ಕುತ್ಪಾಡಿಯ ಎಸ್‌ಡಿಎಂ ಆಯುರ್ವೇದ ಕಾಲೇಜಿನಲ್ಲಿ 28 ನೇ ಶಿಷ್ಯೋಪನಯನ ಸಂಸ್ಕಾರ
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಮಮತಾ ಕೆ.ವಿ., ಈ ಸಂಸ್ಥೆಯು ಗುರುಮುಖೇನ ವಿದ್ಯೆ ಕಲಿಯುವ ವಿಧಾನವನ್ನು ಪರಂಪರಾಗತವಾಗಿ ಅನುಸರಿಸಿಕೊಂಡು ಬಂದಿದ್ದು, ಪ್ರಸ್ತುತ ದಿನಗಳಲ್ಲೂ ಆಯುರ್ವೇದ ಕ್ಷೇತ್ರದಲ್ಲಿ ಯಶಸ್ಸುಗಳಿಸಲು ಪರಿಣತ ವೈದ್ಯ ಶಿಕ್ಷಕರ ಮಾರ್ಗದರ್ಶನವು ಅಮೂಲ್ಯವಾಗಿದೆ ಎಂದರು. ಅಧ್ಯಯನದಲ್ಲಿ ಸತತ ಶ್ರದ್ಧೆ ಪರಿಶ್ರಮ ಹಾಗೂ ತತ್ಪರತೆ ಹೊಂದುವಂತೆ ಕರೆ ನೀಡಿದರು.
ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ. ನಾಗರಾಜ್ ಎಸ್. ಅತಿಥಿಗಳನ್ನು ಸ್ವಾಗತಿಸಿ, ಶಿಷ್ಯೋಪನಯನ ಸಂಸ್ಕಾರದ ಸದುದ್ದೇಶ ವಿವರಿಸಿದರು.
ಆಡಳಿತ ವಿಭಾಗ ಮುಖ್ಯಸ್ಥ ಡಾ. ಪ್ರಶಾಂತ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ನೆರವೇರಿಸಿದರು. ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ. ಶ್ರೀಕಾಂತ್ ಮತ್ತು ಕಾರ್ಯಕ್ರಮದ ಸಂಯೋಜಕ ಡಾ. ರಜನೀಶ್ ಗಿರಿ ಉಪಸ್ಥಿತರಿದ್ದರು. ಕೌಮರಭೃತ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಕಾವ್ಯ ಹಾಗೂ ಆಗಧತಂತ್ರ ವಿಭಾಗದ ಡಾ. ಶುಭಾ ಪಿ ಯು ನಿರೂಪಿಸಿದರು. ಸ್ನಾತಕ ವಿಭಾಗದ ಡೀನ್ ಡಾ. ಪ್ರಥ್ವಿರಾಜ್ ಪುರಾಣಿಕ್ ವಂದಿಸಿದರು.ಶಿಷ್ಯೋಪನಯನ ಕಾರ್ಯಕ್ರಮದ ಪ್ರಯುಕ್ತ ಪ್ರಾತಃಕಾಲದ ಸಮಯದಲ್ಲಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರ ಸಮಕ್ಷಮದಲ್ಲಿ ಧನ್ವಂತರಿ ಹೋಮ ನೆರವೇರಿತು.