ಕಂಬಳ ಕ್ರೀಡೆಯ ಮೂಲಕ ಜನರಿಗೆ ಪ್ರೀತಿ ವಿಶ್ವಾಸಗಳ ಸಂದೇಶ ರವಾನೆಯಾಗಲು ಸಾಧ್ಯ ಎಂದು ಪುತ್ತೂರು ಕ್ಷೇತ್ರ ವಿಧಾನಸಭಾ ಶಾಸಕ ಅಶೋಕ್ ಕುಮಾರ್ ರೈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕುಶಾಲನಗರ ; ಕಂಬಳ ಕ್ರೀಡೆಯ ಮೂಲಕ ಜನರಿಗೆ ಪ್ರೀತಿ ವಿಶ್ವಾಸಗಳ ಸಂದೇಶ ರವಾನೆಯಾಗಲು ಸಾಧ್ಯ ಎಂದು ಪುತ್ತೂರು ಕ್ಷೇತ್ರ ವಿಧಾನಸಭಾ ಶಾಸಕ ಅಶೋಕ್ ಕುಮಾರ್ ರೈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ಕುಶಾಲನಗರದ ಗುಂಡೂರಾವ್ ಬಡಾವಣೆಯ ಜಾತ್ರಾ ಮೈದಾನದಲ್ಲಿ ನಡೆದ ಕಂಬಳದ ಕೋಣಗಳಿಗೆ ಸ್ವಾಗತ ಉಪಚಾರ ಮತ್ತು ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ದಕ್ಷಿಣ ಕನ್ನಡದ ಜಾನಪದ ಕ್ರೀಡೆಯಾದ ಕಂಬಳ ಪ್ರಸಕ್ತ ರಾಜ್ಯ ವ್ಯಾಪಿಯಾಗಿ ನಡೆಯುತ್ತಿದ್ದು ಈ ಬಾರಿ ವಿಶ್ವ ವಿಖ್ಯಾತ ದಸರಾದಲ್ಲಿ ಎರಡು ದಿನಗಳ ಕಾಲ ನಡೆಯಲಿದೆ. ಆ ಮೂಲಕ ಎಲ್ಲರ ಕೀರ್ತಿ ಹೆಚ್ಚಲಿದೆ ಎಂದರು.
ಕರಾವಳಿ ಜಾನಪದ ಕ್ರೀಡೆಯಾದ ಕಂಬಳ ಈ ಬಾರಿ ಮೈಸೂರು ದಸರಾದಲ್ಲಿ ನಡೆಯುವ ಸಂದರ್ಭ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ದೊರೆತ ಆತ್ಮೀಯ ಸ್ವಾಗತ ಉಪಚಾರ ಬಗ್ಗೆ ಅವರು ಎಲ್ಲರ ಪರವಾಗಿ ಮಡಿಕೇರಿ ಕ್ಷೇತ್ರ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ ಕಂಬಳ ಕ್ರೀಡೆ ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರ ಸೀಮಿತವಲ್ಲ ರಾಜ್ಯದ ಎಲ್ಲೆಡೆ ಈ ಕ್ರೀಡೆ ಪ್ರದರ್ಶನ ನಡೆಯಬೇಕು ಈ ನಿಟ್ಟಿನಲ್ಲಿ ಪುತ್ತೂರು ಕ್ಷೇತ್ರದ ಶಾಸಕರು ಮತ್ತು ಸರಕಾರ ಮೈಸೂರು ದಸರಾದಲ್ಲಿ ಕಂಬಳದ ಅವಕಾಶ ಕಲ್ಪಿಸಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಮೈಸೂರಿನಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ದಸರಾ ಕಂಬಳಕ್ಕೆ ಯಶಸ್ಸು ಕೋರಿದರು. ಕುಶಾಲನಗರ ಗಣಪತಿ ಜಾತ್ರಾ ಸಂದರ್ಭ ಕಂಬಳದ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವಂತೆ ಪ್ರಸ್ತಾಪಿಸಿದ ಶಾಸಕರು ಕಂಬಳ ಸಮಿತಿಗೆ ಇದೇ ಸಂದರ್ಭ ಮನವಿ ಸಲ್ಲಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಂಬಳ ಸಮಿತಿಯ ರಾಜ್ಯಾಧ್ಯಕ್ಷ ದೇವಿ ಪ್ರಸಾದ್, ಕಂಬಳ ಕರಾವಳಿಯ ಜಾನಪದ ಕ್ರೀಡೆಯಾಗಿದ್ದು ಆರಾಧನೆ ಸಂಸ್ಕೃತಿಯ ಪ್ರತೀಕವಾಗಿದೆ. ಕ್ರೀಡೆಯನ್ನು ಯಾವುದೇ ಸಂದರ್ಭ ಯಾರೂ ಕೂಡ ವಿರೋಧಿಸಬಾರದು ಕ್ರೀಡೆಯನ್ನು ನೋಡಿ ಆನಂತರ ವಿರೋಧಿಸುವ ಮನೋಭಾವನೆ ಬರಲಿ ಎಂದರು.