ಕುಡುಕರ ತಾಣವಾದ ಕಲ್ಯಾಣ ಮಂಟಪ

KannadaprabhaNewsNetwork |  
Published : Oct 13, 2025, 02:02 AM IST
ಪೋಟೊ12ಕೆಎಸಟಿ3: ಕುಷ್ಟಗಿ ಪಟ್ಟಣದಲ್ಲಿನ ಡಾ.ರಾಜಕುಮಾರ ಕಲ್ಯಾಣಮಂಟಪದ ಆವರಣದಲ್ಲಿ ಕುಡಿದು ಬಿಸಾಕಿದ ಬಾಟಲಿಗಳು ಹಾಗೂ ಮದ್ಯ ಕುಡಿದು ಮಲಗಿರುವ ವ್ಯಕ್ತಿ. | Kannada Prabha

ಸಾರಾಂಶ

ಕಲ್ಯಾಣ ಮಂಟಪದ ಆವರಣದಲ್ಲಿ ಕುಡುಕರ ಹಾವಳಿಯಿಂದ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ

ಪರಶಿವಮೂರ್ತಿ ದೋಟಿಹಾಳ ಕುಷ್ಟಗಿ

ಸಾಮಾಜಿಕ ಕಾರ್ಯಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ನಿರ್ಮಿಸಿದ ಪಟ್ಟಣದ ವಿದ್ಯಾ ನಗರದಲ್ಲಿನ ಡಾ.ರಾಜಕುಮಾರ ಕಲ್ಯಾಣ ಮಂಟಪ ಇದೀಗ ಕುಡುಕರ ಅಡ್ಡೆಯಾಗಿ ಮಾರ್ಪಟ್ಟಿದೆ.

ಇಲ್ಲಿನ ಪುರಸಭೆಯವರು ಕಲ್ಯಾಣ ಮಂಟಪವನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ ಪರಿಣಾಮವಾಗಿ ಕಲ್ಯಾಣ ಕಾರ್ಯಗಳಿಗೆ ಬಳಕೆಯಾಗಬೇಕಿರುವ ಕಲ್ಯಾಣ ಮಂಟಪವೂ ಇಂದು ಕುಡುಕರ ಅಡ್ಡೆಯಾಗಿ ಮಾರ್ಪಾಡಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಇಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.

ಕಲ್ಯಾಣ ಮಂಟಪಕ್ಕೆ ಹೊಂದಿಕೊಂಡು ಸರ್ಕಾರಿ ಪ್ರಾಥಮಿಕ ಶಾಲೆಯಿದ್ದು, ಇಲ್ಲಿಗೆ ನೂರಾರು ಮಕ್ಕಳು ಬರುತ್ತಿದ್ದು ಕಲ್ಯಾಣ ಮಂಟಪದ ಆವರಣದಲ್ಲಿ ಕುಡುಕರ ಹಾವಳಿಯಿಂದ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಎದುರಾಗಿದ್ದು ಅಧಿಕಾರಿಗಳು ಇಲ್ಲಿ ನಡೆಯುವ ಚಟುವಟಿಕೆಗೆ ಕಡಿವಾಣ ಹಾಕುವ ಕೆಲಸ ಮಾಡಬೇಕಾಗಿದೆ.

ಮದ್ಯವ್ಯಸನಿಗಳು: ಡಾ. ರಾಜಕುಮಾರ ಕಲ್ಯಾಣ ಮಂಟಪದ ಆವರಣದಲ್ಲಿ ಕುಡುಕರು ರಾಜಾರೋಷವಾಗಿ ಎಲ್ಲೆಂದರಲ್ಲಿ ಕುಡಿದು ಮಲಗುವುದು, ಕುಡಿದ ಬಾಟಲಿ ಒಡೆದು ಹಾಕುವುದು ಗ್ಲಾಸ್, ಚಿಪ್ಸ್ ಪ್ಯಾಕೆಟ್‌ ಬಿಸಾಕಿ ಹೋಗುತ್ತಿರುವ ಪರಿಣಾಮ ಪಕ್ಕದ ಶಾಲೆಯ ಮಕ್ಕಳು ಭಯದ ವಾತಾವರಣದಲ್ಲಿ ಶಿಕ್ಷಣ ಕಲಿಯಬೇಕಿದೆ.

