ಕಲ್ಯಾಣ ಮಂಟಪ ಖರ್ಚು ಹೆಚ್ಚು, ಆದಾಯ ಶೂನ್ಯ

KannadaprabhaNewsNetwork |  
Published : May 10, 2025, 01:07 AM IST
ಪೋಟೊ9ಕೆಎಸಟಿ2: ಕುಷ್ಟಗಿ ಪಟ್ಟಣದ ಪುರಸಭೆಯ ಅಧ್ಯಕ್ಷ ಮಹಾಂತೇಶ ಕಲಬಾವಿ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಮುಖ್ಯಾಧಿಕಾರಿ ಸುರೇಶ ಶೆಟ್ಟರ ಸೇರಿದಂತೆ ಅನೇಕರು ಇದ್ದರು. | Kannada Prabha

ಸಾರಾಂಶ

ಡಾ. ರಾಜಕುಮಾರ ಕಲ್ಯಾಣ ಮಂಟಪದ ಅಭಿವೃದ್ಧಿಗೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತಿದ್ದು ಅದರಿಂದ ಬರುವ ಆದಾಯ ಮಾತ್ರ ಪುರಸಭೆಗೆ ಸೇರುತ್ತಿಲ್ಲ.

ಕುಷ್ಟಗಿ:

ಪಟ್ಟಣದ ಪುರಸಭೆಯಲ್ಲಿ ಅಧ್ಯಕ್ಷ ಮಹಾಂತೇಶ ಕಲಬಾವಿ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.

ಸಭೆಯಲ್ಲಿ ಸದಸ್ಯ ಚಿರಂಜೀವಿ ಹಿರೇಮಠ ಮಾತನಾಡಿ, ಪಟ್ಟಣದಲ್ಲಿನ ಡಾ. ರಾಜಕುಮಾರ ಕಲ್ಯಾಣ ಮಂಟಪದ ಅಭಿವೃದ್ಧಿಗೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತಿದ್ದು ಅದರಿಂದ ಬರುವ ಆದಾಯ ಮಾತ್ರ ಪುರಸಭೆಗೆ ಸೇರುತ್ತಿಲ್ಲ. ಈ ಕುರಿತು ತನಿಖೆ ನಡೆಸಿ ಕಲ್ಯಾಣ ಮಂಟಪದ ಆದಾಯ ಯಾರಿಗೇ ಸೇರುತ್ತದೆ ಎಂಬುದು ತಿಳಿದುಕೊಳ್ಳಬೇಕು. ತಪ್ಪಿಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಸುರೇಶ ಶೆಟ್ಟರ, ಈ ಕುರಿತು ಮಾಹಿತಿ ಪಡೆದುಕೊಂಡು ಕ್ರಮಕೈಗೊಳ್ಳಲಾಗುವುದು. ಮುಂಬರುವ ದಿನಗಳಲ್ಲಿ ಕಲ್ಯಾಣ ಮಂಟಪದ ಅಭಿವೃದ್ಧಿಯ ಅವಶ್ಯಕತೆ ಇದೆಯೋ ಇಲ್ಲವೋ ಎಂಬುದನ್ನು ಅರಿತು ಮುಂದಿನ ಹೆಜ್ಜೆ ಇಡಲಾಗುವುದು ಎಂದರು.

