ವೀಕೆಂಡ್‌: ಹಂಪಿ ವೀಕ್ಷಣೆಗೆ 10 ಸಾವಿರ ಪ್ರವಾಸಿಗರು

KannadaprabhaNewsNetwork | Published : Jan 15, 2024 1:45 AM

ಸಾರಾಂಶ

ಕೊರೋನಾ ಇದ್ದರೂ ಹಂಪಿಯಲ್ಲಿ ಪ್ರವಾಸೋದ್ಯಮಕ್ಕೆ ಯಾವುದೇ ನಿರ್ಬಂಧ ಹಾಕಲಾಗಿಲ್ಲ. ಹಾಗಾಗಿ ಪ್ರವಾಸಿಗರು ಕೂಡ ಸಂತಸದಿಂದಲೇ ಆಗಮಿಸಿ ಹಂಪಿ ಸ್ಮಾರಕಗಳನ್ನು ವೀಕ್ಷಿಸುತ್ತಿದ್ದಾರೆ.

ಹೊಸಪೇಟೆ: ವಿಶ್ವವಿಖ್ಯಾತ ಹಂಪಿ ಸ್ಮಾರಕಗಳ ವೀಕ್ಷಣೆಗೆ ವೀಕೆಂಡ್‌ ಹಿನ್ನೆಲೆಯಲ್ಲಿ ಭಾನುವಾರ ಹತ್ತು ಸಾವಿರಕ್ಕೂ ಅಧಿಕ ಪ್ರವಾಸಿಗರು ಹರಿದು ಬಂದಿದ್ದರು. ಸ್ಮಾರಕಗಳನ್ನು ವೀಕ್ಷಣೆ ಮಾಡಿ ಪ್ರವಾಸಿಗರು ಖುಷಿಪಟ್ಟರು.

ಜಿ- 20 ಶೃಂಗಸಭೆ ಬಳಿಕ ಹಂಪಿ ಸ್ಮಾರಕಗಳ ವೀಕ್ಷಣೆಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಅದರಲ್ಲೂ ವೀಕೆಂಡ್‌ ಬಂದರೆ ಸಾಕು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಅದರಲ್ಲೂ ಬೆಂಗಳೂರಿನಿಂದ ಟೆಕ್ಕಿಗಳ ದಂಡೇ ಹರಿದುಬರುತ್ತಿದ್ದು, ಹಂಪಿಯ ಐತಿಹಾಸಿಕ ಸ್ಮಾರಕಗಳನ್ನು ಕಂಡು ಸಂತಸಗೊಳ್ಳುತ್ತಿದ್ದಾರೆ. ಈ ಸ್ಮಾರಕಗಳನ್ನು ಮುಂದಿನ ಪೀಳಿಗೆಗೆ ಜತನದಿಂದ ಕಾಪಾಡಿರುವುದನ್ನು ಕಂಡು ಪ್ರವಾಸಿಗರು ಇನ್ನಷ್ಟು ಪುಳಕಿತಗೊಳ್ಳುತ್ತಿದ್ದಾರೆ.

ಹಂಪಿಯ ವಿರೂಪಾಕ್ಷೇಶ್ವರ ದೇವಾಲಯ, ವಿಜಯ ವಿಠ್ಠಲ ದೇವಾಲಯ, ಕಲ್ಲಿನತೇರು, ಪುರಂದರದಾಸರ ಮಂಟಪ, ಕಮಲ ಮಹಲ್‌, ಮಹಾನವಮಿ ದಿಬ್ಬ, ಹಜಾರರಾಮ ದೇವಾಲಯ, ಕಡಲೆ ಕಾಳು, ಸಾಸಿವೆ ಕಾಳು ಗಣಪತಿ ಮಂಟಪಗಳು, ಶ್ರೀಕೃಷ್ಣ ದೇವಾಲಯ, ಅಚ್ಯುತರಾಯ ದೇವಾಲಯ, ಸೀತೆ ಸೆರಗು, ವಾಲಿ, ಸುಗ್ರೀವ ಗುಹೆ, ಉಗ್ರ ನರಸಿಂಹ, ಬಡವಿ ಲಿಂಗ, ಕೋದಂಡರಾಮ ದೇವಾಲಯ, ಮಾಲ್ಯವಂತ ರಘುನಾಥ ದೇವಾಲಯ, ನೆಲಸ್ತರದ ಶಿವ ದೇವಾಲಯ, ಕಮಲಾಪುರದ ಪ್ರಾಚ್ಯವಸ್ತು ಸಂಗ್ರಹಾಲಯ, ಪಟ್ಟಾಭಿರಾಮ ದೇವಾಲಯ ಸೇರಿದಂತೆ ವಿವಿಧ ಸ್ಮಾರಕಗಳು ಹಾಗೂ ಬಜಾರ್‌ಗಳನ್ನು ಪ್ರವಾಸಿಗರು ವೀಕ್ಷಿಸಿದರು.

ರಾಜ್ಯ ಸೇರಿದಂತೆ ತೆಲಂಗಾಣ, ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳ, ದಿಲ್ಲಿ, ಹರಿಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳಿಂದಲೂ ಪ್ರವಾಸಿಗರು ಹಂಪಿ ವೀಕ್ಷಣೆಗೆ ಆಗಮಿಸಿದ್ದು, ಸ್ಮಾರಕಗಳ ಬಳಿ ನಿಂತು ಫೋಟೋಗಳನ್ನು ತೆಗೆಸಿಕೊಂಡು ಖುಷಿಪಟ್ಟರು. ಇನ್ನೂ ವಿದೇಶಿ ಪ್ರವಾಸಿಗರು ಕೂಡ ಹಂಪಿಯತ್ತ ಧಾವಿಸುತ್ತಿದ್ದಾರೆ. ಈಗ ಹಂಪಿಯಲ್ಲಿ ಪ್ರವಾಸಿಗರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರಿಗೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗವೂ ಸೃಷ್ಟಿಯಾಗುತ್ತಿದೆ.

ಕೊರೋನಾ ಇದ್ದರೂ ಹಂಪಿಯಲ್ಲಿ ಪ್ರವಾಸೋದ್ಯಮಕ್ಕೆ ಯಾವುದೇ ನಿರ್ಬಂಧ ಹಾಕಲಾಗಿಲ್ಲ. ಹಾಗಾಗಿ ಪ್ರವಾಸಿಗರು ಕೂಡ ಸಂತಸದಿಂದಲೇ ಆಗಮಿಸಿ ಹಂಪಿ ಸ್ಮಾರಕಗಳನ್ನು ವೀಕ್ಷಿಸುತ್ತಿದ್ದಾರೆ.

Share this article