ಪಾಕ್‌ ಮೇಲೆ ಭಾರತೀಯ ಸೇನೆಯ ವಾಯುದಾಳಿಗೆ ಸ್ವಾಗತ

KannadaprabhaNewsNetwork | Published : May 10, 2025 1:15 AM
Follow Us

ಸಾರಾಂಶ

ಪಹಲ್ಗಾಮ್ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ಮಂಗಳವಾರ ರಾತ್ರಿ ಏರ್‌ಸ್ಟ್ರೈಕ್ ಮಾಡಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿರುವುದನ್ನು ಸ್ವಾಗತಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ವತಿಯಿಂದ ಸಾಗರ ಹೋಟೆಲ್ ವೃತ್ತದಲ್ಲಿ ವಿಜಯೋತ್ಸವ ಆಚರಿಸಲಾಯಿತು.

ವಿಎಚ್‌ಪಿ, ಬಜರಂಗದಳದಿಂದ ವಿಜಯೋತ್ಸವ

ಸಾಗರ: ಪಹಲ್ಗಾಮ್ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ಮಂಗಳವಾರ ರಾತ್ರಿ ಏರ್‌ಸ್ಟ್ರೈಕ್ ಮಾಡಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿರುವುದನ್ನು ಸ್ವಾಗತಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ವತಿಯಿಂದ ಸಾಗರ ಹೋಟೆಲ್ ವೃತ್ತದಲ್ಲಿ ವಿಜಯೋತ್ಸವ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷೆ ಪ್ರತಿಮಾ ಜೋಗಿ, ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ಉಗ್ರಗಾಮಿಗಳು ನಡೆಸಿದ್ದ ಗುಂಡಿನ ಕೃತ್ಯ ಅತ್ಯಂತ ನೋವು ತಂದಿತ್ತು. ಉಗ್ರರು ನಡೆಸಿದ ದುಷ್ಕೃತ್ಯಕ್ಕೆ ಭಾರತೀಯ ಸೇನೆ ತಕ್ಕಪಾಠ ಕಲಿಸಿದ್ದು, ನೋವಿನಲ್ಲಿದ್ದ ಕುಟುಂಬಕ್ಕೆ ಸ್ವಲ್ಪಮಟ್ಟಿನ ಸಮಾಧಾನ ತಂದಿದೆ ಎಂದು ಹೇಳಿದರು.

೨೬ ಮಾತೆಯರ ಸಿಂದೂರ ಕಿತ್ತುಕೊಂಡ ಪಾಕಿಸ್ತಾನಿ ಪ್ರೇರಿತ ಉಗ್ರಗಾಮಿಗಳಿಗೆ ಬುದ್ದಿಕಲಿಸುವ ಒಂದು ಹಂತ ಮಾತ್ರ ನೆರವೇರಿದ್ದು, ಇನ್ನು ಮುಂದೆ ಭಾರತೀಯ ಸೇನೆ ಉಗ್ರರಿಗೆ ಇನ್ನಷ್ಟು ಕಠಿಣ ಶಿಕ್ಷೆ ನೀಡುವುದು ಖಚಿತ. ಮತ್ತೆ ಉಗ್ರಗಾಮಿಗಳು ತಲೆಎತ್ತದಂತೆ ಭಾರತೀಯ ಸೇನೆ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕು ಎಂದು ಹೇಳಿದರು.

ನಿವೃತ್ತ ಪ್ರಾಚಾರ್ಯ ಅ.ಪು.ನಾರಾಯಣಪ್ಪ ಮಾತನಾಡಿ, ಭಾರತದ ಮೇಲೆ ದಾಳಿ ಮಾಡಿದರೆ ಎಂತಹ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಭಾರತೀಯ ಸೈನಿಕರು ತೋರಿಸಿದ್ದಾರೆ. ಪಾಕಿಸ್ತಾನ ಪ್ರೇರಿತ ಉಗ್ರರ ಅಡಗುತಾಣ ನಾಶಪಡಿಸಿದ ವೀರಸೈನಿಕರು ಅಭಿನಂದಾರ್ಹರು. ಸೈನಿಕರ ಜೊತೆ ಇಡೀ ದೇಶ ನಿಂತಿದೆ. ಕೇಂದ್ರ ಸರ್ಕಾರ ಸೈನ್ಯಕ್ಕೆ ಮುಕ್ತ ಅವಕಾಶ ನೀಡಿದ್ದು, ಪ್ರಧಾನಿಯವರ ಮುಂದಾಲೋಚನೆಗೆ ಕಾರಣವಾಗಿದೆ ಎಂದರು.

ಭಯೋತ್ಪಾದಕರಿಗೆ ಬೆಂಬಲ ಕೊಡುತ್ತಿರುವುದು ಪಾಕಿಸ್ತಾನ ಸೈನ್ಯ. ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನ ಸೈನ್ಯಕ್ಕೆ ಕಠಿಣ ಪಾಠ ಕಲಿಸಬೇಕು. ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿರುವ ದೇಶದೊಳಗೆ ಇರುವವರು ಹೆಚ್ಚು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.

ಬಜರಂಗದಳದ ಜಿಲ್ಲಾ ಸಂಚಾಲಕ ಸಂತೋಷ್ ಶಿವಾಜಿ ಮಾತನಾಡಿದರು. ಅ.ಶ್ರೀ.ಆನಂದ್, ನಾರಾಯಣಮೂರ್ತಿ, ವ.ಶಂ.ರಾಮಚಂದ್ರ ಭಟ್, ಸುದರ್ಶನ್ ಕೆ.ಎಚ್. ಇತರರು ಹಾಜರಿದ್ದರು.