ಜಿ. ಸೋಮಶೇಖರ
ಕನ್ನಡಪ್ರಭ ವಾರ್ತೆ ಕೊಟ್ಟೂರುನಾಳೆ ಬುಧವಾರ ಮೇ 29 ರಂದು ಪ್ರಸಕ್ತ ವರ್ಷದ ಶಾಲೆ ಆರಂಭ ನೆರವೇರಲಿದ್ದು, ಈ ಮಧ್ಯೆ ತಾಲೂಕಿನಲ್ಲಿ ಹಲವಾರು ಶಾಲಾ ಕಟ್ಟಡಗಳು ಶಿಥಿಲಗೊಂಡಿದ್ದು, ಅವುಗಳ ಮಧ್ಯೆಯೇ ಮಕ್ಕಳು ಶಾಲಾ ಪ್ರವೇಶ ಪಡೆಯಬೇಕಿದೆ.
ಶಿಥಿಲಗೊಂಡಿರುವ ಶಾಲೆ ಕೊಠಡಿಗಳ ದುರಸ್ತಿ ಕಾರ್ಯಕ್ಕೆ ಸಂಬಂಧ ಪಟ್ಟವರು ಇನ್ನೂ ಮುಂದಾಗದೆ ಇರುವುದು ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಕಲಿಕೆಗೆ ಅಡ್ಡಿಯಾಗುತ್ತಿದೆ. ನಿರ್ಮಾಣವಾದ ಕೆಲ ವರ್ಷಗಳಲ್ಲಿಯೇ ಕೊಠಡಿಗಳು ಶಿಥಿಲಾವಸ್ಥೆ ತಲುಪುವ ಹಂತ ಮುಟ್ಟಿರುವುದು ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ. ಹೀಗಾಗಿ ಪೋಷಕರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುತ್ತಿರುವುದರಿಂದ ಹಾಜರಾತಿ ಕಡಿಮೆಯಾಗುತ್ತಲೇ ಬಂದಿದೆ.ಮಾಹಿತಿ
ಕೊಟ್ಟೂರು ತಾಲೂಕಿನಲ್ಲಿ 68 ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿದ್ದು, 6975 ವಿದ್ಯಾರ್ಥಿಗಳಿದ್ದಾರೆ. 6 ಪ್ರೌಢ ಶಾಲೆಗಳಲ್ಲಿ 1515 ವಿದ್ಯಾರ್ಥಿಗಳ ಸಂಖ್ಯೆ ಇದೆ. ವಿದ್ಯಾರ್ಥಿಗಳಿಗೆ 341 ಕೊಠಡಿಗಳು ಇದ್ದು, ಈ ಪೈಕಿ 48 ಕೊಠಡಿಗಳು ಬಳಕೆಗೆ ಯೋಗ್ಯವಿಲ್ಲದಂತಾಗಿವೆ. ಇತರ 55 ಕೊಠಡಿಗಳು ಮತ್ತು 114 ಕೊಠಡಿಗಳು ಸಣ್ಣ ಪುಟ್ಟ ದುರಸ್ತಿಗೆ ಒಳಪಟ್ಟಿವೆ. ಬಳಕೆಗೆ ಯೋಗ್ಯವಲ್ಲದ ಕೊಠಡಿಗಳನ್ನು ಪರಿಶೀಲಿಸಿ ನೆಲಸಮ ಮಾಡುವುದಕ್ಕೆ ಪಂಚಾಯತ್ ರಾಜ್ ಇಲಾಖೆಯ ಎಂಜಿನಿಯರ್ ಉಪವಿಭಾಗಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪತ್ರ ಬರೆದಿದ್ದಾರೆ. ಇವುಗಳ ದುರಸ್ತಿ ಕಾರ್ಯ ಕೈಗೊಳ್ಳಲು ಪಂಚಾಯತ್ ರಾಜ್ ಇಲಾಖೆಗೆ ಹಾಲಿ ಜಾರಿಯಲ್ಲಿರುವ ಲೋಕಸಭಾ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗಿದೆ.ಇದಲ್ಲದೆ ದುರಸ್ತಿಗೆ ಬಂದಿರುವ ಕೊಠಡಿಗಳ ರಿಪೇರಿ ಕಾರ್ಯವನ್ನು ಕೆಕೆಆರ್‌ಡಿಬಿ ಮತ್ತು ಮೈಕ್ರೋ ಯೋಜನೆಯಡಿ ಕೈಗೆತ್ತಿಕೊಳ್ಳಲಿದೆ. ತಾಲೂಕಿನ ಚಿರಿಬಿ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢ ಶಾಲೆಗೆ ಇದುವರೆಗೂ ಪ್ರತ್ಯೇಕ ಕಟ್ಟಡ ಇಲ್ಲದಿರುವುದರಿಂದ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡಗಳಲ್ಲಿಯೇ ತರಗತಿ ನಡೆಸಲಾಗುತ್ತಿದೆ. ಒಂದರಿಂದ 10ನೇ ತರಗತಿಯಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಹಾಲಿ ಇರುವುದು 6 ಕೊಠಡಿಗಳು ಮಾತ್ರ ಇವುಗಳಲ್ಲಿ ಎರಡು ಕೊಠಡಿಗಳು ದುರಸ್ತಿಗೆ ಬಂದಿವೆ. ಈ ಕಾರಣಕ್ಕಾಗಿಯೇ ತಗಡಿನ ಶೆಡ್‌ನಲ್ಲಿ ತರಗತಿ ನಡೆಸುವಂತಾಗಿದೆ.