ಸಂಘ-ಸಂಸ್ಥೆಗಳಿಗೆ ಹಸ್ತಾಂತರಕ್ಕೆ ಒತ್ತಾಯ: ಕುಷ್ಟಗಿ ಪಟ್ಟಣದಲ್ಲಿ ಅನೇಕ ಸಂಘ ಸಂಸ್ಥೆಗಳು ಇದ್ದು, ಇದರಲ್ಲಿ ಹತ್ತಾರು ಕಲಾವಿದರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿದ್ದಾರೆ. ಆದರೆ ಇಲ್ಲಿ ಸಂಘ ಸಂಸ್ಥೆಗಳ ಚಟುವಟಿಕೆ ಕಾರ್ಯಕ್ರಮ ಮಾಡಲು ಒಂದು ಸಾರ್ವಜನಿಕ ಸಭಾಭವನ ಅಥವಾ ರಂಗಮಂದಿರ ಇಲ್ಲ. ನಿರುಪಯುಕ್ತ ಡಾ. ರಾಜಕುಮಾರ ಕಲ್ಯಾಣ ಮಂಟಪವನ್ನು ಸಂಘ-ಸಂಸ್ಥೆಗಳ ಕಾರ್ಯ ಚಟುವಟುವಕೆ ನಡೆಸಲು ಹಸ್ತಾಂತರ ಮಾಡಿದಲ್ಲಿ ಸದುಪಯೋಗ ಆಗುವ ಜತೆಗೆ ಸ್ವಚ್ಛತೆಯೂ ಇರಲಿದೆ. ಹೀಗಾಗಿ ಹಸ್ತಾಂತರಕ್ಕೆ ಕಲಾವಿದರು ಹಾಗೂ ಸಂಘ ಸಂಸ್ಥೆ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ಕುಷ್ಟಗಿ ಪಟ್ಟಣದಲ್ಲಿ ಸಾಹಿತ್ಯಿಕ ಚಟುವಟಿಕೆ ನಡೆಸಲು ಖಾಸಗಿ ಭವನಗಳಿಗೆ ಬಾಡಿಗೆ ಕೊಟ್ಟು ಕಾರ್ಯಕ್ರಮ ಮಾಡುವುದು ಕಷ್ಟದಾಯಕವಾಗಿದ್ದು, ಪುರಸಭೆ ಅಧಿಕಾರಿಗಳು ನಿರುಪಯುಕ್ತವಾಗಿರುವ ಡಾ. ರಾಜಕುಮಾರ ಕಲ್ಯಾಣ ಮಂಟಪವನ್ನು ಕನ್ನಡ ಸಾಹಿತ್ಯ ಪರಿಷತ್ತಿಗೆ ಹಸ್ತಾಂತರ ಮಾಡಿದರೆ ಸದುಪಯೋಗಪಡಿಸಿಕೊಳ್ಳುವ ಮೂಲಕ ಸಾರ್ವಜನಿಕ ಕಾರ್ಯಕ್ರಮ ನಡೆಸಲು ಅನೂಕೂಲಕರವಾಗಲಿದೆ ಎಂದು ಕಸಾಪ ಮಾಜಿ ಅಧ್ಯಕ್ಷ ರವೀಂದ್ರ ಬಾಕಳೆ ತಿಳಿಸಿದ್ದಾರೆ.

ಕುಷ್ಟಗಿ ಪಟ್ಟಣದಲ್ಲಿರುವ ಡಾ. ರಾಜಕುಮಾರ ಕಲ್ಯಾಣ ಮಂಟಪದ ಸುತ್ತಲೂ ಸ್ವಚ್ಛತೆ ಮಾಡಿಸಲು ಹಾಗೂ ಕುಡುಕರು ಬಾರದಂತೆ ಕ್ರಮವಹಿಸಲು ಪುರಸಭೆ ನೈರ್ಮಲ್ಯ ಅಧಿಕಾರಿ ಪ್ರಾಣೇಶಗೆ ಸೂಚನೆ ನೀಡುತ್ತೇನೆ ಎಂದು ಕುಷ್ಟಗಿ ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ಬೀಳಗಿ ತಿಳಿಸಿದ್ದಾರೆ.

PREV

Recommended Stories

ಬಂಡಿಗಣಿಯಲ್ಲಿಂದು ಸರ್ವಧರ್ಮ ಮಹಾಸಂಗಮ: ಸಿಎಂ ಭಾಗಿ
ಆರೆಸ್ಸೆಸ್‌ ಬೆಳವಣಿಗೆ ಕೆಲ ಶಕ್ತಿ, ಸಂಘಟನೆಗಳಿಗೆ ಸಹಿಸಲಾಗ್ತಿಲ್ಲ: ಅರುಣಕುಮಾರ