ಹೂಳೆತ್ತುವ ಕೆರೆಗಳ ವರದಿಗೆ ವಾರದ ಗಡುವು

KannadaprabhaNewsNetwork |  
Published : Oct 19, 2025, 01:00 AM IST
18ಕೆಡಿವಿಜಿ4, 5, 6-ದಾವಣಗೆರೆ ಡಿಸಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ. | Kannada Prabha

ಸಾರಾಂಶ

ಜಿಲ್ಲೆಯಲ್ಲಿ ತಾಲೂಕುವಾರು ಹೂಳೆತ್ತಲು ಅರ್ಹ ಕೆರೆಗಳ ಸಮಗ್ರ ವರದಿ ಇನ್ನೊಂದು ವಾರದಲ್ಲೇ ನೀಡಬೇಕು. ಹೂಳೆತ್ತಿದ ಕೆರೆ ಮಣ್ಣನ್ನು ರೈತರು ತಮ್ಮ ತೋಟ, ಹೊಲಗಳಲ್ಲಿನ ಕೃಷಿ ಚಟುವಟಿಕೆಗೆ ಮುಕ್ತವಾಗಿ ಬಳಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು.

- ಹೂಳೆತ್ತಿದ ಮಣ್ಣು ರೈತರು ಕೃಷಿಗೆ ಬಳಸಬಹುದು: ಡಿಸಿ ।

- ಜಿಲ್ಲೆಯಲ್ಲಿ 19 ಮರಳು ಬ್ಲಾಕ್‌ಗೆ ಟೆಂಡರ್ ಅಂತಿಮ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಜಿಲ್ಲೆಯಲ್ಲಿ ತಾಲೂಕುವಾರು ಹೂಳೆತ್ತಲು ಅರ್ಹ ಕೆರೆಗಳ ಸಮಗ್ರ ವರದಿ ಇನ್ನೊಂದು ವಾರದಲ್ಲೇ ನೀಡಬೇಕು. ಹೂಳೆತ್ತಿದ ಕೆರೆ ಮಣ್ಣನ್ನು ರೈತರು ತಮ್ಮ ತೋಟ, ಹೊಲಗಳಲ್ಲಿನ ಕೃಷಿ ಚಟುವಟಿಕೆಗೆ ಮುಕ್ತವಾಗಿ ಬಳಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹೇಳಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೆರೆಗಳ ಹೂಳೆತ್ತಿದಲ್ಲಿ ನೀರು ಸಂಗ್ರಹಣಾ ಸಾಮರ್ಥ್ಯ ಹೆಚ್ಚುವುದು. ಜೊತೆಗೆ ರೈತರ ಜಮೀನಿನ ಫಲವತ್ತತೆ ಹೆಚ್ಚಾಗಿ ರಸಗೊಬ್ಬರ ಬಳಕೆ ಪ್ರಮಾಣವೂ ಕಡಿಮೆಯಾಗುತ್ತದೆ ಎಂದು ಹೇಳಿದರು.

ಕೆರೆಗಳಲ್ಲಿ ಆಳವಾಗಿ ತೆಗೆಯಲು ಮತ್ತು ವಾಣಿಜ್ಯ ಉದ್ದೇಶಕ್ಕೆ ಮಣ್ಣನ್ನು ಬಳಸುವಂತಿಲ್ಲ. ಹಾಗೇನಾದರೂ ಬಳಸಿದರೆ ರಾಜಧನ ಪಾವತಿಸಿ, ಅನುಮತಿ ಪಡೆಯಬೇಕಾಗುತ್ತದೆ. ಆದರೆ, ಕೃಷಿ ಚಟುವಟಿಕೆಗಳಿಗೆ ಮಣ್ಣು ಬಳಸಿದರೆ ಅನುಮತಿ ಅಗತ್ಯವಿಲ್ಲ. ಜಿಲ್ಲಾದ್ಯಂತ ಹೂಳೆತ್ತುವಂತಹ ಕೆರೆಗಳ ಪಟ್ಟಿಯನ್ನು ಸಂಬಂಧಿಸಿದ ಅಧಿಕಾರಿಗಳು ಬೇಗನೆ ನೀಡಬೇಕು ಎಂದು ಸೂಚಿಸಿದರು.

ಎಂ-ಸ್ಯಾಂಡ್ ಮಧ್ಯೆ ಮರಳು:

