ಇಂದು ಸುತ್ತೂರು ಜಾತ್ರೋತ್ಸವ ಪ್ರಚಾರ ರಥಯಾತ್ರೆಗೆ ಸ್ವಾಗತ

KannadaprabhaNewsNetwork |  
Published : Dec 13, 2025, 02:15 AM IST
ಹೊನ್ನಾಳಿ ಫೋಟೋ 11ಎಚ್.ಎಲ್.ಐ1.ಡಿ.13ರಕ್ಕೆ ಹಿರೇಕಲ್ಮಠಕ್ಕೆ ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರದ ರಥಯಾತ್ರೆ ಅಗಮಿಸಲಿರುವ ಹಿನ್ನಲೆಯಲ್ಲಿ ಗುರುವಾರ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಕಚೇರಿಯಲ್ಲಿ ಜಾತ್ರಮಹೋತ್ಸವದ ಸಂಚಾಲಕ ಕೆ.ಜಿ. ನಿಂಗಪ್ಪ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.      | Kannada Prabha

ಸಾರಾಂಶ

ಸುತ್ತೂರು ಕ್ಷೇತ್ರದ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತಿ ಮಹೋತ್ಸವ ಈ ಬಾರಿ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಡಿ.16ರಿಂದ 21ರವರೆಗೆ ಅದ್ಧೂರಿಯಾಗಿ ಜರುಗಲಿದೆ.

- ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತಿ ಮಹೋತ್ಸವ ಅಂಗವಾಗಿ ಆಯೋಜನೆ: ನಿಂಗಪ್ಪ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಸುತ್ತೂರು ಕ್ಷೇತ್ರದ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತಿ ಮಹೋತ್ಸವ ಈ ಬಾರಿ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಡಿ.16ರಿಂದ 21ರವರೆಗೆ ಅದ್ಧೂರಿಯಾಗಿ ಜರುಗಲಿದೆ. ಕಾರ್ಯಕ್ರಮ ಹಿನ್ನೆಲೆ ನಾಡಿನ ಜನತೆಗೆ ಈ ಬಗ್ಗೆ ಧಾರ್ಮಿಕ ಜನಜಾಗೃತಿ ಮೂಡಿಸುವ ಸಲುವಾಗಿ ಸುತ್ತೂರು ಜಾತ್ರೋತ್ಸವ ಪ್ರಚಾರದ ರಥಯಾತ್ರೆ ಡಿ.13ರಂದು ಹೊನ್ನಾಳಿ ಹಿರೇಕಲ್ಮಠಕ್ಕೆ ಹೊಳಲೂರು, ಸವಳಂಗ, ನ್ಯಾಮತಿ ಮಾರ್ಗವಾಗಿ ಸಂಜೆ 4.30 ಗಂಟೆಗೆ ಆಗಮಿಸಲಿದೆ ಎಂದು ಶಿವರಾತ್ರೀಶ್ವರ ಮಠದ ಸಂಚಾಲಕ, ಮಂಡಲ ಪಂಚಾಯಿತಿ ಮಾಜಿ ಪ್ರಧಾನ ಕೆ.ಜಿ. ನಿಂಗಪ್ಪ ಹೇಳಿದರು.

ಗುರುವಾರ ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಹಿಂದೆ ಸುತ್ತೂರು ಮಠದ ಜಾತ್ರಾ ಮಹೋತ್ಸವ ಮೈಸೂರಿನಲ್ಲಿ ನಡೆಯುತ್ತಿತ್ತು. ಆದರೆ, ಲಕ್ಷಾಂತರ ಭಕ್ತರ ಅಭಿಲಾಷೆಯಂತೆ ಪ್ರತಿ ವರ್ಷ ಒಂದು ಊರನ್ನು ಆಯ್ಕೆ ಮಾಡಿಕೊಂಡು ಆ ಊರಿನಲ್ಲಿ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ದಿವ್ಯಸ್ಮರಣೆಯ ಜಯಂತಿ ಮಹೋತ್ಸವನ್ನು ಆಚರಿಸಲಾಗುತ್ತಿದೆ. ಜನತೆಯಲ್ಲಿ ಭಾರತೀಯ ಸಂಸ್ಕೃತಿ, ಧಾರ್ಮಿಕತೆ ಹಾಗೂ ಭಾವೈಕ್ಯತೆಯ ಅರಿವು ಮೂಡಿಸುವ ಸಲುವಾಗಿ ಅನೇಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಮಳವಳ್ಳಿಯ ಸುತ್ತೂರು ಜಾತ್ರಾ ಮಹೋತ್ಸವವನ್ನು ಡಿ.16ರಂದು ರಾಷ್ಟ್ರಪತಿ ದ್ರೌಪದಿ ಮುರ್ಮ ಉದ್ಘಾಟಿಸಲಿದ್ದಾರೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ಸಚಿವ ಎಚ್.ಡಿ.ಕುಮಾರ ಸ್ವಾಮಿ ಅವರು ನೆನಪಿನ ಸಂಚಿಕೆ ಬಿಡುಗಡೆ ಮಾಡಲಿದೆ. ಕಾರ್ಯಕ್ರಮದಲ್ಲಿ ಕೇಂದ್ರ ಮತ್ತು ರಾಜ್ಯದ ಅನೇಕ ಸಚಿವರು, ಸಂಸದರು, ಶಾಸಕರರು, ಸಾಧು ಸಂತರು, ಧಾರ್ಮಿಕ ಚಿಂತಕರು ಭಾಗವಹಿಸಿದ್ದಾರೆ ಎಂದರು.

