ಕನ್ನಡಪ್ರಭ ವಾರ್ತೆ ಸಿಂಧನೂರು
ಹಿಂದುಳಿದ ಪ್ರದೇಶದ ಕಲ್ಯಾಣ ಕರ್ನಾಟಕದ ಜನರಿಗೆ ಕಲಂ 371(ಜೆ) ಅನ್ವಯ ನ್ಯಾಯೋಚಿತವಾಗಿ ಸಿಕ್ಕ ಸೌಲಭ್ಯವನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಎಚ್ಚರಿಸಿದರು.ನಗರದಲ್ಲಿ ಕಲ್ಯಾಣ ಕರ್ನಾಟಕ ಆರ್ಟಿಕಲ್ 371(ಜೆ) ಹೋರಾಟ ಸಮಿತಿಯಿಂದ, ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಸಂವಿಧಾನದ ಅನುಚ್ಛೇದ 371(ಜೆ) ಮೀಸಲಾತಿ ನಿಯಮಗಳ ಸಮಗ್ರ ಹಾಗೂ ಸಮರ್ಪಕ ಅನುಷ್ಠಾನಕ್ಕೆ ಒತ್ತಾಯಿಸಿ ಹಾಗೂ ಉದ್ಯೋಗ ಮೀಸಲಾತಿಯಲ್ಲಿ ಉಂಟಾಗಿರುವ ಗೊಂದಲ ಸರಿಪಡಿಸಿ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರ ಈ ಭಾಗದ ಜನತೆಗೆ ದೊರೆತ ಸೌಲಭ್ಯವನ್ನು ಚಾಚುತಪ್ಪದೆ ಜಾರಿಗೊಳಿಸಬೇಕು. ಇಲ್ಲದಿದ್ದರೆ ಮಕ್ಕಳ ಭವಿಷ್ಯಕ್ಕಾಗಿ ಕಲ್ಯಾಣ ಕರ್ನಾಟಕದ ಜನತೆ ಪಕ್ಷಾತೀತವಾಗಿ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದರು.
ಅನುಷ್ಠಾನ ಸಮಿತಿಗೆ ಆಗ್ರಹ:ಸಂವಿಧಾನ ಬದ್ಧವಾಗಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಗೆ ದೊರಕಿರುವ 371(ಜೆ) ಕಲಂ ಅನ್ನು ಸಮರ್ಪಕವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಶೀಘ್ರವಾಗಿ 371(ಜೆ) ಅನುಷ್ಠಾನ ಸಮಿತಿ ರಚಿಸಬೇಕು ಎಂದು ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿ ಡಾ.ರಜಾಕ್ ಉಸ್ತಾದ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.ಕೇಂದ್ರ ಸರ್ಕಾರ 371(ಜೆ) ಜಾರಿಗೊಳಿಸಿ 10 ವರ್ಷಗಳಾದರೂ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಆದರೆ ದಕ್ಷಿಣ ಕರ್ನಾಟಕದ ಜಿಲ್ಲೆಗಳು ಈಗಲೇ ಖ್ಯಾತೆ ತೆಗೆದಿರುವುದು ಇದು ಹೊಟ್ಟೆ ಕಿಚ್ಚಿನ ಪರಮಾವಧಿಯಾಗಿದೆ. ಡಾ.ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿಯಂತೆ, ರಾಜ್ಯ ಸರ್ಕಾರ 371(ಜೆ) ಅನುಷ್ಠಾನ ಸಮಿತಿ ರಚಿಸಿ, 3 ತಿಂಗಳಿಗೊಮ್ಮೆ ಮುಖ್ಯಮಂತ್ರಿಗಳು ಸಭೆ ಕರೆಯಬೇಕು ಎಂದು ಅಭಿಪ್ರಾಯಪಟ್ಟರು.
ಪ್ರಾದೇಶಿಕ ಅಸಮಾನತೆಯಿಂದ ಈ ಭಾಗದ ಜನತೆ ನಲುಗಿ ಹೋಗಿದ್ದು, ಇತ್ತೀಚಿಗೆ ವಿಶೇಷ ಸ್ಥಾನಮಾನ ದೊರೆತ ಕಾರಣ ಶೈಕ್ಷಣಿಕ ಮತ್ತು ಉದ್ಯೋಗ ರಂಗದಲ್ಲಿ ಒಂದಿಷ್ಟು ಬೆಳವಣಿಗೆ ಕಾಣುತ್ತಿದ್ದಾರೆ. ಹಾಗಾಗಿ ಸರ್ಕಾರ ತಾರತಮ್ಯ ನೀತಿ ಅನುಸರಿಸದೆ ಸಮರ್ಪಕ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಮಾಜಿ ಸಚಿವ ವೆಂಕಟರಾವ್ ನಾಡಗೌಡ ಒತ್ತಾಯಿಸಿದರು.17 ಹಕ್ಕೊತ್ತಾಯಗಳ ಮನವಿಯನ್ನು ಹೋರಾಟ ಸಮಿತಿಯಿಂದ ತಹಸೀಲ್ದಾರ್ ಅರುಣ್ ಕುಮಾರ್ ದೇಸಾಯಿ ಅವರ ಮೂಲಕ ರಾಜ್ಯಪಾಲ ಥಾವರ್ ಚಂದ ಗೆಹ್ಲೋಟ್ ಹಾಗೂ ಸಿಎಂ ಸಿದ್ದರಾಮಯ್ಯ ಅವರಿಗೆ ರವಾನಿಸಲಾಯಿತು.
ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ, ಮಾದಯ್ಯ ಗುರುವಿನ್, ಬಾಬುಗೌಡ ಬಾದರ್ಲಿ, ವಕೀಲರ ಸಂಘದ ಅಧ್ಯಕ್ಷ ಎನ್.ರಾಮನಗೌಡ, ಸರಸ್ವತಿ ಪಾಟೀಲ್, ಬಸವರಾಜ ಹಿರೇಗೌಡರ್, ವೈ.ನರೇಂದ್ರನಾಥ, ಎಂ.ದೊಡ್ಡಬಸವರಾಜ, ಎಂ.ಡಿ.ನದೀಮುಲ್ಲಾ, ಆರ್.ಸಿ.ಪಾಟೀಲ್, ನಿರುಪಾದೆಪ್ಪ ಜೋಳದರಾಶಿ, ಕೆ.ರಾಜಶೇಖರ, ಚಂದ್ರಶೇಖರ ಮೈಲಾರ್, ಡಿ.ಸತ್ಯನಾರಾಯಣ ಇದ್ದರು. ವಕೀಲರ ಸಂಘದ ಪದಾಧಿಕಾರಿಗಳು ಹೋರಾಟಕ್ಕೆ ಬೆಂಬಲಿಸಿ ಭಾಗವಹಿಸಿದ್ದರು.