ಅಕ್ರಮ ಮರಳುಗಾರಿಕೆ ಬಗ್ಗೆ ಸಾಕಷ್ಟು ದೂರು ಕೇಳಿಬರುತ್ತಿವೆ. ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಿ. ನಿಯಮಾನುಸಾರ ವೇ ಬ್ರಿಡ್ಜ್‌ಗಳಲ್ಲಿ ತೂಕ ನಿರ್ದಿಷ್ಟವಾಗಿದ್ದರೂ, ನಂತರ ನಿಗದಿತ ತೂಕಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ಕಂಡುಬರುತ್ತಿದೆ. ಅಲ್ಲದೇ, ವಾಹನಗಳ ಮೇಲ್ಪದರದಲ್ಲಿ ಎಂ-ಸ್ಯಾಂಡ್‌, ಮಧ್ಯ ಭಾಗದಲ್ಲಿ ಮರಳು ತುಂಬಿ, ಎಂ-ಸ್ಯಾಂಡ್ ರೂಪದಲ್ಲಿ ಮರಳು ಸಾಗಾಣಿಕೆ ಮಾಡುತ್ತಿರುವ ದೂರುಗಳಿವೆ. ಈ ಬಗ್ಗೆಯೂ ಸೂಕ್ಷ್ಮವಾಗಿ ಗಮನಿಸಿ, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಡಿಸಿ ಆದೇಶಿಸಿದರು.

24 ಮರಳು ಬ್ಲಾಕ್‌ ಗುರುತು:

ಪ್ರತಿ ಟನ್ ಮರಳಿಗೆ ₹850 ರಂತೆ ಸರ್ಕಾರ ದರ ನಿಗದಿಪಡಿಸಿದೆ. ಜಿಲ್ಲೆಯಲ್ಲಿ 24 ಮರಳು ಬ್ಲಾಕ್‌ಗಳನ್ನು ಗುರುತಿಸಿ, ಟೆಂಡರ್ ಅಂತಿಮಗೊಳಿಸಲಾಗಿದೆ. ಡಿಸೆಂಬರ್ ಅಂತ್ಯದೊಳಗೆ ಮನೆ ನಿರ್ಮಾಣ ಹಾಗೂ ಇನ್ನಿತರೆ ಕಾಮಗಾರಿಗಳಿಗೆ ಮರಳು ಲಭ್ಯವಾಗಲಿದೆ. 24 ಮರಳು ಬ್ಲಾಕ್‌ಗಳ ಪೈಕಿ 4 ಬ್ಲಾಕ್‌ ಸರ್ಕಾರಿ ಕಾಮಗಾರಿಗೆ, 19 ಬ್ಲಾಕ್‌ ಸಾರ್ವಜನಿಕ ಉಪಯೋಗಕ್ಕೆ ನಿಗದಿಪಡಿಸಿದೆ. ಟೆಂಡರ್ ಅಂತಿಮವಾಗಿದ್ದು, ಇನ್ನೊಂದು ಬ್ಲಾಕ್ ಮಾತ್ರ ಬಾಕಿ ಇದೆ ಎಂದು ತಿಳಿಸಿದರು.

19 ಬ್ಲಾಕ್‌ಗಳಿಗೆ ಟೆಂಡರ್‌:

ಟೆಂಡರ್ ದಾರರು ಷರತ್ತುಗಳ ಅನ್ವಯ ಮರಳು ಪೂರೈಸಬೇಕಾಗುತ್ತದೆ. ಹರಿಹರ ತಾಲೂಕಿನ ಗೋವಿನಹಾಳು, ಎಳೆಹೊಳೆ, ಚಿಕ್ಕಬಿದರೆ, ಗುತ್ತೂರು, ಮಳಲಹಳ್ಳಿ ಹಾಗೂ ಬಿಳಸನೂರು, ಹೊನ್ನಾಳಿ ತಾಲೂಕಿನ ಬುಳ್ಳಾಪುರ, ಚಿಕ್ಕಬಸಾಪುರ, ರಾಂಪುರ, ಬೇಲಿಮಲ್ಲೂರು, ಹಿರೇಬಸೂರು, ಬುಳ್ಳಾಪುರ, ಬೀರಗೊಂಡನಹಳ್ಳಿ ಹಾಗೂ ಬಾಗೇವಾಡಿ ವ್ಯಾಪ್ತಿಯಲ್ಲಿ, ನ್ಯಾಮತಿ ತಾ. ಗೋವಿನಕೋವಿ, ಮಾರಿಗೊಂಡನಹಳ್ಳಿ, ತಗ್ಗಿಹಳ್ಳಿ ಹಾಗೂ ಕೋಟೆಹಾಳ್‌ನಲ್ಲಿ ಮರಳು ಬ್ಲಾಕ್ ಗುರುತಿಸಲಾಗಿದೆ. ಒಟ್ಟು 19 ಬ್ಲಾಕ್‌ಗಳಿಗೆ ಟೆಂಡರ್ ಕರೆಯಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಜಿಪಂ ಸಿಇಒ ಗಿತ್ತೆ ಮಾಧವ ರಾವ್ ವಿಠ್ಠಲ ರಾವ್‌, ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ, ಗಣಿ ಮತ್ತು ಭೂ ವಿಜ್ಞಾನ ಇತರೆ ಇಲಾಖೆ ಅಧಿಕಾರಿಗಳು ಸಭೆಯಲ್ಲಿದ್ದರು.

- - - -18ಕೆಡಿವಿಜಿ4, 5, 6.ಜೆಪಿಜಿ:

ದಾವಣಗೆರೆ ಡಿಸಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