ಉತ್ಸವದಲ್ಲಿ ಉಚಿತ ಸಾಮೂಹಿಕ ವಿವಾಹ, ವೀರಭದ್ರೇಶ್ವರ ಕೆಂಡೋತ್ಸವ, ಕೃಷಿ ಮೇಳ, ಜಾನುವಾರು ಜಾತ್ರೆ, ಸಾಂಸ್ಕೃತಿಕ ಮೇಳ, ದೇಶಿ ಆಟಗಳು, ದೋಣಿವಿಹಾರ, ಚಿತ್ರಕಲೆ, ಜಾನಪದ ಹಾಡುಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ ಎಂದು ಮಾಹಿತಿ ನೀಡಿದರು.

- - -

(ಬಾಕ್ಸ್‌)

* ಹೊನ್ನಾಳಿಯಲ್ಲಿ ರಥಯಾತ್ರೆಗೆ ಸ್ವಾಗತ

ರಥಯಾತ್ರೆಯು ಡಿ.3ರಿಂದ ಸುತ್ತೂರಿನಿಂದ ಆರಂಭಗೊಂಡು ರಾಜ್ಯದ ಇತರೆ ಊರುಗಳಿಗೆ ಭೇಟಿ ನೀಡಿ, ಸವಳಂಗ ಮಾರ್ಗವಾಗಿ ನ್ಯಾಮತಿ ನಂತರ ಹೊನ್ನಾಳಿಯ ಹಿರೇಕಲ್ಮಠಕ್ಕೆ ಡಿ.13ರ ಶನಿವಾರ ಸಂಜೆ ಆಗಮಿಸಲಿದೆ ಎಂದು ಕೆ.ಜಿ. ನಿಂಗಪ್ಪ ಹೇಳಿದರು.

ಶ್ರೀಮಠದ ಆವರಣದಲ್ಲಿ ನಡೆಯುವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಜಿ ವಹಿಸಲಿದ್ದಾರೆ. ಕ್ಷೇತ್ರ ಶಾಸಕ ಡಿ.ಜಿ.ಶಾಂತನಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಉತ್ಸವ ಮೂರ್ತಿಗೆ ಪುಪ್ಪಾರ್ಚನೆ ಮೂಲಕ ಸ್ವಾಗತ ಕೋರಲಿದ್ದಾರೆ ಎಂದರು.

ಸಭೆಯಲ್ಲಿ ಬಯಲುಸೀಮೆ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ.ಮಂಜಪ್ಪ, ಉಪ ವಿಭಾಗಾಧಿಕಾರಿ ಎಚ್.ಬಿ. ಚನ್ನಪ್ಪ, ಪೊಲೀಸ್ ಇನ್‌ಸ್ಪೆಕ್ಟರ್ ಎಚ್.ಸುನೀಲ್ ಕುಮಾರ್, ಕಾಂಗ್ರೆಸ್‌ ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಎಚ್.ಎ. ಉಮಾಪತಿ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಜ್ಯೋತಿ ಅಕ್ಕ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಎಚ್.ಎ. ಉಮಾಪತಿ, ಪ್ರ.ಬ್ರ.ಈ. ವಿವಿ ಹೊನ್ನಾಳಿ ಸಂಚಾಲಕರಾದ ಜ್ಯೋತಿ ಅಕ್ಕ ಇತರರು ಇದ್ದರು.

- - -

-11ಎಚ್.ಎಲ್.ಐ1.ಡಿ.13:

ಜಾತ್ರೋತ್ಸವದ ಸಂಚಾಲಕ ಕೆ.ಜಿ. ನಿಂಗಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