ಕೆಲ ಸದಸ್ಯರು ಹಲವು ವರ್ಷಗಳಿಂದ ಪುರಸಭೆಯ ವಾಣಿಜ್ಯ ಮಳಿಗೆಗಳು ಖಾಲಿ ಬಿದ್ದಿವೆ. ಅದರ ಸಮಸ್ಯೆ ಶೀಘ್ರ ಬಗೆಹರಿಸಬೇಕು. ವಿವಿಧ ವಾರ್ಡ್‌ಗಳಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳನ್ನು ಕೆಲ ಗುತ್ತಿಗೆದಾರರು ಸರಿಯಾಗಿ ನಿರ್ವಹಿಸುತ್ತಿಲ್ಲ. ಹೀಗಾಗಿ ಮುಖ್ಯಾಧಿಕಾರಿಗಳೇ ಬಂದು ಪರಿಶೀಲಿಸಿ ಗುಣಮಟ್ಟದ ಕಾಮಗಾರಿ ಮಾಡುವಂತೆ ಸೂಚಿಸಬೇಕು. ಜಮಾ-ಖರ್ಚು ಪತ್ರಿಕೆಯಲ್ಲಿ ಅನವಶ್ಯಕವಾಗಿ ಬಹಳಷ್ಟು ಹಣ ವ್ಯಯ ಮಾಡಿದ್ದು ಪುನರ್ ಪರಿಶೀಲಿಸಬೇಕು. ಪಟ್ಟಣದ ಕೆಲ ಉದ್ಯಾನವನ ಅತಿಕ್ರಮವಾಗಿದ್ದು ತೆರವುಗೊಳಿಸಬೇಕೆಂದು ಸದಸ್ಯರು ಮನವಿ ಮಾಡಿದರು.

ಮುಖ್ಯಾಧಿಕಾರಿ ಸುರೇಶ ಶೆಟ್ಟರ ಮಾತನಾಡಿ, ವಾಣಿಜ್ಯ ಮಳಿಗೆಗಳ ಟೆಂಡರ್‌ ಕುರಿತು ನ್ಯಾಯಾಲಯದಲ್ಲಿ ಪ್ರಕರಣವಿದೆ. ನ್ಯಾಯಾಲಯಕ್ಕೆ ದಾಖಲೆ ಸಲ್ಲಿಸಿ ಟೆಂಡರ್‌ ಕರೆಯಲು ಪ್ರಯತ್ನಿಸಲಾಗುವುದು. ಅಭಿವೃದ್ಧಿ ಕಾಮಗಾರಿ ಪರಿಶೀಲಿಸಲಾಗುವುದು, ಆಕ್ರಮಿಸಿಕೊಂಡ ಉದ್ಯಾನವನ ವಶಪಡಿಸಿಕೊಂಡು ಅಭಿವೃದ್ಧಿಯತ್ತ ಗಮನಹರಿಸಲಾಗುವುದು. ಇದಕ್ಕೆ ಅಧ್ಯಕ್ಷರ-ಸದಸ್ಯರ ಸಹಕಾರ ಅಗತ್ಯವಿದೆ ಎಂದ ಅವರು, ಪುರಸಭೆಯ ವ್ಯಾಪ್ತಿಯ ಸ್ಕೌಟ್ಸ್, ಗೈಡ್ಸ್ ಕಟ್ಟಡದ ದುರುಪಯೋಗ ತಡೆಯಲು ವಾರ್ಡ್ ಗ್ರಂಥಾಲಯ ಮಾಡುವುದು ಸೂಕ್ತ ಎಂದರು.

2025-26ನೇ ಸಾಲಿನ 15ನೇ ಹಣಕಾಸು ಯೋಜನೆಯಲ್ಲಿ ಕ್ರಿಯಾಯೋಜನೆ ತಯಾರಿಸುವುದು, ಮಾರುಕಟ್ಟೆ ಅಭಿವೃದ್ಧಿ, ಪಟ್ಟಣದ ಸ್ವಚ್ಛತೆ ಸೇರಿದಂತೆ ಅನೇಕ ವಿಷಯಗಳ ಚರ್ಚೆ ನಡೆದವು.

ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷ ನಾಹಿನ್ ಬೇಗಂ ಮುಲ್ಲಾ, ಸದಸ್ಯರು, ಸಿಬ್ಬಂದಿ, ನಾಮನಿರ್ದೇಶನ ಸದಸ್ಯರು ಇದ್ದರು.

PREV

Recommended Stories

ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಡ್ಡಿ: 9ರಂದು ಬೃಹತ್ ಜನಾಗ್ರಹ ಸಭೆ
ಮೋದಿ ಸರ್ಕಾರದಿಂದ ಜಿಎಸ್‌ಟಿ ಇಳಿಕೆ ಐತಿಹಾಸಿಕ ಕೊಡುಗೆ: ಶಾಸಕ ವೇದವ್ಯಾಸ್‌ ಕಾಮತ್