ಇಳಿಕೆಕೊಟ್ಟೂರು ತಾಲೂಕಿನ ಅನೇಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಎರಡಂಕಿಗೆ ಬಂದಿದೆ. ಅಂತಹ ಶಾಲೆಗಳು ಹೆಚ್ಚು ಕೊಠಡಿಗಳನ್ನು ಹೊಂದಿವೆ. ವಿದ್ಯಾರ್ಥಿಗಳು ಹೆಚ್ಚಿರುವ ಶಾಲೆಗಳಲ್ಲಿ ಕೊಠಡಿಗಳ ಕೊರತೆ ಕಾಣಬರುತ್ತಿದೆ. ಕೊಟ್ಟೂರು ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಗಚ್ಚಿನ ಮಠ ಶಾಲೆಯಲ್ಲಿ 277 ವಿದ್ಯಾರ್ಥಿಗಳಿದ್ದು 14 ಕೊಠಡಿಗಳ ಪೈಕಿ 3 ಕೊಠಡಿಗಳು ಶಿಥಿಲಗೊಂಡಿವೆ.
240 ವಿದ್ಯಾರ್ಥಿಗಳಿರುವ ಕರಿಬಸವೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 9 ಕೊಠಡಿಗಳಿದ್ದು 4 ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. ಮತ್ತೊಂದು ಕೊಠಡಿಯ ಛಾವಣಿಯ ಪದರು ಕಿತ್ತು ಬೀಳುತ್ತಿದೆ. ಈ ವರ್ಷವಾದರೂ ಶಾಲಾ ಕೊಠಡಿಗಳ ದುರಸ್ತಿ ಕಾರ್ಯ ನಡೆದರೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಪ್ರವೇಶ ಪಡೆಯಬಲ್ಲರೇನೋ ಎನ್ನುವಂತಾಗಿದೆ.ಸೌಲಭ್ಯ ದೊರೆಯಲಿಬಡ ಮತ್ತು ಮಧ್ಯಮ ವರ್ಗದ ಮಕ್ಕಳ ಶಿಕ್ಷಣಕ್ಕೆ ಸರ್ಕಾರಿ ಶಾಲೆಗಳೇ ಆಧಾರ. ಮಕ್ಕಳು ಶಿಕ್ಷಣ ಪಡೆಯುವ ಶಾಲಾ ಕೊಠಡಿಗಳು ಅತ್ಯುತ್ತಮವಾಗಿರಬೇಕು. ಎಲ್ಲ ಬಗೆಯ ಸೌಕರ್ಯಗಳು ಇದ್ದರೆ ಖಂಡಿತ ಪ್ರತಿ ಮಕ್ಕಳು ಪ್ರವೇಶ ಪಡೆಯಲು ಮುಂದಾಗುತ್ತಾರೆ.
ಡಿ. ಸಿದ್ದಪ್ಪ ನಾಗರೀಕ ಕೊಟ್ಟೂರುಶೀಘ್ರ ದುರಸ್ತಿಕೊಟ್ಟೂರು ತಾಲೂಕಿನಲ್ಲಿ ಬಳಕೆಗೆ ಯೋಗ್ಯವಲ್ಲದ ಕೊಠಡಿಗಳ ಪಟ್ಟಿ ತಯಾರು ಮಾಡಿಕೊಂಡು ಬರುವಂತೆ ಶಿಕ್ಷಣ ಇಲಾಖೆ ಅಧಿಕಾರಿಗೆ ಕೇಳಲಾಗಿದೆ. ಶೀಘ್ರ ಅವುಗಳ ದುರಸ್ತಿ ಕಾರ್ಯಕ್ಕೆ ಮುಂದಾಗಲು ಸಂಬಂದಪಟ್ಟವರಿಗೆ ಸೂಚಿಸುತ್ತೇನೆ. ಒಟ್ಟಾರೆಯಾಗಿ ಸರ್ಕಾರಿ ಶಾಲೆಗಳಲ್ಲಿ ಎಲ್ಲ ತರಹದ ಗುಣಮಟ್ಟದ ಸೌಲಭ್ಯಗಳು ದೊರಕುವಂತಾಗಲೂ ಎಲ್ಲ ಕ್ರಮ ಕೈಗೊಳ್ಳುವೆ
ಕೆ. ನೇಮಿರಾಜ ನಾಯ್ಕ ಶಾಸಕರು ಹ.ಬೋ.ಹಳ್ಳಿ ಕ್ಷೇತ್ರಪ್ರತ್ಯೇಕ ಕಟ್ಟಡತಾಲೂಕಿನ ಸರ್ಕಾರಿ ಶಾಲೆಗಳ ದುರಸ್ತಿ ಮತ್ತಿತರರ ರಿಪೇರಿ ಕಾಮಗಾರಿ ಕೈಗೊಳ್ಳಲು ಈಗಾಗಲೇ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಮನ ಸೆಳೆಯಲಾಗಿದೆ. ಕೊಟ್ಟೂರು, ಕೂಡ್ಲಿಗಿ ತಾಲೂಕು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ₹10.19 ಕೋಟಿ ಯೋಜನೆ ರೂಪಿಸಿ ಅನುದಾನ ಬಿಡುಗಡೆಗೆ ಜಿಲ್ಲಾ ಪಂಚಾಯಿತಿಗೆ ಮೊರೆಹೋಗಿದ್ದೇವೆ. ತಾಲೂಕಿನ ಚಿರಿಬಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಗೆ ಪ್ರತ್ಯೇಕ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಿ ಒತ್ತಾಯಿಸಲಾಗಿದೆ.
ಪದ್ಮನಾಭ ಕರ್ಣಂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೂಡ್ಲಿಗಿ, ಕೊಟ್ಟೂರು