ಇದೇ ಸಂದರ್ಭ ಶಾಸಕರುಗಳಿಗೆ ಮತ್ತು ಗಣ್ಯರಿಗೆ ತುಳುಭಾಷಿಕರ ಸಂಘ ಸಂಸ್ಥೆಗಳ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಂಬಳ ಸಮಿತಿ ಉಸ್ತುವಾರಿ ಮುರಳೀಧರ್ ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಪ್ರಮೋದ್ ಮುತ್ತಪ್ಪ, ಕಂಬಳ ಸಮಿತಿಯ ಚಂದ್ರಶೇಖರ್ ಮತ್ತು ಸಮಿತಿ ಸದಸ್ಯರುಗಳು ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ತುಳುಭಾಷಿಕರ ಸಂಘಟನೆಗಳ ಪ್ರಮುಖರಾದ ಜಗದೀಶ್ ರೈ, ಐತಪ್ಪ ರೈ , ಅಪ್ರು ರವೀಂದ್ರ, ದಾಮೋದರ ಸದಾಶಿವ ರೈ, ರಾಜೀವ ಲೋಚನ, ದಯಾನಂದ ಪ್ರಕಾಶ್ ಆಚಾರ್ಯ ಸುಧೀರ್, ರವೀಂದ್ರ ರೈ ಸ್ಥಳಿಯ ಪ್ರಮುಖರಾದ ಮಂಜುನಾಥ್ ಗುಂಡೂರಾವ್, ಜೋಸೆಫ್ ವಿಕ್ಟರ್ ಸೋನ್ಸ್ ಮತ್ತಿತರರು ಇದ್ದರು. ಪುತ್ತೂರಿನಿಂದ ಮಡಿಕೇರಿ ಮೂಲಕ ಮೈಸೂರಿಗೆ ತೆರಳುವ ಸಂದರ್ಭ ಸುಮಾರು 25ಕ್ಕೂ ಅಧಿಕ ಜೊತೆ ಕಂಬಳದ ಕೋಣಗಳು ಕುಶಾಲನಗರದಲ್ಲಿ ಜಾತ್ರಾ ಮೈದಾನದ ಆವರಣಕ್ಕೆ ಆಗಮಿಸಿ ಸ್ವಲ್ಪ ಕಾಲ ವಿಶ್ರಾಂತಿ ಪಡೆಯುವ ಮೂಲಕ ಸ್ಥಳೀಯರ ಆಕರ್ಷಣೆಗೆ ಒಳಗಾದವು. ಶುಕ್ರವಾರ ರಾತ್ರಿಯಿಂದಲೇ ಜಾತ್ರಾ ಮೈದಾನಕ್ಕೆ ಕೋಣಗಳು ಬರಲಾರಂಭಿಸಿದ್ದವು.
ಜಿಲ್ಲೆ ಮತ್ತು ಸ್ಥಳೀಯ ತುಳುಭಾಷಿಕರ ಸಂಘದ ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಕಾರ್ಯಕರ್ತರು ಆರತಿ ಎತ್ತುವ ಮೂಲಕ ಕೋಣಗಳನ್ನು ಬರಮಾಡಿಕೊಂಡರು.
ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಟಿ ಎಸ್ ಗಿರೀಶ್ ಮತ್ತು ಹಿರಿಯ ಆರೋಗ್ಯ ಅಧಿಕಾರಿ ಉದಯಕುಮಾರ್ ಅವರ ನೇತೃತ್ವದಲ್ಲಿ ಜಾತ್ರಾ ಮೈದಾನದಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒಳಗೊಂಡಂತೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಕುಶಾಲನಗರ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಿಂದ ನೂರಾರು ಸಂಖ್ಯೆಯಲ್ಲಿ ಕಂಬಳ ಪ್ರಿಯರು ಪಾಲ್ಗೊಂಡಿದ್ದರು. ಈ ಸಂದರ್ಭ ಹುಲಿ ವೇಷಧಾರಿಗಳ ನೃತ್ಯ ಮತ್ತು ಚೆಂಡೆ ವಾದ್ಯ ಗೋಷ್ಠಿ ನೆರೆದವರನ್ನು ರಂಜಿಸಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.