರ ಪ್ರಕಾರ ಮುಂದೆ ಅದೇ ಜಾಗದಲ್ಲಿ ಐದಾರು ನಾಗರಕಟ್ಟೆಗಳು ಇದ್ದವು. ಆದರೆ, ಈಗ ಒಂದೇ ನಾಗರಕಟ್ಟೆ ಉಳಿದಿದೆ. ಅದರ ಮೇಲೆಯೇ ಗೋವುಗಳನ್ನು ಇಳಿಸಿ, ಗೋವುಗಳ ಆರಾಧಕರು, ಹಿಂದುಗಳ ಭಾವನೆಯನ್ನು ಕದಡವು ಕೆಲಸವನ್ನು ಅಕ್ರಮ ಕಸಾಯಿಖಾನೆ ನಡೆಸುವವರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅಕ್ರಮ ಗೋವು ಕಸಾಯಿಖಾನೆ, ಗೋಮಾಂಸದಂಗಡಿ ತೆರವಿಗೆ ಹೋದರೆ ಗುಂಪು ಕಟ್ಟಿಕೊಂಡು ಬರುತ್ತಾರೆ. ನಾವೇನು ಮಾಡಬೇಕೆಂಬುದಾಗಿ ತಮ್ಮ ಅಸಹಾಯಕತೆಯನ್ನು ತೋಡಿಕೊಳ್ಳುವ ಪಾಲಿಕೆ ಅಧಿಕಾರಿಗಳಿಗೆ ಅಕ್ರಮ ಗೋವು ಕಸಾಯಿ ಖಾನೆ ತೆರವು ಮಾಡಿಸಲಾಗದಿದ್ದರೆ ಬೇರೆಡೆ ವರ್ಗಾವಣೆ ಮಾಡಿಸಿಕೊಂಡು ಹೋಗಿ ಇಲ್ಲವೇ, ಕೆಲಸಕ್ಕೂ ರಾಜೀನಾಮೆ ಕೊಡಿ. ಗೋ ಹತ್ಯೆ ನಿಷೇಧ ಕಾಯ್ದೆಯಡಿ ಕೇಸ್ ದಾಖಲಿಸಿ, ತೆರವುಗೊಳಿಸಬೇಕೆಂಬ ಕನಿಷ್ಟ ಜ್ಞಾನ, ಅರಿವು ನಿಮಗಿಲ್ಲವೆ ಎಂದು ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಹರಿಹಾಯ್ದರು.
ಆರ್‌ಟಿಐನಡಿ ಪಾಲಿಕೆ ನೀಡಿದ ಮಾಹಿತಿಯಂತೆ ದಾವಣಗೆರೆಯಲ್ಲಿ ಗೋವುಗಳ ಕಸಾಯಿಖಾನೆ, ಗೋಮಾಂಸ ಮಾರಾಟಕ್ಕೆ ಅವಕಾಶ ನೀಡಿಲ್ಲ. ಆದರೆ, ಇಮಾಂ ನಗರ ಸೇರಿದಂತೆ ನಗರದ ವಿವಿಧೆಡೆ ಅಕ್ರಮವಾಗಿ ಗೋ ಕಸಾಯಿಖಾನೆ ಎಗ್ಗಿಲ್ಲದೇ ನಡೆಯುತ್ತಿದ್ದು, ದಷ್ಟಪುಷ್ಟ ಆರೋಗ್ಯದಿಂದ ಕೂಡಿಸುವ ಎತ್ತು, ಕರುಗಳು, ಮರಿಗಳವನ್ನು ವಧೆ ಮಾಡಲಾಗುತ್ತಿದೆ. ಇನ್ನೊಂದು ವಾರದಲ್ಲಿ ಅಕ್ರಮ ಗೋಮಾಂಸದಂಗಡಿ, ಗೋವುಗಳ ಕಸಾಯಿಖಾನೆ ತೆರವು ಮಾಡದಿದ್ದರೆ ಇಮಾಂ ನಗರದ 2ನೇ ಕ್ರಾಸ್‌ನ ನಾಗರಕಟ್ಟೆ ಸ್ಥಳದಿಂದಲೇ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಿದ್ದು, ಮುಂದೆ ಏನೇ ಆದರೂ ಪಾಲಿಕೆ ಆಯುಕ್ತರೇ ನೇರ ಹೊಣೆ ಎಂದು ಆರ್.ಎಲ್.ಶಿವಪ್ರಕಾಶ ಎಚ್ಚರಿಸಿದರು.